»   »  'ಭಗವಾನ್' ರೀಮೇಕ್ ಎಂದರಿತು ಕೈಬಿಟ್ಟ ಶಿವಣ್ಣ!

'ಭಗವಾನ್' ರೀಮೇಕ್ ಎಂದರಿತು ಕೈಬಿಟ್ಟ ಶಿವಣ್ಣ!

Subscribe to Filmibeat Kannada

ಕೆಲವೊಂದು ವಿಚಾರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಳಿದ ನಟರಿಗಿಂತ ಭಿನ್ನ. ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂಬ ಮಾತಿಗೆ ಕಟ್ಟುಬಿದ್ದ ನಟ. ಹಾಗಂತ ಶಿವಣ್ಣ ರೀಮೇಕ್ ಚಿತ್ರಗಳಲ್ಲಿ ಬಣ್ಣ ಹಚ್ಚಿಲ್ಲ ಎಂದಲ್ಲ. 'ಪ್ರೀತ್ಸೆ' ಮತ್ತು 'ಕೋದಂಡ ರಾಮ' ರೀಮೇಕ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನೇರವಾಗಿ ವಿಷಯಕ್ಕೆ ಬಂದರೆ...ಶಿವಣ್ಣ ತಮ್ಮ ಹೊಸ ಚಿತ್ರ 'ಭಗವಾನ್' ಗೆ ಸಹಿ ಹಾಕಿದ್ದು ಗೊತ್ತೇ ಇದೆ. ಈ ಚಿತ್ರ ರೀಮೇಕ್ ಎಂದು ಗೊತ್ತಿಲ್ಲದೆ ಶಿವಣ್ಣ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ ಇದು ರೀಮೇಕ್ ಎಂದು ಗೊತ್ತಾದ ತಕ್ಷಣ ಆ ಚಿತ್ರವನ್ನು ಕೈಬಿಟ್ಟಿದ್ದಾರೆ.

ಪ್ರಶಾಂತ್ ಮಂಬುಲಿ ಎಂಬ ನಿರ್ದೇಶಕ ಈ ರೀಮೇಕ್ ಚಿತ್ರದಲ್ಲಿ ನಟಿಸುವಂತೆ ಶಿವಣ್ಣನನ್ನು ಒಪ್ಪ್ಪಿಸಿದ್ದರು. ''ಇದೊಂದು ಪ್ರಯೋಗಾತ್ಮಕ ಚಿತ್ರ. ಇದರಲ್ಲಿ ನಾನು ಭಾಗಿಯಾಗುತ್ತಿರುವುದು ತುಂಬ ಸಂತೋಷ'' ಎಂದು ಶಿವಣ್ಣ ಸಹ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಮಲಯಾಳಂನಲ್ಲಿ 'ಭಗವಾನ್' ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಕಾರಣ ಶಿವಣ್ಣ ಹಿಂದೆಸರಿದಿದ್ದಾರೆ.

ಒಂದು ವೇಳೆ ಮಲಯಾಳಂ ಚಿತ್ರದ ಬಿಡುಗಡೆಯನ್ನು ತಡೆದು, ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಂ ಚಿತ್ರಗಳನ್ನು ಬಿಡುಗಡೆ ಮಾಡುವಂತಿದ್ದರೆ ಆಗ ಈ ಚಿತ್ರದಲ್ಲಿ ನಟಿಸುತ್ತೇನೆ ಎಂದು ಶಿವಣ್ಣ ನಿರ್ದೇಶಕರಿಗೆ ತಿಳಿಸಿದ್ದರಂತೆ. ಮಲಯಾಳಂನಲ್ಲಿ ಭಗವಾನ್ ಚಿತ್ರ ಬಿಡುಗಡೆಯಾಗಿದೆ. ನಿರ್ದೇಶಕರಿಂದಲೂ ಉತ್ತರ ಬರಲಿಲ್ಲ. ಹಾಗಾಗಿ ಭಗವಾನ್ ಕೈಬಿಟ್ಟಿದ್ದೇನೆ ಎನ್ನುತ್ತಾರೆ ಶಿವಣ್ಣ.

ಮಲೆಯಾಳಂನ 'ಭಗವಾನ್' ಚಿತ್ರದಲ್ಲಿ ಮೋಹನ್ ಲಾಲ್ ನಾಯಕ ನಟ. ಮೂಲಗಳ ಪ್ರಕಾರ 'ಭಗವಾನ್' ಹಿಂದಿ, ತಮಿಳಿನಲ್ಲೂ ಸೆಟ್ಟೇರಲಿದೆಯಂತೆ. ಹಿಂದಿಯಲ್ಲಿ ಸನ್ನಿ ಡಿಯೋಲ್ ಹಾಗೂ ತಮಿಳಿನಲ್ಲಿ ಅರ್ಜುನ್ ಸರ್ಜಾ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಕೈಬಿಟ್ಟ 'ಭಗವಾನ್' ಚಿತ್ರವನ್ನು ಯಾರು ಕೈಹಿಡಿಯಲಿದ್ದಾರೆ ಎಂಬುದು ಈಗಿನ ಪ್ರಶ್ನೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada