»   » 'ವಿಷ್ಣುವರ್ಧನ'ನಿಗಾಗಿ ಕೋರ್ಟ್ ಮೆಟ್ಟಿಲೇರಿದ ದ್ವಾರ್ಕಿ

'ವಿಷ್ಣುವರ್ಧನ'ನಿಗಾಗಿ ಕೋರ್ಟ್ ಮೆಟ್ಟಿಲೇರಿದ ದ್ವಾರ್ಕಿ

Posted By:
Subscribe to Filmibeat Kannada

'ವಿಷ್ಣುವರ್ಧನ' ಶೀರ್ಷಿಕೆ ವಿವಾದ ಮತ್ತಷ್ಟು ಬಿಗಡಾಯಿಸಿದೆ. ಪಟ್ಟು ಬಿಡದ ತ್ರಿವಿಕ್ರಮಾಕ್ರನಂತೆ ನಟ, ನಿರ್ಮಾಪಕ ದ್ವಾರಕೀಶ್ ತಮ್ಮ ಚಿತ್ರಕ್ಕೆ ವಿಷ್ಣುವರ್ಧನ ಶೀರ್ಷಿಕೆಯನ್ನೇ ಇಡುವುದಾಗಿ ಕೋರ್ಟ್ ಮೆಟ್ಟಿಲೇರಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಟೈಟಲ್ ಕಮಿಟಿ 'ವಿಷ್ಣುವರ್ಧನ' ಶೀರ್ಷಿಕೆಯನ್ನು ಬಳಕೆ ಮಾಡುವಂತಿಲ್ಲ ಎಂದು ಹುಕುಂ ಹೊರಡಿಸಿದ ಹಿನ್ನೆಲೆಯಲ್ಲಿ ಈ ಹೊಸ ಬೆಳವಣಿಗೆ ನಡೆದಿದೆ.

ದ್ವಾರ್ಕಿ ಚಿತ್ರಕ್ಕೆ 'ವಿಷ್ಣುವರ್ಧನ' ಹೆಸರಿಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿರುವ ಭಾರತಿ ವಿಷ್ಣುವರ್ಧನ್ ಅವರಿಗೆ ಮತ್ತೊಂದು ಸವಾಲು ಎದುರಾದಂತಾಗಿದೆ. ಒಂದು ವೇಳೆ ವಿಷ್ಣುವರ್ಧನ ಶೀರ್ಷಿಕೆ ತಮಗೆ ಸಿಗದಿದ್ದರೆ ಕಾನೂನುನಿಗೆ ಮೊರೆ ಹೋಗುವುದಾಗಿ ದ್ವಾರಕೀಶ್ ಹೇಳಿದ್ದರು. ಅವರು ಹೇಳಿದಂತೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈಗಾಗಲೆ ವಿಷ್ಣು ಹೆಸರಿನಲ್ಲಿ ನಟ ಅಭಿಜಿತ್ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಷ್ಣು ಸೇನೆ ಎಂಬ ಬಿಡುಗಡೆಯಾಗಿತ್ತು. ಈಗ ವಿಷ್ಣುವರ್ಧನ ಎಂಬ ಶೀರ್ಷಿಕೆಯನ್ನು ನೋಂದಾಯಿಸಿಕೊಳ್ಳುವಂತಿಲ್ಲ ಎಂದು ಟೈಟಲ್ ಸಮಿತಿ ಫರ್ಮಾನು ಹೊರಡಿಸಿತ್ತು.

'ವಿಷ್ಣು ಸೇನೆ' ಎಂಬ ಚಿತ್ರ ಬಿಡುಗಡೆಯಾದ ಬಳಿಕ 'ವಿಷ್ಣು' ಚಿತ್ರಕ್ಕೆ ಹೇಗೆ ಅವಕಾಶ ಕೊಟ್ಟಿರಿ? ಎಂದು ದ್ವಾರಕೀಶ್ ಪ್ರಶ್ನಿಸಿದ್ದಾರೆ. ಒಂದು ವೇಳೆ ದ್ವಾರಕೀಶ್ ಇದೇ ಶೀರ್ಷಿಕೆಯನ್ನು ಇಟ್ಟು ಸಿನಿಮಾ ತೆಗೆದರೆ ಕೆಎಫ್ ಸಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಸಂತಕುಮಾರ್ ಪಾಟೀಲ್ ಎಚ್ಚರಿಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಚಿತ್ರದ ನಾಯಕ ನಟ ಸುದೀಪ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಸುದೀಪ್ ರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ದ್ವಾರಕೀಶ್ ತಿಳಿಸಿದ್ದರು. ಈಗ ಅವರೇ ಮೌನವಾಗಿದ್ದಾರೆ. ಸಮಸ್ಯೆ ಕೋರ್ಟ್ ಮೆಟ್ಟಿಲೇರಿದೆ. ವಿಷ್ಣುವರ್ಧನ ಶೀರ್ಷಿಕೆ ದ್ವಾರ್ಕಿ ಪಾಲಾಗುತ್ತದಾ? ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada