»   » ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

Posted By:
Subscribe to Filmibeat Kannada

ಕಿರುತೆರೆ ಧಾರಾವಾಹಿಗಳಿಗೆ ಹೊಸ ಭಾಷೆ ಬರೆದ ಯಶಸ್ವಿ ನಿರ್ದೇಶಕ, ಕನ್ನಡದ ಮೇಷ್ಟ್ರು, ಟಿ.ಎನ್ ಸೀತಾರಾಮ್ ಅವರ ಸುಮಾರು 9 ವರ್ಷಗಳ ನಂತರ ಮತ್ತೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೆಸರು 'ಕಾಫಿತೋಟ'. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದೆ. ರಾಧಿಕಾ ಚೇತನ್, ರಘು ಮುಖರ್ಜಿ, ರಾಹುಲ್, ಸಂಯುಕ್ತ ಹೊರನಾಡು ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹಾಗಿದ್ರೆ, ಟಿ.ಎನ್.ಎಸ್ ಅವರ ಇಷ್ಟು ವರ್ಷ ಯಾಕೆ ಸಿನಿಮಾ ಮಾಡಿಲ್ಲ? ಕಾಫಿತೋಟದ ವಿಶೇಷತೆಗಳೇನು? ಎಂಬುದರ ಬಗ್ಗೆ ಟಿ.ಎನ್ ಸೀತಾರಾಮ್ ಅವರ ಜೊತೆ ನಡೆಸಿದ ಎಕ್ಸ್ ಕ್ಲೂಸಿವ್ ಸಂದರ್ಶನ ಮುಂದಿದೆ ಓದಿ.....

ಸಂದರ್ಶನ-ಭರತ್ ಕುಮಾರ್

'ಮೀರಾ ಮಾಧವ ರಾಘವ' ಚಿತ್ರದ ನಂತರ ಮತ್ತೆ ಸಿನಿಮಾ ಮಾಡಿದ್ದೀರಾ, ಈ ಗ್ಯಾಪ್ ಯಾಕೆ?

''ಈ ಮಧ್ಯದಲ್ಲಿ ನಾನು ಧಾರಾವಾಹಿಗಳಲ್ಲಿ ತೊಡಗಿಕೊಂಡಿದ್ದೆ. ಸಿನಿಮಾ ಸ್ವಲ್ಪ ರಿಸ್ಕ್, ಆದ್ರೆ, ಧಾರಾವಾಹಿಗಳು ಆರ್ಥಿಕವಾಗಿ ರಿಸ್ಕ್ ಇರುವುದಿಲ್ಲ. ನನ್ನ ಧಾರಾವಾಹಿಗಳನ್ನ ಚೆನ್ನಾಗಿ ನೋಡುವ ಪ್ರೇಕ್ಷಕ ವರ್ಗವಿತ್ತು. ನಾನು ಹೇಳಬೇಕಾದುದ್ದನ್ನ ಹೇಳುವ ಅವಕಾಶ ಧಾರಾವಾಹಿಯಲ್ಲಿತ್ತು. ಆದ್ರೆ, ಆ ಅವಕಾಶ ಸಿನಿಮಾದಲ್ಲಿ ಕಡಿಮೆ. 'ಮುಕ್ತ', ಮತ್ತು 'ಮುಕ್ತ ಮುಕ್ತ' ಮುಗಿಯುವಷ್ಟರಲ್ಲಿ 8 ವರ್ಷ ಆಯಿತು. ಹಾಗಾಗಿ, ಈಗ ಸಿನಿಮಾ ಮಾಡುತ್ತಿದ್ದೇನೆ'' - ಟಿ.ಎನ್ ಸೀತಾರಾಮ್, ನಿರ್ದೇಶಕ

'ಕಾಫಿತೋಟ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ

ಕಮ್ ಬ್ಯಾಕ್ ಸಿನಿಮಾ 'ಕಾಫಿತೋಟ' ಯಾಕೆ?

