»   » ಕಮೀನೆ ಚಿತ್ರ ನಿಷೇಧಕ್ಕ್ಕೆ ಪುರಿ ಶ್ರೀಗಳ ಆಗ್ರಹ

ಕಮೀನೆ ಚಿತ್ರ ನಿಷೇಧಕ್ಕ್ಕೆ ಪುರಿ ಶ್ರೀಗಳ ಆಗ್ರಹ

Posted By: Staff
Subscribe to Filmibeat Kannada

'ಕಮೀನೆ' ಚಿತ್ರದಲ್ಲಿ ಪುರಿ ಜಗನ್ನಾಥ ಸ್ವಾಮಿಯನ್ನು ಅವಹೇಳನ ಮಾಡಲಾಗಿದೆ. ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಕೂಡಲೆ ಕ್ಷಮೆಯಾಚಿಸಬೇಕು. ಹಾಗೆಯೇ ಕಮೀನೆ ಚಿತ್ರವನ್ನು ನಿಷೇಧಿಸ ಬೇಕು ಎಂದು ಕೇಂದ್ರ ಗೃಹ ಸಚಿವ ಚಿದಂಬರಂ ಅವರನ್ನು ಪುರಿ ಗೋವರ್ಧನ ಪೀಠಾಧೀಶ ಸ್ವಾಮಿ ನಿಶ್ಚಲಾನಂದ ಸರಸ್ವತಿ ಆಗ್ರಹಿಸಿದ್ದಾರೆ.

''ಜಗನ್ನಾಥನನ್ನು ಅವಹೇಳನ ಮಾಡಿದವರು ಕ್ಷಮೆಯಾಚಿಸಬೇಕು. ದೇಶದಾದ್ಯಂತ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಈ ಚಿತ್ರಕೆಣಕಿದೆ. ಚಿತ್ರವನ್ನು ಗೃಹ ಸಚಿವರು ಕೂಡಲೇ ನಿಷೇಧಿಸಬೇಕು. ಪ್ರತಿಯೊಂದು ಧರ್ಮದ ಹಕ್ಕುಗಳನ್ನು ಕಾಪಾಡಬೇಕಾದದ್ದು ಕೇಂದ್ರ ಸರಕಾರದ ಕರ್ತವ್ಯ. ಚಿತ್ರಮಂದಿರದ ಮಾಲೀಕರು ಸಹ ಕಮೀನೆ ಚಿತ್ರದ ವಿರುದ್ಧ ಪ್ರತಿಭಟಿಸಬೇಕು'' ಎಂದು ಪುರಿ ಶ್ರೀಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪುರಿಯ ಬಿಜೆಡಿ ಶಾಸಕ ಮಹೇಶ್ವರ್ ಮಹಂತಿ ಸಹ ಕಮೀನೆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಶಹೀದ್ ಕಪೂರ್ ಮತ್ತು ಪ್ರಿಯಾಂಕ ಚೋಪ್ರಾ ನಟನೆಯ ಈ ಚಿತ್ರದಲ್ಲಿ ಲಂಚ ಪಡೆಯುವ ಸನ್ನಿವೇಶವೊಂದರಲ್ಲಿ 'ನನ್ನ ಕೈ ಜಗನ್ನಾಥದು' ಎಂಬ ಸಂಭಾಷಣೆ ಬರುತ್ತದೆ. ಭ್ರಷ್ಟಾಚಾರಕ್ಕೆ ಸಾಕ್ಷಾತ್ ಜಗನ್ನಾಥನ ಕೈ ಹೋಲಿಸಿರುವುದೇ ಈ ವಿವಾದಕ್ಕೆ ಕಾರಣವಾಗಿದೆ.

ಬಿತ್ತಿಚಿತ್ರಗಳ ಮೇಲೆ ಮಂದಬೆಳಕಿನಲ್ಲಿ ಜಗನ್ನಾಥನನ್ನು ಮುದ್ರಿಸಲಾಗಿದೆ. ಈ ಭಿತ್ತಿಚಿತ್ರಗಳನ್ನು ಸಾರ್ವಜನಿಕ ಶೌಚಾಲಯಗಳ ಮೇಲೂ ಅಂಟಿಸಲಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರದಲ್ಲಿ ಕೆಲವೊಂದು ಸನ್ನಿವೇಶಗಳಿವೆ ಎಂಬುದು ಪುರಿ ಪೀಠಾಧೀಶರ ಆರೋಪ.

ಈ ಸಂಬಂಧ ಚಿತ್ರವನ್ನು ನಿರ್ಮಿಸಿರುವ ಯುಟಿವಿ ಮೋಷನ್ ಪಿಕ್ಚರ್ಸ್ ಮೇಲೆ ಪುರಿಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳನ್ನು ತೆಗೆಯುವಂತೆ ನಿರ್ಮಾಪಕರಿಗೆ ಪುರಿ ಜಗನ್ನಾಥ ಆಲಯದ ಆಡಳಿತ ಮಂಡಳಿ ಸಹ ಪತ್ರ ಸಹ ಬರೆದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada