»   » ಅಸೆಂಚರ್ ಉದ್ಯೋಗಿಯಾಗಿದ್ದ ಇವರು ಈಗ ಕನ್ನಡದ ಖಳನಟ

ಅಸೆಂಚರ್ ಉದ್ಯೋಗಿಯಾಗಿದ್ದ ಇವರು ಈಗ ಕನ್ನಡದ ಖಳನಟ

By: ಬಾಲರಾಜ್ ತಂತ್ರಿ
Subscribe to Filmibeat Kannada

ಅಪ್ಪ ಬಯಸಿದ್ದು ಒಂದು ಮಗ ಆಗಿದ್ದು ಇನ್ನೊಂದು, ಮಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದೆ ಬಂದು ಬದುಕು ಕಟ್ಟಿಕೊಳ್ಳಬೇಕೆಂದು ಅಪ್ಪ ಬಯಸಿದ್ದರೆ ಮಗನ ಆಸಕ್ತಿ ಬಣ್ಣದಲೋಕದ ಮೇಲೆ.

ನಾವು ಹೇಳಲು ಹೊರಟಿರುವುದು, ತಾನು ಬಯಸಿದ ಸಿನಿಮಾರಂಗದಲ್ಲೇ ಅದರಲ್ಲೂ ತನಗಿಷ್ಟವಾದ ಖಳನಟನಾಗಿ ಬದುಕು ಕಟ್ಟಿಕೊಂಡು ಮಿಂಚುತ್ತಿರುವ ಯುವ ಪ್ರತಿಭೆ 'ವಸಿಷ್ಠ ಸಿಂಹ ' ಅವರ ಬಗ್ಗೆ. ಯಶ್ ಅಭಿನಯದ 'ರಾಜಾಹುಲಿ' ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ವಸಿಷ್ಠ ಅವರದ್ದು ಮನೋಜ್ಞ ಅಭಿನಯ.

An Exclusive interview with Kannada villain actor Vasishta Simha

ಕಂಪ್ಯೂಟರ್ ಪದವೀಧರರಾಗಿರುವ ವಸಿಷ್ಠ 'ಅಸೆಂಚರ್' ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. ಸಾಫ್ಟ್ ವೇರ್ ಕ್ಷೇತ್ರದಿಂದ ತಮ್ಮ ವೃತ್ತಿ ಬದುಕನ್ನು ಸಿನಿಮಾ ರಂಗದಲ್ಲಿ ಕಾಣುತ್ತಿರುವ ವಸಿಷ್ಠ, ನಮ್ಮ ಕಂಪೆನಿಗೆ ಇತ್ತೀಚೆಗೆ ಅಗಮಿಸಿದ್ದರು. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ:

ಓದುಗರಿಗೆ ನಿಮ್ಮ ಕಿರು ಪರಿಚಯ ತಿಳಿಸಿ
ನಾನು ಹಾಸನ ಮೂಲದವನು, ಓದಿದ್ದು ಮೈಸೂರಿನಲ್ಲಿ. ಪಿಯು ನಂತರ ಬೆಂಗಳೂರಿಗೆ ಬಂದೆ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನನ್ನ ಕಾಲೇಜು ಜೀವನ ಮುಂದುವರಿಯಿತು. ಕಾಲೇಜು ಜೀವನದ ಜೊತೆ ನನಗೆ ನಾಟಕದ ಮೇಲಿನ ಪ್ರೀತಿ, ಪ್ರಭಾವ ಹೆಚ್ಚಾಯಿತು. ನಾಟಕದಲ್ಲಿ ಪಾಲ್ಗೊಂಡೆ, ನಾನೇ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದೆ. ಮ್ಯೂಸಿಕಲ್ ಕ್ಲಾಸಿನಲ್ಲೂ ಭಾಗವಹಿಸಿ, ಎಷ್ಟೋ ಸಂಗೀತದ ಸ್ಪರ್ಧೆಯಲ್ಲೂ ಭಾಗವಹಿಸಿದ್ದೆ. ಒಲವೇ ಮಂದಾರ ಚಿತ್ರದ ನಿರ್ದೇಶಕ ಜಯತೀರ್ಥ ಅವರು ನಿರ್ದೇಶಿಸಿದ್ದ ನಾಟಕದಲ್ಲೂ ನಟಿಸಿದ್ದೆ. (ರಾಘವೇಂದ್ರ ರಾಜಕುಮಾರ್ ಸಂದರ್ಶನ)

ಶಿಕ್ಷಣ ಮುಗಿದ ನಂತರದ ದಿನಗಳ ಬಗ್ಗೆ
ನಾನು ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವೀಧರ ಮತ್ತು ಅಸೆಂಚರ್ ಸಂಸ್ಥೆಯಲ್ಲಿ ಕೆಲಸ ಕೂಡಾ ಸಿಕ್ಕಿತು. ಆದರೂ ನನಗೆ ನಾಟಕ ಎಂದರೆ ಅದೇನೋ ಭಾರೀ ವ್ಯಾಮೋಹ. ಕೆಲಸದ ಜೊತೆ ವೀಕೆಂಡ್ ನಲ್ಲಿ ನಾಟಕದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದೆ. ಒಂದು ಸಲ ನನ್ನ ಸ್ನೇಹಿತ ಶೂಟಿಂಗ್ ನಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಹೋದಾಗ ಅವನ ಜೊತೆ ಹೋದೆ. ಹಾಗೇ ಸುಮ್ಮನೆ ಫೋಟೋ ತೆಗೆಸಿಕೊಂಡೆ. ಫೋಟೋದಲ್ಲಿ ಚೆನ್ನಾಗಿ ಕಾಣಿಸ್ತೀಯಾ, ಸಣ್ಣ ಕ್ಯಾರೆಕ್ಟರ್ ಮಾಡು ಎಂದು ಆ ಚಿತ್ರದ ನಿರ್ದೇಶಕರು ಸಣ್ಣ ಪಾತ್ರ ಮಾಡಿಸಿಯೇ ಬಿಟ್ಟರು.

ಈವರೆಗೆ ಒಟ್ಟು ಎಷ್ಟು ಚಿತ್ರದಲ್ಲಿ ಮಾಡಿದ್ದೀರಾ?
ಅಸೆಂಚರ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಮಿಲನ, ಗಾಳಿಪಟ ಟಿವಿ ಧಾರವಾಹಿಯ ನಿರ್ದೇಶಕರು ನಿರ್ದೇಶಿಸಿದ್ದ ಚಿತ್ರದಲ್ಲೂ ನಟಿಸಿದ್ದೆ. ಲವ್ ಎನ್ನುವ ಸಿನಿಮಾದಲ್ಲೂ ಆಕ್ಟ್ ಮಾಡಿದ್ದೇನೆ. ಸಿನಿಮಾದಲ್ಲಿನ ಸೆಳೆತ ಹೆಚ್ಚಾಯಿತು. ಮನೆಯಲ್ಲಿ ಹೇಳದೇ ಕೆಲಸಕ್ಕೆ ರಿಸೈನ್ ಮಾಡಿದೆ. ಇದುವರೆಗೆ ಒಟ್ಟು ಒಂಬತ್ತು ಚಿತ್ರದಲ್ಲಿ ನಟಿಸಿದ್ದೇನೆ. ರಾಜಾಹುಲಿ ನನ್ನ ಮೊದಲ ಚಿತ್ರವಲ್ಲ, ಆದರೆ ನನಗೆ ಹೆಸರು ತಂದು ಕೊಟ್ಟದ್ದು ಆ ಚಿತ್ರವೇ.

An Exclusive interview with Kannada villain actor Vasishta Simha

ನಿಮ್ಮ ಮುಂದಿನ ಸಿನಿಮಾದ ಬಗ್ಗೆ
ರುದ್ರತಾಂಡವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಅದರಲ್ಲಿ ಇಬ್ಬರು ಖಳನಟರು ಒಂದು ರವಿಶಂಕರ್ ಇನ್ನೊಂದು ನಾನು. ಇನ್ನು ಅಮೃತವರ್ಷಿಣಿ ಚಿತ್ರ ಹೆಚ್ಚುಕಮ್ಮಿ ಮುಗಿದಿದೆ. ಶ್ರೀನಗರ ಕಿಟ್ಟಿ ಜೊತೆ ಸುಬ್ರಮಣಿ ಚಿತ್ರ ಮಾಡುತ್ತಿದ್ದೇನೆ. ನಂತರ ರಕ್ಷಿತ್ ಶೆಟ್ಟಿ ಜೊತೆ ಗೋದಿಬಣ್ಣ, ಸಾಧಾರಣ ಮೈಕಟ್ಟು ಚಿತ್ರದಲ್ಲೂ ಮಾಡುತ್ತಿದ್ದೇನೆ.

ನಿಮಗೆ ಸಂಗೀತ ಅಂದರೆ ತುಂಬಾ ಇಷ್ಟಾಂತ ಗೊತ್ತಾಯ್ತು
ನಾನು ಸಂಗೀತ ಕಲಿತಿಲ್ಲ, ಐ ಮೀನ್ ಕ್ಲಾಸಿಕಲ್ ಸಂಗೀತ. ಆದರೂ ನನ್ನ ಹಿಂದಿನ ಸಿನಿಮಾದಲ್ಲಿ ಎರಡು ಮೂರು ಟ್ರ್ಯಾಕ್ ಹಾಡಿದ್ದೇನೆ. ಈಗಿನ ಕೆಲವು ಸಿನಿಮಾದಲ್ಲೂ ಹಾಡಿದ್ದೇನೆ. ಎ ಆರ್ ರೆಹಮಾನ್ ಅವರ ಸಂಗೀತ ಎಂದರೆ ನನಗೆ ತುಂಬಾ ಇಷ್ಟ.

ಖಳನಟನ ಪಾತ್ರದ ಬಗ್ಗೆ
ನೆಗೆಟಿವ್ ಶೇಡ್ ಅಂದರೆ ನನಗೆ ತುಂಬಾ ಇಷ್ಟ. ವಜ್ರಮುನಿ ನನ್ನ ಫೇವರೇಟ್ ನಟ. ಅವರು ಸತ್ತಾಗ ಎರಡು ದಿನ ಊಟ ಮಾಡಿರಲಿಲ್ಲ. ವಿಲನ್ ಗಟ್ಟಿ ಇದ್ದಷ್ಟು ಸಿನಿಮಾ ಚೆನ್ನಾಗಿ ಬರುತ್ತೆ. ಒಂದು ಉದಾಹರಣೆ, ಮಂಡ್ಯದ ಚಿತ್ರಮಂದಿರವೊಂದರಲ್ಲಿ ಚಿತ್ರತಂಡದ ಜೊತೆ ಆ ರಾಜಾಹುಲಿ ಚಿತ್ರ ವೀಕ್ಷಿಸುತ್ತಿದ್ದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನನ್ನ ಮತ್ತು ಯಶ್ ನಡುವೆ ನಡೆಯುತ್ತಿದ್ದ ಫೈಟಿಂಗ್ ಸಂದರ್ಭದಲ್ಲಿ ಜನರು ನನಗೆ ಸಿಕ್ಕಾಪಟ್ಟೆ ಬೈಯುತ್ತಿದ್ದರು. ಪ್ರೇಕ್ಷಕರ ಬೈಗಳವೇ ನಾವು ಮಾಡುವ ಪಾತ್ರಕ್ಕೆ ಸಿಗುವ ಗೌರವ. ಅಲೋನ್ ಚಿತ್ರದಲ್ಲೂ ಮೈನ್ ರೋಲ್ ನಲ್ಲಿ ನಟಿಸುತ್ತಿದ್ದೇನೆ.

ಬೇರೆ ಭಾಷೆಯ ಸಿನಿಮಾದಿಂದ ಆಫರ್ ಇದೆಯಾ?
ತೆಲುಗುನಲ್ಲಿ ಎರಡು ಸಿನಿಮಾದಲ್ಲಿ ಕೇಳಿದ್ರು, ಆದರೆ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ತಮಿಳಿನಲ್ಲಿ ನಾನು ನಾಯಕನಾಗಿ ನಟಿಸುತ್ತಿರುವ ಕರೈವೋರಂ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗ್ತಾ ಇದೆ. ಅದರಲ್ಲಿ ನಿಖಿಶಾ ಪಟೇಲ್ ನಾಯಕಿ.

An Exclusive interview with Kannada villain actor Vasishta Simha

ಲಾಂಗೇಜ್ ಪ್ರಾಬ್ಲಂ ಇದೆಯಾ, ಬಾಲಿವುಡ್ ಹಾರುವ ಆಲೋಚನೆ ಇದೆಯಾ?
ನಾನು ಐದು ಭಾಷೆ ಮಾತನಾಡಬಲ್ಲೆ. ತಮಿಳಿನಲ್ಲಿ ನಟಿಸುವಾಗ ನನಗೆ ಲಾಂಗೇಜ್ ಪ್ರಾಬ್ಲಂ ಎದುರಾಗಿಲ್ಲ. ನಾನು ತಮಿಳನ್ನು ಚೆನ್ನಾಗಿ ಮಾತನಾಡಬಲ್ಲೆ. ಹಿಂದಿಗೆ ಹಾರುವ ಆಲೋಚನೆ ಸದ್ಯಕ್ಕಿಲ್ಲ. ಆದರೆ, ಇಮ್ತಿಯಾಜ್ ಆಲಿ ಅವರ ಜೊತೆ ವರ್ಕ್ ಮಾಡಬೇಕೆನ್ನುವ ಆಸೆಯಿದೆ.

English summary
An Exclusive interview with Kannada villain actor Rajahuli fame Vasishta Simha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada