»   » ಕುಲಕುಲವೆಂದು ಹೊಡೆದಾಡದಿರಿ: ಅಮಿತಾಬ್

ಕುಲಕುಲವೆಂದು ಹೊಡೆದಾಡದಿರಿ: ಅಮಿತಾಬ್

Posted By:
Subscribe to Filmibeat Kannada

ಕುಲಕುಲವೆಂದು ಹೊಡೆದಾಡದಿರಿ ಎಂದರು ನಮ್ಮ ದಾಸವರೇಣ್ಯರು. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಎಂದರು ಶರಣರು. ಮತಿಹೀನ ಮನುಷ್ಯ ಹುಟ್ಟುಹಾಕಿದ ಜಾತಿಗೆ ಕವಡೆ ಕಿಮ್ಮತ್ತು ಉಂಟೆ? ಎಂಬ ಮಾತನ್ನು ಮತ್ತೊಮ್ಮೆ ನೆನಪಿಸಿದ್ದಾರೆ ಬಾಲಿವುಡ್ ಜನಪ್ರಿಯ ನಟ ಅಮಿತಾಬ್ ಬಚ್ಚನ್.

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಯನ್ನು ಸೇರಿಸಬೇಕು ಎಂಬ ತೀವ್ರ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಬಿಗ್ ಬಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜಾತಿಯಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ಯಾರಾದರೂ ನನ್ನ ಜಾತಿಯ ಬಗ್ಗೆ ಕೇಳಿದರೆ 'ಭಾರತೀಯ' ಎಂದಷ್ಟೆ ಉತ್ತರಿಸುವುದಾಗಿ ತಮ್ಮ ಬ್ಲಾಗ್ ನಲ್ಲಿ ಅಮಿತಾಬ್ ಬರೆದುಕೊಂಡಿದ್ದಾರೆ.

ನಮ್ಮ ತಂದೆಯವರಿಗೆ ಜಾತಿವಾದದಲ್ಲಿ ನಂಬಿಕೆ ಇರಲಿಲ್ಲ. ನಾವೆಲ್ಲಾ ಅದೇ ಸಿದ್ಧಾಂತವನ್ನು ನಂಬಿಕೊಂಡು ಬಂದಿದ್ದೇವೆ. ನನ್ನ ತಂದೆ ಸಿಖ್ ಮಹಿಳೆಯನ್ನು(ತೇಜಿ ಬಚ್ಚನ್) ಮದುವೆ ಮಾಡಿಕೊಂಡಿದ್ದರು. ನನ್ನ ಬಾಳ ಸಂಗಾತಿ ಬಂಗಾಳಿ(ಜಯಾ ಭಾದುರಿ). ನನ್ನ ಸಹೋದರನ ಮಡದಿ ಸಿಂಧಿ(ರಮೋಲಾ). ನನ್ನ ಮಗ ಅಭಿಷೇಕ್ ಮಂಗಳೂರು ಹುಡುಗಿಯನ್ನು(ಐಶ್ವರ್ಯ ರೈ) ಮದುವೆಯಾಗಿದ್ದಾನೆ. ಅಳಿಯ ಪಂಜಾಬಿ (ನಿಖಿಲ್ ನಂದ)ಎಂದು ತಮ್ಮ ಬ್ಲಾಗ್ ನಲ್ಲಿ ಹೇಳಿದ್ದಾರೆ.

ನಮ್ಮ ಕುಟುಂಬದ ಮುಂದಿನ ತಲೆಮಾರುಗಳು ದೇಶದ ವಿವಿಧ ಭಾಗಗಳ ಮಂದಿಯನ್ನು ಮದುವೆಯಾಗಬೇಕು ಎಂದು ನಮ್ಮ ತಂದೆ ಹರಿವಂಶರಾಯ್ ಬಚ್ಚನ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅದನ್ನೆ ನಾವು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಜನಗಣತಿ ಮಾಹಿತಿ ಸಂಗ್ರಹಕ್ಕಾಗಿ ಬಚ್ಚನ್ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಅವರು ಹೆಸರು, ವಯಸ್ಸು, ಹುಟ್ಟಿದ ಸ್ಥಳ ಹೀಗೆ ನಾನಾ ಪ್ರಶ್ನೆಗಳನ್ನು ಕೇಳಿದರು. ಜಾತಿಯ ಬಗ್ಗೆಯೂ ಕೇಳುತ್ತಾರೆ ಎಂಬು ಅಮಿತಾಬ್ ನಿರೀಕ್ಷಿಸಿದ್ದರು. ಆದರೆ ಅಧಿಕಾರಿಗಳು ಕೇಳಲಿಲ್ಲ ಎಂದಿದ್ದಾರೆ. ಜಾತಿಗಣತಿ ನಡೆಸಬೇಕು ಎಂದು ಹಲವಾರು ರಾಜಕೀಯ ಪಕ್ಷಗಳು ಕೇಂದ್ರದಲ್ಲಿ ಒತ್ತಾಯಿಸುತ್ತಿವೆ. ಜಾತಿವಾರು ಜನಗಣತಿ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಪ್ರಕಟಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada