»   » ಕಿರುತೆರೆಗೆ ಕಾಲಿಟ್ಟಿರುವ ಕಪ್ಪು ಸುಂದರಿ 'ಮುದ್ದುಲಕ್ಷ್ಮಿ' ಯಾರು ಗೊತ್ತಾ?

ಕಿರುತೆರೆಗೆ ಕಾಲಿಟ್ಟಿರುವ ಕಪ್ಪು ಸುಂದರಿ 'ಮುದ್ದುಲಕ್ಷ್ಮಿ' ಯಾರು ಗೊತ್ತಾ?

Posted By:
Subscribe to Filmibeat Kannada

ಸಿನಿಮಾ... ಸೀರಿಯಲ್... ಹೀರೋಯಿನ್ ಅಂದರೆ ಬಣ್ಣ ಬಲು ಮುಖ್ಯ. ಮದುವೆ ಆಗುವ ಹುಡುಗನಿಂದ ಹಿಡಿದು ಎಲ್ಲರೂ ಬಯಸುವುದು ಬೆಳ್ಳಗೆ ಇರುವ ಹುಡುಗಿಯರನ್ನು. ಕಪ್ಪು ಹುಡುಗಿಯ ಮನಸನ್ನು ಅರ್ಥ ಮಾಡಿಕೊಳ್ಳುವ ಯೋಚನೆಯನ್ನು ಯಾರು ಮಾಡುವುದೇ ಇಲ್ಲ. ಆದರೆ ಈಗ ಕಿರುತೆರೆಯಲ್ಲಿ ಮೊದಲ ಬಾರಿಗೆ ಕಪ್ಪು ಸುಂದರಿಯ ಕಥೆ ಬರುತ್ತಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರು ಆಗಿದೆ. ಅದರ ಹೆಸರು 'ಮುದ್ದುಲಕ್ಷ್ಮಿ'. 'ಮುದ್ದುಲಕ್ಷ್ಮಿ' ಎಂದ ತಕ್ಷಣ ಎಲ್ಲ ಧಾರಾವಾಹಿಯಲ್ಲಿ ಇರುವ ರೀತಿ ಇಲ್ಲಿ ಬೆಳ್ಳಗಿನ ಹುಡುಗಿ ಇಲ್ಲ. ಇದು ಮೊದಲೇ ಹೇಳಿದ ಹಾಗೆ ಕಪ್ಪು ಹುಡುಗಿಯ ಕಥೆ.

ಈಗಾಗಲೇ ಈ ಧಾರಾವಾಹಿ ನೋಡಿದವರು... ಅಥವಾ 'ಮುದ್ದುಲಕ್ಷ್ಮಿ' ಪ್ರೊಮೋ, ಪೋಸ್ಟರ್ ಗಳನ್ನು ನೋಡಿದವರು ಯಾರು ಈ ಕಪ್ಪು ಬಣ್ಣದ ಕೃಷ್ಣ ಸುಂದರಿ ಅಂತ ಮನಸಲ್ಲಿಯೇ ಪ್ರಶ್ನೆ ಹಾಕಿಕೊಂಡಿರುತ್ತಾರೆ. ಆದರೆ ಇದೀಗ ಈ 'ಮುದ್ದುಲಕ್ಷ್ಮಿ' ಯಾರು ಎಂಬುದನ್ನು ಸ್ವತಃ ಅವರೇ ಹೇಳಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ದ ವಿಶೇಷ ಸಂದರ್ಶನದಲ್ಲಿ 'ಮುದ್ದುಲಕ್ಷ್ಮಿ' ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಆ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ....

ಸಂದರ್ಶನ : ನವೀನ.ಎಂ.ಎಸ್

'ಮುದ್ದುಲಕ್ಷ್ಮಿ' ಆಗಿ ಬಂದಿರುವ ನಿಮ್ಮ ರಿಯಲ್ ಹೆಸರು.. ನಿಮ್ಮ ಹಿನ್ನಲೆ ಏನು?

''ನನ್ನ ಹೆಸರು ಅಶ್ವಿನಿ.. ನಾನು ಮೈಸೂರಿನ ಹುಡುಗಿ. ಈ ಹಿಂದೆ ಉದಯ ಮ್ಯೂಸಿಕ್ ನಲ್ಲಿ ಅಂಕರ್ ಆಗಿ ಕೆಲಸ ಮಾಡುತ್ತಿದೆ. ಮುಂಚೆಯಿಂದ ನಟನೆ ಅಂದರೆ ಇಷ್ಟ ಇತ್ತು. ನಿರ್ದೇಶಕರ ಕಡೆಯಿಂದ ಅವಕಾಶ ಬಂತು. ಈಗ ಆಂಕರಿಂಗ್ ಬಿಟ್ಟು ಫುಲ್ ಟೈಂ ಆಕ್ಟರ್ ಆಗಿದ್ದೇನೆ.''

ಹೀರೋಯಿನ್ ಅಂದರೆ ಗ್ಲಾಮರ್ ಇರಬೇಕು ಅಂತ್ತಾರೆ, ಆದರೆ ನೀವು ಕಪ್ಪು ಸುಂದರಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡಿದಕ್ಕೆ ಏನು ಕಾರಣ?

''ಮುದ್ದುಲಕ್ಷ್ಮಿ ಪಾತ್ರ ಹೀಗೆ ವಿಭಿನ್ನ ಇರುವ ಕಾರಣ ನಾನು ಇದನ್ನು ಆಯ್ಕೆ ಮಾಡಿಕೊಂಡೆ. ನನಗೆ ಆಂಕರಿಂಗ್ ಬಿಡಬೇಕು ಎನ್ನುವ ಯಾವುದೇ ಪ್ಲಾನ್ ಇರಲಿಲ್ಲ. ಒಮ್ಮೆ ನಿರ್ದೇಶಕರು ಕಾಲ್ ಮಾಡಿ ಸ್ಕ್ರೀನ್ ಟೆಸ್ಟ್ ಇದೆ ಎಂದು ಕರೆದರು. ಈ ಧಾರಾವಾಯಿಯಲ್ಲಿ ಅಕ್ಕ ತಂಗಿ ಎರಡು ಪಾತ್ರ ಇದೆ, ಅದರಲ್ಲಿ ಒಂದು ಪಾತ್ರ ಕಪ್ಪಗೆ ಇರುತ್ತದೆ ಎಂದಿದ್ದರು. ನಾನು ಮೇಕಪ್ ನಲ್ಲಿ ಸ್ವಲ್ಪ ಕಪ್ಪು ಮಾಡುತ್ತಾರೆ ಎಂದುಕೊಂಡಿದೆ. ಆದರೆ ಮೇಕಪ್ ಟೆಸ್ಟ್ ಆದ ಮೇಲೆ ನಾನೇ ಒಂದು ಕ್ಷಣ ಬೆರಗಾದೆ. ಆಮೇಲೆ ಕಥೆ ಕೇಳಿದ ಮೇಲೆ ತುಂಬ ಇಷ್ಟ ಆಯ್ತು. ಅದಕ್ಕೆ ಈ ಚಾಲೆಂಜ್ ತೆಗೆದುಕೊಂಡೆ.''

ಈ ಪಾತ್ರ ನಿರ್ವಹಿಸುವುದು ನಿಮಗೆ ಎಷ್ಟು ಚಾಲೆಂಜಿಂಗ್ ಆಗಿದೆ ಅನಿಸುತ್ತದೆ ?

''ಸದ್ಯಕ್ಕೆ ಬರುತ್ತಿರುವ ಎಲ್ಲ ಸೀರಿಯಲ್ ಪಾತ್ರಕ್ಕಿಂತ ಇದು ವಿಭಿನ್ನವಾಗಿದೆ. ದಿನ ಪಾತ್ರಕ್ಕೆ ಕಪ್ಪು ಮೇಕಪ್ ಮಾಡಿಕೊಳ್ಳಬೇಕು. ಹೀರೋಯಿನ್ ಎಂದ ತಕ್ಷಣ ಗ್ಲಾಮರ್... ಸುಂದರ... ಎನ್ನುವ ಯೋಚನೆ ಎಲ್ಲರಿಗೂ ಬರುತ್ತದೆ. ಆದರೆ 'ಮುದ್ದುಲಕ್ಷ್ಮಿ' ಕಪ್ಪಾಗಿದ್ದರೂ ಕೂಡ ಆಕೆಯನ್ನು ತುಂಬ ಅಂದವಾಗಿ ತೋರಿಸಿದ್ದಾರೆ. ಕಪ್ಪು ಬಣ್ಣದಲ್ಲಿ ಇರುವವರು ಸುಂದರವಾಗಿಲ್ಲ ಎನ್ನುವ ಮನಸ್ಥಿತಿಯನ್ನು ಹೋಗಲಾಡಿಸಲು ಈ ಕಥೆ ಬರುತ್ತಿದೆ. ಮನರಂಜನೆ ಜೊತೆಗೆ ಜನರಿಗೆ ಒಂದು ಸಂದೇಶವನ್ನು ತಲುಪಿಸುವ ಧಾರಾವಾಹಿಯೇ ಮುದ್ದುಲಕ್ಷ್ಮಿ.''

