»   » ಬಂಧನದ ಹಿಂದೆ ರಾಜಕೀಯ ದುರುದ್ದೇಶ : ಇಂದ್ರಜಿತ್

ಬಂಧನದ ಹಿಂದೆ ರಾಜಕೀಯ ದುರುದ್ದೇಶ : ಇಂದ್ರಜಿತ್

Subscribe to Filmibeat Kannada
Arrest is politically motivated, Indrajit Lankesh
ಬೆಂಗಳೂರು, ಡಿ. 13 : ತೇಜೋವಧೆ ಮಾಡುವ ಮತ್ತು ಮಾನಸಿಕ ಹಿಂಸೆ ನೀಡುವ ರಾಜಕೀಯ ದುರುದ್ದೇಶದಿಂದ ತನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪತ್ರಕರ್ತ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿಗೆ ವಂಚಿಸಿದ ಆರೋಪದ ಮೇಲೆ ಸಿಟಿ ಕ್ರೈಂ ಬ್ರಾಂಚ್ ಪೊಲೀಸರಿಂದ ಬಂಧಿತರಾಗಿದ್ದ ಇಂದ್ರಜಿತ್ ಲಂಕೇಶ್ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಡಳಿತ ಪಕ್ಷ ಮತ್ತು ವಂಚನೆ ಆರೋಪ ಮಾಡಿರುವ ಖೇಣಿಯನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಬಂದ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ನನ್ನ ಮೇಲೆ ಆಕ್ರಮಣ ಮಾಡಿ ಬಂಧಿಸಿದ್ದಾರೆ. ಇದು ಸಿವಿಲ್ ಪ್ರಕರಣವಾಗಿದ್ದು ಸಿಸಿಬಿ ಪೊಲೀಸರು ನನ್ನನ್ನು ಬಂಧಿಸುವ ಅಗತ್ಯವೇ ಇರಲಿಲ್ಲ. ಈ ಪ್ರಕರಣ ಸಿಸಿಬಿಯ ಚೌಕಟ್ಟಿಗೂ ಬರುವುದಿಲ್ಲ. ಸಿಸಿಬಿ ಪೊಲೀಸರಿರುವುದು ರೌಡಿ, ಕಳ್ಳಕಾಕರನ್ನು ಬಂಧಿಸಿ ವಿಚಾರಣೆ ನಡೆಸಲು. ಪೊಲೀಸರು ಕೇಳಿದ್ದರೆ ನಾನೇ ಸ್ಟೇಷನ್ನಿಗೆ ಬರುತ್ತಿದ್ದೆ. ಆದರೆ ಹಾಗೆ ಮಾಡದೆ, ನನ್ನನ್ನು ಅವಮಾನಿಸಲೆಂದೇ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ಇಂದ್ರಜಿತ್ ಆಕ್ರೋಶ ವ್ಯಕ್ತಪಡಿಸಿದರು.

ನಾನೊಬ್ಬ ಪತ್ರಕರ್ತ. ವ್ಯವಸ್ಥೆಯ ವಿರುದ್ಧ, ಆಡಳಿತ ಪಕ್ಷದ ವಿರುದ್ಧ ವರದಿ ಮಾಡುವುದು ಪತ್ರಿಕೆಯ ನೀತಿ. ಇನ್ನೆರಡು ವಾರಗಳಲ್ಲಿ ಉಪಚುನಾವಣೆ ಕೂಡ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಅನೇಕ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇದೇ ಕಾರಣ ನೀಡಿ ನನಗೆ ಮಾನಸಿಕ ಹಿಂಸೆ ನೀಡಲೆಂದೇ ಅನಗತ್ಯವಾಗಿ ಬಂಧಿಸಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿರುವುದು ಸತ್ಯ ಎಂದು ಕೆಂಡಕಾರಿದರು.

15 ಕೋಟಿ ರು.ಗಳಿಗೆ ಮೂರು ಚಿತ್ರ ಮಾಡಬೇಕೆಂದಿದ್ದೇನೋ ನಿಜ. 15 ಕೋಟಿ ರು. ವಂಚಿಸಿದ್ದೇನೆಂದೂ ದೂರು ನೀಡಿಲ್ಲ. ಖೇಣಿ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ದಾಖಲೆಗಳನ್ನೂ ನೀಡಿದ್ದೇನೆ ಎಂದು ಇಂದ್ರಜಿತ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಅವರ ವಕೀಲ ಪೊನ್ನಣ್ಣ ಕೂಡ ಹಾಜರಿದ್ದು, ಪ್ರಕರಣದ ಕುರಿತು ಮಾತನಾಡಿದರು. ಲಂಕೇಶ್ ಪತ್ರಿಕೆಯ ಮುಖ್ಯ ವರದಿಗಾರರಾದ ಗುರುಮೂರ್ತಿ ಅವರು ಕೂಡ, ಇಂದ್ರಜಿತ್ ಲಂಕೇಶ್ ಅವರನ್ನು ಬಂಧಿಸುವಂತೆ ಮಾಡಿರುವುದು ರಾಜಕೀಯ ವಿರೋಧಿಗಳ ಕೆಲಸ ಎಂದು ನುಡಿದರು.

1 ಲಕ್ಷ ಬಾಂಡ್ ಮೇಲೆ ಬಿಡುಗಡೆ : ಶನಿವಾರ ಮಧ್ಯಾಹ್ನ 4ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಇಂದ್ರಜಿತ್ ಅವರನ್ನು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶ ನಾರಾಯಣಾಚಾರ್ ಅವರು 1 ಲಕ್ಷ ರು. ಬಾಂಡ್ ಪಡೆದು ಇಂದ್ರಜಿತ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಚಾರಣಾ ಪೊಲೀಸ್ ಅಧಿಕಾರಿ ಕರೆದಾಗಲೆಲ್ಲ ಪೊಲೀಸ್ ಸ್ಟೇಷನ್ನಿಗೆ ಹಾಜರಾಗಬೇಕೆಂಬ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾರೆ.

ಮೂರು ಚಿತ್ರ ಮಾಡಿಕೊಡುವುದಾಗಿ ಹೇಳಿ 15 ಕೋಟಿ ರು. ಪಡೆದು ಚಿತ್ರ ಮಾಡದೆ ವಂಚಿಸಿದ್ದಾರೆಂದು ಅಶೋಕ್ ಖೇಣಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಸಿವಿಲ್ ವಿವಾದವಾಗಿದ್ದರಿಂದ ಇಂದ್ರಜಿತ್ ಯಾವುದೇ ಅಪರಾಧ ಮಾಡಿಲ್ಲ ಎಂದು ಇಂದ್ರಜಿತ್ ವಕೀಲರು ವಾದಿಸಿದ್ದಾರೆ. ಖೇಣಿ ನೀಡಿರುವ ಚೆಕ್ ಗಳೂ ಬೌನ್ಸ್ ಆಗಿವೆಯೆಂದು 16ನೇ ಎಸಿಎಮ್ಎಮ್ ನಲ್ಲಿ ಇಂದ್ರಜಿತ್ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಅದು ಇನ್ನೂ ವಿಚಾರಣೆ ಹಂತದಲ್ಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ
ನೈಸ್ ರೋಡಿನಲ್ಲಿ ಜಾರಿದರೆ ಇಂದ್ರಜಿತ್?
ಬಣ್ಣದ ಲೋಕದ ಇಂದ್ರಛಾಪ ಇಂದ್ರಜಿತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada