»   » ವಿಶ್ವ ಚಿತ್ರೋದ್ಯಮದಲ್ಲಿ ಸುನಾಮಿ 2012!

ವಿಶ್ವ ಚಿತ್ರೋದ್ಯಮದಲ್ಲಿ ಸುನಾಮಿ 2012!

Subscribe to Filmibeat Kannada

ತೀವ್ರ ಕುತೂಹಲ ಕೆರಳಿಸಿರುವ ಮತ್ತು ಚಿತ್ರ ರಸಿಕರು ಕಾತುರದಿಂದ ನಿರೀಕ್ಷಿಸುತ್ತಿರುವ ಪ್ರಳಯ ಕುರಿತ ಹಾಲಿವುಡ್ ಚಿತ್ರ '2012' ನವೆಂಬರ್ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರೋಲಂಡ್ ಎಮ್ಮೆರಿಚ್ ನಿರ್ದೇಶಿಸಿದ್ದಾರೆ. ಕೊಲಂಬಿಯಾ ಫಿಕ್ಚರ್ಸ್ ವಿಶ್ವದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡಿದ್ದು ಈಗಾಗಲೆ ಈ ಚಿತ್ರಕ್ಕೆ ಮುಂಗಡ ಬುಕಿಂಗ್ ಆರಂಭವಾಗಿದೆ.

ವಿಶ್ವ ಚಲನಚಿತ್ರ ಚರಿತ್ರೆಯಲ್ಲಿ ಅತ್ಯಧಿಕ ಬಡ್ಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಎಂಬ ಹೆಗ್ಗಳಿಕೆಗೆ '2012' ಪಾತ್ರವಾಗಿದೆ. ಭಗವದ್ಗೀತೆ, ಕುರಾನ್, ಬೈಬಲ್, ಮಾಯನ್ ಕ್ಯಾಲೆಂಡರ್ ಮತ್ತು ವಿಜ್ಞಾನ ಹೇಳಿದ ಹಾಗೆ '2012'ಕ್ಕೆ ವಿಶ್ವ ಅಂತ್ಯವಾಗಲಿದೆಯೆ? ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರವೇ 2012.

ಡಿಸೆಂಬರ್ 21, 2012ಕ್ಕೆ ವಿಶ್ವ ಅಂತ್ಯವಾಗಲಿದೆ ಎನ್ನುತ್ತದೆ ಮಾಯನ್ ಕ್ಯಾಲೆಂಡರ್. ಇದನ್ನು ಆಧಾರವಾಗಿಟ್ಟುಕೊಂಡು ಭವಿಷ್ಯ ಕುರಿತ ಪ್ರಳಯದ ದೃಶ್ಯಗಳನ್ನು ಉತ್ಕಂಟಭರಿತವಾಗಿ,ಕುತೂಹಲ ಕೆರಳಿಸುವ ರೀತಿಯಲ್ಲಿ 2012 ಚಿತ್ರವನ್ನು ತೆರೆಗೆ ತರಲಾಗಿದೆ. ಒಟ್ಟು 158 ನಿಮಿಷಗಳ ಈ ಚಿತ್ರಕ್ಕೆ 200 ದಶಲಕ್ಷ ಡಾಲರ್ ಗಳಲ್ಲಿ ನಿರ್ಮಿಸಲಾಗಿದೆ.

ಈ ಚಿತ್ರದ ಚಿತ್ರೀಕರಣ ಆಗಸ್ಟ್ 2008ರಲ್ಲಿ ವಾಂಕೋವರ್ ನಲ್ಲಿ ಆರಂಭವಾಯಿತು. ಕೊನೆಯಾಗಿದ್ದು ಜನವರಿ 2009ಕ್ಕೆ. ಜುಲೈ 10, 2009ಕ್ಕೆ ಬಿಡುಗಡೆ ಮಾಡಲು ಮುಹೂರ್ತ ನಿಗದಿಯಾಗಿತ್ತು. ಕಾರಣಾಂತರಗಳಿಂದ ನವೆಂಬರ್ 13, 2009ಕ್ಕೆ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನಲ್ಲಿ ಪಿವಿಆರ್ ಸೇರಿದಂತೆ ಇನ್ನೋವೇಟೀವ್, ವಿಷನ್ ಸಿನಿಮಾಸ್, ಫನ್ ಸಿನಿಮಾಸ್, ರೆಕ್ಸ್, ತ್ರಿಭುವನ್, ಊರ್ವಶಿ, ಕಾವೇರಿ, ವೈಭವ್, ಅಪ್ಸರ, ಈಶ್ವರಿ, ಮುಕುಂದ, ಲಕ್ಷ್ಮಿ, ನವರಂಗ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದೃಶ್ಯ ವೈಭವದ 2012 ಚಿತ್ರ ವಿಶ್ವ ಚಿತ್ರೋದ್ಯಮದಲ್ಲಿ ಸುನಾಮಿ ಎಬ್ಬಿಸಲಿದೆ ಎಂಬ ವಿಶ್ವಾಸದಲ್ಲಿ ನಿರ್ದೇಶಕ ರೋಲಂಡ್ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada