For Quick Alerts
  ALLOW NOTIFICATIONS  
  For Daily Alerts

  ಪೊಲೀಸ್ ಪಾತ್ರಗಳಿಗೆ ಫೇಮಸ್ ಎಸ್ಕಾರ್ಟ್ ಶ್ರೀನಿವಾಸ್

  |

  ಇವರು ಆರಡಿ ಎತ್ತರದ ಆಜಾನುಬಾಹು. ಹೆಸರು ಎಸ್ಕಾರ್ಟ್ ಶ್ರೀನಿವಾಸ್. ಬಹುಶಃ ಎಸ್ಕಾರ್ಟ್ ನೀಡಬಲ್ಲವರೆಂದೇ ಆ ಹೆಸರು ಬಂತೇನೋ ಎನಿಸದಿರದು. ಆದರೆ ಹೆಸರಿನ ಜತೆಗೆ ಎಸ್ಕಾರ್ಟ್ ಸೇರಲು ಕಾರಣ ಬೇರೆಯೇ ಇದೆ. ಮೂರು ದಶಕಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟಾಗ ಶ್ರೀನಿವಾಸ ಹೆಸರಿನ ಕಲಾವಿದರು ಸಾಕಷ್ಟು ಜನ ಇದ್ದರು. ಹಾಗಾಗಿ ಇಲ್ಲದ ಗೊಂದಲ ಸೃಷ್ಟಿಯಾಗಬಾರದೆಂದು ಅವರು ತಮ್ಮ ಹೆಸರಿನ ಜತೆಗೆ ಎಸ್ಕಾರ್ಟ್' ಎನ್ನುವುದನ್ನು ಸೇರಿಸಿಕೊಳ್ಳುವಂತೆ ನಿರ್ದೇಶಕ ರವಿಕಿರಣ್ ಸೂಚಿಸಿದ್ದರು.

  ಯಾಕೆಂದರೆ ಶ್ರೀನಿವಾಸ್ ಅವರು ಆ ದಿನಗಳಲ್ಲಿ ಎಸ್ಕಾರ್ಟ್' ಎನ್ನುವ ಅಟೊಮೊಬೈಲ್ ಸಂಸ್ಥೆಯೊಂದರಲ್ಲಿ ಶಿಫ್ಟ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಎಸ್ಕಾರ್ಟ್ ಶ್ರೀನಿವಾಸ್ ಎಂದರೆ ಸಿನಿಮಾ ಸೀರಿಯಲ್ ರಂಗದಲ್ಲಿ ಎಲ್ಲರೂ ಗುರುತಿಸುವಂಥ ಕಲಾವಿದ. ಹೆಚ್ಚಾಗಿ ಪೊಲೀಸ್ ಅಧಿಕಾರಿಯ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ಎಸ್ಕಾರ್ಟ್ ಶ್ರೀನಿವಾಸ್ ಪ್ರಸ್ತುತ ತೆರೆಯಲ್ಲಿರುವ ಆಯುಷ್ಮಾನ್ ಭವ, ಬ್ರಹ್ಮಚಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿ' ಧಾರಾವಾಹಿಯಲ್ಲಿಯೂ ಪಾತ್ರವಾಗಿರುವ ಎಸ್ಕಾರ್ಟ್ ಶ್ರೀನಿವಾಸ್ ಜತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

   ಕಲಾರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು?

  ಕಲಾರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು?

  ಕಾಲೇಜ್ ದಿನಗಳಿಂದಲೇ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. 1986ರಲ್ಲಿ ಗಂಗೇಗೌಡರ ಮೂಲಕ ಎ.ಎಸ್ ಮೂರ್ತಿಯವರ ಚೆಂದುಳ್ಳಿ ಚೆಲುವೆಯವರ ನಾಟಕದಲ್ಲಿ ನಾಯಕನಾದೆ. ಬಳಿಕ ಬೇರೆ ಬೇರೆ ನಾಟಕಗಳಲ್ಲಿ ಅವಕಾಶ ಸಿಗುತ್ತಿತ್ತು. ಆದರೆ ಮೊದಲ ಸಣ್ಣಪುಟ್ಟ ಪಾತ್ರಗಳನ್ನಷ್ಟೇ ನೀಡುತ್ತಿದ್ದರು. ಕೃಷ್ಣರಾಜೇಂದ್ರ ಕಲಾಸಂಘದಲ್ಲಿ ಒಂದಷ್ಟು ಹುಡುಗರಿದ್ದೆವು. ಕಲಾಪುಂಜ ತೇಜಸ್ವಿ ಕಲಾವಿದರು ಎನ್ನುವ ಸಂಸ್ಥೆಯೊಂದನ್ನುಸ್ಥಾಪಿಸಿದೆವು. ಹಾಸ್ಯಕ್ಕೆ ಸಂಬಂಧಿಸಿದ `ಮುದುಕನ ಮದುವೆ'ಯಂಥ ಹಲವಾರು ನಾಟಕಗಳನ್ನು ಮಾಡಿದೆವು. ಮಾಸ್ಟರ್ ಹಿರಣ್ಣಯ್ಯನವರು ಪೇಪರ್ ಓದಿ ಆಗಿನ ಸನ್ನಿವೇಶಗಳನ್ನು ನಾಟಕಗಳಲ್ಲಿ ಬಳಸುವಂತೆ ನನಗೆ ಸೂಚಿಸಿದ್ದರು. ಆ ಎಲ್ಲ ಸಲಹೆಗಳೊಂದಿಗೆ ನಾನೇ ಮುದುಕನಾಗಿ ನಾಟಕದ ನೂರು ಪ್ರದರ್ಶನಗಳನ್ನು ನೀಡಿದ್ದೆ.

   ನಾಟಕದಿಂದ ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಬಗ್ಗೆ ಹೇಳಿ

  ನಾಟಕದಿಂದ ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಬಗ್ಗೆ ಹೇಳಿ

  ನನಗೆ ಸೀರಿಯಲ್, ಸಿನಿಮಾ ಕ್ಷೇತ್ರಕ್ಕೆ ಹೇಗೆ ಪ್ರವೇಶಿಸುವುದು ಎನ್ನುವುದು ತಿಳಿದಿರಲಿಲ್ಲ. ಯಾರ ಸಂಪರ್ಕವೂ ಇರಲಿಲ್ಲ. ವಿಶೇಷ ಎನ್ನುವ ಹಾಗೆ ಎಎಸ್ ಮೂರ್ತಿಯವರದೇ ಕೃತಿಯ ಮೂಲಕ ಧಾರಾವಾಹಿ ಕ್ಷೇತ್ರಕ್ಕೂ ಕಾಲಿಟ್ಟೆ. ಅದಕ್ಕೆ ಕಾರಣ ಕರ್ನಾಟಕ ಟೆಲಿವಿಶನ್ ಅಸೋಸಿಯೇಶನ್ ನ ಅಧ್ಯಕ್ಷರಾಗಿದ್ದ ಕೆ.ಸಿ ಸುಬ್ರಹ್ಮಣ್ಯ ರಾಜು. ಅವರು ನನ್ನನ್ನು ಕರೆದು `ಮಿಸ್ ಮಾಲ' ಧಾರಾವಾಹಿಯಲ್ಲಿ ಅವಕಾಶ ನೀಡಿದರು. ಅದರ ಬಳಿಕ `ಕತೆಯಾದವರು' ಧಾರಾವಾಹಿ ಸಿಕ್ಕಿತು. ಅಲ್ಲಿಂದ ಇದುವರೆಗೆ ಹಲವಾರು ಧಾರಾವಾಹಿಗಳಲ್ಲಿ 13ಸಾವಿರ ಎಪಿಸೋಡುಗಳಷ್ಟು ನಟಿಸಿದ್ದೇನೆ. 184 ಸಿನಿಮಾಗಳಲ್ಲಿ ನಟಿಸಿದ್ದೇನೆ. ನೆಗೆಟಿವ್ ಪಾತ್ರಗಳನ್ನೇ ಮಾಡಿದ್ದೇ ಹೆಚ್ಚು.

   ಧಾರಾವಾಹಿಗಳ ವಿಚಾರದಲ್ಲಿ ನಿಮ್ಮದೊಂದು ವಿಶೇಷ ದಾಖಲೆಯೇ ಇದೆ. ಏನದು?

  ಧಾರಾವಾಹಿಗಳ ವಿಚಾರದಲ್ಲಿ ನಿಮ್ಮದೊಂದು ವಿಶೇಷ ದಾಖಲೆಯೇ ಇದೆ. ಏನದು?

  ಈ ಟಿವಿ ಕನ್ನಡದಲ್ಲಿ ರವಿಕಿರಣ್ ನಿರ್ದೇಶನದ `ಬದುಕು' ಧಾರಾವಾಹಿಯಲ್ಲಿ 13 ವರ್ಷಗಳ ಕಾಲ ನಟಿಸಿದ್ದು ಮರೆಯಲಾಗದ ಅನುಭವ. ಆದರೆ ನನ್ನ ವೈಯಕ್ತಿಕ ದಾಖಲೆಯ ವಿಚಾರಕ್ಕೆ ಬಂದರೆ ಒಂದೇ ದಿನದಲ್ಲಿ ನಾನು ಹಲವಾರು ಧಾರಾವಾಹಿಗಳ ಮೂಲಕ ಗೋಚರಿಸುತ್ತಿದ್ದುದು ವಿಶೇಷವಾಗಿತ್ತು. ಅಂದು ಬಹುತೇಕ ಎಲ್ಲ ಧಾರಾವಾಹಿಗಳಲ್ಲಿಯೂ ಪೋಷಕ ಕಲಾವಿದರು ರಿಪೀಟ್ ಆಗುತ್ತಿದ್ದರು. ಆದರೆ ನನ್ನದು ಅತಿ ಎಂದೇ ಹೇಳಬಹುದು. ಯಾಕೆಂದರೆ ಉದಯದಲ್ಲಿ ಕಾದಂಬರಿ, ಪುಣ್ಯಕೋಟಿ, ರಂಗೋಲಿ, ಈಟಿವಿಯಲ್ಲಿ ಗುಪ್ತಗಾಮಿನಿ, ಕಸ್ತೂರಿಯಲ್ಲಿ ಆಂತರ್ಯ ಹೀಗೆ ಒಂದೇ ಸಮಯದಲ್ಲಿ ಐದು ಧಾರಾವಾಹಿಗಳಲ್ಲಿ ನಟಿಸಿ ಬ್ಯುಸಿಯಾಗಿರುತ್ತಿದ್ದೆ.

   ನಿಮ್ಮನ್ನು ಕಿರುತೆರೆಯಲ್ಲಿ ಹೆಚ್ಚು ಮಂದಿ ಗುರುತಿಸಿದಂಥ ಪಾತ್ರ ಯಾವುದು?

  ನಿಮ್ಮನ್ನು ಕಿರುತೆರೆಯಲ್ಲಿ ಹೆಚ್ಚು ಮಂದಿ ಗುರುತಿಸಿದಂಥ ಪಾತ್ರ ಯಾವುದು?

  ಸುಮಾರು 60ರಷ್ಟು ಸಿನಿಮಾಗಳಲ್ಲಿ ನೆಗೆಟಿವ್ ಪೊಲೀಸ್ ಅಧಿಕಾರಿ ಪಾತ್ರವನ್ನೇ ಮಾಡುತ್ತಿದ್ದೆ. ಧಾರಾವಾಹಿಗಳಲ್ಲಿಯೂ ಅದನ್ನೇ ಕೊಡುತ್ತಿದ್ದರು. ರಂಗೋಲಿ ಶುರುವಾದಾಗ ಮತ್ತೆ ನೆಗೆಟಿವ್ ಪೊಲೀಸ್ ಪಾತ್ರಕ್ಕೆ ಕರೆದಾಗ ಮಾಡುವುದಿಲ್ಲ ಎಂದಿದ್ದೆ. ಆದರೆ ಆತ್ಮೀಯರೆಲ್ಲ ನನಗೆ ಫೋನ್ ಮಾಡಿ ಅದು ತಮಿಳಿನಲ್ಲಿ ಯಶಸ್ವಿಯಾದ ಪಾತ್ರವಾದ ಕಾರಣ ಒಪ್ಪಿಕೊಳ್ಳುವಂತೆ ಹೇಳಿದರು. ನಿಜ ಹೇಳಬೇಕೆಂದರೆ ಅದು ಒಂದು ಸ್ಯಾಡಿಸ್ಟ್ ಪಾತ್ರವಾಗಿದ್ದ ಕಾರಣ ನನಗೆ ಇಷ್ಟವಾಗಿರಲಿಲ್ಲ. ಆದರೆ 6 ವರ್ಷಗಳ ಕಾಲ ನಟಿಸಿದ ಧಾರಾವಾಹಿಯನ್ನು ಇದೀಗ 12 ವರ್ಷಗಳ ಬಳಿಕ ಕೂಡ ಜನ ನೆನಪಿಸಿಕೊಳ್ಳುತ್ತಿದ್ದಾರೆ.

   ಇತರ ಜನಪ್ರಿಯ ಕಲಾವಿದರೊಂದಿಗೆ ನಟಿಸಿದ ಅನುಭವದ ಬಗ್ಗೆ ಹೇಳಿ

  ಇತರ ಜನಪ್ರಿಯ ಕಲಾವಿದರೊಂದಿಗೆ ನಟಿಸಿದ ಅನುಭವದ ಬಗ್ಗೆ ಹೇಳಿ

  ನಾನು ನಟಿಸಿದ ಮೊದಲ ಸಿನಿಮಾ ಭೂದಾಳ ಕೃಷ್ಣಮೂರ್ತಿಯವರ ನಿರ್ದೇಶನದ `ಶುಭಲಗ್ನ.' ಅದರಲ್ಲಿ ಶಶಿಕುಮಾರ್ ನಾಯಕರು. ನನಗೆ ಅದರಲ್ಲಿ ಒಂದು ಡಾಕ್ಟರ್ ಪಾತ್ರ ದೊರಕಿತ್ತು. ಇದುವರೆಗೆ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ದರ್ಶನ್ ಸುದೀಪ್ ತನಕ ನಮ್ಮ ಕನ್ನಡ ಚಿತ್ರರಂಗದ ಎಲ್ಲ ನಾಯಕ ನಟರ ಜತೆಯಲ್ಲಿ ನಟಿಸಿದ್ದೇನೆ. ಜಿ.ವಿ ಅಯ್ಯರ್, ನಾಗಾಭರಣ, ಚಂದ್ರಶೇಖರ ಕಂಬಾರ, ಎಸ್ ನಾರಾಯಣ್ ಮೊದಲಾದ ಜನಪ್ರಿಯ ನಿರ್ದೇಶಕರ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ನನಗೆ ಅಣ್ಣಾವ್ರ ಜತೆಗೆ ನಟಿಸಿರುವುದಕ್ಕಿಂತ ಅವರಿಂದ ಸಿಕ್ಕ ಒಂದು ಪ್ರಶಂಸೆ ಎಂದಿಗೂ ಮರೆಯಲಾಗದಂಥದ್ದು. ಆ ಧಾರಾವಾಹಿಯ ಹೆಸರು `ಅದೃಷ್ಟದ ಹೋರಾಟ'. ಡಾ.ರಾಜ್ ಕುಮಾರ್ ಅವರನ್ನು ನಾಯಕರನ್ನಾಗಿಸಿ ಜಿ.ವಿ ಅಯ್ಯರ್ ನಿರ್ದೇಶಿಸಬೇಕಿದ್ದ ಚಿತ್ರವಾಗಿತ್ತು. ಅದನ್ನು ಅಯ್ಯರ್ ಅವರು ತಮ್ಮ ಪುತ್ರನನ್ನೇ ನಾಯಕನಾಗಿಸಿ ದೂರದರ್ಶನದಲ್ಲಿ ಧಾರಾವಾಹಿ ಮಾಡಿದ್ದರು. ಅದರಲ್ಲಿ ದಳವಾಯಿಯ ಪಾತ್ರ ಮಾಡಿದ್ದೆ. ಅಣ್ಣಾವ್ರು ತಮ್ಮ ಮನೆಗೆ ಕರೆಸಿ ಪರ್ಸನಲ್ ಕೋಣೆಯಲ್ಲಿ ಕುಳ್ಳಿರಿಸಿ ಇಡೀ ದಿನ ಮೆಚ್ಚಿ ಮಾತನಾಡಿದ್ದರು.

   ಸಿನಿಮಾದಲ್ಲಿ ನಿಮಗೆ ಎದುರಾದ ಅವಿಸ್ಮರಣೀಯ ಅನುಭವ ಏನು?

  ಸಿನಿಮಾದಲ್ಲಿ ನಿಮಗೆ ಎದುರಾದ ಅವಿಸ್ಮರಣೀಯ ಅನುಭವ ಏನು?

  ಮಠ ಚಿತ್ರದಲ್ಲಿ ಶನಿ ಮಹಾತ್ಮನ ಪಾತ್ರಕ್ಕಾಗಿ ಕಲಾವಿದರನ್ನು ಹುಡುಕಾಡುತ್ತಿದ್ದರು. ನಾನು ನಾಟಕದಲ್ಲಿ ಮಾಡಿದ್ದಂಥ ಪಾತ್ರದ ಫೊಟೋವನ್ನು ನಿರ್ದೇಶಕರಿಗೆ ತೋರಿಸಿದೆ. ಅವರಿಗೆ ಅದು ತುಂಬ ಇಷ್ಟವಾಯಿತು. ಅವರು ಸಂಭಾಷಣೆ ಕೊಟ್ಟಾಗ ನನಗೆ ಸರಿ ಹೋಗುತ್ತಿಲ್ಲ ಎಂದು ಹೇಳಿದೆ. ಅದಕ್ಕೆ ಅವರು ನಾನೇ ಒಬ್ಬ ರೈಟರ್, ನನ್ನ ಸಂಭಾಷಣೆಯೇ ಸರಿಯಾಗಿಲ್ಲ ಎಂದರೆ ಹೇಗೆ ಎಂದರು. ಆದರೆ ನಾನು ನಾಟಕದಲ್ಲಿದ್ದ ಸಂಭಾಷಣೆಯನ್ನೇ ಸಿನಿಮಾದ ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿ ಹೇಳಿದಾಗ ಇಷ್ಟಪಟ್ಟರು.

   ಸಿನಿಮಾರಂಗದಲ್ಲಿ ನಿಮ್ಮ ಕನಸು ಏನು?

  ಸಿನಿಮಾರಂಗದಲ್ಲಿ ನಿಮ್ಮ ಕನಸು ಏನು?

  ಸಿನಿಮಾದವರಿಗೆ ನಾನು ಅನಿವಾರ್ಯ ಅಲ್ಲ. ನನ್ನಂಥ ಪೋಷಕನಟರು ಅಲ್ಲಿ ಸಣ್ಣಪುಟ್ಟ ಪಾತ್ರಗಳಿಗೆ ಮೀಸಲು. ಶೂಟ್ ಆದ ಮೇಲೆಯೂ ಉಳಿಯಬೇಕು ಅಂತ ಏನಿಲ್ಲ. ಆದರೂ ಸಿನಿಮಾದಲ್ಲಿ ಒಂದು ಮೇಜರ್ ವಿಲನ್ ಮಾಡಬೇಕು ಎನ್ನುವ ಕನಸು ಇದೆ. ಆ ಸಿನಿಮಾ ದೊಡ್ಡ ಹಿಟ್ ಆಗಬೇಕು ಎನ್ನುವ ಆಸೆಯಿದೆ. ಕಾಶಿ ಫ್ರಮ್ ವಿಲೇಜ್ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ದೊರಕಿತ್ತು. ಆದರೆ ಅದು ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಸಿನಿಮಾದಲ್ಲಿ ನಾನು ಇದುವರೆಗೆ ಪರದೆ ಹಂಚಿಕೊಳ್ಳದಂಥ ರವಿಚಂದ್ರನ್ ಅವರೊಂದಿಗೆ ನಟಿಸುವ ಆಕಾಂಕ್ಷೆ ಇದೆ.

  English summary
  Escort Shreenivas is famous supporting actor. He Acted 184 films and 13,000 episods of serials. Shreenivas is very much famous for his police inspector roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X