twitter
    For Quick Alerts
    ALLOW NOTIFICATIONS  
    For Daily Alerts

    ರಷ್ಯಾ ಸೈನಿಕರಿಗೆ ಅಮೆರಿಕದ ನಟ ಅರ್ನಾಲ್ಡ್ ಶ್ವಾಜ್‌ನೆಗರ್ ಪ್ರೀತಿ ಪೂರ್ವಕ ಸಂದೇಶ!

    |

    ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಯಾವ ವಿದೇಶಿ ಒತ್ತಡಗಳಿಗೂ ಮಣಿಯದೆ ಯುದ್ಧ ಮುಂದುವರೆಸಿದೆ. ಅಮೆರಿಕ, ನ್ಯಾಟೊ ಸೇರಿದಂತೆ ಹಲವು ದೇಶಗಳು ರಷ್ಯಾದ ನೀತಿಯನ್ನು ಬಹುವಾಗಿ ಖಂಡಿಸಿವೆ. ಅಮೆರಿಕ ಅಂತೂ ರಷ್ಯಾ ವಿರುದ್ಧ ಕಿಡಿಕಾರಿದೆ, ಹಲವು ನಿರ್ಬಂಧಗಳನ್ನು ರಷ್ಯಾದ ಮೇಲೆ ಹೇರಿದೆ.

    ಅಮೆರಿಕ ದೇಶವು ರಷ್ಯಾದ ವಿರುದ್ಧ ನಿಂತಿರುವ ಈ ಹೊತ್ತಿನಲ್ಲಿ ಹಾಲಿವುಡ್ ನಟ, ಅಮೆರಿಕ ನಾಗರಿಕ ಅರ್ನಾಲ್ಡ್ ಶ್ವಾಜ್‌ನೆಗರ್ ರಷ್ಯಾದ ಸೈನಿಕರಿಗೆ ಪ್ರೀತಿಯ ಸಂದೇಶವೊಂದನ್ನು ಕಳಿಸಿದ್ದಾರೆ. ಆದರೆ ಆ ಸಂದೇಶದಲ್ಲಿ ಅವರು ರಷ್ಯಾ ಸೈನಿಕರಿಗೆ ಬುದ್ಧಿವಾದ ಹೇಳಿದ್ದಾರೆ. ಯುದ್ಧದ ವಿರುದ್ಧ ನಿಲವು ತಳೆವಂತೆ ಮನವಿ ಮಾಡಿದ್ದಾರೆ.

    ಪ್ರಾಣದ ಹಂಗು ತೊರೆದು ರಷ್ಯಾ ದಾಳಿಯನ್ನು ಸೆರೆ ಹಿಡಿಯಲು ಮುಂದಾದ ಉಕ್ರೇನ್ ಡೈರೆಕ್ಟರ್ ಪ್ರಾಣದ ಹಂಗು ತೊರೆದು ರಷ್ಯಾ ದಾಳಿಯನ್ನು ಸೆರೆ ಹಿಡಿಯಲು ಮುಂದಾದ ಉಕ್ರೇನ್ ಡೈರೆಕ್ಟರ್

    ಒಂಬತ್ತು ನಿಮಿಷಗಳ ವಿಡಿಯೋದಲ್ಲಿ ಅರ್ನಾಲ್ಡ್ ರಷ್ಯಾ ಬಗ್ಗೆ ಅಲ್ಲಿನ ಜನರ ಬಗ್ಗೆ, ಸರ್ಕಾರದ ಬಗ್ಗೆ ಸೈನಿಕರ ಬಗ್ಗೆ ಉಕ್ರೇನ್ ಮೇಲಿನ ಯುದ್ಧ, ಯುದ್ಧದ ಆಂತರಿಕ ಕಾರಣಗಳು ಹೀಗೆ ಹಲವು ವಿಷಯಗಳನ್ನು ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ಅರ್ನಾಲ್ಡ್‌ರ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ''1961ರಲ್ಲಿ ನನಗೆ 14 ವರ್ಷವಿದ್ದಾಗ ಗೆಳೆಯನೊಬ್ಬನ ಆಹ್ವಾನದ ಮೇರೆಗೆ ರಷ್ಯಾಕ್ಕೆ ಹೋಗಿದ್ದೆ ಹೆವಿವೇಟ್‌ಲಿಫ್ಟಿಂಗ್ ಸ್ಪರ್ಧೆ ನೋಡಲು. ಅಂದು ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ರಷ್ಯಾದ ಯೂರಿ ಪೆಟ್ರೊವಿಚ್ ಪ್ಲಾಸೋವ್ 200 ಕೆಜಿಗೂ ಅಧಿಕ ತೂಕವನ್ನು ತನ್ನ ತಲೆಗಿಂತಲೂ ಮೇಲೆ ಎತ್ತಿ ವಿಶ್ವಚಾಂಪಿಯನ್ ಆದರು. ಬಳಿಕ ನನಗೆ ವೇದಿಕೆ ಹಿಂದೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ವಿಶ್ವದ ಅತ್ಯಂಗ ಗಟ್ಟಿ ಮನುಷ್ಯನ ಎದುರು 14 ವರ್ಷದ ಬಾಲಕನಾದ ನಾನು ನಿಂತಿದ್ದೆ. ನನಗೆ ಆ ಕ್ಷಣವನ್ನು ನಂಬಲೇ ಆಗಲಿಲ್ಲ. ವಿಶ್ವಚಾಂಪಿಯನ್ ಆಗಿದ್ದ ಆ ವ್ಯಕ್ತಿ ಬಹಳ ಒಳ್ಳೆಯ ಹಾಗೂ ಮೃದು ಸ್ವಭಾವದರಾಗಿದ್ದರು. ನಂತರ ನಾನು ನನ್ನ ಬೆಡ್‌ ರೂಮ್‌ನಲ್ಲಿ ಅವರ ಚಿತ್ರ ಅಂಟಿಸಿಕೊಂಡೆ. ಆದರೆ ಅದು ನಮ್ಮ ಅಪ್ಪನಿಗೆ ಇಷ್ಟವಾಗಲಿಲ್ಲ. ಅವರು ಎರಡನೇ ವಿಶ್ವ ಯುದ್ಧದಲ್ಲಿ ಪಾಲ್ಗೊಂಡು ರಷ್ಯಾದ ವಿರುದ್ಧ ಹೋರಾಡಿದವರಾಗಿದ್ದರು. ನಾನು ಅಪ್ಪನೊಂದಿಗೆ ಜಗಳವಾಡಿ ಆ ಚಿತ್ರವನ್ನು ಹಾಗೆಯೇ ಉಳಿಸಿಕೊಂಡೆ'' ಎಂದು ನೆನಪಿಸಿಕೊಂಡಿದ್ದಾರೆ ಅರ್ನಾಲ್ಡ್.

    ಇನ್‌ಸ್ಟಾಗ್ರಾಂ ಬ್ಯಾನ್ ಮಾಡಿದ ರಷ್ಯಾ: ಸಂಸ್ಥೆ ವಿರುದ್ಧ ತನಿಖೆ ಇನ್‌ಸ್ಟಾಗ್ರಾಂ ಬ್ಯಾನ್ ಮಾಡಿದ ರಷ್ಯಾ: ಸಂಸ್ಥೆ ವಿರುದ್ಧ ತನಿಖೆ

    ''ರಷ್ಯಾದೊಂದಿಗೆ ನನ್ನ ಸಂಬಂಧ ಅಲ್ಲಿಗೇ ಮುಗಿಯಲಿಲ್ಲ. ಮುಂದಿನ ದಿನಗಳಲ್ಲಿ ರಷ್ಯಾದೊಂದಿಗೆ ನನ್ನ ಸಂಬಂಧ ಇನ್ನಷ್ಟು ಗಾಢವಾಗುತ್ತಾ ಸಾಗಿತು. ನಾನು ನನ್ನ 'ರೆಡ್ ಟೇಪ್' ಸಿನಿಮಾವನ್ನು ರಷ್ಯಾದಲ್ಲಿ ಚಿತ್ರೀಕರಿಸಿದೆ. ರೆಡ್‌ ಸ್ಕೇರ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾದ ಮೊದಲ ಅಮೆರಿಕನ್ ಸಿನಿಮಾ ಅದು. ಸಿನಿಮಾದ ಚಿತ್ರೀಕರಣಕ್ಕೆ ಹೋದಾಗ ನಾನು ನನ್ನ ಹೀರೋ ಯೂರಿ ಪೆಟ್ರೊವಿಚ್ ಪ್ಲಾಸೋವ್ ಅನ್ನು ಭೇಟಿಯಾದೆ ನಾವಿಬ್ಬರೂ ಇಡೀ ದಿನವನ್ನು ಒಟ್ಟಿಗೆ ಕಳೆದೆವು. ಆತ ನನಗೆ ಸುಂದರವಾದ ನೀಲಿ ಬಣ್ಣದ ಕಾಫಿ ಕಪ್‌ ಅನ್ನು ಉಡುಗೊರೆಯಾಗಿ ನೀಡಿದರು, ಈಗಲೂ ನಾನು ಅದರಿಂದಲೇ ಕಾಫಿ ಕುಡಿಯುತ್ತೇನೆ'' ಎಂದು ಕಾಫಿ ಕಪ್‌ ಅನ್ನು ತೋರಿಸಿದ್ದಾರೆ ಅರ್ನಾಲ್ಡ್.

    ''ನಾನು 14 ವರ್ಷದವನಾಗಿದ್ದಾಗಿನಿಂದಲೂ ರಷ್ಯಾದ ಜನರ ಪ್ರೀತಿ, ಗೌರವಗಳನ್ನು ಬೆಳೆಸಿಕೊಂಡು ಬಂದಿದ್ದೀನಿ. ರಷ್ಯಾದ ಜನರ ಶಕ್ತಿ ಮತ್ತು ಹೃದಯದ ಗಟ್ಟಿತನ ನನ್ನಲ್ಲಿ ಸದಾ ಸ್ಪೂರ್ತಿ ತುಂಬಿದೆ. ಹಾಗಾಗಿಯೇ ನಾನಿಂದು ನಿಮಗೆ ಸತ್ಯ ಹೇಳಲು ಬಂದಿದ್ದೀನಿ. ನನಗೆ ಗೊತ್ತಿದೆ ನಿಮ್ಮ ಸರ್ಕಾರ, 'ಉಕ್ರೇನ್‌ ಅನ್ನು ನಾಜಿ ಪ್ರಭಾವದಿಂದ ಮುಕ್ತಗೊಳಿಸುವ ಯುದ್ಧ ಇದೆಂದು' ಹೇಳಿದೆ. ಆದರೆ ಇದು ಸತ್ಯವಲ್ಲ, ಉಕ್ರೇನ್‌ನ ಅಧ್ಯಕ್ಷ ಜೂ ಸಮುದಾಯದ ವ್ಯಕ್ತಿ. ಆತನ ಮೂರು ಸಹೋದರರು ಹಾಗೂ ತಂದೆಯನ್ನು ನಾಜಿಗಳು ಕೊಂದಿದ್ದಾರೆ. ಉಕ್ರೇನ್ ಈ ಯುದ್ಧವನ್ನು ಪ್ರಾರಂಭ ಮಾಡಲಿಲ್ಲ. ರಾಷ್ಟ್ರೀಯವಾದಿಗಳು ಅಥವಾ ನಾಜಿಗಳು ಸಹ ಈ ಯುದ್ಧವನ್ನು ಪ್ರಾರಂಭ ಮಾಡಲಿಲ್ಲ. ಬದಲಿಗೆ ರಷ್ಯಾದ ಸರ್ಕಾರ ಈ ಯುದ್ಧವನ್ನು ಪ್ರಾರಂಭ ಮಾಡಿದೆ. ಇದು ರಷ್ಯಾದ ಜನರ ಯುದ್ಧವಲ್ಲ. ವಿಶ್ವಸಂಸ್ಥೆಯ 141 ಸದಸ್ಯ ರಾಷ್ಟ್ರಗಳು ರಷ್ಯಾವೇ ಅತಿಕ್ರಮಣ ಮಾಡಿದೆ ಎಂದು ಮತ ಚಲಾಯಿಸಿದೆ. ಕೇವಲ ನಾಲ್ಕು ರಾಷ್ಟ್ರಗಳಷ್ಟೆ ರಷ್ಯಾದ ಪರವಾಗಿ ಮತಹಾಕಿವೆ'' ಎಂದಿದ್ದಾರೆ ಅರ್ನಾಲ್ಡ್.

    ''ಉಕ್ರೇನ್‌ನಲ್ಲಿ ರಷ್ಯಾ ಮಾಡುತ್ತಿರುವ ವಿಧ್ವಂಸದಿಂದಾಗಿ ಇಡೀಯ ವಿಶ್ವವೇ ರಷ್ಯಾದ ವಿರುದ್ಧ ನಿಂತಿದೆ. ಉಕ್ರೇನ್‌ನಲ್ಲಿ ರಷ್ಯಾವು ವಿಧ್ವಂಸಕಾರಿ ಕೃತ್ಯಗಳನ್ನು ಮಾಡುತ್ತಿದೆ. ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆಗಳ ಮೇಲೂ ಬಾಂಬ್‌ಗಳನ್ನು ಎಸೆದಿದೆ. ಮುವತ್ತು ಲಕ್ಷಕ್ಕೂ ಹೆಚ್ಚು ಉಕ್ರೇನ್ ನಿರಾಶ್ರಿತರು ದೇಶಬಿಟ್ಟು ಹೋಗಿದ್ದಾರೆ. ರಷ್ಯಾ ಮಾಡುತ್ತಿರುವ ಕ್ರೂರತನವಾದ್ದರಿಂದ ವಿಶ್ವದ ಇತರ ರಾಷ್ಟ್ರಗಳು ಅದರ ಮೇಲೆ ನಿರ್ಬಂಧ ಹೇರಿವೆ. ಈಗ ರಷ್ಯಾ ಒಂಟಿಯಾಗಿದೆ. ಅಷ್ಟೇ ಅಲ್ಲ ರಷ್ಯಾದ ಸಾವಿರಾರು ಸೈನಿಕರು ಯುದ್ಧದಲ್ಲಿ ಹತರಾಗಿದ್ದಾರೆ. ರಷ್ಯಾದ ಸೈನಿಕರು ತಮ್ಮ ಸರ್ವಾಧಿಕಾರಿಯ ಪರವಾಗಿ ಹೋರಾಡುತ್ತಿದ್ದರೆ. ಉಕ್ರೇನ್‌ನ ಜನ ತಮ್ಮ ತಾಯ್ನಾಡಿಗಾಗಿ ಹೋರಾಡುತ್ತಿದ್ದಾರೆ'' ಎಂದಿದ್ದಾರೆ ಅರ್ನಾಲ್ಡ್.

    ಸೈನಿಕರಿಗೆ ಸರಣಿ ಸುಳ್ಳು ಹೇಳಿದೆ ರಷ್ಯಾ ಸರ್ಕಾರ: ಅರ್ನಾಲ್ಡ್

    ಸೈನಿಕರಿಗೆ ಸರಣಿ ಸುಳ್ಳು ಹೇಳಿದೆ ರಷ್ಯಾ ಸರ್ಕಾರ: ಅರ್ನಾಲ್ಡ್

    ''ರಷ್ಯಾ ಸರ್ಕಾರವು ಕೇವಲ ತನ್ನ ಪ್ರಜೆಗಳಿಗೆ ಮಾತ್ರವೇ ಸುಳ್ಳು ಹೇಳಿಲ್ಲ ಬದಲಿಗೆ ತನ್ನ ಸೈನಿಕರಿಗೂ ಸುಳ್ಳು ಹೇಳಿದೆ. ಕೆಲವು ಸೈನಿಕರಿಗೆ, ನಾವು ನಾಜಿಗಳ ವಿರುದ್ಧ ಹೋರಾಡಲು ಹೋಗುತ್ತಿದ್ದೇವೆ ಎಂದು ಹೇಳಲಾಗಿದೆ. ಇನ್ನು ಕೆಲವು ಸೈನಿಕರಿಗೆ, ''ನಮ್ಮನ್ನು ಉಕ್ರೇನ್‌ನ ಜನ ನಾಯಕರಂತೆ ಸ್ವಾಗತ ಮಾಡುತ್ತಾರೆ'' ಎಂದು ಭ್ರಮೆ ಭಿತ್ತಲಾಗಿದೆ. ಇನ್ನು ಕೆಲವರಿಗಂತೂ ನಾವು ಕೇವಲ ಪರೀಕ್ಷಾರ್ಥ ಯುದ್ಧಕ್ಕೆ ಹೊರಟಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಕೆಲವರಿಗೆ ಉಕ್ರೇನ್‌ನಲ್ಲಿರುವ ಮೂಲ ರಷ್ಯನ್ನರನ್ನು ಉಳಿಸಲು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದಾವುದೂ ಸತ್ಯವಲ್ಲ. ರಷ್ಯಾ ಸೈನಿಕರಿಗೆ ಗೊತ್ತೆ ಇಲ್ಲ ಅವರು ಯುದ್ಧಕ್ಕೆ ಹೋಗುತ್ತಿದ್ದಾರೆ ಎಂದು'' ಎಂದಿದ್ದಾರೆ ಅರ್ನಾಲ್ಡ್.

    ತಂದೆಯ ಕತೆ ಹೇಳಿದ ಅರ್ನಾಲ್ಡ್

    ತಂದೆಯ ಕತೆ ಹೇಳಿದ ಅರ್ನಾಲ್ಡ್

    ''ನನ್ನ ತಂದೆ ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದಾಗಲೂ ಅವರ ಸರ್ಕಾರ ಇದೇ ರೀತಿ ಸುಳ್ಳುಗಳನ್ನು ಸೈನಿಕರಿಗೆ ಹೇಳಿತ್ತು. ಅವರು ಯುದ್ಧಭೂಮಿ ಲೆನಿಗಾರ್ಡ್ ಬಿಟ್ಟು ಬಂದಾಗ ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತವಾಗಿದ್ದರು. ಅವರು ತಮ್ಮ ಇಡೀಯ ಜೀವನವನ್ನು ನೋವಿನಲ್ಲಿಯೇ ಕಳೆದರು. ದೈಹಿಕ ನೋವು ಒಂದುಕಡೆಯಾದರೆ, ಅಪರಾಧಿ ಭಾವದ ನೋವನ್ನೂ ತೀರ್ವವಾಗಿ ಅವರು ಅನುಭವಿಸಿದರು. ರಷ್ಯಾದ ಸೈನಿಕರು ನನ್ನ ಮಾತು ಕೇಳಿಸಿಕೊಳ್ಳುತ್ತಿದ್ದರೆ. ಅವರಿಗೆ ಗೊತ್ತಾಗಿರುತ್ತದೆ ನಾನು ಯಾವ ರೀತಿಯ ನೋವಿನ ಬಗ್ಗೆ ಮಾತನಾಡುತ್ತಿದ್ದೇನೆ ಎಂದು. ಏಕೆಂದರೆ ಅವರು ನೋವುಗಳನ್ನು ಅನುಭವಿಸಲು ಆರಂಭಿಸಿದ್ದಾರೆ'' ಎಂದು ಅರ್ನಾಲ್ಡ್ ಹೇಳಿದ್ದಾರೆ.

    ನೀವು ನನ್ನ ತಂದೆಯಂತೆ ಆಗಬೇಡಿ: ಅರ್ನಾಲ್ಡ್

    ನೀವು ನನ್ನ ತಂದೆಯಂತೆ ಆಗಬೇಡಿ: ಅರ್ನಾಲ್ಡ್

    ''ನೀವು ನಿಮ್ಮ ಕಣ್ಣಾರೆ ನೋವುಗಳನ್ನು ನೋಡಿದ್ದೀರಿ. ನೀವು ನನ್ನ ತಂದೆಯಂತೆ ಜರ್ಜರಿತವಾಗುವುದು ನನಗೆ ಇಷ್ಟವಿಲ್ಲ. ನಿಮ್ಮ ತಾತ, ಮುತ್ತಾತರು ಮಾಡಿದಂತೆ ರಷ್ಯಾವನ್ನು ಕಾಪಾಡಿಕೊಳ್ಳಲು ನೀವು ಯುದ್ಧ ಮಾಡುತ್ತಿಲ್ಲ. ನೀವು ಒಂದು ಅನ್ಯಾಯದ ಯುದ್ಧದ ಭಾಗವಾಗಿದ್ದೀರ. ನಿಮ್ಮ ಜೀವನ ನಿಮ್ಮ ಪ್ರಸ್ತುತ ಮತ್ತು ಭವಿಷ್ಯವನ್ನು, ಒಂದು ಅರ್ಥಹೀನ ಯುದ್ಧ, ವಿಶ್ವವೇ ವಿರೋಧಿಸಿದ ಯುದ್ಧದಲ್ಲಿ ಹೋರಾಡಲು ತ್ಯಾಗ ಮಾಡುತ್ತಿದ್ದೀರಿ. ಈಗ ಯಾರು ಅಧಿಕಾರದಲ್ಲಿದ್ದೀರೋ ಅವರಿಗೆ ನಾನು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ವೈಯಕ್ತಿಕ ದುರಾಸೆಗಾಗಿ ಏಕೆ ನೀವು ಈ ಯುವಕರ ಜೀವನವನ್ನು ಬಲಿತೆಗೆದುಕೊಳ್ಳಲು ನಿರತರಾಗಿದ್ದೀರಿ? ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ರಷ್ಯಾದ ಸೈನಿಕರೆ ನಿಮಗಿದು ತಿಳಿದಿರಲಿ, ''11 ಲಕ್ಷಕ್ಕೂ ಹೆಚ್ಚು ರಷ್ಯನ್ನರ ಸಂಬಂಧಿಗಳು ಉಕ್ರೇನ್‌ನಲ್ಲಿದ್ದಾರೆ. ನೀವು ಹಾರಿಸುವ ಪ್ರತಿ ಗುಂಡು ನಿಮ್ಮ ಅಣ್ಣ-ತಮ್ಮ, ಅಕ್ಕ ತಂಗಿಯರಿಗೇ ತಗುಲುತ್ತಿದೆ. ನೀವು ಎಸೆಯುವ ಬಾಂಬ್‌ಗಳು ಶತ್ರುಗಳ ಮೇಲೆ ಬೀಳುತ್ತಿಲ್ಲ ಬದಲಿಗೆ ಶಾಲೆ, ಆಸ್ಪತ್ರೆ, ಮನೆಗಳ ಮೇಲೆ ಬೀಳುತ್ತಿದೆ'' ಎಂದಿದ್ದಾರೆ ಅರ್ನಾಲ್ಡ್.

    ರಷ್ಯಾದ ಜನ ನನ್ನ ನಿಜವಾದ ಹೀರೋಗಳು: ಅರ್ನಾಲ್ಡ್

    ರಷ್ಯಾದ ಜನ ನನ್ನ ನಿಜವಾದ ಹೀರೋಗಳು: ಅರ್ನಾಲ್ಡ್

    ''ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಷ್ಯಾದ ಸೈನಿಕರಿಗೆ ನಾನು ಹೇಳುವುದಿಷ್ಟೆ. ನೀವು ಸರ್ಕಾರದ ಪ್ರೊಪೊಗೆಂಡಾವನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ನೀಡಲಾಗುತ್ತಿರುವ ಸುಳ್ಳು ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳಿ. ಸತ್ಯವನ್ನು ಎಲ್ಲೆಡೆ ಪಸರಿಸಲು ನನಗೆ ಸಹಾಯ ಮಾಡಿ. ಉಕ್ರೇನ್‌ನಲ್ಲಿ ಮಾಡಲಾಗುತ್ತಿರುವ ಮಾನವರ ವಿರುದ್ಧ ಕ್ರೌರ್ಯವನ್ನು ರಷ್ಯಾದ ಜನರೂ ನೋಡುವಂತಾಗಲಿ. ಮತ್ತು ಅಧ್ಯಕ್ಷ ಪುತಿನ್‌ಗೆ ಹೇಳುವುದಿಷ್ಟೆ, 'ನೀವು ಈ ಯುದ್ಧ ಪ್ರಾರಂಭಿಸಿದಿರಿ. ಈ ಯುದ್ಧವನ್ನು ನೀವೆ ಮುನ್ನಡೆಸುತ್ತಿದ್ದೀರಿ. ನೀವು ಈ ಯುದ್ಧವನ್ನು ನಿಲ್ಲಿಸಬಲ್ಲಿರಿ. ರಷ್ಯಾವು ಉಕ್ರೇನ್‌ ಮೇಲೆ ಮಾಡುತ್ತಿರುವ ಯುದ್ಧದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರಷ್ಯಾದ ಜನರಿಗೆ ನಾನು ಹೇಳಲು ಬಯಸುತ್ತೇನೆ, ನಿಮ್ಮ ಧೈರ್ಯವನ್ನು ಇಡೀ ಜಗತ್ತು ನೋಡಿದೆ. ನಿಮ್ಮ ಧೈರ್ಯದಿಂದಾಗಿಯೇ ನೀವು ಸಮಸ್ಯೆಯನ್ನೂ ಎದುರಿಸಿದ್ದೀರೆಂಬುದು ಸಹ ಗೊತ್ತಿದೆ. ನಿಮ್ಮನ್ನು ಬಂಧಿಸಲಾಯಿತು, ನಿಮ್ಮ ಮೇಲೆ ದೌರ್ಜನ್ಯ ಎಸಗಲಾಯಿತು, ನಿಮ್ಮ ಥಳಿಸಲಾಯಿತು. ಆದರೆ ನೀವುಗಳ ನನ್ನ ನಿಜ ನಾಯಕರು. ನಿಮ್ಮಲ್ಲಿ ವಿಶ್ವ ಚಾಂಪಿಯನ್ ಯೂರಿ ಪೆಟ್ರೊವಿಚ್ ಪ್ಲಾಸೋವ್ ನಂಥಹಾ ಶಕ್ತಿಯಿದೆ. ನಿಮ್ಮಲ್ಲಿ ನಿಜವಾದ ರಷ್ಯನ್ನರ ಹೋರಾಟದ ಹೃದಯವಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ'' ಎಂದಿದ್ದಾರೆ ಅರ್ನಾಲ್ಡ್.

    English summary
    Hollywood actor Arnold Schwarzenegger video message to Russians and Russian soldiers who were serving in Ukraine.
    Friday, March 18, 2022, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X