ಜೇಮ್ಸ್ ಬಾಂಡ್ ಸರಣಿಯ ರೋಚಕ ಚಿತ್ರ ಸ್ಕೈಫಾಲ್

ಈಗ ಇದೇ ಸರಣಿಯಲ್ಲಿ 23ನೇ ಜೇಮ್ಸ್ ಬಾಂಡ್ ಚಿತ್ರವಾಗಿ 'ಸ್ಕೈಫಾಲ್ 007' ನವೆಂಬರ್ 1ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಡೇನಿಯಲ್ ಕ್ರೆಗ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸ್ಯಾಮ್ ಮೆಂಡೀಸ್ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಈ ಚಿತ್ರದ ವಿಶೇಷತೆಗಳ ಬಗ್ಗೆ ಹೇಳಬೇಕೆಂದರೆ, ಹನ್ನೆರಡು ದೇಶಗಳಲ್ಲಿ ಚಿತ್ರೀಕರಣಗೊಂಡ ಚಿತ್ರವಿದು. ಸೋನಿ ಪಿಕ್ಚರ್ಸ್ ನಿರ್ಮಿಸಿರುವ ಭಾರಿ ಬಜೆಟ್ ಚಿತ್ರವಿದು. ಸರಿಸುಮಾರು 150 ದಶಲಕ್ಷ ಯುಎಸ್ ಡಾಲರ್ ನಲ್ಲಿ ನಿರ್ಮಿಸಲಾಗಿದೆ.
ಬಾಂಡ್ ಚಿತ್ರಗಳು ಆರಂಭವಾಗಿ ಅರ್ಧ ಶತಮಾನವೇ ಸರಿದಿದೆ. 'ಸ್ಕೈಫಾಲ್' ಚಿತ್ರಕ್ಕೆ ನೀರಿನಂತೆ ಹಣ ಖರ್ಚು ಮಾಡಲಾಗಿದ್ದು, ತಾಂತ್ರಿಕವಾಗಿಯೂ ಚಿತ್ರ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಚಿತ್ರದ ಟ್ರೇಲರ್ ಗಳು ಅತ್ಯದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.
ಅಂದ ಚೆಂದ, ವೈಯ್ಯಾರ, ಅಂಗಾಗ ಪ್ರದರ್ಶನ ಬಾಂಡ್ ಗರ್ಲ್ ಗಳ ಪಾತ್ರದ ವಿಶೇಷ. ಆದರೆ ಈ ಚಿತ್ರದಲ್ಲಿ ತಾವು ಯಾವುದೇ ಅಂಗಾಂಗ ಪ್ರದರ್ಶನ ಮಾಡದೇನೆ ಪ್ರೇಕ್ಷಕರ ಹೃದಯ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಬಾಂಡ್ ಗರ್ಲ್ ನವೋಮಿ ಹ್ಯಾರೀಸ್.
'ಸ್ಕೈಫಾಲ್' ಚಿತ್ರ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದರೂ ಆರ್ಥಿಕ ಮುಗ್ಗಟ್ಟಿನ ಕಾರಣ ಬಿಡುಗಡೆಯಾಗಿರಲಿಲ್ಲ. ಎಂಜಿಎಂ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇ ಇದಕ್ಕೆ ಕಾರಣವಾಗಿತ್ತು. ಕಡೆಗೆ ಸೋನಿ ಎಂಟರ್ ಟೈನ್ ಮೆಂಟ್ ಸಂಸ್ಥೆ ಮುಂದೆ ಬಂದು 'ಸ್ಕೈಫಾಲ್' ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. (ಏಜೆನ್ಸೀಸ್)


Click it and Unblock the Notifications











