»   » 'ಬಲ್ಲಿ' ಹೆಸರಿನ ಸುತ್ತವೇ ಸುತ್ತಿಕೊಳ್ಳುತ್ತಿರುವ ವಿವಾದದ ಬಳ್ಳಿ

'ಬಲ್ಲಿ' ಹೆಸರಿನ ಸುತ್ತವೇ ಸುತ್ತಿಕೊಳ್ಳುತ್ತಿರುವ ವಿವಾದದ ಬಳ್ಳಿ

Posted By: Super Admin
Subscribe to Filmibeat Kannada


ಚಿತ್ರ ಯಶಸ್ವಿಯಾಗಲು ಅನೇಕ ಕಾರಣಗಳಿರುವಾಗ ವಿನಾಕಾರಣ ವಿವಾದದ ಬಳ್ಳಿ ಸುತ್ತಿಕೊಳ್ಳಬಾರದು ಎಂದು ನಿರ್ದೇಶಕ ಬಳ್ಳಿ ಹೆಸರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

-----------

'ಬಲ್ಲಿ' ಚಿತ್ರಕ್ಕೆ ಬೇಡವೆಂದರೂ ವಿವಾದ ತಾನಾಗಿಯೇ ಬಳ್ಳಿಯಂತೆ ಸುತ್ತಿಕೊಳ್ಳುತ್ತಿದೆ. ಅದೂ ಚಿತ್ರದ ಹೆಸರು 'ಬಲ್ಲಿ'ಯ ಸುತ್ತವೇ!

ಬಲ್ಲಿ ಹೆಸರನ್ನು ಬದಲಾಯಿಸಬೇಕೆಂದು ಪುಕಾರು ಎದ್ದಿತ್ತು. ಸ್ವತಃ ಚಿತ್ರದ ಸಂಗೀತ ನಿರ್ದೇಶಕ ವಿ.ಮನೋಹರ್ ಅವರೇ ಚಿತ್ರದ ಹೆಸರನ್ನು ಇಷ್ಟಪಟ್ಟಿಲ್ಲ. ಆದರೆ ಚಿತ್ರದ ಹೆಸರನ್ನು ಬದಲಾಯಿಸಬೇಕೆಂಬ ಆಗ್ರಹವನ್ನು ಚಿತ್ರದ ನಿರ್ದೇಶಕ ಬನ್ನಂಜೆ ಸುಧಾಕರ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಚಿತ್ರದ ಹೆಸರು ನಿರ್ಮಾಪಕರ ನಿರ್ಧಾರಕ್ಕೆ ಬಿಟ್ಟ ವಿಚಾರ. ಸಾಕಷ್ಟು ಸಮಾಲೋಚನೆಗಳ ಬಳಿಕ ಈ ಹೆಸರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಚಿತ್ರದ ನಾಯಕ ಬಲರಾಮ ಆಚಾರ್ಯ ಹೆಸರಿನ ಸಂಕ್ಷಿಪ್ತ ರೂಪವೇ ಬಲ್ಲಿ ಎಂದು ಬನ್ನಂಜೆ ಹೇಳಿದ್ದಾರೆ.

ಸಂಗೀತ ಪ್ರೇಮಿ ಬ್ರಾಹ್ಮಣರ ಹುಡುಗ ಬಲರಾಮನ ಸುತ್ತವೇ ಕಥೆ ಸುತ್ತುವುದರಿಂದ ಈ ಹೆಸರನ್ನು ನೀಡಲಾಗಿದೆ. ಪರಿಸ್ಥಿತಿಯ ಕೈವಾಡದಿಂದಾಗಿ ಆತ ಭೂಗತ ಲೋಕ ಪ್ರವೇಶಿಸುತ್ತಾನೆ. ಚಿತ್ರದಲ್ಲಿ ಒಳ್ಳೆಯ ಸಂದೇಶ ಕೂಡ ಇದೆ. ಸಂಗೀತ ಕೂಡ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಚಿತ್ರ ಯಶಸ್ವಿಯಾಗಲು ಇಷ್ಟೊಂದು ಕಾರಣಗಳಿರುವಾಗ ವಿನಾಕಾರಣ ವಿವಾದದ ಬಳ್ಳಿ ಸುತ್ತಿಕೊಳ್ಳಬಾರದು ಎಂದು ನಿರ್ದೇಶಕ ಬಲ್ಲಿ ಹೆಸರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ರಂಜನ್‌ನನ್ನು ಪ್ರೇಮಿಸುವ ಬ್ರಾಹ್ಮಣ ಯುವತಿಯಾಗಿ ಪೂಜಾ ಗಾಂಧಿಯ ಕಿರಿಯ ಸಹೋದರಿ ರಾಧಿಕಾ ಗಾಂಧಿ ರಂಗಪ್ರವೇಶ ಮಾಡುತ್ತಿದ್ದಾರೆ. ಜಾಹೀರಾತು ಕಂಪನಿಯನ್ನು ನಡೆಸುತ್ತಿರುವ ನಿರಂಜನ್ ಈ ಚಿತ್ರದಲ್ಲಿ ರಂಜನ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಆದರೆ ರಾಧಿಕಾ ಗಾಂಧಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳದಿರುವುದೇ ಚಿತ್ರಪ್ರೇಮಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಚಿತ್ರರಂಗಕ್ಕೆ ಕಾಲಿಟ್ಟಾಗ ಅಕ್ಕ ಪೂಜಾ ಕೂಡ ತಮ್ಮ ಹೆಸರನ್ನು ಸಂಜನಾ ಎಂದು ಬದಲಾಯಿಸಿಕೊಂಡಿದ್ದರು. ಅವರು ಮೂಲ ಹೆಸರನ್ನು ಉಳಿಸಿಕೊಂಡಿದ್ದು ಏಕೆಂದು ಎಲ್ಲರಿಗೂ ತಿಳಿದ ವಿಷಯ. ಅಷ್ಟಕ್ಕೂ ಹೆಸರಲ್ಲೇನಿದೆ ಬಿಡಿ?

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸಂಗೀತ ಹೂವುಗಳಾದ ಸಿ.ಅಶ್ವತ್ಥ, ರತ್ನಮಾಲಾ ಪ್ರಕಾಶ್, ಮಂಜುಳಾ ಗುರುರಾಜ್ ಮುಂತಾದವರು ಈ ಸಂಗೀತ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಇಬ್ಬರು ಬಾಲಿವುಡ್ ಖ್ಯಾತನಾಮರು ಕೂಡ ಬಳ್ಳಿಯಲ್ಲಿ ವಿಶೇಷ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಅವರ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಐವತ್ತು ದಿನಗಳ ಕಾಲ ಬೆಂಗಳೂರು, ಮಂಗಳೂರು ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ.

ಪೂರಕ ಓದಿಗೆ
ಮುಂಗಾರು ಮಳೆಯ ಬೆನ್ನಲ್ಲೇ ಹಿಂಗಾರು ಮಳೆ ಬರುತಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada