»   » ಮದುವೆಯಲ್ಲಿ ಡೆಡ್ಲಿ ನಟರಿಗೆ ಹಿಗ್ಗಾಮುಗ್ಗಾ ಥಳಿತ

ಮದುವೆಯಲ್ಲಿ ಡೆಡ್ಲಿ ನಟರಿಗೆ ಹಿಗ್ಗಾಮುಗ್ಗಾ ಥಳಿತ

Posted By:
Subscribe to Filmibeat Kannada

ನೈಜತೆ ಇರಲಿ ಎಂದು ಯಾವುದೇ ಮುನ್ಸೂಚನೆ ನೀಡದೆ ಕಲ್ಯಾಣ ಮಂಟಪಕ್ಕೆ ನುಗ್ಗಿದ ಸಿನಿಮಾ ಖಳನಟರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ. ಮದುವೆ ಮನೆಗೆ ಲಾಂಗು, ಮಚ್ಚು ಹಿಡಿದುಕೊಂಡು ದರೋಡೆಕೋರರಂತೆ ಬಂದ ಖಳ ನಟರು ಸಖತ್ ಗೂಸಾ ತಿಂದ ಪ್ರಸಂಗವಿದು.

ರಿಯಲ್ ಆಗಿ ಸಿನಿಮಾ ಮಾಡಲು ಹೋಗಿ ರಿಯಲ್ ಆಗಿಯೇ ಏಟು ತಿಂದವರ ರಿಯಲ್ ಕಥೆಯಿದು. ಇಷ್ಟಕ್ಕೂ ನಡೆದದ್ದೇನೆಂದರೆ, ಬಸವನಗುಡಿ ನ್ಯಾಷನಲ್ ಮೈದಾನದಲ್ಲಿ 'ಡೆಡ್ಲಿ 2' ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾ ರಿಯಲ್ ಆಗಿ ಬರಲಿ ಎಂಬ ಉದ್ದೇಶದಿಂದ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಪಕ್ಕದಲ್ಲೆ ಇದ್ದ ಕಲ್ಯಾಣ ಮಂಟಪಕ್ಕೆ ಖಳನಟರನ್ನು ನುಗ್ಗಿಸಿದರು.

ಕಲ್ಯಾಣ ಮಂಡಪದಲ್ಲಿ ತಾಳಿ ಕಟ್ಟುವ ಶುಭವೇಳೆ. ಮಧ್ಯಾಹ್ನ 12 ಗಂಟೆಗೆ ಮುಹೂರ್ತ ,ಕಿಕ್ಕಿರಿದ ಜನಸಂದಣಿ. ಈ ಮಧ್ಯೆ ಕಲ್ಯಾಣ ಮಂಟಪಕ್ಕೆ ನಾಲ್ಕುಮಂದಿ ಖಳನಟರ ಪ್ರವೇಶ. ಕೈಯಲ್ಲಿ ಮಚ್ಚು, ಲಾಂಗು ನೋಡಿದವರು ದಿಕ್ಕಾಪಾಲು. ಮದುವೆ ಮಂಟಪ ಗದ್ದಲ ಗೂಡಾಯಿತು. ಏನಾಗುತ್ತಿದೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ.

ಒಬ್ಬ ದಢೂತಿ ಆಸಾಮಿ ಬಂದು ಏನೂ ಗಾಬರಿ ಪಡಬೇಡಿ. ಇದು ಸಿನಿಮಾ ಶೂಟಿಂಗು. ರಿಯಾಲಿಟಿ ಇರಲಿ ಎಂದು ಹೀಗೆ ಮಾಡಿದ್ದೀವಿ ಎಂದ. ಇಷ್ಟು ಹೇಳಿದ್ದೆ ತಡ ಖಳ ನಟರು ಹಾಗೂ ಹೇಳಿದಾತನಿಗೆ ಇಕ್ಕುಲ್ರಾ ಒದೀರ್ಲಾ ಎಂದು ಗೂಸಾ ಮೇಲೆ ಗೂಸಾಗಳು ಬಿದ್ದವು.

ಇಷ್ಟಕ್ಕೆ ಸುಮ್ಮನಾಗದ ಅವರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು. ಆದರೆ ಇಡೀ ಸಿನಿಮಾ ತಂಡ ಕ್ಷಮೆಯಾಚಿಸಿದ ಕಾರಣ ಸುಮ್ಮನಾದರು. ಶುಭ ಸಮಾರಂಭಗಳಲ್ಲಿ ಇಂತಹ ಸೀನ್ ಗಳನ್ನು ದಯವಿಟ್ಟು ಕ್ರಿಯೇಟ್ ಮಾಡಬೇಡಿ ಎಂದು ಚಿತ್ರತಂಡಕ್ಕೆ ಬುದ್ಧಿವಾದ ಹೇಳಿ ಸಾಗಹಾಕಿದರು. ಬಳಿಕ ಮದುವೆ ಸಾಂಗವಾಗಿ ನೆರವೇರಿತು.

ನಿರ್ದೇಶಕ ಶ್ರೀವತ್ಸ ಅವರು ಮೊದಲೆ ಅನುಪತಿ ಪಡೆದು ಚಿತ್ರೀಕರಣ ನಡೆಸಿದ್ದರೆ ಈ ರೀತಿಯ ಅವಾಂತರ ಆಗುತ್ತಿರಲಿಲ್ಲ. ಅವರು ಏಕಾಏಕಿ ಹೀಗೆ ಮಾಡಿ ಮದುವೆ ಮನೆಯಲ್ಲಿ ಆತಂಕ ಸೃಷ್ಟಿಸಿದರು. ಮದುವೆ ಮಂದಿ ಕಿರಿಕಿರಿ ಅನುಭವಿಸುವಂತೆ ಮಾಡಿದ್ದು ಸರಿಯಲ್ಲ ಎಂಬುದು ಅಲ್ಲಿನ ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ. ಏನಂತೀರಾ ಶ್ರೀವತ್ಸ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada