»   »  ಚಿತ್ರ ನಿರ್ದೇಶಕ ರತ್ನಜ ಬದಲಾಗಿದ್ದಾರಾ?

ಚಿತ್ರ ನಿರ್ದೇಶಕ ರತ್ನಜ ಬದಲಾಗಿದ್ದಾರಾ?

By: *ಜಯಂತಿ
Subscribe to Filmibeat Kannada

ನಿರ್ದೇಶಕ ರತ್ನಜ ಬದಲಾಗಿಲ್ಲವೇ? ಗೆದ್ದಾಗ ಅಹಂಕಾರ ಮೈಗೂಡುವುದೇನೋ ಸರಿ; ಆದರೆ ಸೋಲಿನಲ್ಲಿ ವಿನಯ ಮೈಗೂಡಬೇಕಲ್ಲವೇ?ಉಹುಂ, ರತ್ನಜ ಬದಲಾಗಿಲ್ಲ ಎಂದರು ಗಡ್ಡ ನೆರೆತ ಪತ್ರಕರ್ತರೊಬ್ಬರು. ಹೌದೌದು ಎಂದು ತಲೆದೂಗಿದರು ಮತ್ತೊಬ್ಬರು. ಪತ್ರಕರ್ತರ ಗುಸುಗುಸು ಕಿವಿಗೆ ಬೀಳದವರಂತೆ ಕುಳಿತಿದ್ದರು ರತ್ನಜ.

ಅಂದಹಾಗೆ, ಅದು ಪ್ರೇಮಿಸಂ ಚಿತ್ರದ ಸುದ್ದಿಗೋಷ್ಠಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. ಮಾತನಾಡಿದ್ದೆಲ್ಲ ಸಂಗೀತ ನಿರ್ದೇಶಕ ಹಂಸಲೇಖಾ ಹಾಗೂ ಅಜಯ್‌ಗೌಡ. ನಿರ್ದೇಶಕ ರತ್ನಜ ಕಾರ್ಯಕ್ರಮಕ್ಕೆ ಒಂದೂವರೆ ತಾಸು ತಡವಾಗಿ ಬಂದರು. ಆದರೆ ತಮ್ಮ ವಿಳಂಬದ ಅರಿವಿಲ್ಲದವರಂತೆ ಅವರು ನಡೆದುಕೊಂಡರು. ಆಗಲೇ ಗುಸುಗುಸು ಶುರುವಾಗಿದ್ದು- ರತ್ನಜ ಬದಲಾಗಿಲ್ಲವೇ ಎನ್ನುವ ಪ್ರಶ್ನೆ ಎದ್ದದ್ದು.

ನೆನಪಿರಲಿ ಎನ್ನುವ ಸುಂದರ ಸ್ವಪ್ನ ಹಾಗೂ ಹೊಂಗನಸು ಎನ್ನುವ ದುಸ್ವಪ್ನದ ನಂತರ ರತ್ನಜ ನಿರ್ದೇಶಿಸುತ್ತಿರುವ ಮೂರನೇ ಚಿತ್ರ ಪ್ರೇಮಿಸಂ. ಈ ಚಿತ್ರದ ಶೂಟಿಂಗ್ ಹೆಚ್ಚೂ ಕಡಿಮೆ ಮುಗಿದಿದೆ. ಡಬ್ಬಿಂಗ್ ನಡೀತಿದೆ. ಇದಿಷ್ಟು ಚಿತ್ರಕ್ಕೆ ಸಂಬಂಧಿಸಿದಂತೆ ರತ್ನಜ ನೀಡಿದ ಮಾಹಿತಿ. ರತ್ನಜ ಅವರ ಮೂಡ್ ಸರಿಯಾಗಿರಲಿಲ್ಲ. ಆ ಕಾರಣದಿಂದ, ಕಾರ್ಯಕ್ರಮ ಮುಗಿದ ನಂತರ ಅವರನ್ನು ಮಾತನಾಡಿಸಿದರೆ ಎದುರುಗೊಂಡದ್ದು ಬೇರೆಯದೇ ರತ್ನಗರ್ಭ!