ಚಿತ್ರೀಕರಣದ ಅನುಭವ ಮತ್ತು ನಿಮ್ಮ ಪಾತ್ರದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ?

''ಮೊದಲ ದಿನ ಚಿತ್ರೀಕರಣದ ವೇಳೆ 'ಮುದ್ದುಲಕ್ಷ್ಮಿ' ಪಾತ್ರದ ಬಗ್ಗೆ ಗೊತ್ತಿರದವರು ನನ್ನ ಮೇಕಪ್ ನೋಡಿ ಆಶ್ಚರ್ಯಪಟ್ಟರು. ಔಟ್ ಡೋರ್ ಶೂಟಿಂಗ್ ಇದ್ದಾಗ ಅಲ್ಲಿಗೆ ಬರುವ ಜನ ನನ್ನ ತಂಗಿ ಪಾತ್ರ ಮಾಡುತ್ತಿರುವ ಹೀರೋಯಿನ್ ಮತ್ತು ಹೀರೋ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕಪ್ಪು ಬಣ್ಣದ ನನ್ನನ್ನು ಅವರು ಈ ಧಾರಾವಾಹಿಯ ನಟಿ ಅಂತ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಅಲ್ಲಿಯೇ ಗೊತ್ತಾಗುತ್ತದೆ ಬೆಳ್ಳಗೆ ಇರುವವರಿಗೆ ಎಷ್ಟು ಬೆಲೆ ಇದೆ ಅಂತ. ಕಪ್ಪಗೆ ಇರುವವರು ಏನೇ ಮಾಡಿದರು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆ ರೀತಿಯ ಅನುಭವ ತುಂಬ ಆಗಿದೆ. ಆದರೆ ಈಗ ಟಿವಿಯಲ್ಲಿ 'ಮುದ್ದುಲಕ್ಷ್ಮಿ' ಪ್ರೋಮೋ ನೋಡಿ, ಸೀರಿಯಲ್ ನೋಡಿದ ನಂತರ ಶೂಟಿಂಗ್ ನಲ್ಲಿ ಸಿಗುವ ಪ್ರತಿಯೊಬ್ಬ ಜನರು ಚೆನ್ನಾಗಿ ನಟನೆ ಮಾಡುತ್ತಿದ್ದೀರಿ ಅಂತ್ತಾರೆ.''

ಈ ಪಾತ್ರ ಒಪ್ಪಿಕೊಂಡಾಗ ನಿಮ್ಮ ಮನೆಯವರು ಏನು ಹೇಳಿದರು?

''ಕಪ್ಪು ಎಂದ ತಕ್ಷಣ ನಮ್ಮ ಮನೆಯಲ್ಲಿಯೂ 'ಬೇಡ... ಧಾರಾವಾಹಿಯಲ್ಲಿ ನಿನ್ನನ್ನು ಹೇಗೆ ತೋರಿಸುತ್ತಾರೋ ಏನೋ ಅಂದರು. ಜೊತೆಗೆ ಇದು ಒಂದು ದಿನ ಅಲ್ಲ.. ಧಾರಾವಾಹಿ ಮುಗಿಯುವುದು ವರ್ಷಗಳೇ ಆಗುತ್ತದೆ. ಅಲ್ಲಿಯವರಗೆ ನೀನು ಕಪ್ಪು ಮೇಕಪ್ ನಲ್ಲಿಯೇ ಇರಬೇಕು ಎಂದರು.' ಆದರೆ ನಾನು ನನ್ನನ್ನು ನಿರೂಪಕಿ ಆಗಿ ನೋಡಿರುವ ಜನ ಈ ಪಾತ್ರದಲ್ಲಿ ತೆಗೆದುಕೊಳ್ಳುತ್ತಾರ ಎನ್ನುವ ಪ್ರಶ್ನೆ ಮಾಡಿಕೊಂಡೆ. ನನಗೂ ಮೊದಲು ಕೂಡ ನನ್ನನ್ನು ಹೇಗೆ ತೋರಿಸುತ್ತಾರೆ ಎನ್ನುವುದು ಇತ್ತು. ಆದರೆ ಈಗ ಜನ ನನ್ನ ಪಾತ್ರವನ್ನು ಸ್ವೀಕರಿಸಿದ್ದಾರೆ.''

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮುದ್ದುಲಕ್ಷ್ಮಿ'

ಹಾಗದ್ರೆ.. ಈ ಧಾರಾವಾಹಿ ಕಪ್ಪು ಹುಡುಗಿಯರಿಗೆ ಸ್ಪೂರ್ತಿ ನೀಡುತ್ತದೆಯಾ?

''ಖಂಡಿತ.. ಮುದ್ದುಲಕ್ಷ್ಮಿ ಪಾತ್ರ ಅನೇಕರಿಗೆ ಸ್ಪೂರ್ತಿ ನೀಡುತ್ತದೆ. ನನಗೆ ಈ ಧಾರಾವಾಹಿಯಲ್ಲಿ ಹಾಕಿಸಿರುವ ಬಟ್ಟೆಗಳ ಬಣ್ಣ ಕಪ್ಪು ಹುಡುಗಿಯರಿಗೆ ಸೂಕ್ತ ಅಲ್ಲ ಎಂದು ಎಷ್ಟೊ ಜನ ಅಂದುಕೊಂಡಿರುತ್ತಾರೆ. ಆದರೆ ಅಂತಹ ಬಣ್ಣದ ಬಟ್ಟೆಯನ್ನೇ ಮುದ್ದುಲಕ್ಷ್ಮಿಗೆ ಹಾಕಿಸಿದ್ದಾರೆ. ಬರೀ ಬೆಳ್ಳಗೆ ಇರುವ ನಟಿಯರ ಕಥೆ ನೋಡಿ.. ನೋಡಿ.. ಜನರಿಗೂ ಬೇಸರ ಆಗಿರುತ್ತದೆ. ಅದಕ್ಕೆ ಅವರಿಗೆ ಈ ಧಾರಾವಾಹಿ ಇಷ್ಟ ಆಗಿದೆ ಅನಿಸುತ್ತದೆ. ತುಂಬ ರಿಚ್ ಆಗಿ ಸೀರಿಯಲ್ ಅನ್ನು ಶೂಟಿಂಗ್ ಮಾಡುತ್ತಿದ್ದಾರೆ. ಧರಣಿ ಅಂತ ಇದರ ನಿರ್ದೇಶಕರು. 'ಮುದ್ದುಲಕ್ಷ್ಮಿ' ಸೀರಿಯಲ್ ಬಗ್ಗೆ ಏನೇ ಪ್ರಶಂಸೆ ಬಂದರು ಅದು ನಿರ್ದೇಶಕರಿಗೆ ಹೋಗಬೇಕು. ಇದು ತುಂಬ ಒಳ್ಳೆಯ ಟೀಂ.''

ಮುಂದೆ ಸಿನಿಮಾ ಆಫರ್ ಬಂದರೆ ಮಾಡುವ ಆಲೋಚನೆ ಇದೇಯಾ?

''ನನಗೆ ಹೀರೋಯಿನ್ ಆಗಿ ದೊಡ್ಡ ಜನಪ್ರಿಯತೆ ಪಡೆಯುವ ಆಸೆ ಇಲ್ಲ. ನಟನೆ ಮತ್ತು ನಿರೂಪಣೆ ನನಗೆ ಖುಷಿ ಕೊಡುವ ವಿಷಯಗಳು. ನನ್ನ ತೃಪ್ತಿಗಾಗಿ ನಾನು ಇವುಗಳನ್ನು ಮಾಡುತ್ತೇನೆ. ಮುಂದೆ ಸಿನಿಮಾ ಹೀರೋಯಿನ್ ಅವಕಾಶಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ಆದರೆ ಅವು ಮುದ್ದುಲಕ್ಷ್ಮಿ ರೀತಿಯ ವಿಭಿನ್ನ ಪಾತ್ರಗಳು ಆಗಿರಬೇಕು.

ಕೆಲವು ಕಪ್ಪು ಹುಡುಗಿಯರಿಗೆ ತಮ್ಮ ಬಣ್ಣದ ಬಗ್ಗೆ ಕೀಳರಿಮೆ ಇರುತ್ತದೆ ಅಂತಹ ಹುಡುಗಿಯರಿಗೆ ನೀವು ಏನು ಹೇಳ್ತಿರಾ?

''ನಿಮ್ಮನ್ನು ಹೀಯಾಳಿಸುವವರ ಮಾತಿಗೆ ನೀವು ಬೆಲೆ ಕೊಡಬೇಡಿ. ಬ್ಯೂಟಿ ಮತ್ತು ಬಣ್ಣದ ಬಗ್ಗೆ ನೆಗೆಟಿವ್ ಹಾಗೆ ಮಾತನಾಡುವುದನ್ನು ಕಡಿಮೆ ಮಾಡಬೇಕು. ಕಪ್ಪಾಗಿ ಇದ್ದರೆ ಮೊದಲು ನಮ್ಮನ್ನು ನಾವು ಒಪ್ಪಿಕೊಳ್ಳಬೇಕು.''

English summary
Star Suvarna channel's 'Muddu Lakshmi' kannada serial actress Ashwini spoke about her character in an exclusive interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada