For Quick Alerts
  ALLOW NOTIFICATIONS  
  For Daily Alerts

  ಅಫ್ಘಾನಿಸ್ತಾನದ ಕರುಳು ಹಿಂಡುವ ಕತೆ: ನೋಡಲೇ ಬೇಕಾದ ಸಿನಿಮಾಗಳು

  |

  ಅಫ್ಘಾನಿಸ್ತಾನದಲ್ಲಿ ಈಗ ಆಗುತ್ತಿರುವುದು ಮನುಕುಲಕ್ಕೇ ಅಪಮಾನಕರ. ಬಂದೂಕು, ಕತ್ತಿ ಹಿಡಿದು ಅಧಿಕಾರ ಪಡೆಯಲು ಯತ್ನಿಸುವ, ಅದಕ್ಕಾಗಿ ಅಮಾಯಕರ ಜೀವ ತೆಗೆಯುವ ಜೀವನವನ್ನು ಪಲ್ಲಟ ಮಾಡುವ ಯಾರನ್ನೇ ಆದರೂ ವಿರೋಧಿಸಲೇ ಬೇಕು. ಧರ್ಮದ ಹೆಸರಿನಲ್ಲಿ ಬಂದೂಕು, ಕತ್ತಿ ಹಿಡಿಯುವವರನ್ನು ಖಂಡಿಸಲೇಬೇಕಾದ ತುರ್ತು ಈಗ ಇದೆ.

  ಅಮೆರಿಕದ 'ಪೀಸ್ ಆರ್ಮಿ' (!?) ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ಬಳಿಕ ಅಫ್ಘಾನಿಸ್ತಾನವು ತಾಲಿಬಾನ್ ವಶಕ್ಕೆ ಬಂದಿದೆ. ಕಾಬೂಲ್ ನಗರದ ಅಧ್ಯಕ್ಷರ ಅರಮನೆಯಲ್ಲಿ ಬಂದೂಕು, ಕತ್ತಿಗಳನ್ನು ಹಿಡಿದು ಫೋಸು ಕೊಟ್ಟಿದ್ದಾರೆ. ಅಫ್ಘಾನಿಸ್ತಾನದ ಜನರ ಭವಿಷ್ಯ ಊಹಿಸಲು ಅದೊಂದು ಚಿತ್ರ ಸಾಕು.

  ಅಫ್ಘಾನಿಸ್ತಾನ-ತಾಲಿಬಾನಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ ಅದಕ್ಕೆ ಬಹು ದೊಡ್ಡ ಇತಿಹಾಸವಿದೆ. ಆ ಇತಿಹಾಸಕ್ಕೆ ಹಲವು ಕವಲುಗಳಿವೆ. ಆ ಇತಿಹಾಸದ ಮೇಲೆ ಅಮೆರಿಕ, ರಷ್ಯಾ, ಚೀನಾ, ನೆರೆಯ ಪಾಕಿಸ್ತಾನ ಹೀಗೆ ಹಲವು ರಾಷ್ಟ್ರಗಳ ನೆರಳು ಇವೆ. ಅಫ್ಘಾನಿಸ್ತಾನದ ಹಣೆಬರಹವನ್ನು ಅಲ್ಲಿನ ಜನರ ಸಂಕಷ್ಟವನ್ನು, ಅಲ್ಲಿ ನಡೆದ ಯುದ್ಧ, ಹೋರಾಟಗಳನ್ನು ಹಲವು ಸಿನಿಮಾಗಳು, ಡಾಕ್ಯುಮೆಂಟರಿಗಳು ದಾಖಲು ಮಾಡಿವೆ. ಅಫ್ಘಾನಿಸ್ತಾನದ ಬಗ್ಗೆ ಮಾಡಲಾಗಿರುವ ಬಹುತೇಕ ಸಿನಿಮಾಗಳು ಹಾಲಿವುಡ್‌ನವು. ಹಾಗಾಗಿ ಅಲ್ಲಿನ ತಮ್ಮ ಸೈನಿಕರನ್ನೇ 'ಹಿರೋ'ಗಳನ್ನಾಗಿ ವೈಭವೀಕರಿಸಿಯೇ ಕತೆಗಳನ್ನು ಹೇಳಲಾಗಿದೆ. ಆದರೆ ಕೆಲವು ಸಿನಿಮಾಗಳು ಅಫ್ಘಾನಿಸ್ತಾನದ ನಿಜ ಮುಖಕ್ಕೆ ಕನ್ನಡಿ ಹಿಡಿವ ಯತ್ನವನ್ನು ಮಾಡಿವೆ. ಸಿನಿಮಾಗಳಿಗಿಂತಲೂ ಡಾಕ್ಯುಮೆಂಟರಿಗಳು ನಿಜಚಿತ್ರಣವನ್ನು ಕಟ್ಟಿಕೊಟ್ಟಿವೆ.

  ಅಫ್ಘಾನಿಸ್ತಾನ ಜನ, ಜೀವನ ಕುರಿತ ಅತ್ಯುತ್ತಮ ಸಿನಿಮಾ 'ಒಸಾಮಾ'

  ಅಫ್ಘಾನಿಸ್ತಾನ ಜನ, ಜೀವನ ಕುರಿತ ಅತ್ಯುತ್ತಮ ಸಿನಿಮಾ 'ಒಸಾಮಾ'

  ತಾಲಿಬಾನಿಗಳು ಅಫ್ಘನ್ನರ ಜೀವನವನ್ನು ಹೇಗೆ ನರಕ ಮಾಡಿಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಇದಕ್ಕಿಂತಲೂ ಒಳ್ಳೆಯ ಸಿನಿಮಾ ಇರಲಿಕ್ಕಿಲ್ಲ. ಈ ಸಿನಿಮಾ ಕೇವಲ ಮಾಹಿತಿ ಪೂರ್ಣ ಮಾತ್ರವೇ ಅಲ್ಲ ಬದಲಿಗೆ ಭಾವಪೂರ್ಣ ಸಹ. ಜೊತೆಗೆ ಸಿನಿಮಾ ಭಾಷೆಯಲ್ಲಿಯೂ ಪರಿಪೂರ್ಣ ಸಿನಿಮಾ. ತಾಲಿಬಾನಿಗಳಿಂದ ಕುಟುಂಬ ಮುಖ್ಯ ಪುರುಷ ಹತನಾಗಿ ತಾಯಿಗೆ ಇದ್ದ ನೌಕರಿ ತಾಲಿಬಾನಿಗಳ ಹೊಸ ನೀತಿಯಿಂದ ಕೈತಪ್ಪಿದಾಗ ಅನ್ನ ಸಂಪಾದಿಸಲು ಹೆಣ್ಣು ಮಗಳಿಗೆ ಗಂಡು ಮಗುವಿನಂತೆ ವೇಷ ತೊಡಿಸಿ ದುಡಿಯಲು ಕಳಿಸುವ ಅದ್ಭುತವಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾ ಅಫ್ಘನ್ನರೇ ತಮ್ಮ ನೋವನ್ನು ಜಗತ್ತಿನ ಮುಂದೆ ತೋಡಿಕೊಂಡಂತಿದೆ. ಅಫ್ಘಾನಿಸ್ತಾನದ ಬಗ್ಗೆ ಈವರೆಗೆ ಬಂದಿರುವ ಸಿನಿಮಾಗಳಲ್ಲಿ 'ಒಸಾಮಾ' ಅತ್ಯುತ್ತಮ ಸಿನಿಮಾ ಎನ್ನಲಾಗುತ್ತದೆ. ಅಂದಹಾಗೆ ಒಸಾಮಾ ಬಿನ್ ಲಾಡೆನ್‌ಗೂ ಈ ಸಿನಿಮಾಕ್ಕೂ ಏನೂ ಸಂಬಂಧವಿಲ್ಲ. ಬಾಲಕನ ವೇಷ ತೊಡುವ ಬಾಲಕಿಗೆ 'ಒಸಾಮಾ' ಎಂದು ಹೆಸರಿಡಲಾಗುತ್ತದೆ ಅಷ್ಟೆ. ಇದು ನೋಡಲೇ ಬೇಕಾದ ಸಿನಿಮಾ. ಸಿನಿಮಾ ನಿರ್ದೇಶಿಸಿರುವುದು ಅಫ್ಘಾನಿಸ್ತಾನದವರೇ ಆದ ಸಿದ್ದಿಖ್ ಬರ್ಮಾಕ್.

  ಅಫ್ಘಾನ್ ಮಹಿಳೆಯರ ಸಂಕಷ್ಟದ ಬದುಕು ತೋರಿಸಿದ 'ಕಂದಹಾರ್'

  ಅಫ್ಘಾನ್ ಮಹಿಳೆಯರ ಸಂಕಷ್ಟದ ಬದುಕು ತೋರಿಸಿದ 'ಕಂದಹಾರ್'

  ಇರಾನಿಯನ್ ಸಿನಿಮಾ ನಿರ್ದೇಶಕ ಮೊಹಸೇನ್ ಮಕ್‌ಮಲ್ಬಾಫ್ ನಿರ್ದೇಶಿಸಿರುವ ಕಂದಹಾರ್ ಸಹ ಅಫ್ಘಾನಿಸ್ತಾನದ ಜನ ಜೀವವನ್ನು ವಿಶೇಷವಾಗಿ ಮಹಿಳೆಯರ ಪರಿಸ್ಥಿತಿಯನ್ನು ಜಗತ್ತಿಗೆ ತೊರುವ ದಿಟ್ಟ ಯತ್ನ. ಕೆನಡಾದಲ್ಲಿ ನೆಲೆಸಿರುವ ಅಫ್ಘಾನಿ ಮಹಿಳೆಗೆ ಆಕೆಯ ಸಹೋದರಿ ಪತ್ರವೊಂದನ್ನು ಬರೆದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾಳೆ. ಕೂಡಲೇ ಅಫ್ಘಾನಿಸ್ತಾನಕ್ಕೆ ಹೊರಡುವ ಮಹಿಳೆ ಅಲ್ಲಿ ತನ್ನ ಸಹೋದರಿಯನ್ನು ಹುಡುಕುವ ಯತ್ನವೇ 'ಕಂದಹಾರ್' ಸಿನಿಮಾ. ಸಿನಿಮಾದಲ್ಲಿ ಅಫ್ಘಾನ್‌ನಲ್ಲಿ ಮಹಿಳೆಯರ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲಾಗಿದೆ. ಅಫ್ಘಾನ್ ಮಹಿಳೆಯರು ಬುರ್ಖಾದ ಒಳಗೆ ಲಿಫ್ಟಿಕ್ ಹಚ್ಚಿಕೊಳ್ಳುವ, ಉಗುರು ಬಣ್ಣ ಹಚ್ಚಿಕೊಳ್ಳುವ ದೃಶ್ಯಗಳನ್ನು ನಿರ್ದೇಶಕ ಚಿತ್ರಿಸಿ ಪ್ರದರ್ಸಿಸಿದ್ದಾರೆ. ಅಫ್ಘಾನ್‌ ನಿಜ ಮುಖ ತೋರುವ ಸಿನಿಮಾಗಳಲ್ಲಿ 'ಕಂದಹಾರ್' ಸಹ ಒಂದು.

  ಅಮೆರಿಕದ ಸೈನಿಕರ ಅನಾಚಾರಕ್ಕೆ ಕನ್ನಡಿ ಹಿಡಿದ ಸಾಕ್ಷ್ಯಚಿತ್ರ

  ಅಮೆರಿಕದ ಸೈನಿಕರ ಅನಾಚಾರಕ್ಕೆ ಕನ್ನಡಿ ಹಿಡಿದ ಸಾಕ್ಷ್ಯಚಿತ್ರ

  ಅಮೆರಿಕದ ಸೈನ್ಯವು ಬರೋಬ್ಬರಿ 20 ವರ್ಷಗಳಿಂದಲೂ ಅಫ್ಘಾನಿಸ್ತಾನದಲ್ಲಿದೆ. ಅಫ್ಘಾನಿಸ್ತಾನದ ಬಗ್ಗೆ ಈವರೆಗೆ ಹಲವು ಸಿನಿಮಾಗಳನ್ನು ಹಾಲಿವುಡ್ ನಿರ್ಮಿಸಿದೆ ಆದರೆ ಬಹುತೇಕ ಸಿನಿಮಾಗಳಲ್ಲಿ ಅಮೆರಿಕದ ಸೈನ್ಯರ, ವೀರಾವೇಶ, ಶೌರ್ಯ, ಸಾಹಸಗಳ ವೈಭವೀಕರಣ ಆಗಿದೆಯಷ್ಟೆ. ಆದರೆ ಸತ್ಯ ಅದಲ್ಲ ಎಂಬುದು ವಿಶ್ವಕ್ಕೆ ಗೊತ್ತಿದೆ. ಆದರೆ ಅದಕ್ಕೆ ಕನ್ನಡಿ ಹಿಡಿದು ತೋರಿಸಿದ್ದು 'ಟ್ಯಾಕ್ಸಿ ಟು ದಿ ಡಾರ್ಕ್ ಸೈಡ್' ಹೆಸರಿನ ಸಾಕ್ಷ್ಯಚಿತ್ರ. ಅಮೆರಿಕದ ಸೈನ್ಯವು ಅಫ್ಘಾನಿಸ್ತಾನದಲ್ಲಿ ಮಾಡಿದ ಅರಾಜಕತೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಎಳೆ-ಎಳೆಯಾಗಿ ಬಿಚ್ಚಿಡಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಹ ದೊರಕಿದೆ. ಅಲೆಕ್ಸ್ ಗಿಬ್ಬನ್ ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರವನ್ನು ನೋಡಲೇ ಬೇಕು. ಅಮೆರಿಕ ಸೈನ್ಯ ಅಫ್ಘಾನಿಸ್ತಾನದಲ್ಲಿ ನಡೆಸಿದ ಅರಾಜಕತೆಯ ನಿಜ ಮುಖವನ್ನು ಈ ಸಾಕ್ಷ್ಯಚಿತ್ರ ಬಿಚ್ಚಿಟ್ಟಿದೆ. ಅದೂ ದಾಖಲೆಗಳು, ಚಿತ್ರಗಳ ಸಮೇತ. ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಹ ಲಭಿಸಿದೆ.

  ಅಮೆರಿಕ ಸೇನೆಯ ಅನಾಚಾರ ಬಿಚ್ಚಿಟ್ಟ 'ರೋಡ್‌ ಟು ಗ್ವಾಂಟೆನಾಮೊ'

  ಅಮೆರಿಕ ಸೇನೆಯ ಅನಾಚಾರ ಬಿಚ್ಚಿಟ್ಟ 'ರೋಡ್‌ ಟು ಗ್ವಾಂಟೆನಾಮೊ'

  ಅಫ್ಘಾನ್‌ ಕೇವಲ ತಾಲಿಬಾನಿಗಳ ಅರಾಜಕತೆಗೆ ಮಾತ್ರ ಸಾಕ್ಷಿಯಾಗಿಲ್ಲ ಅದು ಸೋವಿತ್‌ರ ಅರಾಜಕತೆ ಅಮೆರಿಕದ ಸೈನಿಕರ ಅರಾಜಕತೆಯನ್ನೂ ಅನುಭವಿಸಿದೆ. 'ರೋಡ್ ಟು ಗ್ವಾಂಟೆನಾಮೊ' ಅಫ್ಘಾನ್‌ನಲ್ಲಿ ಅಮೆರಿಕ ಸೈನಿಕರ ಅರಾಜಕತೆಯನ್ನು ಜಗತ್ತಿಗೆ ಸಾರಿದ ಮೊದಲ ಸಾಕ್ಷ್ಯಚಿತ್ರ. ನಿಜ ಘಟನೆಯ ಕುರಿತಾದ ಈ ಸಾಕ್ಷ್ಯಚಿತ್ರ, ಬ್ರಿಟನ್‌ನ ಮೂವರು ಪ್ರಜೆಗಳು ಅಫ್ಘಾನಿಸ್ತಾನ ಪ್ರವೇಶಿಸಿ ಅನುಭವಿಸಿದ ನರಕಯಾತನೆಯ ಚಿತ್ರಣ. ಇಂಗ್ಲೆಂಡ್‌ನ ವೆಸ್ಟ್‌ ಮಿಡ್‌ಲ್ಯಾಂಡ್‌ ಬಳಿಯ ಟಿಪ್‌ಟಾನ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದ ರುಹಾಲ್ ಅಹ್ಮದ್, ಆಸಿಫ್ ಇಕ್ಬಾಲ್, ಶಫೀಕ್ ರಸೂಲ್ ಅವರುಗಳು 2001ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಮದುವೆಗೆಂದು ಹೋಗುತ್ತಾರೆ. ಅದೇ ಸಮಯದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್‌ ಮೇಲೆ ದಾಳಿಯಾಗುತ್ತದೆ. ಅಮೆರಕ ಸೇನೆಯು ತಾಲಿಬಾನಿಗಳ ಮೇಲೆ ಯುದ್ಧ ಸಾರಿ ಅಫ್ಘಾನ್‌ಗೆ ಸೇನೆ ಕಳಿಸುತ್ತದೆ. ಪಾಕಿಸ್ತಾನದಲ್ಲಿದ್ದ ಈ ಮೂವರು ಅಫ್ಘಾನಿಸ್ತಾನದಲ್ಲಿ ಏನು ನಡೆಯುತ್ತಿದೆ ನೋಡೋಣವೆಂದು ಒಂದು ರೀತಿಯ ಪ್ರವಾಸವೂ ಆಗುತ್ತದೆಂದು ಅಫ್ಘಾನ್‌ಗೆ ಬರುತ್ತಾರೆ. ಆ ವೇಳೆಗೆ ಅಮೆರಿಕ ಸೇನೆ ಕಾಬೂಲ್ ತಲುಪಿರುತ್ತದೆ. ತಾಲಿಬಾನಿಗಳ ವಿರುದ್ಧ ಯುದ್ಧ ಭೀಕರವಾಗಿ ನಡೆಯುತ್ತಿರುತ್ತದೆ. ಪರಿಸ್ಥಿತಿ ಗಂಭೀರತೆ ಅರಿತ ಈ ಮೂವರು ಪಾಕಿಸ್ತಾನಕ್ಕೆ ಮರಳಲು ಬಸ್‌ ಹತ್ತುತ್ತಾರೆ ಆದರೆ ಅವರ ದುರಾದೃಷ್ಟಕ್ಕೆ ತಪ್ಪು ಬಸ್ಸು ಹತ್ತಿ ತಾಲಿಬಾನಿಗಳು-ಅಮೆರಿಕನ್ನರ ನಡುವೆ ಭೀಕರ ಯುದ್ಧ ನಡೆವ ಸ್ಥಳದತ್ತ ಹೋಗುತ್ತಾರೆ. ಇವರು ಹೋಗುತ್ತಿದ್ದ ಬಸ್ಸಿನ ಮೇಲೆ ಬಾಂಬ್ ಬೀಳುತ್ತದೆ ಇವರು ಹೇಗೋ ಪಾರಾಗಿ ಅವರಿಗೆ ಸಿಕ್ಕ ಗುಂಪೊಂದನ್ನು ತಮಗೆ ಪಾಕಿಸ್ತಾನಕ್ಕೆ ಹೋಗಲು ಸಹಾಯ ಮಾಡುವಂತೆ ಕೇಳುತ್ತಾರೆ. ಆದರೆ ಅವರು ತಾಲಿಬಾನಿಗಳಾಗಿರುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಅಮೆರಿಕ ಸೇನೆ ಇವರನ್ನು ಬಂಧಿಸುತ್ತದೆ. ಇವರ ಬಳಿ ತಾವು ಬ್ರಿಟನ್‌ನವರೆಂದು ಹೇಳಲು ದಾಖಲೆಗಳಿರುವುದಿಲ್ಲ ಏನೂ ಇರುವುದಿಲ್ಲ. ಹಾಗಾಗಿ ಇವರು ಸತತ ಎರಡು ವರ್ಷ ಜೈಲಿನಲ್ಲಿ ಕಾಲ ಕಳೆಯುತ್ತಾರೆ. ಹೀಗೆ ಅವರ ದುರಾದೃಷ್ಟದ ದೃಷ್ಟಾಂತ ಸಾಗುತ್ತದೆ. ಈ ಸಾಕ್ಷ್ಯಚಿತ್ರವನ್ನು ಬ್ರಿಟನ್ ನಿರ್ಮಾಣ ಮಾಡಿದೆ. ಅಫ್ಘಾನ್‌ನಲ್ಲಿ ಅಮೆರಿಕ ಸೇನೆಯ ಅನಾಚಾರಗಳ ಮೇಲೆ ಬೆಳಕು ಚೆಲ್ಲಿದ ಪ್ರಮುಖ ಸಾಕ್ಷ್ಯಚಿತ್ರಗಳಲ್ಲಿ ಇದೂ ಒಂದು.

  ನಿಜ ಘಟನೆ ಆಧರಿತ 'ದಿ ಔಟ್‌ಪೋಸ್ಟ್'

  ನಿಜ ಘಟನೆ ಆಧರಿತ 'ದಿ ಔಟ್‌ಪೋಸ್ಟ್'

  ಅಫ್ಘಾನಿಸ್ತಾನದ ಬಗ್ಗೆ ಅಮೆರಿಕನ್ನರು ಹಲವು ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಅವುಗಳೆಲ್ಲವೂ ಅಮೆರಿಕನ್ನರ 'ಸಾಹಸಗಾಥೆ'ಗಳಷ್ಟೆ. ನಿಜ ಅಫ್ಘಾನಿಸ್ತಾನವನ್ನು ಅವು ರೆಪ್ರೆಸೆಂಟ್ ಮಾಡುವುದಿಲ್ಲವೆಂದೇ ಹೇಳಬಹುದು. ಆದರೆ ಒಟ್ಟಾರೆ ಸಿನಿಮಾ ಆಗಿ ನೋಡಿದಾಗ ಕೆಲವು ಒಳ್ಳೆಯ ಸಿನಿಮೀಯ ಅನುಭವ ನೀಡುವ ಚಿತ್ರಗಳಿವೆ ಅವುಗಳಲ್ಲಿ ಒಂದು 'ದಿ ಔಟ್‌ಪೋಸ್ಟ್'. ಅಫ್ಘಾನಿಸ್ತಾನದ ನೂರಿಸ್ತಾನ್ ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದ ಅಮರಿಕನ್ ಪಡೆಗಳ ಮೇಲೆ ತಾಲಿಬಾನಿಗಳು ದಾಳಿ ಮಾಡಿದಾಗ ಜೀವ ಉಳಿಸಿಕೊಳ್ಳಲು ಅಮೆರಿಕನ್ ಸೇನಾ ತುಕಡಿ ಮಾಡುವ ಹೋರಾಟದ ಕಥನವನ್ನು ಈ ಸಿನಿಮಾ ಹೊಂದಿದೆ. ಸಿಎನ್‌ಎನ್‌ನ ಪತ್ರಕರ್ತ ಜಾಕ್ ಟೇಪರ್ ಬರೆದಿರುವ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. 2020 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ರಾಡ್ ಲುಯಿರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

  ತಾಲಿಬಾನಿಗಳಿಗೆ ಸಿಕ್ಕ ಕೆನಡಾ ಸೈನಿಕನ ಕತೆ 'ರೆಡ್‌ ಸ್ನೋ'

  ತಾಲಿಬಾನಿಗಳಿಗೆ ಸಿಕ್ಕ ಕೆನಡಾ ಸೈನಿಕನ ಕತೆ 'ರೆಡ್‌ ಸ್ನೋ'

  ಕೆನಡಾದ ಸೈನಿಕನೊಬ್ಬ ತಾಲಿಬಾನಿಗಳ ಕೈಗೆ ದೊರಕಿ ಪಡುವ ಪಾಟಲಿನ ಕತೆ 'ರೆಡ್ ಸ್ನೋ' ಕೆನಡಾದ ಈ ಸಿನಿಮಾದಲ್ಲಿ ತಾಲಿಬಾನಿ ಹಾಗೂ ಇತರ ರಾಷ್ಟ್ರಗಳನ್ನು ಎದುರುಬದುರಾಗಿಸುವ ಯತ್ನ ಕಾಣಿಸುತ್ತದೆ. ತಾಲಿಬಾನಿಗಳ ನಂಬಿಕೆ, ರೀತಿ ನೀತಿಗಳ ಸಣ್ಣ ಪರಿಚಯ ಜೊತೆಗೆ ದೇಶ, ಗಡಿ, ಮಾನವ ಸಂಘರ್ಷ ಇತರೆ ವಿಷಯಗಳ ಚರ್ಚೆಯೂ ಸಿನಿಮಾದಲ್ಲಿದೆ. ಇದೊಂದು ನೋಡಬೇಕಾದ ಸಿನಿಮಾ. ಸಿನಿಮಾವನ್ನು ಮ್ಯಾರಿ ಕ್ಲೆಮೆಂಟ್ಸ್ ನಿರ್ದೇಶಿಸಿದ್ದು, 2019 ರಲ್ಲಿ ಸಿನಿಮಾ ಬಿಡುಗಡೆ ಆಗಿದೆ.

  'ಲೋನ್ ಸರ್ವೈವರ್'

  'ಲೋನ್ ಸರ್ವೈವರ್'

  'ಲೋನ್ ಸರ್ವೈವರ್' ಹಾಲಿವುಡ್‌ನ ಉತ್ತಮ ಆಕ್ಷನ್ ಸಿನಿಮಾಗಳಲ್ಲಿ ಒಂದು. ನಿಜ ಘಟನೆ ಆಧರಿಸಿದ ಈ ಸಿನಿಮಾವನ್ನು ಪೀಟರ್ ಬರ್ಗ್ ನಿರ್ದೇಶಿಸಿದ್ದು, ಖ್ಯಾತ ನಟ ಮಾರ್ಕ್ ವಾಲ್‌ಬರ್ಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಫ್ಘಾನಿಸ್ತಾನದ ಕೊರಂಗಲ್ ಕಣಿವೆಯಲ್ಲಿ ಅಡಗಿರುವ ಅಹಮದ್ ಶಾ ಎಂಬ ತಾಲಿಬಾನಿಯನ್ನು ಸೆರೆಹಿಡಿಲು ಅಮೆರಿಕ ಸೇನೆಯ ಸೀಲ್ ಪಡೆ ನಿಶ್ಚಯಿಸಿ ಆತ ಕೊರಂಗಲ್ ಕಣಿವೆಯ ಹಳ್ಳಿಯಲ್ಲಿದ್ದಾನೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ನಾಲ್ವರ ಸೀಲ್ ತಂಡವನ್ನು ಕಳಿಸುತ್ತದೆ. ಕಣಿವೆಯಲ್ಲಿ ಈ ತಂಡ ತಿರುಗಬೇಕಾದರೆ ಮೂವರು ಕುರಿಗಾಹಿಗಳು ಎದುರಾಗುತ್ತಾರೆ. ಅವರನ್ನು ವಶಕ್ಕೆ ಪಡೆಯುವ ಈ ತಂಡ. ನಂತರ ಅವರನ್ನು ಬಿಡುಗಡೆ ಮಾಡುತ್ತದೆ. ಅದರಲ್ಲಿ ಒಬ್ಬ ವೇಗವಾಗಿ ಓಡಿಹೋಗಿ ತಾಲಿಬಾನಿಗಳಿಗೆ ವಿಷಯ ಮುಟ್ಟಿಸುತ್ತಾನೆ. ತಾಲಿಬಾನಿಗಳು ಈ ನಾಲ್ವರನ್ನು ಸುತ್ತುವರೆಯುತ್ತಾರೆ. ಭೀಕರ ಕಾಳಗದಲ್ಲಿ ಮೂವರು ಅಸುನೀಗುತ್ತಾರೆ. ಒಬ್ಬ ಮಾತ್ರ ತಾಲಿಬಾನಿಗಳಿಂದ ತಪ್ಪಿಸಿಕೊಂಡು ಹಳ್ಳಿಯೊಂದಕ್ಕೆ ಹೋಗುತ್ತಾನೆ. ಅಲ್ಲಿ ಹಳ್ಳಿಗರು ಆತನಿಗೆ ರಕ್ಷಣೆ ನೀಡುತ್ತಾರೆ. ಆತನಿಗಾಗಿ ಹುಡುಕಿ ಬರುವ ತಾಲಿಬಾನಿಗಳನ್ನು ಹಿಮ್ಮೆಟ್ಟಿಸುತ್ತಾರೆ. ಕೊನೆಗೆ ಅಮೆರಿಕ ಸೇನೆ ಬಂದು ಆತನನ್ನು ರಕ್ಷಿಸಿ ಕರೆದೊಯ್ಯುತ್ತದೆ. ಇದು ಸಿನಿಮಾದ ಕತೆ. ಈ ಸಿನಿಮಾದ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ನಿಜ ಘಟನೆಗೂ ಸಿನಿಮಾಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಾದಿಸಿದ್ದಿದೆ. ಆದರೆ ಒಂದೊಳ್ಳೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು ಎಂಬುದರಲ್ಲಿ ಅನುಮಾನವಿಲ್ಲ.

  English summary
  Movies and Documentaries about Afghanistan war, Taliban and American Army. Must watch movie list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X