ಪ್ರೇಮಿಸಂ ಬಗೆಗಿನ ಮಾತು ಮತ್ತೊಮ್ಮೆ ಆಡೋಣ; ಸದ್ಯಕ್ಕೆ ನಿಮ್ಮ ಮುನಿಸಿನ ಕುರಿತು ಹೇಳಿ ಎನ್ನುವ ಪ್ರಶ್ನೆಗೆ, ಮುನಿಸಾ? ಯಾರ ಮೇಲೆ? ಯಾರಿಗೆ? ಎಂದರು ರತ್ನಜ. ಸಾಕು ಈ ಸಿನಿಮಾ ವರಸೆ. ಪತ್ರಕರ್ತರ ಮೇಲೆ ನಿಮಗೆ ಸಿಟ್ಟಿರುವುದು ಯಾರಿಗೆ ಗೊತ್ತಿಲ್ಲ! ಹೊಂಗನಸು ಚಿತ್ರಕ್ಕೆ ಬಂದ ವಿಮರ್ಶೆಗಳಿಂದ ಕೆರಳಿ ಮಾಧ್ಯಮದವರನ್ನು ತೆಗಳಿ ಜಾಹಿರಾತು ನೀಡಿದ್ದಿರಲ್ಲ ಆ ಮುನಿಸು ಇನ್ನೂ ತೀರಿಲ್ಲವೇ? ಎಂದು ಸಿಟ್ಟಿನ ಮೂಲವನ್ನು ರತ್ನಜರಿಗೆ ನೆನಪಿಸಬೇಕಾಯಿತು. ಸೃಜನಶೀಲ ನಿರ್ದೇಶಕ ವಿಮರ್ಶೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕಲ್ಲವಾ ಎನ್ನುವ ಪ್ರಶ್ನೆಯನ್ನೂ ಜೊತೆಗಿಡಲಾಯಿತು.

ರತ್ನಜ ಕೆಲವು ಕ್ಷಣ ಸುಮ್ಮನಿದ್ದರು. ನಿಡಿದಾದ ಉಸಿರೆಳೆದುಕೊಂಡು ಅವರು ಹೇಳಿದ್ದು ಹೌದು, ಪತ್ರಕರ್ತರ ಮೇಲೆ ಸಿಟ್ಟಾದದ್ದು ನಿಜ. ನನ್ನ ದೃಷ್ಟಿಯಲ್ಲದು ಸಕಾರಣವಾದ ಸಿಟ್ಟು. ಸಿನಿಮಾವೊಂದನ್ನು ಕೇಂದ್ರವಾಗಿಟ್ಟುಕೊಂಡು ಅದರ ಸರಿತಪ್ಪುಗಳ ಬಗ್ಗೆ ವಿಮರ್ಶಿಸಿದರೆ ನನಗೆ ಸಿಟ್ಟುಬರುತ್ತಿರಲಿಲ್ಲವೇನೊ? ಅಷ್ಟರಮಟ್ಟಿಗಿನ ಸಂಸ್ಕಾರ ನನಗಿದೆ. ಆದರೆ ಕೆಲವು ವಿಮರ್ಶೆಗಳು ಸಿನಿಮಾ ಕೇಂದ್ರಿತವಾಗಿರಲಿಲ್ಲ. ಅವು ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಬಂದ ವಿಮರ್ಶೆಗಳಾಗಿದ್ದವು. ವ್ಯಕ್ತಿಗಳನ್ನು ಕಾಲೆಳೆಯುವ ಪ್ರಯತ್ನದಂತಿದ್ದವು. ಆ ಕಾರಣದಿಂದಲೇ ನನಗೆ ಸಿಟ್ಟು ಬಂದದ್ದು...

ರತ್ನಜ ಅವರ ಮಾತುಗಳಲ್ಲಿ ವಿಷಾದವಿರಲಿಲ್ಲ. ತಮ್ಮ ವರ್ತನೆಯ ಬಗ್ಗೆ ಪಶ್ಚಾತ್ತಾಪವೂ ಇರಲಿಲ್ಲ. ಹಾಗಾದರೆ, ಹೊಂಗನಸು ಚಿತ್ರದ ಸೋಲಿನಿಂದ ಅವರು ಕಲಿತಿದ್ದೇನು? ಉಹುಂ, ಹೊಂಗನಸು ಚಿತ್ರದ ಸೋಲನ್ನು ಒಪ್ಪಿಕೊಳ್ಳಲು ರತ್ನಜ ಸಿದ್ಧರಿಲ್ಲ. ಹೊಂಗನಸು ರೂಪಿಸುವಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿಯೇ ಇತ್ತು. ಸಿನಿಮಾ ಸೋತಿದೆ ಎಂದಮಾತ್ರಕ್ಕೆ ಅದು ಕೆಟ್ಟಚಿತ್ರ ಎಂದರ್ಥವಲ್ಲ. ಬಹುಶಃ, ಗಾಳಿಪಟದಂಥ ದೊಡ್ಡ ಚಿತ್ರದ ಎದುರು ತೆರೆಕಾಣಿಸಿದ್ದು ಕೂಡ ನನ್ನ ಚಿತ್ರದ ಸೋಲಿಗೆ ಕಾರಣವಿದ್ದರೂ ಇರಬಹುದು.

ಹೊಂಗನಸು ಚಿತ್ರದಲ್ಲಿನ ನನ್ನ ನಿರ್ದೇಶನದ ಬಗೆಗೆ ತೃಪ್ತಿಯಿರುವುದರಿಂದಲೇ ನಿರ್ಮಾಪಕ ಅಜಯ್ ಗೌಡ ಮತ್ತೊಂದು ಸಿನಿಮಾ ನಿರ್ಮಿಸುತ್ತಿರುವುದು...ರತ್ನಜ ವಾದಗಳಿಗೆ ಕೊನೆಯಿರಲಿಲ್ಲ. ಆ ವಿಷಯ ಬಿಟ್ಟುಬಿಡೋಣ. ಪ್ರೇಮಿಸಂ ಬಗ್ಗೆ ಹೇಳಿ, ಅದರ ವಿಶೇಷಗಳ ಬಗ್ಗೆ ಮಾತನಾಡಿ ಎಂದು ವಿಷಯ ಬದಲಿಸಬೇಕಾಯಿತು.

ಪ್ರೇಮಿಸಂ ಬಗ್ಗೆ ರತ್ನಜ ಹೇಳಿದ್ದುಇದು ಯೂಥ್ ಎಂಟರ್‌ಟೈನ್‌ಮೆಂಟ್ ಸಿನಿಮಾ. ಇಡೀ ಚಿತ್ರದಲ್ಲಿ ಕನ್ನಡತನ ಎನ್ನುವುದು ಹಾಸುಹೊಕ್ಕಾಗಿದೆ. ಸಂಭಾಷಣೆ, ಗೀತೆಗಳು, ದೃಶ್ಯಾವಳಿ, ಸಾಹಿತ್ಯ- ಎಲ್ಲದರಲ್ಲೂ ಕನ್ನಡತನವಿದೆ. ಕನ್ನಡ ಪ್ರೇಮದ ಕುರಿತ ಗೀತೆಯೂ ಇದೆ. ಉಳಿದ ಚಿತ್ರಗಳಲ್ಲಿ ನಾಯಕರು ನುಡಿಪ್ರೀತಿಯ ಗೀತೆಗಳನ್ನು ಹಾಡಿದರೆ, ಪ್ರೇಮಿಸಂನಲ್ಲಿ ಕನ್ನಡಗೀತೆ ಹಾಡುವ ಅವಕಾಶ ನಾಯಕಿಯದ್ದು. ರತ್ನಜ ಮಾತು ಮುಗಿಸಿದರು. ಮತ್ತೆ ಡಬ್ಬಿಂಗ್ ಪ್ರಕ್ರಿಯೆಯಲ್ಲಿ ಮುಳುಗಿಹೋದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada