»   » ಡಬ್ಬಿಂಗ್‌ ಭೂತವೇ? ರಿಮೇಕ್‌ ಪಿಶಾಚಿಯೇ?

ಡಬ್ಬಿಂಗ್‌ ಭೂತವೇ? ರಿಮೇಕ್‌ ಪಿಶಾಚಿಯೇ?

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  • ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು
   sampiges@hotmail.com

  ಡಬ್ಬಿಂಗ್‌ ಅಂದರೆ ಏನು?

  ಚಲನಚಿತ್ರ ಅಥವಾ ಧಾರಾವಾಹಿಗಳನ್ನು ಮೂಲದ ಭಾಷೆಯಿಂದ ಮತ್ತೊಂದು ಭಾಷೆಗೆ, ಕಲಾವಿದರ ಧ್ವನಿ ಮರುಮುದ್ರಿಸುವುದನ್ನು ಡಬ್ಬಿಂಗ್‌ ಎಂದು ಕರೆಯುವುದು ವಾಡಿಕೆ. ಈ ಪ್ರಕ್ರಿಯೆಯಲ್ಲಿ ಮೂಲ ಕಲಾವಿದರ ಕಂಠದಲ್ಲೇ ಡಬ್ಬಿಂಗ್‌ ಮಾಡಬಹುದು ಅಥವಾ ಮೂಲ ಕಲಾವಿದರಿಗೆ ಡಬ್ಬಿಂಗ್‌ ಮಾಡುತ್ತಿರುವ ಭಾಷೆಯಲ್ಲಿ ಕುಶಲತೆ ಇಲ್ಲದಿದ್ದರೆ ಅಂತಹ ಕಲಾವಿದರಿಗೆ ಕಂಠದಾನ ಕಲಾವಿದರ ಧ್ವನಿಯನ್ನು ಡಬ್‌ ಮಾಡಬಹುದು. ಈ ರೀತಿ ಒಂದು ಭಾಷೆಯಲ್ಲಿ ತಯಾರಿಸಿದ ಚಲನಚಿತ್ರಗಳನ್ನು, ಧಾರಾವಾಹಿಗಳನ್ನು ಮತ್ತೊಂದು ಭಾಷೆಗೆ ಸುಲಭವಾಗಿ ಡಬ್‌ ಮಾಡಬಹುದು.

  ಕನ್ನಡ ಚಿತ್ರರಂಗ ಮತ್ತು ಡಬ್ಬಿಂಗ್‌ ಇತಿಹಾಸ :

  ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳು ಡಬ್ಬಿಂಗ್‌ ಚಿತ್ರಗಳ ಕಾಲ ಎಂದರೆ ತಪ್ಪಲ್ಲ. 4ಂ-50ರ ದಶಕದಲ್ಲಿ, ಜನಪ್ರಿಯವಾದ ತಮಿಳು ಹಾಗೂ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡಿ ಕರ್ನಾಟಕದಲ್ಲಿ ಪ್ರದರ್ಶಿಸುತ್ತಿದ್ದರು. ಆಗಿನ್ನೂ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲಿ ಒಂದು ಸ್ವಂತ ನೆಲೆಯಿರಲಿಲ್ಲ. ಕನ್ನಡ ಚಲನಚಿತ್ರರಂಗಕ್ಕೆ ಬೇಕಾದ ಸ್ಟುಡಿಯೋ, ತಂತ್ರಜ್ಞಾನ-ತಂತ್ರಜ್ಞರು ಇನ್ನೂ ಕನ್ನಡ ನಾಡಿನಲ್ಲಿ ಲಭ್ಯವಿರಲಿಲ್ಲ. ಎಲ್ಲದಕ್ಕೂ ನೆರೆಯ ಮದ್ರಾಸನ್ನು ಅವಲಂಬಿಸಬೇಕಾಗಿತ್ತು. ಆದ್ದರಿಂದ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಮದ್ರಾಸ್‌ ನಗರದಲ್ಲಿ ಬೀಡು ಬಿಟ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ವರುಷಕ್ಕೆ ನಾಲ್ಕೈದು ಮೂಲ ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದವು. ಇದರಿಂದ ಡಬ್ಬಿಂಗ್‌ ಚಿತ್ರಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡಸಮಸ್ಯೆಯಾಗಿ ಕಾಡುತ್ತಿತ್ತು. ಡಬ್ಬಿಂಗ್‌ನಿಂದಾಗಿ ಕನ್ನಡದ ಕಲಾವಿದರಿಗೆ, ತೆರೆಯಹಿಂದೆ ಕೆಲಸ ಮಾಡುವ ಚಲನಚಿತ್ರ ಕಾರ್ಮಿಕರ ಕೆಲಸಕ್ಕೆ ಹೊಡೆತ ಬಿತ್ತು. ಆದ್ದರಿಂದ ಇಡೀ ಕನ್ನಡ ಚಿತ್ರರಂಗ ಡಬ್ಬಿಂಗ್‌ ವಿರುದ್ದ ಒಂದಾಗಿ ಪ್ರತಿಭಟಿಸಿ ಪರಭಾಷಾ ಚಿತ್ರಗಳ ಡಬ್ಬಿಂಗ್‌ ಮಾಡುವುದನ್ನು ಸರ್ಕಾರ ನಿಷೇಧಿಸಬೇಕೆಂದು ಒತ್ತಾಯಮಾಡಿತು. ಇದರಿಂದ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್‌ ಚಿತ್ರಗಳ ಹಾವಳಿ ಸಂಪೂರ್ಣವಾಗಿ ನಿಂತುಹೋಯಿತು.

  ಕನ್ನಡ ಚಿತ್ರಗಳ ಸುವರ್ಣ ಕಾಲ :

  60, 70 ಹಾಗೂ 80ರ ದಶಕಗಳು ಕನ್ನಡ ಚಿತ್ರರಂಗದ ಸುವರ್ಣಕಾಲ ಎಂದರೆ ತಪ್ಪಾಗಲಾರದು. 60-70ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರತಿಭಾವಂತ ನಿರ್ದೇಶಕರನ್ನು, ಕಲಾವಿದರನ್ನು, ಸಾಹಿತಿಗಳನ್ನು, ಸಂಗೀತ ಸಂಯೋಜಕರನ್ನು ಕಂಡಿತು. ಅತ್ಯುತ್ತಮ ಪೌರಾಣಿಕ, ಐತಿಹಾಸಿಕ ಹಾಗೂ ಸಾಂಸಾರಿಕ ಚಿತ್ರಗಳು ಒಂದರ ಮೇಲೆ ಒಂದು ತೆರೆಕಂಡು ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಿತು. ಪುಟ್ಟಣ್ಣ ಕಣಗಾಲ್‌ರಂತಹ ಪ್ರತಿಭಾವಂತ ನಿರ್ದೇಶಕರ ಹಾಗೂ ಡಾ।। ರಾಜ್‌ ರಂತಹ ಕನ್ನಡದ ಮೇರುನಟರು ನಟಿಸುತ್ತಿದ್ದ ಕಾಲ ಅದು.

  80ರ ದಶಕದಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ಸುಸಜ್ಜಿತ ಸ್ಟೂಡಿಯೋ, ಮರುಮುದ್ರಣ ಕೇಂದ್ರ, ಸಂಕಲನ ಕೇಂದ್ರಗಳು ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟು ಕನ್ನಡ ಚಿತ್ರಗಳ ಎಲ್ಲ ಅವಶ್ಯಕತೆಗಳು ಕನ್ನಡ ನಾಡಿನಲ್ಲೇ ಲಭ್ಯವಾಯಿತು. ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ಸ್ವಂತ ನೆಲೆಯನ್ನು ಕಂಡುಕೊಂಡಿತು.

  ಕನ್ನಡ ಚಿತ್ರರಂಗದ ಸಂಧಿಕಾಲ(90ರ ದಶಕ) :

  ತೊಂಬತ್ತರ ದಶಕ ಕನ್ನಡ ಚಿತ್ರರಂಗದ ಸಂಧಿಕಾಲವೆನ್ನಬಹುದು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕನ್ನಡದ ಕತೆಗಳನ್ನು ಚಲನಚಿತ್ರ ಮಾಡುವ ಪ್ರತಿಭಾವಂತ ನಿರ್ದೇಶಕರ ಕೊರತೆ ಹೆಚ್ಚಾಗಿ ಕಾಡಿತು. ಕನ್ನಡದಲ್ಲಿ ಒಳ್ಳೇ ಕತೆಗಳೇ ಇಲ್ಲ ಎಂದು ಸಬೂಬು ಹೇಳಿ ಪರಭಾಷೆಯ ಜನಪ್ರಿಯ ಚಿತ್ರಗಳ ಕತೆಯನ್ನು ನಕಲುಮಾಡಿ ಕನ್ನಡಿಗರಿಗೆ ತೋರಿಸುವ ರೀಮೆಕ್‌ ಸಂಸ್ಕೃತಿ ಪ್ರಾರಂಭವಾಯಿತು. ಈ ರೀಮೇಕ್‌ ಹಾವಳಿ ಎಷ್ಟು ಹೆಚ್ಚಾಯಿತೆಂದರೆ ಮೂಲ ಕನ್ನಡದ ಕತೆಯನ್ನುಳ್ಳ ಚಿತ್ರಗಳಿಗಿಂತ ಪರಭಾಷೆಯಲ್ಲಿ ಯಶಸ್ವಿಯಾದ ರೀಮೇಕ್‌ ಚಿತ್ರಗಳನ್ನೇ ಕನ್ನಡಿಗರು ಇಷ್ಟಪಡುತ್ತಾರೆ ಎಂದು ನಿರ್ಮಾಪಕರು ಹೇಳುವಂತಾಯಿತು.

  ಇಪ್ಪತ್ತೊಂದನೇ ಶತಮಾನದ ಪ್ರಾರಂಭದ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ರೀಮೇಕ್‌ ಚಿತ್ರಗಳ ಹಾವಳಿ ಮಿತಿಮೀರಿ ಕನ್ನಡ ಚಿತ್ರರಂಗದ ಗುಣಮಟ್ಟ ಕುಸಿದಿದೆ ಎನ್ನುವ ಆಪಾದನೆ ಕನ್ನಡ ಚಿತ್ರರಸಿಕರಿಂದ ಬರಲು ಶುರುವಾಗಿ ಕನ್ನಡ ಚಿತ್ರಗಳನ್ನು ನೋಡುವದ್ದನ್ನೇ ಬಹಳಷ್ಟು ಕನ್ನಡಿಗರು ಬಿಟ್ಟುಬಿಟ್ಟರು. ಇದರಿಂದ ಪರಭಾಷೆಯ ಚಿತ್ರಗಳು ಕನ್ನಡ ನಾಡಿನಲ್ಲಿ ಹೆಚ್ಚಾಗಿ, ಕನ್ನಡದ ಸಂಸ್ಕೃತಿಯ ಮೇಲೆ ದಾಳಿಮಾಡಲು ಕಾರಣವಾಯಿತು.

  ತೊಂಬತ್ತರ ದಶಕದ ಉತ್ತಾರಾರ್ಧದಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಮಾಹಿತಿತಂತ್ರಚ್ಞಾನ ಕ್ರಾಂತಿಯಾಗಿ ಪರರಾಜ್ಯದವರ ವಲಸೆ ಹೆಚ್ಚಾಗಿ, ಕನ್ನಡ ಚಿತ್ರಗಳು, ಪರಭಾಷಾಚಿತ್ರಗಳ ಅದರಲ್ಲೂ ಹಿಂದಿ, ತೆಲುಗು, ತಮಿಳು ಚಿತ್ರಗಳ ಜೊತೆ ಪೈಪೋಟಿ ನಡೆಸಬೇಕಾದ ಸನ್ನಿವೇಶವೇರ್ಪಟ್ಟು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ರೀತಿಯಲ್ಲಿ ಹೊಡೆತ ನೀಡುತ್ತಿವೆ. ಪರಭಾಷಿಕರು ಇಲ್ಲಿಗೆ ವಲಸೆ ಬಂದು ಇಲ್ಲಿ ಅವರ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆಯನ್ನು ಹೆಚ್ಚು ಮಾಡಿ, ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಕಬಳಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಕನ್ನಡ ನೆಲದಲ್ಲೇ ಚಿತ್ರಮಂದಿರಗಳು ದೊರೆಯದಂತ ಪರಿಸ್ಥಿತಿ ಬಂದಿರುವುದು ಕನ್ನಡ ಚಿತ್ರರಂಗದ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದವರು ಮತ್ತು ನಮ್ಮ ಘನ ಸರ್ಕಾರ ಡಬ್ಬಿಂಗ್‌ ನೀತಿಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿಬಂದಿದೆ.

  ರೋಗ ಗುಣವಾದ ನಂತರವೂ ಔಷಧಿ ಸೇವಿಸುತ್ತಿರಬೇಕೇ? :

  ಅರವತ್ತು-ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕನ್ನಡ ನಾಡಿನಲ್ಲಿ ಸ್ವಂತ ನೆಲೆಯಿಲ್ಲದೇ ಪರರಾಜ್ಯದವರನ್ನು ಅವಲಂಬಿಸ ಬೇಕಾದ ಕಾಯಿಲೆಗೆ ಡಬ್ಬಿಂಗ್‌ ವಿರೋಧಿ ನೀತಿಯೆಂಬ ಔಷಧಿಯ ಅವಶ್ಯಕತೆಯಿತ್ತು. ಆದರೆ ಈಗ ಕನ್ನಡ ಚಿತ್ರರಂಗ ಬೃಹತ್ತಾಗಿ ಬೆಳೆದು ಕನ್ನಡ ನಾಡಿನಲ್ಲೇ ಸ್ವಂತ ನೆಲೆಯನ್ನು ಕಂಡುಕೊಂಡಿದೆ. ಕನ್ನಡ ಚಿತ್ರರಂಗಕ್ಕೆ ಒಂದು ಸೀಮಿತವಾದ ಮಾರುಕಟ್ಟೆ ಸ್ಥಾಪನೆಯಾಗಿದೆ. ಆದ್ದರಿಂದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್‌ ಬೇಡವೆಂಬ ನೀತಿಯ ಔಷದಿ ಏಕೆ? ಕನ್ನಡ ಚಿತ್ರರಂಗ ಪ್ರತಿವರುಷ ಸರಾಸರಿ 70-80 ಚಿತ್ರಗಳನ್ನು ನಿರ್ಮಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ ಇದರಲ್ಲಿ ಹೆಚ್ಚಿನವು ರೀಮೇಕ್‌ ಚಿತ್ರಗಳು. ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದವರು ಪರಭಾಷೆಯ ಚಿತ್ರಗಳ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾದ ಕಾಲಕೂಡಿ ಬಂದಿದೆ.

  ಡಬ್‌ ಮಾಡುವುದರಿಂದ ಆಗುವ ಲಾಭಗಳೇನು? :

  1. ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡುವುದರಿಂದ ಕನ್ನಡಕ್ಕೆ ಆಗುವ ಬಹುಮುಖ್ಯ ಲಾಭವೆಂದರೆ, ಕನ್ನಡ ನಾಡಿಗೆ ವಲಸೆಬಂದಿರುವ ಪರಭಾಷಿಕರು ತಮ್ಮ ನೆಚ್ಚಿನ ನಟ-ನಟಿಯರ ಚಿತ್ರಗಳನ್ನು ನೋಡಲು ಕನ್ನಡ ಭಾಷೆ ಕಲಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದರಿಂದ ಅವರು ಕನ್ನಡ ಕಲಿತು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯುವುದು ಸುಲಭವಾಗುತ್ತದೆ. ಇದರಿಂದ ಕನ್ನಡ ಭಾಷೆ ಹೆಚ್ಚು ಬಳಕೆಯಾಗಿ ಸರ್ವಜನ ಪ್ರಿಯವಾಗುತ್ತದೆ.

  2. ಈಗಿನಂತೆ ಪರಭಾಷೆಯ ಎಲ್ಲ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವುದು ನಿಂತು, ಕನ್ನಡಕ್ಕೆ ಡಬ್‌ ಮಾಡಿದ ಕೆಲವು ಉತ್ತಮ ಪರಭಾಷಾ ಚಿತ್ರಗಳು ಮಾತ್ರ ಕರ್ನಾಟಕದಲ್ಲಿ ತೆರೆಕಾಣುತ್ತವೆ. ಇದರಿಂದ ಕನ್ನಡ ಚಿತ್ರಗಳಿಗೆ ಈಗ ಕಾಡುತ್ತಿರುವ ಚಿತ್ರಮಂದಿರದ ಕೊರತೆಯ ಸಮಸ್ಯೆ ಇಲ್ಲವಾಗುತ್ತದೆ.

  3. ಕನ್ನಡ ಚಿತ್ರರಂಗದಲ್ಲಿ ರೀಮೇಕ್‌ ಹಾವಳಿ ಸಂಪೂರ್ಣ ನಿಂತು ಹೋಗುತ್ತದೆ. ಏಕೆಂದರೆ ಪರಭಾಷೆಯು ಮೂಲ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಿ ಇಲ್ಲಿ ಪ್ರದರ್ಶಿಸುವುದರಿಂದ ಅದನ್ನು ಮತ್ತೆ ರೀಮೇಕ್‌ ಮಾಡುವ ಅವಶ್ಯಕತೆಯೇ ಇರುವುದಿಲ್ಲ.

  4. ರೀಮೇಕ್‌ ಚಿತ್ರಗಳ ಹಾವಳಿ ನಿಂತ ಮೇಲೆ ನಮ್ಮ ನಿರ್ಮಾಪಕರು ಕನ್ನಡದ ಒಳ್ಳೆಯ ಕತೆಗಳನ್ನು ಹುಡುಕಿ ಉತ್ತಮ ಚಿತ್ರ ನಿರ್ಮಿಸುವ ಸನ್ನಿವೇಶ ಒದಗಿ ಬರುತ್ತದೆ. ಇದರಿಂದ ಕನ್ನಡ ಚಿತ್ರಗಳ ಗುಣಮಟ್ಟ ಹೆಚ್ಚಿ , ಕನ್ನಡ ಚಿತ್ರಗಳನ್ನು ನೋಡುವುದನ್ನೇ ಬಿಟ್ಟು ಬಿಟ್ಟಿದ್ದ ಕನ್ನಡಿಗರನ್ನು ಮತ್ತೆ ಕನ್ನಡ ಚಿತ್ರಗಳೆಡೆಗೆ ಆಕರ್ಶಿಸುವಂತಾಗಿ, ಕನ್ನಡ ಚಿತ್ರರಂಗಕ್ಕೆ ಕಳೆದು ಹೋದ ಮಾರುಕಟ್ಟೆ ಪುನಃ ಲಭ್ಯವಾಗುತ್ತದೆ.

  5. ಕನ್ನಡ ಚಿತ್ರಗಳ ಗುಣಮಟ್ಟ ಹೆಚ್ಚುವುದರಿಂದ ಹಾಗು ಡಬ್ಬಿಂಗ್‌ನಿಂದ ಪರಭಾಷಿಕರು ಕನ್ನಡ ಕಲಿಯುವುದು ಅನಿವಾರ್ಯವಾಗುವುದರಿಂದ, ಕನ್ನಡ ಚಿತ್ರಗಳನ್ನು ಪರಭಾಷಿಕರೂ ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ.

  6. ಹೀಗೆ ಕನ್ನಡ ಚಿತ್ರಗಳು ಜನಪ್ರಿಯವಾಗುವುದರಿಂದ ಪರರಾಜ್ಯ ಹಾಗೂ ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಪ್ರಚಾರ ಸಿಕ್ಕಿ ಕನ್ನಡ ಚಿತ್ರರಂಗದ ಈಗಿರುವ ಸೀಮಿತ ಮಾರುಕಟ್ಟೆ ವೃದ್ಧಿಸಿ ವಿಶಾಲ ವಿಶ್ವದ ಮಾರುಕಟ್ಟೆ ಲಭ್ಯವಾಗಿ ಕನ್ನಡ ಚಿತ್ರರಂಗ ಅತ್ಯುನ್ನತ ಮಟ್ಟಕ್ಕೆ ಏರುತ್ತದೆ.

  7. ಹೀಗೇ ಕನ್ನಡ ಚಿತ್ರರಂಗ ಯಶಸ್ವಿಯಾಗಿ ಹಾಲಿವುಡ್‌ನ ಆಂಗ್ಲಭಾಷಾ ಚಿತ್ರಗಳಿಗೆ ಪೈಪೋಟಿ ನೀಡುವಂತ ಅತಿ ಹೆಚ್ಚು ವೆಚ್ಚದ, ಅತ್ಯಾಧುನಿಕ ತಂತ್ರಜ್ಞಾನದ ವೈಭವಯುತ ಚಿತ್ರಗಳನ್ನು ನಿರ್ಮಿಸಲು ಸಾದ್ಯವಾಗುತ್ತದೆ. ಇದರಿಂದ ಭಾರತದ ಚಿತ್ರರಂಗಕ್ಕೆ ಇನ್ನೂ ಕನಸಾಗಿರುವ ಆಸ್ಕರ್‌ಪ್ರಶಸ್ತಿ ಕನ್ನಡ ಚಿತ್ರಕ್ಕೆ ದೊರಕುವ ಸಾದ್ಯತೆಯೂ ಹೆಚ್ಚಾಗುತ್ತದೆ.

  8. ಕೊನೆಯದಾಗಿ ಡಬ್ಬಿಂಗ್‌ನಿಂದ ಕನ್ನಡ ಚಲನಚಿತ್ರ ಕಂಠದಾನ ಕಲಾವಿದರಿಗೆ ಹೆಚ್ಚು ಕೆಲಸ ಸಿಕ್ಕಿ ಅವರ ಪ್ರತಿಭೆಗೆ ಹೆಚ್ಚು ಪ್ರೋತ್ಸಾಹ, ಪ್ರಶಸ್ತಿ, ಹಣ ಸಿಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

  ಪರಭಾಷೆಯ ಚಿತ್ರಗಳ ಡಬ್ಬಿಂಗ್‌ಗೆ ಅವಕಾಶ ನೀಡುವು ಕರ್ನಾಟಕದ ಡಬ್ಬಿಂಗ್‌ ನೀತಿಯ ಬದಲಾವಣೆಯಿಂದ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಇಷ್ಟೆಲ್ಲಾ ಪ್ರಯೋಜನವಿರುವಾಗ ಕನ್ನಡ ಚಿತ್ರರಂಗ ನಮ್ಮ ಘನ ಸರ್ನಾರಕ್ಕೆ ಡಬ್ಬಿಂಗ್‌ ನೀತಿಯನ್ನು ಬದಲಾಯಿಸುವಂತೆ ಒತ್ತಡ ಹೇರುವ ಕಾಲ ಕೂಡಿ ಬಂದಿದೆ. ಇದರ ಬಗ್ಗೆ ಚಿತ್ರರಂಗದವರು, ಸಾಹಿತಿಗಳು, ಕನ್ನಡಾಭಿಮಾನಿಗಳು ಅತ್ಯಂತ ಜರೂರಾಗಿ ವಿಚಾರಮಂಥನ ಮಾಡಬೇಕಿದೆ.

  ಡಬ್ಬಿಂಗ್‌ ಬೇಕಾ? ಬೇಡವಾ?  ಮುಖಪುಟ / ಸ್ಯಾಂಡಲ್‌ವುಡ್‌

  Read more about: dubbing

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more