»   » ರಾಜ್ಯದಲ್ಲಿ ರಾವಣ ಚಿತ್ರ ಬಿಡುಗಡೆ ಸಂಪೂರ್ಣ ರಾಮಾಯಣ

ರಾಜ್ಯದಲ್ಲಿ ರಾವಣ ಚಿತ್ರ ಬಿಡುಗಡೆ ಸಂಪೂರ್ಣ ರಾಮಾಯಣ

Posted By:
Subscribe to Filmibeat Kannada

ಈ ಹಿಂದೆ ರಿಲಯನ್ಸ್ ಬಿಗ್ ಪಿಕ್ಚರ್ಸ್ ಹಿಂದಿಯ 'ಕೈಟ್ಸ್' ಚಿತ್ರವನ್ನು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ ಸಿಸಿ) ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ 'ರಾವಣ್' ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿರುವ ರಿಲಯನ್ಸ್ ಬಿ ಗ್ ಪಿಕ್ಚರ್ಸ್ ಮತ್ತೊಮ್ಮೆ ಕೆಎಫ್ ಸಿಸಿ ಕಣ್ಣಿಗೆ ಬಿದ್ದಿದೆ.

ಕೆಎಫ್ ಸಿಸಿ ನೀತಿ ನಿಯಮಗಳನ್ನು ಪ್ರಶ್ನಿಸಿ ಕೆಎಫ್ ಸಿಸಿ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ ರಿಲಯನ್ಸ್ ಬಿಗ್ ಪಿಕ್ಚರ್ಸ್. "ಕೆಎಫ್ ಸಿಸಿ ನಿಯಮಗಳು ತಮಗೆ ಮುಳುವಾಗುತ್ತಿವೆ. ಪರಭಾಷಾ ಚಿತ್ರಗಳ ಮೇಲಿನ ನೀತಿ ನಿಯಮಗಳನ್ನು ಕೆಎಫ್ ಸಿಸಿ ಸಡಿಲಗೊಳಿಸಬೇಕು" ಎಂದು ರಿಲಯನ್ಸ್ ಬಿಗ್ ಪಿಕ್ಚರ್ಸ್ ಆಗ್ರಹಿಸಿದೆ.

ಏತನ್ಮಧ್ಯೆ ಬಹುನಿರೀಕ್ಷಿತ 'ರಾವಣ್' ಚಿತ್ರ ಜೂನ್ 18ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಹಿಂದಿ(ರಾವಣ್), ತೆಲುಗು(ವಿಲನ್) ಹಾಗೂ ತಮಿಳು(ರಾವಣನ್) ಮೂರು ಭಾಷೆಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಮೂರು ಭಾಷೆಯ ಚಿತ್ರಗಳನ್ನು ಒಂದೇ ಎಂದು ಪರಿಗಣಿಸಿ ಕೇವಲ 21 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಫರ್ಮಾನು ಹೊರಡಿಸಿದೆ.

ಬಹಳಷ್ಟು ಪ್ರೇಕ್ಷಕರನ್ನು ನೆಚ್ಚಿಕೊಂಡಿರುವ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ರಾವಣ್/ರಾವಣನ್ ಚಿತ್ರಗಳು ತೆರೆಕಾಣುತ್ತಿಲ್ಲ. ಕೆಎಫ್ ಸಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಸಂತಕುಮಾರ್ ಮತ್ತವರ ತಂಡ ಟೊಂಕ ಕಟ್ಟಿ ನಿಂತಿದೆ. ಹಾಗಾಗಿ ಬೆಂಗಳೂರಿನ ಬಹುತೇಕರಿಗೆ 'ರಾವಣ್' ಚಿತ್ರವನ್ನು ನೋಡುವ ಸೌಭಾಗ್ಯ ಸಿಗುತ್ತಿಲ್ಲ.

ರಾವಣ್ (ಹಿಂದಿ) ಹಾಗೂ ರಾವಣನ್ (ತಮಿಳು) ಚಿತ್ರಗಳನ್ನು ಬೇರೆಬೇರೆ ಎಂದು ಪರಿಗಣಿಸಬೇಕು ಎಂದು ಚಿತ್ರಗಳನ್ನು ಮಾರುಕಟ್ಟೆ ಮಾಡುತ್ತಿರುವ ರಿಲಯನ್ಸ್ ಬಿಗ್ ಫಿಕ್ಚರ್ಸ್ ಕೆಎಫ್ ಸಿಸಿಗೆ ಮನವರಿಕೆ ಮಾಡಿಕೊಂಡಿದೆ. ಆದರೆ ಈ ಬೇಡಿಕೆಯನ್ನು ಕೆಎಫ್ ಸಿಸಿ ಬಿಲ್ ಕುಲ್ ಒಪ್ಪುತ್ತಿಲ್ಲ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಸುಹಾಸಿನಿ ಮಣಿರತ್ನಂ ಅವರು ಹಿಂದಿ ಹಾಗೂ ತಮಿಳು ಆವೃತ್ತಿಗಳು ಎರಡು ಬೇರೆ ಬೇರೆ ನೆಗಟೀವ್ ಗಳನ್ನು ಹೊಂದಿವೆ. ಇವರೆಡನ್ನೂ ಬೇರೆ ಬೇರೆ ಚಿತ್ರಗಳೆಂದು ಪರಿಗಣಿಸಿ ಎಂದು ಕೆಎಫ್ ಸಿಸಿಯನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಆದರೆ ಕೆಎಫ್ ಸಿಸಿ ಅವರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.

ತಮಿಳು ಹಾಗೂ ಹಿಂದಿ 'ರಾವಣ'ನನ್ನು ಒಂದೇ ಚಿತ್ರ ಎಂದು ಪರಿಗಣಿಸಿ 21 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಿದ್ದೇವೆ ಎಂದು ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ 16 ಹಿಂದಿ, 7 ತಮಿಳು ಹಾಗೂ 1 ತೆಲುಗು ಅವತರಣಿಕೆಯಲ್ಲಿ 'ರಾವಣ್' ಒಟ್ಟು 24 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada