»   » ರಶ್ಮಿಗೆ ಗೇಟ್ ಪಾಸ್ : ದುಡ್ಡು ಓಕೆ, ಜಂಭ ಯಾಕೆ?

ರಶ್ಮಿಗೆ ಗೇಟ್ ಪಾಸ್ : ದುಡ್ಡು ಓಕೆ, ಜಂಭ ಯಾಕೆ?

Posted By: Staff
Subscribe to Filmibeat Kannada

ಮಸಾಲ ಪಾತ್ರಗಳಿಗೆ ಸೈ ಎಂದ ಮೇಲೆ ತಂಗಿ ಪಾತ್ರ ಮಾಡೋದನ್ನು ರಾಧಿಕಾ ನಿಲ್ಲಿಸಿದರು. ಈಗ ಸ್ಯಾಂಡಲ್ ವುಡ್ ನಲ್ಲಿ ತಂಗಿ ಪಾತ್ರ ಮಾಡೋರಿಗೆ ಕೊರತೆಯಾಗಿದೆ. ತಂಗಿ ಪಾತ್ರ ಮಾಡೋರು ಲಕ್ಷಲಕ್ಷ ಹಣ ಕೇಳ್ತಾರೆ ಅನ್ನೋದು ನಿರ್ಮಾಪಕರ ಗೋಳು. ಕೇಳಬಾರದೇ ಎನ್ನುವುದು ನಟಿಮಣಿಯರ ಪ್ರಶ್ನೆ.

'ಬಂಧು ಬಳಗ'ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ತಂಗಿಯಾಗಿ ನಟಿಸಬೇಕಾಗಿದ್ದ ದುನಿಯಾ ಚಿತ್ರದ ನಾಯಕಿ ರಶ್ಮಿ, ಈಗ ಆ ಪಾತ್ರ ಮಾಡುತ್ತಿಲ್ಲ. ಕಾರಣ ಏನು ಅಂದರೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳುವುದು ಇಷ್ಟು : ಹತ್ತರಿಂದ ಹದಿನೈದು ದಿನಗಳ ಶೂಟಿಂಗ್ ಗೆ ಆಯಮ್ಮ ಹತ್ತು ಲಕ್ಷ ರೂಪಾಯಿ ಸಂಭಾವನೆ ಕೇಳಿದಳು. ಚೌಕಾಶಿ ಮಾಡಿ ಏಳು ಲಕ್ಷಕ್ಕೆ ಒಪ್ಪಿಸಿದ್ದೆವು. ಆಮೇಲೆ ಕತೆ ಹೇಳಲು ನಾನು, ಕಮಲಾಕರ್ ಮತ್ತು ಕತೆ ಬರೆದ ಜನಾರ್ದನ ಮಹರ್ಷಿ ಹೋದೆವು. ರಶ್ಮಿಯ ಅಮ್ಮ ಮತ್ತು ಆಕೆಯ ಸೆಕ್ರೇಟರಿ ತಮಗೇ ಕತೆ ಹೇಳಬೇಕು ಎಂದರು. ಪಾತ್ರ ಮಾಡುವವರಿಗೆ ಕತೆ ಹೇಳದೆ ಇವರಿಗೆ ಹೇಳಿ ಏನು ಉಪಯೋಗ ಎಂದು ಅನ್ನಿಸಿದರೂ ಹೇಳಿದೆವು. ಅದರಲ್ಲಿ ಕೊಂಚ ಬದಲಾವಣೆ ಮಾಡಲು ಹೇಳಿದರು. ಇದ್ಯಾಕೋ ಅತಿ ಆಯಿತು ಅನ್ನಿಸಿ ಅವಳನ್ನು ಕೈಬಿಟ್ಟೆವು. ಆಕೆಯ ಜಾಗಕ್ಕೆ ತೇಜಸ್ವಿನಿ ಬಂದಿದ್ದಾರೆ.

ಮೊನ್ನೆಮೊನ್ನೆ ತೆರೆಕಂಡ 'ಕೃಷ್ಣ 'ಚಿತ್ರದಲ್ಲಿ ಗಣೇಶ್ ಜೊತೆ ಕೆಲವು ಕ್ಷಣಗಳ ಮಟ್ಟಿಗೆ ಕುಣಿದು ಮಾಯವಾಗುವ ಪಾತ್ರದಲ್ಲಿ ರಶ್ಮಿ ನಟಿಸಿದ್ದಳು. ಅದು ಯಾವ ಖನಂದಾರಿ ಪಾತ್ರ ಎಂದು ತಿಳಿದು ಒಪ್ಪಿದ್ದಳೋ ಗೊತ್ತಿಲ್ಲ. ಒಂದು ಚಿತ್ರದಲ್ಲಿ ನಟಿಸಿದಾಗಲೇ ಇಷ್ಟು, ಮುಂದೆ ಎಷ್ಟೆಷ್ಟೋ..?

ನವೆಂಬರ್ 7ರಂದು ಚಿತ್ರದ ಮುಹೂರ್ತ ನಡೆಯಲಿದೆ. ತೇಜಸ್ವಿನಿ ಈಗಾಗಲೇ 'ಸವಿಸವಿ ನೆನಪು' ಚಿತ್ರದಲ್ಲಿ ಎರಡನೇ ನಾಯಕಿಯಾಗಿ, 'ಮಾತಾಡ್ ಮಾತಾಡು ಮಲ್ಲಿಗೆ'ಯಲ್ಲಿ ವಿಷ್ಟು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada