»   » 'ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ

'ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಎಷ್ಟು ಜನಪ್ರಿಯವೋ... ಅಷ್ಟೇ ಜನಪ್ರಿಯ ಆ ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ಭಾಗವಹಿಸಿದ ಶಿವರಾಜ್.ಕೆ.ಆರ್.ಪೇಟೆ. ಯಾವುದೇ ಪಾತ್ರ ಕೊಟ್ಟರೂ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಅದ್ಭುತ ಪ್ರತಿಭೆ ಶಿವರಾಜ್.ಕೆ.ಆರ್.ಪೇಟೆ.

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿರುವ ಶಿವರಾಜ್.ಕೆ.ಆರ್.ಪೇಟೆ ಇಂದು ಕರ್ನಾಟಕದ ಸೂಪರ್ ಸ್ಟಾರ್. ಈ ಮಟ್ಟಕ್ಕೆ ಬರಲು ಶಿವರಾಜ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ.['ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!]

ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಭ್ಯಾಸದ ಜೊತೆಗೆ ಸಗಣಿ ಎತ್ತುವುದು, ಬೆರಣಿ ತಟ್ಟುವುದು ಸೇರಿದಂತೆ ಗಾರೆ ಕೆಲಸವನ್ನೂ ಮಾಡಿರುವ ಶಿವರಾಜ್.ಕೆ.ಆರ್.ಪೇಟೆ ಬಾಂಬೆಯ ಬಾರ್ ಒಂದರಲ್ಲೂ ಚಾಕರಿ ಮಾಡಿದ್ದಾರೆ. ಹೀಗೆ... ಇಡೀ ಕರುನಾಡು ಕೊಂಡಾಡುವ ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಅನಾವರಣವಾಗಿದೆ. ಓದಿರಿ...
ಸಂದರ್ಶನ: ಹರ್ಷಿತಾ ರಾಕೇಶ್

ನಮ್ಮ ಓದುಗರಿಗೆ ನಿಮ್ಮ ಪರಿಚಯ

- ನಾನು ಇಷ್ಟು ದಿನ ಶಿವರಾಜ್ ಆಗಿ ಬದುಕುತ್ತಿದ್ದೆ. ಈಗ ಹೆಚ್ಚು ಜನ ಶಿವರಾಜ್ ಅನ್ನೋದನ್ನ ಬಿಟ್ಟು ಕೆ.ಆರ್.ಪೇಟೆ ಅಂತಲೇ ಕರೆಯುತ್ತಾರೆ. ತಂದೆ - ರಾಮೇಗೌಡ್ರು. ತಾಯಿ - ಸಾವಿತ್ರಮ್ಮ. ನಾವು ಏಳು ಜನ ಮಕ್ಕಳು. ನಾಲ್ಕು ಜನ ಗಂಡು ಮಕ್ಕಳು. ಮೂರು ಜನ ಹೆಣ್ಮಕ್ಕಳು. ನಾನೇ ಕಿರಿಯ. ಅದರಲ್ಲಿ ಅಣ್ಣ ಒಬ್ಬರು ತೀರ್ಕೊಂಡು ಎಂಟು ವರ್ಷ ಆಯ್ತು. ['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ನಟನೆ ಬಗ್ಗೆ ನಿಮಗೆ ಆಸಕ್ತಿ ಮೂಡಿದ್ದು ಹೇಗೆ.?

- ನಮ್ಮ ತಂದೆ ಡ್ರಾಮಾ ಮಾಸ್ಟರ್. ಅವರೇ ನನ್ನ ಮೊದಲ ಗುರು. ಅವರ ನಾಟಕದಲ್ಲಿ ಅವರೇ ಕೊಟ್ಟ ಪೌರಾಣಿಕ ಪಾತ್ರದಲ್ಲಿ ಮೊದಲು ನಾನು ಬಣ್ಣ ಹಚ್ಚಿದ್ದೆ. ಆಗ ನನಗೆ ಒಂಬತ್ತು ವರ್ಷ. ನನ್ನ ತಂದೆ ನನಗೆ ಕೊಟ್ಟಿರುವ ಭಿಕ್ಷೆ ಇದು. ಕಲೆ ಅನ್ನೋದು ನನಗೆ ಅವರಿಂದ ರಕ್ತದಲ್ಲಿ ಬಂದಿದೆ. ಒಬ್ಬ ಕಲಾವಿದ ಆಗಬೇಕು ಅಂತ ತುಂಬಾ ಆಸೆ ಪಟ್ಟಿದ್ದೆ. ಕಾಲೇಜು ದಿನಗಳಲ್ಲಿ ಮಿಮಿಕ್ರಿ, ಡ್ಯಾನ್ಸ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನ ಕೊಡುತ್ತಿದ್ದೆ. [Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?]

ನಿಮ್ಮ ವಿದ್ಯಾಭ್ಯಾಸ...

- ಬಿ.ಎ ಮಾಡಿದ್ದೇನೆ. ಹುಟ್ಟಿದ್ದು ಬೆಳೆದದ್ದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ನನ್ನ ವಿದ್ಯಾಭ್ಯಾಸಕ್ಕೆ ಹಣ ಬೇಕು ಅಂತ ಸಗಣಿ ಎತ್ತುವುದು, ಬೆರಣಿ ತಟ್ಟುವುದು, ಸೌದೆ ತರುವುದು, ಹಾಲು ಕರೆಯುವುದು, ಹಾಲು ಮಾರುವುದು, ಮಾವಿನ ಹಣ್ಣು ಮಾರುವುದು, ಗಾರೆ ಕೆಲಸ ಮಾಡುವುದು... ಹೀಗೆ ಸುಮಾರು ಕೆಲಸಗಳನ್ನ ಬಾಲ್ಯದಲ್ಲಿ ನಾನು ಮಾಡಿದ್ದೇನೆ. ಅಪ್ಪನಿಗೆ ಕಷ್ಟ ಕೊಡಬಾರದು ಅಂತ ಹೊಂಗೆ ಕಾಯಿಯನ್ನ ಸಂತೆಯಲ್ಲಿ ಮಾರುತ್ತಿದ್ದೆ. ಬಾಂಬೆಗೆ ಹೋಗಿ ಬಾರ್ ನಲ್ಲಿ ಕೆಲಸ ಮಾಡಿದ್ದೇನೆ. ದೇವನಹಳ್ಳಿ ಡಾಬಾದಲ್ಲಿ ಕ್ಯಾಶಿಯರ್ ಆಗಿ, ರಿಲಾಯನ್ಸ್ ನಲ್ಲಿ, ವೃತ್ತಿ ರಂಗಭೂಮಿಯಲ್ಲಿ... ಹೀಗೆ ಸುಮಾರು ಕಡೆ ಕೆಲಸ ಮಾಡಿದ್ದೇನೆ. ಕಷ್ಟದಿಂದಲೇ ನನ್ನ ಜೀವನ ಸಾಗಿಸುತ್ತಿದ್ದೇನೆ.

ಊರು ಬಿಟ್ಟು ಬೆಂಗಳೂರಿಗೆ ಬಂದ್ರಿ... ಇಲ್ಲಿ ಜೀವನ..?

- ಇಲ್ಲಿಗೆ ಬಂದ್ಮೇಲೂ ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಎಂಟು ವರ್ಷದ ಹಿಂದೆ ಡೆಂಫೀ ಜ್ವರದಿಂದ ನನ್ನ ಅಣ್ಣ ತೀರ್ಕೊಂಡರು. ಅವರೇ ನನ್ನನ್ನ ಮೊದಲು ಬೆಂಗಳೂರಿಗೆ ಕರ್ಕೊಂಡು ಬಂದಿದ್ದು. ಮೊದಲ ಬಾರಿಗೆ ಬೆಂಗಳೂರಿನ ನವರಂಗ್ ಗೆ ಬಂದು ಇಳಿದಾಗ ಟ್ರಾಪಿಕ್ ನೋಡಿ ಭಯ ಬಿದ್ದಿದ್ದೆ.

'ಕಾಮಿಡಿ ಕಿಲಾಡಿಗಳು' ಗೆಲುವನ್ನ ನಿಮ್ಮ ಅಣ್ಣನಿಗೆ ಅರ್ಪಿಸಿದ್ರಿ..

- ನಾನೀಗ ಏನಿದ್ದೀನಿ, ಅದನ್ನ ನನ್ನ ಅಣ್ಣ ನೋಡಬೇಕಿತ್ತು ಅನ್ನೋ ಒಂದು ಕೊರಗು ನನಗೆ ಲೈಫ್ ಟೈಮ್ ಇರುತ್ತೆ. ನಾನು ಕಲಾವಿದ ಆಗಬೇಕು ಅನ್ನೋ ಒಂದೇ ಕಾರಣಕ್ಕಾಗಿ ನನ್ನನ್ನ ನನ್ನ ಅಣ್ಣ ಬೆಂಗಳೂರಿಗೆ ಕರ್ಕೊಂಡು ಬಂದಿದ್ದು. ಆದ್ರೀಗ ನನ್ನ ಅಣ್ಣ ಇಲ್ಲ. ಇದು ನನ್ನ ಜೀವನದ ದೊಡ್ಡ ನೋವು. ಯಾಕಂದ್ರೆ, ಅಣ್ಣನ ಸಾವನ್ನ ನಾನು ಕಣ್ಣೆದುರಿಗೆ ನೋಡಿದ್ದೇನೆ. ಅವರಿಗೆ ಡೆಂಫೀ ಮತ್ತು ಮಲೇರಿಯಾ ಬಂದಿತ್ತು. ಇಂಟರ್ನಲ್ ಬ್ಲೀಡಿಂಗ್ ಶುರು ಆಗಿತ್ತು. ಹೀಗಾಗಿ ತೀರ್ಕೊಂಡ್ರು. ಅವರು ಇಲ್ಲ ಅನ್ನೋ ದೊಡ್ಡ ಕೊರಗು ನನಗಿದೆ. 'ಕಾಮಿಡಿ ಕಿಲಾಡಿಗಳು' ಗೆಲುವನ್ನ ನಾನು ನನ್ನ ಅಣ್ಣನಿಗೆ ಅರ್ಪಿಸಿದ್ದೇನೆ.

ಅಣ್ಣ ತೀರಿಕೊಂಡ ನಂತರ...

- ಅಣ್ಣ ತೀರಿಕೊಂಡ ಮೇಲೆ ತಿಂಡಿ ತಿನ್ನೋಕೆ, ಊಟ ಮಾಡೋಕೆ ದುಡ್ಡು ಇರ್ಲಿಲ್ಲ. ಆಗ ಹಸಿವನ್ನು ಮರೆಯೋಕೆ ಕಾಮಿಡಿ ಮಾಡ್ತಿದ್ವಿ. ಸ್ನೇಹಿತ ರಾಘವೇಂದ್ರ ಪ್ರಸಾದ್ ನಮಗೆ ಅನ್ನದಾತ. ಹರಿಪ್ರಸಾದ್ ಕೂಡ ತುಂಬಾ ಸಹಾಯ ಮಾಡಿದ್ದಾರೆ. ಬನಶಂಕರಿಯಿಂದ ಲಗ್ಗೆರೆವರೆಗೆ ನನಗಾಗಿ ಊಟ ತಗೊಂಡು ಬರ್ತಿದ್ರು. ಸೋಮು, ಟಿವಿ9 ವಾಹಿನಿಯ ರಘುನಂದನ್ ಸರ್, ಪ್ರವೀಣ್, ರವೀಂದ್ರ ಮುದ್ದಿ, ಶರತ್ ಚಕ್ರವರ್ತಿ.. ಎಲ್ಲರೂ ನನಗೆ ಸಪೋರ್ಟ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ.

ನಿಮ್ಮ ಯಶಸ್ಸಿನ ಹಿಂದೆ ಪತ್ನಿಯ ಪಾತ್ರ...

- ನನ್ನ ಇಂದಿನ ಯಶಸ್ಸಿಗೆ ಅರ್ಧ ಕಾರಣ ನನ್ನ ಪತ್ನಿ ಶ್ರುತಿ. ಆಕೆ ನನಗೆ ಒಳ್ಳೆ ಫ್ರೆಂಡ್. 'ಕಾಮಿಡಿ ಕಿಲಾಡಿಗಳು' ಪ್ರೋಗ್ರಾಂಗಾಗಿ ನನ್ನ ಪತ್ನಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾಳೆ. ಆರು ತಿಂಗಳಿನಿಂದ ಸರಿಯಾಗಿ ಆಕೆ ಜೊತೆ ಮಾತನಾಡಲು ಆಗಿಲ್ಲ. ಆದರೂ ಕೋಪ ಮಾಡಿಕೊಳ್ಳದೇ, ಸಪೋರ್ಟ್ ಮಾಡುತ್ತಾಳೆ. ನನ್ನ ಯಶಸ್ಸಿಗಾಗಿ ಶ್ರಮ ಪಡುತ್ತಾಳೆ. ನನ್ನ ಮಗ ವಂಶಿಕ್ ಗೌಡ.

English summary
Here is an Exclusive Interview of Shivaraj.K.R.Pete, Winner of Zee Kannada Channel's popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada