»   »  ಮನೋಮೂರ್ತಿ ಬಗ್ಗೆ ಬೇಸರಗೊಂಡ ನಂದಿತಾ

ಮನೋಮೂರ್ತಿ ಬಗ್ಗೆ ಬೇಸರಗೊಂಡ ನಂದಿತಾ

Posted By: *ಜಯಂತಿ
Subscribe to Filmibeat Kannada

'ಸೋನು ನಿಗಮ್ ಹೀರೋ ಬೇರೆ ಆಗ್ತಾರಂತೆ? ಅದೊಂದು ಆದರೆ ಮುಗೀತು ಬಿಡಿ' ಗಾಯಕಿ ನಂದಿತಾ ಮಾತಿನಲ್ಲಿ ದೊಡ್ಡ ವ್ಯಂಗ್ಯವಿತ್ತು. ಪರಭಾಷಾ ಗಾಯಕ, ಗಾಯಕಿಯರಿಗೆ ಮಣೆಹಾಕುವ ಪ್ರವೃತ್ತಿಯಿಂದ ರೋಸಿಹೋಗಿರುವವರಲ್ಲಿ ಅವರು ಪ್ರಮುಖರು. 'ಮುಂಗಾರು ಮಳೆ' ಬರುವವರೆಗೂ ನಂದಿತಾ ಕನ್ನಡದ ಲೀಡ್ ಗಾಯಕಿ. ಈಗ ಅವರ ಜಾಗವನ್ನು ಶ್ರೇಯಾ ಘೋಷಾಲ್ ಆಕ್ರಮಿಸಿಕೊಂಡಿದ್ದಾರೆ.

'ಶ್ರೇಯಾ ಹಾಡಿನ ಬಗ್ಗೆ ಎರಡು ಮಾತಿಲ್ಲ. ಆಕೆ ನಿಜಕ್ಕೂ ಪ್ರತಿಭಾವಂತೆ. ಆದರೆ, ನಮ್ಮ ಭಾಷೆಯ ಜಾಯಮಾನದ ಅರಿವು ಅವರಿಗಿಲ್ಲ. ಹಾಗಾಗಿ ಭಾಷಾ ದೃಷ್ಟಿಯಿಂದ ಕೆಲವು ತಪ್ಪುಗಳು ಅವರಿಂದ ಆಗುತ್ತವೆ. ಕನ್ನಡದ ಕೆಲವು ಪದಗಳ ಮೇಲೆ ವಿಪರೀತ ಗಮಕ ಮಾಡುವುದು ತಪ್ಪು. ಅಂಥ ತಪ್ಪುಗಳನ್ನು ಕನ್ನಡ ಬರದೇ ಇರುವವರು ಮಾಡುವುದು ಸಹಜವೇ. ಆದರೆ, ತಪ್ಪುಗಳನ್ನೆಲ್ಲಾ ನಾವು ಒಪ್ಪಿಕೊಂಡು ಬೇರೆಯವರು ಹಾಡಿದ್ದನ್ನು ಕೇಳುವುದಿದೆಯಲ್ಲ; ಅದು ದುರಂತ...' ಹೀಗೆ ನಂದಿತಾ ಲಹರಿ ಮುಂದುವರಿಯಿತು.

ಒಂದು ಕಾಲದಲ್ಲಿ ತಮ್ಮನ್ನು ಕರೆದು ಚಾನ್ಸ್ ಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿ ಧೋರಣೆಯೇ ಈಗ ಬದಲಾಗಿರುವುದಕ್ಕೆ ನಂದಿತಾ ಉದಾಹರಣೆಗಳನ್ನು ಕೊಡುತ್ತಾರೆ. ಮಿಲನ ಚಿತ್ರದ 'ಮದರಂಗಿಯಲ್ಲಿ' ಹಾಗೂ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದ ಒಂದು ಹಾಡನ್ನು ಮೊದಲು ನಂದಿತಾ ಹಾಗೂ ರಾಜೇಶ್ ಹಾಡಿದ್ದರು.

ಆಮೇಲೆ ಮನೋಮೂರ್ತಿ ನಂದಿತಾ ಕಂಠದ ಬದಲು ಶ್ರೇಯಾ ಕಂಠ ಬಳಸಿಕೊಂಡಿದ್ದಾರೆ. ಹೀಗಾದದ್ದು ಯಾಕೆ ಎಂದು ನಂದಿತಾ ಪ್ರಶ್ನಿಸಿದ್ದಾರೆ ಕೂಡ. ಅದಕ್ಕೆ ಮನೋಮೂರ್ತಿ ನಿರ್ಮಾಪಕ, ನಿರ್ದೇಶಕರ ಕಡೆ ಬೆರಳು ತೋರಿಸಿ ಸುಮ್ಮನಾಗಿದ್ದಾರೆ. ಇನ್ನು ಮುಂದೆ ಮನೋಮೂರ್ತಿ ಕರೆದರೆ ಹಾಡಲು ಒಲ್ಲೆ ಎನ್ನುವಿರಾ ಅಂದರೆ, 'ನಮಗೆ ಸಿಗುವ ಹಾಡುವ ಅವಕಾಶವನ್ನು ಈ ಪರಿಸ್ಥಿತಿಯಲ್ಲಿ ಬಿಡುವುದಾದರೂ ಹೇಗೆ?" ಎಂದು ಮರುಪ್ರಶ್ನೆ ಹಾಕುತ್ತಾರೆ.

ಪರಭಾಷಾ ಗಾಯಕ, ಗಾಯಕಿಯರಿಂದ ವ್ಯಾಪಕವಾಗಿ ಹಾಡಿಸುತ್ತಿರುವುದನ್ನು ಪ್ರತಿಭಟಿಸಲು ಮೆರವಣಿಗೆ ಹಮ್ಮಿಕೊಳ್ಳುವ ನಿರ್ಧಾರ ನೆರವೇರದಿರಲು ಏನು ಕಾರಣ ಎಂಬ ಪ್ರಶ್ನೆಗೆ ನಂದಿತಾ ಮೊದಲು ಮೌನವಾದರು. ಆಮೇಲೆ ಹೇಳಿದ್ದು ಹೀಗೆ: 'ನಮ್ಮಲ್ಲಿ ಯಾರೂ ನಾಯಕತ್ವ ವಹಿಸಿಕೊಳ್ಳಲಿಲ್ಲ. ಪ್ರತಿಭಟನೆಯಂಥ ದೊಡ್ಡ ಕೆಲಸ ಮಾಡುವಾಗ ಯಾರಾದರೂ ನೇತೃತ್ವ ವಹಿಸಿಕೊಳ್ಳಲೇಬೇಕು. ನಾಯಕರೇ ಇಲ್ಲದ ಕಾರಣ ಆ ಉದ್ದೇಶ ಈಡೇರಲಿಲ್ಲವಷ್ಟೆ".

ಅಪ್ಪ ಅಮ್ಮನಿಗಾಗಿ ಹೊಸ ಫ್ಲಾಟ್ ಕೊಂಡಿರುವ ನಂದಿತಾ 'ರಿಯಾಲಿಟಿ ಶೋ"ಗಳ ತೀರ್ಪುಗಾರರಾಗಿ ಈಗ ಮಿಂಚುತ್ತಿದ್ದಾರೆ. ಆದರೂ, ಹಿನ್ನೆಲೆ ಗಾಯನದ ಅವಕಾಶ ಕಡಿಮೆಯಾಗಿರುವುದರ ಕುರಿತು ಅವರಿಗೆ ಬೇಸರವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada