For Quick Alerts
  ALLOW NOTIFICATIONS  
  For Daily Alerts

  ಚಂದನವನದ 'ಫ್ಲೈ'ಯಿಂಗ್ ಸ್ಟಾರ್ ರಾಜವರ್ಧನ್ ಸಂದರ್ಶನ

  By Harshitha
  |

  'ಫ್ಲೈ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಹಾರಾಡೋಕೆ ರೆಡಿಯಾಗುತ್ತಿದ್ದಾರೆ ಡಿಂಗ್ರಿ ನಾಗರಾಜ್ ಪುತ್ರ 'ರಾಜವರ್ಧನ್'. ಆರಡಿ ಉದ್ದ, ಕಟ್ಟುಮಸ್ತಾದ ದೇಹ, ಸ್ಫುರದ್ರೂಪಿ, ನೋಡೋಕೆ ಚಾಕಲೇಟ್ ಬಾಯ್ ಅಂತೆ ಕಂಗೊಳಿಸುವ ರಾಜವರ್ಧನ್ ಗೆ ಅದಾಗಲೇ ಗಾಂಧಿನಗರದಲ್ಲಿ ಬೇಡಿಕೆ ಹೆಚ್ಚಾಗಿದೆ.

  ಮೊದಲ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ರಾಜವರ್ಧನ್ ಎರಡನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ. ಗಾಂಧಿನಗರದ ಕಡೆ ಎಂದೂ ಮುಖ ಮಾಡದ ರಾಜವರ್ಧನ್, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ? ಅವರ ಮುಂದಿನ ಕನಸುಗಳೇನು? ಅನ್ನುವುದರ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲದೆ ಓದಿ....

  * ಡಿಂಗ್ರಿ ನಾಗರಾಜ್ ಪುತ್ರ ಅನ್ನೋದನ್ನ ಬಿಟ್ಟು, ನಮ್ಮ ಓದುಗರಿಗೆ ನಿಮ್ಮ ಪರಿಚಯ ಮಾಡಿಕೊಡಿ....

  - ನಾನು ಚಿತ್ರಕಲಾ ಪರಿಷತ್ ನಲ್ಲಿ ಡಬಲ್ ಡಿಗ್ರಿ ಮಾಡಿದ್ದೀನಿ. ವಿಷುವಲ್ ಆರ್ಟ್ಸ್ ನಲ್ಲಿ. ಕಲೆ ಅಂದ್ರೆ ನಂಗೆ ತುಂಬಾ ಆಸಕ್ತಿ. ಕಾಲೇಜು ಮುಗಿದ್ಮೇಲೆ ಬಿಜಿನೆಸ್ ಮಾಡ್ಬೇಕು ಅಂತಿದ್ದೆ. ಅಷ್ಟರಲ್ಲಿ ಸಿನಿಮಾ ಕಡೆ ಬಂದೆ.

  * 'ರಾಜವರ್ಧನ್' ಇದು ನಿಮ್ಮ ನಿಜವಾದ ಹೆಸರಾ? 'ರಾಜ್ ಕುಮಾರ್' ಮತ್ತು 'ವಿಷ್ಣುವರ್ಧನ್' ಇಬ್ಬರೂ ನಿಮ್ಮ ಹೆಸರಲ್ಲಿದ್ದಾರಲ್ಲಾ?

  - ನನ್ನ ನಿಜವಾದ ಹೆಸರು 'ರಾಜೇಂದ್ರ'. ರಾಜರ ಹೆಸರಿಟ್ಟುಕೊಳ್ಳಬೇಕು ಅಂತ ನನಗೆ ತುಂಬಾ ಆಸೆ ಇತ್ತು. ಸಿನಿಮಾಗೆ ಬರುವಾಗ ಹೆಸರು ಚೇಂಜ್ ಮಾಡ್ಬೇಕಾಯ್ತು. ನನ್ನ ಹೆಸರಲ್ಲಿ 'ರಾಜ್'ನ ಉಳಿಸಿಕೊಂಡು 'ವರ್ಧನ್'ನ ಆಡ್ ಮಾಡಿದ್ವಿ. ನನಗೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರೂ ರೋಲ್ ಮಾಡೆಲ್.

  * ಸಿನಿಮಾ...ಬಣ್ಣದ ಬದುಕಿನ ಆಸಕ್ತಿ...ಹೀರೋ ಆಗುವ ಕನಸು ಯಾವಾಗ್ಲಿಂದ?

  - ಮುಂಚೆಯಿಂದಲೂ ಇಂಟ್ರೆಸ್ಟ್ ಇತ್ತು. ಆದ್ರೆ, ಮಾಡಲೇ ಬೇಕು ಅಂತ ಇರ್ಲಿಲ್ಲ. ನಾನು 6' Feet ಇದ್ದೆ. ಎಲ್ಲರೂ ನನ್ನ ನೋಡಿ ಆಕ್ಟರ್ ಅಂದುಕೊಳ್ಳುತ್ತಿದ್ದರು. ನಾನು ಎಲ್ಲೂ ''ನನ್ನ ತಂದೆ ಡಿಂಗ್ರಿ ನಾಗರಾಜ್'' ಅಂತ ಹೇಳಿಕೊಂಡಿರಲಿಲ್ಲ. ಆದ್ರೆ, ಯಾಕೆ ಆಕ್ಟಿಂಗ್ ಮಾಡಬಾರದು ಅಂತ ಎಲ್ಲರೂ ಕೇಳೋರು. ನನಗೆ ಒಂದು ಸಿನಿಮಾ ಮಾಡಿ ಕಳೆದುಹೋಗುವುದಕ್ಕೆ ಇಷ್ಟ ಇಲ್ಲ. ಆಕ್ಟ್ ಮಾಡಿ ಆಮೇಲೆ ಕೆಲಸಕ್ಕೆ ಹೋಗಕ್ಕಾಗಲ್ಲ. ಭವಿಷ್ಯ, ಜೀವನ ಎರಡೂ ಮುಖ್ಯ ಅಂತ ನಾನು, ಮುಂಚೆ ಸಿನಿಮಾಗೆ ಬರುವುದಕ್ಕೆ ಒಪ್ಪಿಕೊಂಡಿರಲಿಲ್ಲ.

  * ಮತ್ತೆ ಈಗ ಚಿತ್ರರಂಗಕ್ಕೆ ಪ್ರವೇಶ?

  - ಓದು ಮುಗಿದ್ಮೇಲೆ, ಬಿಜಿನೆಸ್ ಮಾಡುತ್ತಿರುವಾಗ 'ವಿಕ್ಟರಿ' ನಿರ್ದೇಶಕ ನಂದಕಿಶೋರ್ ಸಪೋರ್ಟ್ ಮಾಡಿದರು. ನಮ್ಮ ಫ್ಯಾಮಿಲಿ, ಅವರ ಫ್ಯಾಮಿಲಿ ತುಂಬಾ ಕ್ಲೋಸ್. ಅವರೇ ನನ್ನನ್ನ ಡ್ಯಾನ್ಸ್, ಜಿಮ್ ಗೆಲ್ಲಾ ಸೇರಿಸಿದರು. ಟ್ರೇನಿಂಗ್ ಮಾಡಿ ರೆಡಿಯಾದಾಗ 'ಫ್ಲೈ' ಸಿನಿಮಾ ಆಫರ್ ಬಂತು. ಒಂದೇ ಸಿನಿಮಾ ಮಾಡಿದರೂ, ಜನ ನನ್ನನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅಂತ ಈ ಚಿತ್ರವನ್ನ ಒಪ್ಪಿಕೊಂಡೆ. 'ಫ್ಲೈ' ಖಂಡಿತವಾಗಲೂ ಎಲ್ಲರಿಗೂ ಇಷ್ಟವಾಗುತ್ತೆ. [ಡಿಂಗ್ರಿ ನಾಗರಾಜ್ ಪುತ್ರನಿಗೆ ಹೊಡಿತು ಚಾನ್ಸು.!]

  * 'ಫ್ಲೈ' ಸಿನಿಮಾ ಶೂಟಿಂಗ್ ಎಲ್ಲಿಯವರೆಗೂ ಬಂತು?

  - 50 % ಮುಗಿದಿದೆ. ಈಗಲೂ ಶೂಟಿಂಗ್ ನಡೆಯುತ್ತಿದೆ. ನಾಳೆಯಿಂದ ಕೇರಳದಲ್ಲಿ ಶೂಟಿಂಗ್ ಇದೆ. ಅದು ಮುಗಿದ ನಂತ್ರ ಲಕ್ಷದ್ವೀಪದಲ್ಲಿ ಶೂಟಿಂಗ್ ಇದೆ. ಇನ್ನು 30 ದಿನ ಚಿತ್ರೀಕರಣ ಇದೆ. ಮಾರ್ಚ್ ಹೊತ್ತಿಗೆ, 'ಫ್ಲೈ' ಸಿನಿಮಾ ರೆಡಿ ಇರುತ್ತೆ. ಈಗಾಗಲೇ ಚಿಕ್ಕಮಗಳೂರು, ಕುದುರೆ ಮುಖ, ದಾಂಡೇಲಿ, ದೆಹಲಿ, ಮಲ್ಪೆ ಮುಂತಾದ ಸ್ಥಳಗಳಲ್ಲಿ ಶೂಟಿಂಗ್ ಆಗಿದೆ. ಫುಲ್ ಗ್ರೀನರಿ, ಲೋಕೇಷನ್ಸ್ ತುಂಬಾ ಚೆನ್ನಾಗಿದೆ.

  * 'ಫ್ಲೈ' ಅಡ್ವೆಂಚರಸ್ ಸಿನಿಮಾ. ಅದ್ರಲ್ಲಿ ನಿಮ್ಮ ಪಾತ್ರ?

  - ತುಂಬಾ ಅಡ್ವೆಂಚರಸ್. ಯಾವುದಕ್ಕೂ ಭಯ ಪಡದ ಯುವಕನ ಪಾತ್ರ. ತುಂಬಾ ಜೋವಿಯಲ್ ಕ್ಯಾರೆಕ್ಟರ್. ಎಲ್ಲಾ ಹುಡುಗಿಯರಿಗೂ ಇಷ್ಟವಾಗುವ ಹುಡುಗ. ಒಂದು ಕ್ಯೂಟ್ ಲವ್ ಸ್ಟೋರಿ ಕೂಡ ಇದೆ.

  * ಏನೇನ್ ಅಡ್ವೆಂಚರ್ ಮಾಡಿದ್ದೀರಾ ನೀವು ಸಿನಿಮಾದಲ್ಲಿ ?

  - 67 ಬಾರಿ 'ಪ್ಯಾರಾ ಸೇಯ್ಲಿಂಗ್' ಮಾಡಿದ್ದೀನಿ. ಸಿನಿಮಾದ ಫಸ್ಟ್ ಸೀನ್ ಅದು. ಮುಳ್ಳಯ್ಯನಗಿರಿಯಲ್ಲಿ ಜೀಪ್ ಸೀಕ್ವೆನ್ಸ್ ಇತ್ತು. ಲಕ್ಷದ್ವೀಪದಲ್ಲಿ 'ಸ್ಕೂಬಾ ಡೈವಿಂಗ್' ಮಾಡಬೇಕು. ದಾಂಡೇಲಿಯಲ್ಲಿ ರಿವರ್ ರ್ಯಾಫ್ಟಿಂಗ್ ಮಾಡಿದ್ವಿ. ಹೇಳೋಕೆ ಸುಲಭ, ಆದ್ರೆ, ತುಂಬಾ ರಿಸ್ಕ್ ತೆಗೆದುಕೊಂಡು ಮಾಡ್ತಾಯಿದ್ದೀನಿ. ಚೆನ್ನಾಗಿ ಬರುತ್ತಿದೆ.

  * ಇಂತಹ ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ನಿಮ್ಮ ತಯಾರಿ?

  - ತಯಾರಿ ಏನಿಲ್ಲ. ಪ್ಯಾರಾ ಸೇಯ್ಲಿಂಗ್ ನಲ್ಲಿ ಸ್ಪೆಷಲ್ ಟ್ರೇನರ್ ಬಂದಿದ್ದರು. ಯಾವುದೇ ಅಡ್ವೆಂಚರ್ ಮಾಡುವಾಗಲೂ ಎಕ್ಸ್ ಪರ್ಟ್ಸ್ ಇದ್ದರು. ಸೋ, ಅಂತಹ ಪ್ರಿಪರೇಷನ್ ಅಂತ ನಾನೇನು ಮಾಡ್ಲಿಲ್ಲ. ಭಯ ಪಡ್ಲಿಲ್ಲ, ಧೈರ್ಯವಾಗಿದ್ದರೆ ಸೂಪರ್ ಆಗಿ ಮಾಡಿ ಮುಗಿಸಬಹುದು. ಸ್ಕೂಬಾ ಡೈವಿಂಗ್ ಗೆ ಟ್ರೇನಿಂಗ್ ಇದೆ. ಶೂಟಿಂಗ್ ಗೆ ಹೋಗೋಕೆ ಮುಂಚೆ ಮಾಡ್ಬೇಕು.

  * ಅಲ್ಲಿಗೆ, ಜೀವವನ್ನ ಕೈಯಲ್ಲಿ ಹಿಡ್ಕೊಂಡು ಶೂಟಿಂಗ್ ಮಾಡಿದ್ದೀರಾ?

  - ಹೌದು, ಅದು ಮಾತ್ರ ಪಕ್ಕಾ. ಹೇಳೋಕೆ ನಮಗೆ ಚೆನ್ನಾಗಿರುತ್ತೆ. ಆದ್ರೆ, ಅದನ್ನ ಮಾಡುವಾಗ ಆಗೋ ಅನುಭವ ಇದ್ಯಲ್ಲ. ಅದನ್ನ ಹೇಳೋಕ್ಕಾಗಲ್ಲ. ಪ್ಯಾರಾ ಸೇಯ್ಲಿಂಗ್ ಹುಡುಗಾಟ ಅಲ್ಲ. ಅದನ್ನ ಮಾಡುವಾಗ ಕಾಲಿಗೆ ಏಟಾಯ್ತು. ಬಲಗಾಲಿಗೆ ತುಂಬಾ ಪೆಟ್ಟು ಬಿದ್ದಿದೆ. ಈಗ ಕೈ ಕಾಲು ನೋಡಿದ್ರೆ, ಫುಲ್ ಗಾಯ. ರಿಸ್ಕ್ ಇತ್ತು. ತುಂಬಾ ಕಷ್ಟ ಪಟ್ಟು ಮಾಡುತ್ತಿದ್ದೀವಿ.

  * ಅಪ್ಪ (ಡಿಂಗ್ರಿ ನಾಗರಾಜ್) ಸಲಹೆ ಏನು..?

  - ಒಳ್ಳೆ ಸಿನಿಮಾ ಮಾಡು. ಹೆಸರು ಹಾಳು ಮಾಡಬೇಡ. ಹೆಸರು ತರ್ಲಿಲ್ಲ ಅಂದ್ರೂ ಚಿಂತೆಯಿಲ್ಲ. ಇರುವ ಹೆಸರನ್ನ ಹಾಳು ಮಾಡಬೇಡ ಅಂತಾರೆ. ಹ್ಹಾ..ಹ್ಹಾ...ತುಂಬಾ ಚೆನ್ನಾಗಿ ಸಿನಿಮಾ ರೆಡಿಯಾಗುತ್ತಿರುವುದರಿಂದ ಅವರಿಗೂ ತುಂಬಾ ಹೋಪ್ಸ್ ಇದೆ. ಎಲ್ಲಾಕಡೆ ರೆಸ್ಪಾನ್ಸ್ ಬರುತ್ತಿರುವುದರಿಂದ ಖುಷಿಯಲ್ಲಿದ್ದಾರೆ. ನನ್ನ ಮೇಲೆ ನಂಬಿಕೆ ಇದೆ.

  * 'ಫ್ಲೈ' ಇನ್ನೂ ಶೂಟಿಂಗ್ ಹಂತದಲ್ಲಿದೆ. ಆಗಲೇ ಎರಡನೇ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೀರಾ. 'ಅಮರ ಚಿತ್ರ ಕಥಾ' ಚಿತ್ರದಲ್ಲಿ ನಿಮ್ಮ ಪಾತ್ರ?

  - ಹೌದು. 'ಫ್ಲೈ' ಚಿತ್ರಕ್ಕಿಂತ ಇದು ಕಂಪ್ಲೀಟ್ ಡಿಫರೆಂಟ್ ಸಿನಿಮಾ. 'ಫ್ಲೈ' ಸಿನಿಮಾ ರೆಡಿಯಾಗುವಾಗಲೇ ನಾನು 20-30 ಸ್ಕ್ರಿಪ್ಟ್ ಕೇಳಿದ್ದೆ. ಅದರಲ್ಲಿ 'ಅಮರ ಚಿತ್ರ ಕಥಾ' ನನಗೆ ತುಂಬಾ ಇಷ್ಟ ಆಯ್ತು. ನನಗೆ ತುಂಬಾ ಒಳ್ಳೆ ಚೇಂಜ್ ಓವರ್. ಪಕ್ಕಾ ಆಕ್ಟಿಂಗ್ ಓರಿಯೆಂಟೆಡ್ ಮೂವಿ. ಸೆಕೆಂಡ್ ಮೂವಿಗೆ ದಿ ಬೆಸ್ಟ್ ಚಾಯ್ಸ್. ನನಗೆ ಇಂತಹ ಒಳ್ಳೆಯ ಆಫರ್ ಸಿಕ್ಕಿದೆ ನನಗೆ ತುಂಬಾ ಖುಷಿಯಾಯ್ತು. ಫೋಟೋಶೂಟ್ ಆಗಿದೆ. ಸ್ಟೈಲಿಶ್ ಕ್ಯಾರೆಕ್ಟರ್. ಏಪ್ರಿಲ್ ನಿಂದ ಶೂಟಿಂಗ್.

  * ಯಾವ ತರಹದ ಪಾತ್ರಗಳನ್ನ ಎದುರು ನೋಡುತ್ತಿದ್ದೀರಾ?

  - ನನಗೆ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಚೇಂಜಸ್ ಇರಬೇಕು. ಜನ ನನ್ನನ್ನ ಒಂದೇ ತರಹ ನೋಡಬಾರದು. ಈಗ 'ಫ್ಲೈ' ಚಿತ್ರದ ಪಾತ್ರಕ್ಕೂ 'ಅಮರ ಚಿತ್ರ ಕಥಾ' ಪಾತ್ರಕ್ಕೂ ತುಂಬಾ ಚೇಂಜ್ ಓವರ್ ಇದೆ. ಲುಕ್ಸ್ ನಿಂದ ಹಿಡಿದು ಕ್ಯಾರೆಕ್ಟರ್ ವರೆಗೂ ಎಲ್ಲಾ ಡಿಫರೆಂಟ್. ನೆಕ್ಸ್ಟ್ ಚಿತ್ರಕ್ಕೆ ಬೇರೆ ತರಹ ಪಾತ್ರ ನೋಡ್ತಾಯಿದ್ದೀನಿ. ಸಿಕ್ಸ್ ಪ್ಯಾಕ್ ಮಾಡಿ, ಬಾಡಿ ಬಿಲ್ಡ್ ಮಾಡ್ತೀನಿ. ಸೋ, ಒಂದೊಂದು ಸಿನಿಮಾದಲ್ಲಿ, ಒಂದೊಂದು ಎಕ್ಸ್ ಪೆರಿಮೆಂಟ್ ಮಾಡಬೇಕು ಅಂತ. ಒಂದು ಮಾಸ್ ಸಿನಿಮಾ ಮಾಡುವ ಆಸೆ ಇದೆ. 'ರಕ್ತಚರಿತ್ರ' ರೇಂಜ್ ನಲ್ಲಿ ಒಂದು ಸ್ಕ್ರಿಪ್ಟ್ ಕೇಳಿದ್ದೀನಿ. ನೋಡೋಣ ಏನಾಗುತ್ತೆ ಅಂತ.

  ಸಂದರ್ಶನ - ಹರ್ಷಿತಾ ನಾಗರಾಜ್

  English summary
  Dingri Nagaraj's son Rajavardhan, who has made entry into Sandlwood through the movie 'Fly', is busy with lot offers. Here is an Exclusive Interview of Rajavardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X