''ಕಾಫಿತೋಟ ಎಂದಾಕ್ಷಣ ಹಲವು ಯೋಚನೆಗಳು ತಲೆಯಲ್ಲಿ ಬರುತ್ತೆ. ಒಂದು ನಿಗೂಢವಾದ ಸ್ಥಳ. ಅಲ್ಲೊಂದು ಮನೆ ಇರುತ್ತೆ. ಅಲ್ಲೊಬ್ರು ಮನೆ ಕಾಯುವರು ಇರ್ತಾರೆ. ಅಲ್ಲಿ ಏನ್ ಬೇಕಾದ್ರು ಆಗಬಹುದು ಎಂಬ ಸಾಧ್ಯತೆ ಇರುತ್ತೆ. ಆದ್ರೆ, ಆ 'ಏನ್ ಬೇಕಾದ್ರು ಆಗಬಹುದು'' ಎನ್ನುವುದನ್ನ ತೆಗೆದು ಹಾಕಿದ್ರೆ ನಾವು ಏನಾದರೂ ಹೇಳಬಹುದು ಎಂದೆನಿಸಿತು. ಈ ರೀತಿಯಾದ ಮಿಶ್ರ ಮನೋಭಾವನೆ, ನಿಗೂಢತೆ, ಏನು ಬೇಕಾದರೂ ಆಗಬಹುದು ಎಂಬುದೇ 'ಕಾಫಿತೋಟ' - ಟಿ.ಎನ್ ಸೀತಾರಾಮ್, ನಿರ್ದೇಶಕ

ನಿಮ್ಮ 'ಕಾಫಿತೋಟ'ದಲ್ಲಿ ಏನು ಹೇಳುತ್ತಿದ್ದೀರಾ?

''ಹೆಚ್ಚು ಸಾಮಾಜಿಕ ಅಂಶಗಳು, ರಾಜಕೀಯ ಸಿದ್ಧಾಂತಗಳು ಹೇಳುತ್ತಿದ್ದೆ. ಇದು ಯಾವುದು ಈ ಬಾರಿ ಇರಬಾರದು ಅಂತ ರೋಚಕವಾದ ಸಸ್ಪೆನ್ಸ್ ಥ್ರಿಲ್ಲರ್ ನಿಂದ ಕೂಡಿರುವ ಸಿನಿಮಾ ಮಾಡಿದ್ದೀನಿ'' - ಟಿ.ಎನ್ ಸೀತಾರಾಮ್, ನಿರ್ದೇಶಕ

'ಶಿರಸಿಭವನ'ದಿಂದ 'ಕಾಫಿ ತೋಟ'ಕ್ಕೆ ತೇಜಸ್ವಿನಿ ಅಕ್ಕ

ನಿಮ್ಮ ಎಲ್ಲ ಸಿನಿಮಾಗಳು 'ಕಾನೂನಿನ' ಸುತ್ತವೇ ನಡೆಯುತ್ತೆ ಯಾಕೆ?

''ನಾನು ಲಾಯರ್ ಆಗಿದ್ದೇ. ನನಗೆ ಅದು ಸುಲಭ. ಸುಲಭ ಎನ್ನುದಕ್ಕಿಂತ, ನನಗೆ ಪರಿಚಯವಾದ ಕ್ಷೇತ್ರ. ಹಾಗಾಗಿ ಅದನ್ನ ಆಯ್ಕೆ ಮಾಡಿಕೊಳ್ಳುತ್ತೇನೆ'' - ಟಿ.ಎನ್ ಸೀತಾರಾಮ್, ನಿರ್ದೇಶಕ

'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

ನಿಮ್ಮ ಸೆಟ್ ನಲ್ಲಿ ಕೆಲಸ ಮಾಡುವಾಗ ಎಲ್ಲರೂ ಭಯ ಪಡ್ತಾರಂತೆ?

''ಭಯ ಯಾಕೆ ಅಂತ ನನಗೂ ಗೊತ್ತಿಲ್ಲ. ಬಹುಶಃ ನಾನು ಸ್ವಲ್ಪ ಸೀನಿಯರ್ ಎನ್ನುವ ಕಾರಣಕ್ಕೆ ಅನ್ಸುತ್ತೆ. ಭಯ ಇರುವುದು ನನಗೂ ಇಷ್ಟ. ನಾನು ಸೆಟ್ ನಲ್ಲಿ ಕೆಲಸ ಮುಗಿಯವರೆಗೂ ನಾನು ಗಂಭೀರವಾಗಿರುತ್ತೇನೆ. ಆದ್ರೆ, ನಾನು ಮಾಡುವುದೆಲ್ಲ ತಮಾಷೆ ಧಾರಾವಾಹಿಗಳೇ ಹೆಚ್ಚು'' - ಟಿ.ಎನ್ ಸೀತಾರಾಮ್, ನಿರ್ದೇಶಕ

ಟಿಎನ್ನೆಸ್ ಅವರ ಕಾಫಿತೋಟದ ಸಾಹಿತ್ಯಕ್ಕೆ ಸಂಗೀತ ನೀಡಿ

'ಕಾಫಿತೋಟ'ದಲ್ಲಿ ಹೆಚ್ಚು ಯುವ ಕಲಾವಿದರೇ ಇದ್ದಾರೆ?

''ನಮ್ಮದು ಕಡಿಮೆ ಬಜೆಟ್ ಸಿನಿಮಾ. ಸ್ಟಾರ್ ಗಳು ಚೆನ್ನಾಗಿ ಅಭಿನಯಿಸುತ್ತಾರೆ. ಆದ್ರೆ, ಅಷ್ಟೊಂದು ದೊಡ್ಡ ಬಜೆಟ್ ಸಿನಿಮಾ ನಮ್ಮದಲ್ಲ. ಈ ಚಿತ್ರದಲ್ಲಿ ತೀರಾ ಹೊಸಬರು ಇಲ್ಲ, ತೀರಾ ಅನುಭವಿಗಳು ಇಲ್ಲ. ಹೊಸ ಪ್ರತಿಭೆ ರಾಹುಲ್, ಅನುಭವಿ ಕಲಾವಿದ ರಘುಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಹಿರಿಯ ನಟಿ ಅಂಬಿಕಾ, ರಾಜೇಶ್ ನಟರಂಗ, ಬಿ.ಸಿ ಪಾಟೀಲ್, ಸುಧಾ ಬೆಳವಾಡಿ, ಅಪೇಕ್ಷ ಪುರೋಹಿತ್ ಮತ್ತು ನಾನು ಕೂಡ ಒಂದು ಪಾತ್ರ ಮಾಡಿದ್ದೀನಿ'' - ಟಿ.ಎನ್ ಸೀತಾರಾಮ್, ನಿರ್ದೇಶಕ

'ಕಾಫಿತೋಟ'ದ ತಾಂತ್ರಿಕ ತಂಡದ ಬಗ್ಗೆ ಹೇಳಿ?

''ನಾನು ಈ ಚಿತ್ರಕ್ಕಾಗಿ ಮೊದಲು ಆಯ್ಕೆ ಮಾಡಿಕೊಂಡಿದ್ದು ನನ್ನ ನೆಚ್ಚಿನ ಛಾಯಾಗ್ರಾಹಕ ಅಶೋಕ್ ಕಶ್ಯಪ್, ಒಂದು ಹಾಡಿಗೆ ಮುಕುಂದ್ ಮಿಧುನ್ ಸಂಗೀತ ನೀಡಿದ್ದಾರೆ, ಅನೂಪ್ ಸಿಳೀನ್ ಅವರು ಹಿನ್ನೆಲೆ ಸಂಗೀತ, 'ಸಿದ್ಲಿಂಗು' ಖ್ಯಾತಿಯ ಅಕ್ಷಯ.ಪಿ.ರಾವ್ ಅವರು ಸಂಕಲನವಿದೆ''- ಟಿ.ಎನ್ ಸೀತಾರಾಮ್, ನಿರ್ದೇಶಕ

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಸವಾಲಾಗಿದೆ. ನೀವೇನು ಹೇಳ್ತೀರಾ?

''ಬಹಳ ಕಷ್ಟದ ಕಾಂಪಿಟೇಶನ್. ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ನಾವು ಹೊಸಲು ಮೇಲೆ ನಿಂತ್ಕೊಂಡು ಬರುವುದಾ, ಬೇಡವಾ ಎನ್ನುವುದಕ್ಕೆ ಆಗುವುದಿಲ್ಲ. ಅಷ್ಟು ದೂರದಿಂದ ಬಂದಿದ್ದೀವಿ. ಈಗ ಬಾಗಿಲು ಹೊಸಲಿನಲ್ಲಿ ನಿಂತಿದ್ದೀವಿ. ಒಳಗೆ ಬರಲೇಬೆಕು. ಅದೇನೆ ಆದ್ರೂ ಅನುಭವಿಸೋಣ'' - ಟಿ.ಎನ್ ಸೀತಾರಾಮ್, ನಿರ್ದೇಶಕ

'ಡ್ರಾಮಾ ಜೂನಿಯರ್ಸ್' ಅನುಭವ ಹೇಗಿದೆ ?

''ತುಂಬಾ ಚೆನ್ನಾಗಿದೆ. ಮೊದಲನೇ ಆವೃತ್ತಿಯಲ್ಲಿ ಫಿನಾಲೆಗೆ ಬಂದಿದ್ದ ಅಮೋಘ ನಮ್ಮ 'ಕಾಫಿತೋಟ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಆದ್ರೆ, ನಾನು 'ಡ್ರಾಮಾ ಸೀನಿಯರ್'. ತುಂಬಾ ಸಂತೋಷ ಆಗ್ತಿದೆ'' - ಟಿ.ಎನ್ ಸೀತಾರಾಮ್, ನಿರ್ದೇಶಕ

ನಿಮ್ಮ ಪ್ರಕಾರ 'ಕಾಫಿತೋಟ' ಯಾಕೆ ನೋಡ್ಬೇಕು?

''ಕಾಫಿತೋಟ ಚಿತ್ರವನ್ನ ನೋಡಲು ಎರಡು ಪ್ರಮುಖ ಕಾರಣ. ಯಾವುದೇ ರೀಮೇಕ್ ಮಾಡದೆ ಸ್ವಂತ ಸಿನಿಮಾ ಮಾಡಿದ್ದೀನಿ. ಶುದ್ಧವಾದ ಸಿನಿಮಾ ಗೆಲ್ಲಬೇಕು ಎಂಬ ಕಾರಣಕ್ಕೆ ಈ ಸಿನಿಮಾ ನೋಡಿ. ಇನ್ನೊಂದು ನನ್ನ ಧಾರಾವಾಹಿಗಳಲ್ಲಿ ಎಷ್ಟು ರೋಚಕತೆ ಇದೆಯೋ ಅಷ್ಟು ಸಸ್ಪೆನ್ಸ್-ಥ್ರಿಲ್ಲರ್ ಈ ಸಿನಿಮಾದಲ್ಲೂ ನೋಡಬಹುದು ಅದಕ್ಕಾಗಿ ಈ ಸಿನಿಮಾ ನೋಡಿ '' - ಟಿ.ಎನ್ ಸೀತಾರಾಮ್, ನಿರ್ದೇಶಕ

English summary
Director Tn Seetharam Exclusive Interview About His Directional Movie 'Kaafi thota'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada