»   » ಫ್ಲಾಪ್ ತಾರೆಗಳ ಪೇಜ್ 3 ಶೋಕಿ

ಫ್ಲಾಪ್ ತಾರೆಗಳ ಪೇಜ್ 3 ಶೋಕಿ

Posted By:
Subscribe to Filmibeat Kannada

'ಹಾಗೆ ಸುಮ್ಮನೆ' ಕಿರಣ್, 'ಗಂಡ ಹೆಂಡತಿ' ಸಂಜನಾ, 'ಮನಸಾರೆ' ದಿಗಂತ್ ಮಂಚಲೆ, 'ಚಮ್ಕಾಯಿಸಿ ಚಿಂದಿ ಉಡಾಯಿಸಿ' ನಿಧಿ ಸುಬ್ಬಯ್ಯ, 'ಮೆರವಣಿಗೆ' ಐಂದ್ರಿತಾ ರೇ, 'ಜೋಗಿ' ಜೆನ್ನಿಫರ್ ಕೋತ್ವಾಲ್, 'ಮಣಿ' ಮಯೂರ್, 'ಸಜನಿ' ಶರ್ಮಿಳಾ ಮಾಂಡ್ರೆ, 'ವೆಂಕಟ ಇನ್ ಸಂಕಟ' ಮೇಘನಾ... ಇವರನ್ನು ನಟನೆಯಲ್ಲದೆ ಮತ್ತೊಂದು ಅಂಶ ಬೆಸೆದಿದೆ.

ಇವರೆಲ್ಲ ಫ್ಲಾಪ್ ಸ್ಟಾರ್ ಗಳು ಅಂತ ನೀವೇನಾದರೂ ಅಂದುಕೊಂಡರೆ ಅದು ಖಂಡಿತ ತಪ್ಪಲ್ಲ. ಇವರು ಕಾಣಿಸಿಕೊಂಡಿರುವ ಮೂರ್ನಾಲ್ಕು ಚಿತ್ರಗಳಲ್ಲಿ ಚಿತ್ರರಸಿಕರನ್ನು ಯಾವ ರೀತಿ ಮೋಡಿ ಮಾಡಿದ್ದಾರೆಂದು ನಾಡಿನ ಜನತೆ ನೋಡಿದೆ. ಕೆಲವರಿಗೆ ನಗು, ಅಳುವಿನ ನಡುವಿನ ವ್ಯತ್ಯಾಸ ಗೊತ್ತಿರದೆ ಅಭಿನಯವೆಲ್ಲ ಮಂಕು. ಇನ್ನು ಕೆಲವರು ಕುಣಿಯಲು ಪ್ರಾರಂಭಿಸಿದರೆ ನೆಲವೆಲ್ಲ ಡೊಂಕು.

ಇವರೆಲ್ಲ ಪರ್ಮನೆಂಟ್ ಪೇಜ್ ತ್ರೀ ಗಿರಾಕಿಗಳು. ಇಂಗ್ಲಿಷಿನಲ್ಲಿ ಇವರಿಗೆ ಪಾರ್ಟಿ ಅನಿಮಲ್ಸ್ ಅಂತ ಕರೀತಾರೆ. ಯಾವನೋ ಒಬ್ಬ ಯೋಯೋ ವ್ಯಕ್ತಿ ಸಿಂಗಪುರದಿಂದ ಹದಿನೈದು ದಿನಗಳ ಕಾಲ ರಜಾ ಕಳೆಯೋದಿಕ್ಕೆ ಅಂತ ಇಲ್ಲಿಗೆ ಬಂದಿರ್ತಾನೆ. ಅವನು ಬಂದದ್ದನ್ನು ಸೆಲಿಬ್ರೇಟ್ ಮಾಡೋದಕ್ಕೆ ಅಂತ ಇನ್ನಾವನೋ ಒಬ್ಬ ಪಾರ್ಟಿ ಅರೇಂಜ್ ಮಾಡಿರ್ತಾನೆ. ಆ ಪಾರ್ಟಿ ಅರೇಂಜ್ ಮಾಡಿದಾತನ ಸ್ನೇಹಿತನ ಸ್ನೇಹಿತ ಅಥವಾ ಸ್ನೇಹಿತೆ ನಮ್ಮ ಸಿನೆಮಾ ನಟನಟಿಯರಾಗಿರ್ತಾರೆ. ಹೀಗಾಗಿ ಇಂಥ ಪಾರ್ಟಿಗಳಲ್ಲಿ ಇವರಿರ್ತಾರೆ! ಇನ್ನು ಸಿನೆಮಾ ಪಾರ್ಟಿಗಳಲ್ಲಂತೂ ಬೈ ಡಿಫಾಲ್ಟ್ ಇವರಿದ್ದೇ ಇರುತ್ತಾರೆ. ಆದರೆ, ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಇದ್ದರೆ ಅವರ್ಯಾರೂ ಅಲ್ಲಿ ಮುಖಹಾಕಲ್ಲ. ಅದಕ್ಕೇ ಅಂಬಿ ರಾಜಿನಾಮೆ ಬಿಸಾಕಿರೋದು.

ಇದು ಚಿತ್ರನಟನಟಿಯರ ಕಥೆ ಮಾತ್ರವಲ್ಲ, ಇಂದಿನ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ ಅನೇಕ ಯುವಕ ಯುವತಿಯರ ಕಥೆ ಕೂಡ. ಕೈಯಲ್ಲಿನ ಮದಿರೆ ಗಂಟಲಿಗಿಳಿಯುತ್ತಿರುವಾಗ ಕಾಲುಗಳು ತಾನೇ ಕುಣಿಯುತ್ತಿರುತ್ತವೆ. ಇಡೀ ದೇಹ ರಾಕ್ ಮ್ಯುಸಿಕ್ಕಿಗೆ, ಆರ್ಜೆಯ ಹುಯ್ದಾಟಕ್ಕೆ ಓಲಾಡುತ್ತಿರುವಾಗ ಪಕ್ಕದಲ್ಲಿ ಮನೋವಿರಾಜ್ ಅಂಥವರು ಇರ್ತಾರೆ! ನಮ್ಮ ಕನ್ನಡದ ಸಿನೆಮಾ ಕಣ್ಮಣಿಗಳು ಫ್ಲಾಪ್ ತಾರೆಗಳಾಗಿದ್ದಕ್ಕೇ ಪೇಜ್ ತ್ರೀ ಗಿರಾಕಿಗಳಾಗಿರ್ತಾರೋ? ಅಥವಾ ಪೇಜ್ ತ್ರೀ ಗಿರಾಕಿಗಳಾಗಿದ್ದಕ್ಕೇ ಫ್ಲಾಪ್ ತಾರೆಯರಾಗಿರ್ತಾರೋ ಉತ್ತರ ಹುಡುಕುವುದು ಕಷ್ಟ.

ಇವರು ನಟಿಸಿರುವ ಚಿತ್ರಗಳು, ಇವರ ನಟನೆಯ ಕಡೆ ಗಮನ ಹರಿಸಬೇಕೆಂದರೆ, ಕಿರಣ್ ಹಾಗೆ ಸುಮ್ಮನೆ ಬಂದವರು ಹಾಗೆ ಸುಮ್ಮನೆ ಮಾಯವಾಗಿದ್ದಾರೆ. ಸಂಜನಾ ಗಂಡ ಹೆಂಡತಿಯಲ್ಲಿ ಅಭಿನಯಿಸಿದ್ದೊಂದೇ ಸಾಧನೆ. ನಿಧಿ ಸುಬ್ಬಯ್ಯ ಕೋಮಲ್ ಜತೆ ಯಾವ ರೀತಿ ಚಮ್ಕಾಯಿಸಿದ್ದಾರೆಂದು ಎಲ್ಲರೂ ನೋಡಿದ್ದಾರೆ. ಐಂದ್ರಿತಾ ಮನಸಾರೆ ಚಿತ್ರದಲ್ಲಿ 'ನಟಿಸಿದ್ದಾರಾ?'. ಶರ್ಮಿಳಾ ರಿಟೈರ್ಮೆಂಟ್ ತೆಗೆದುಕೊಳ್ಳುವುದು ಉತ್ತಮ. ವೆಂಕಟದಲ್ಲಿ ಮೇಘನಾ ಅಭಿನಯ ನೋಡುವುದೇ ಒಂದು ಸಂಕಟ. ಮಯೂರ್ ಅವರಪ್ಪನಾಣೆಗೂ ಕನ್ನಡ ಚಿತ್ರರಂಗದಲ್ಲಿ ಅಸ್ತಿತ್ವ ಕಂಡುಕೊಳ್ಳುವುದಿಲ್ಲ.

ಇವರೆಲ್ಲರ ಜೊತೆ ಇತ್ತಿತ್ತಲಾಗಿ ಮುಂಗಾರು ಮಳೆ ಪೂಜಾ ಗಾಂಧಿ ಮತ್ತು ಇಂತಿ ನಿಮ್ಮ ಪ್ರೀತಿಯ ಶ್ರೀನಗರ ಕಿಟ್ಟಿ ಕೂಡ ಪೇಜ್ 3ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋ, ಇವರೆತ್ತ ಸಾಗುತ್ತಿದ್ದಾರೆಂದು ನೀವೇ ಊಹಿಸಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada