For Quick Alerts
  ALLOW NOTIFICATIONS  
  For Daily Alerts

  'ರಾಕಿ ಭಾಯ್ ಕೈಗೆ ರಾಖಿ ಕಟ್ಟುವುದೇ ಸಂಭ್ರಮ..': ಯಶ್ ಸಹೋದರಿ ನಂದಿನಿ ಸಂದರ್ಶನ

  |

  ಕೆ.ಜಿ.ಎಫ್' ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಅಭಿಮಾನಿಗಳಿಂದ ರಾಕಿ ಭಾಯ್ ಎಂದು ಕರೆಸಿಕೊಂಡಿದ್ದೇ ಹೆಚ್ಚು. ರಾಕಿ ಭಾಯ್‌ಗೆ ನಿಜ ಜೀವನದಲ್ಲಿ ಕೂಡ ಭ್ರಾತೃತ್ವದ ಬಗ್ಗೆ ಹೆಚ್ಚು ಅಭಿಮಾನವಿದೆ. ಯಶ್ ತನ್ನ ಸಹೋದರಿಯನ್ನು ಎಷ್ಟು ಇಷ್ಟಪಡುತ್ತಾರೆ ಎನ್ನುವುದನ್ನು ತಿಳಿಸಲು ಅವರ ತಂಗಿಗಷ್ಟೇ ಸಾಧ್ಯ.

  ಹಾಗಾಗಿಯೇ ರಕ್ಷಾಬಂಧನವೆನ್ನುವ ಈ ಸಹೋದರ ಪ್ರೇಮದ ಹಬ್ಬ ಯಶ್ ಅವರ ತಂಗಿ ನಂದಿನಿಗೆ ಎಷ್ಟು ಸ್ಪೆಷಲ್ ಆಗಿದೆ? ಅವರಿಗೆ ಉಳಿದ ಎಲ್ಲ ಸಂಬಂಧಗಳಿಗಿಂತ ಅಣ್ಣನೆಂದರೆ ವಿಶೇಷ ಅಕ್ಕರೆ ಯಾಕೆ? ಮೊದಲಾದ ಪ್ರಶ್ನೆಗಳನ್ನು ಫಿಲ್ಮೀಬೀಟ್' ಅವರ ಮುಂದೆ ಇಟ್ಟಾಗ ಅವರು ನೀಡಿದ ಉತ್ತರ ಆಕರ್ಷಕವಾಗಿತ್ತು.

  ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?

  ತಮ್ಮ ಬಾಲ್ಯ, ಬಳಿಕದ ದಿನಗಳು, ಮದುವೆಯ ಸಂದರ್ಭ ಮತ್ತು ಈಗ ಮಗುವಿನ ತಾಯಿಯಾದ ಮೇಲೆ ಕೂಡ ನಿರಂತರವಾಗಿರುವ ಅಣ್ಣನ ಪ್ರೀತಿ, ವಾತ್ಸಲ್ಯದ ಬಗ್ಗೆ ನಂದಿನಿ ತಮ್ಮ ಮನದ ನೂರು ಅನಿಸಿಕೆಗಳನ್ನು ಇಲ್ಲಿ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ. ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ ಸಿನಿಮಾ ಪ್ರಿಯರಿಗೆ ಈ ಸಹೋದರ ಸಂಬಂಧದ ಕತೆ ಆದರ್ಶ ಎನಿಸುವುದರಲ್ಲಿ ಸಂದೇಹವಿಲ್ಲ.

   ನಿಮ್ಮ ಮತ್ತು ಯಶ್ ನಡುವೆ ಇಷ್ಟೊಂದು ವಾತ್ಸಲ್ಯ ಬಾಲ್ಯದಿಂದಲೇ ಇತ್ತೇ?

  ನಿಮ್ಮ ಮತ್ತು ಯಶ್ ನಡುವೆ ಇಷ್ಟೊಂದು ವಾತ್ಸಲ್ಯ ಬಾಲ್ಯದಿಂದಲೇ ಇತ್ತೇ?

  ಚಿಕ್ಕವರಿರುವಾಗ ಎಲ್ಲ ಮಕ್ಕಳು ಜಗಳವಾಡುವುದೇ ಹೆಚ್ಚು. ನಮಗಂತೂ ವಯಸ್ಸಲ್ಲಿ ಒಂದೇ ವರ್ಷದ ವ್ಯತ್ಯಾಸ ಇದ್ದಿದ್ದು. ಆದರೆ ವಿಶೇಷ ಏನೆಂದರೆ ನಾವಿಬ್ಬರು ಜಗಳ ಮಾಡಿದ್ದು ತುಂಬಾ ಕಡಿಮೆ. ಬಹುಶಃ ನನ್ನನ್ನು ಅವನು ಚಿಕ್ಕದಾಗಿ ಕಾಡಿದ್ರೂ ನಾನು ತಕ್ಷಣ ಡ್ಯಾಡಿಗೆ ಹೇಳ್ತೀನಿ ಮತ್ತು ಅವರು ಹೊಡೆಯುತ್ತಾರೆ ಎನ್ನುವ ಭಯಕ್ಕೆ ಜಗಳ ಆಡ್ತಾ ಇರಲಿಲ್ಲ ಅಂತಾನೇ ಇಟ್ಕೊಳ್ಳೋಣ; ಆದರೆ ಪ್ರೀತಿ ಇಲ್ಲ ಅಂದರೆ ಎಲ್ಲ ದಿನವೂ ಅದೇ ರೀತಿ ನಡೆಯೋಕೆ ಸಾಧ್ಯವೇ ಇರುತ್ತಿರಲಿಲ್ಲ. ಹಾಗಾಗಿ ಅವನಿಗೆ ಆಗಲೇ ನನ್ನ ಮೇಲೆ ನಿಜವಾದ ವಾತ್ಸಲ್ಯ ಇತ್ತು ಅಂತ ಅಂದುಕೊಂಡಿದ್ದೀನಿ. ಮುಖ್ಯವಾಗಿ ತಂಗಿಯಾಗಿ ನನ್ನನ್ನು ಹೇಗೆ ಕೇರ್ ಮಾಡಬೇಕು ಎನ್ನುವುದನ್ನು ಬೇಸಿಕಲಿ ನಮ್ಮ ಮನೆಯಲ್ಲಿ ಕಲಿಸಿದ್ದಾರೆ. ನನಗೂ ಅಷ್ಟೇ; ಅಣ್ಣ ಎಂದರೆ ಎಷ್ಟು ಗೌರವ ಕೊಡಬೇಕು ಎನ್ನುವುದನ್ನು ಅಮ್ಮಾನೇ ಕಲಿಸಿರೋದು. ಹಾಗಾಗಿ ಬುದ್ಧಿ ಬರುವ ಮೊದಲೇ ಆ ಕಾಳಜಿ ನಮ್ಮೊಂದಿಗೆ ಬೆಳೆದು ಬಂದಿದೆ. ಉದಾಹರಣೆಗೆ ನಾನು ಎಲ್ಲಾದರೂ ಹಳ್ಳಿ ಕಡೆ ಇರುವಾಗ ಕಸಿನ್ಸ್ ಜತೆ ಸೇರಿ ಕೆಲಸ ಮಾಡ್ತಾ ಇರೋದು ಕಂಡರೆ ''ಏಯ್, ನನ್ನ ತಂಗಿ ಕೈಲಿ ಯಾಕೆ ಮಾಡಿಸ್ತೀರ? ಅವಳಿಗೆ ಇಂಥ ಕೆಲಸ ಮಾಡಿ ಅಭ್ಯಾಸ ಇಲ್ಲ.. ಮನೇಲಿ ನೀರಿಲ್ಲ ಅಂದರೆ ಹೇಳಿ ನಾನೇ ತಂದು ಕೊಡ್ತೀನಿ'' ಎಂದು ಸಹಾಯಕ್ಕೆ ಬರ್ತಿದ್ದ.

   ಬಾಲ್ಯದಲ್ಲಿ ಆಟದ ವೇಳೆಯೂ ಅಣ್ಣನೊಂದಿಗೆ ಜಗಳವಾಗಿಲ್ಲವೇ?

  ಬಾಲ್ಯದಲ್ಲಿ ಆಟದ ವೇಳೆಯೂ ಅಣ್ಣನೊಂದಿಗೆ ಜಗಳವಾಗಿಲ್ಲವೇ?

  ಆಟದ ವಿಷಯಕ್ಕೆ ಬಂದರೆ ಅವನು ಯಾವಾಗಲೂ ಹುಡುಗರ ಜತೆಗೆ ತುಂಬಾನೇ ಆಡೋನು. ನಾನು ಚಿಕ್ಕವಳಾಗಿದ್ದಿದ್ದರಿಂದ ನನ್ನ ಆಟಕ್ಕೆ ಸೇರಿಸ್ತಾ ಇರಲಿಲ್ಲ. ಆದರೆ ಅಪ್ಪ ಅಮ್ಮ ಬೈಯ್ತಾರೆ ಅಂತ ಜತೆಗೆ ಕರ್ಕೊಂಡು ಹೋಗೋನು. ಅವನ ಫ್ರೆಂಡ್ಸ್ ಎಲ್ಲ ನನ್ನ ತಂಗಿ ಥರಾನೇ ಟ್ರೀಟ್ ಮಾಡೋರು. ಆದರೆ ನನಗೆ ಆಗ ಕ್ರಿಕೆಟ್, ಚಿನ್ನಿದಾಂಡು ಇವೆಲ್ಲ ಏನೂ ಆಟ ಆಡೋಕೆ ಬರ್ತಾ ಇರಲಿಲ್ಲ. ಹಾಗಾಗಿ, ಅವರೆಲ್ಲ "ಅಲ್ನೋಡು ಕಾಗೆ" ಅಂತ ಎಲ್ಲೆಲ್ಲೋ ತೋರಿಸಿ ನನ್ನಿಂದ ಬಚ್ಕಿಟ್ಕೋತಾ ಇದ್ದರು. ನಾನು ಯಾರೂ ಕಾಣಿಸ್ದೆ ಹೋದಾಗ ಅತ್ಕೊಂಡು ಮನೆಗೆ ಬಂದು ಕಂಪ್ಲೇಂಟ್ ಮಾಡ್ತಿದ್ದೆ. ಚಿಕ್ಕ ವಯಸ್ಸಲ್ಲಿ ನಾನು ನಮ್ಮಣ್ಣ ಒಂದು ಪಾರ್ಕ್‌ಗೆ ಹೋಗಿ ಆಟ ಆಡ್ತಿದ್ದೆವು. ಒಮ್ಮೆ ನಾನು ನಮ್ಮಣ್ಣ ಮತ್ತು ಕೆಲಸದ ಹುಡುಗಿ ಮೂರು ಜನ ಹೋಗಿದ್ದೆವು. ನಾನು ಪಾರ್ಕಲ್ಲಿ ಮೇಲಿಂದ ಕೆಳಗೆ ಬಿದ್ದು ಏಟು ಮಾಡ್ಕೊಂಡಿದ್ದೆ. ಬಿದ್ದಿರೋ ಏಟಿಗೆ ನನ್ನ ಹಲ್ಲೇ ಮುರಿದು ಹೋಗಿತ್ತು. ಆ ಹೊತ್ತಲ್ಲಿ ಓಡ್ಕೊಂಡು ಬಂದು, ಅಲ್ಲಿಂದ ಅವನೇ ಮನೆ ತನಕಾನೂ ಕಾಳಜಿಯಿಂದ ಕರೆದುಕೊಂಡು ಬಂದಿದ್ದ. ಅದೊಂದು ಇನ್ಸಿಡೆಂಟು ಯಾವತ್ತೂ ಮರೆಯೋಕಾಗಲ್ಲ.

  ಯಶ್ ಮನೆಯಲ್ಲಿ ಸಂಭ್ರಮ: ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನ

   ಮದುವೆ ಬಳಿಕ ಅಣ್ಣನನ್ನು ಎಷ್ಟು ಮಿಸ್ ಮಾಡಿಕೊಂಡಿರಿ?

  ಮದುವೆ ಬಳಿಕ ಅಣ್ಣನನ್ನು ಎಷ್ಟು ಮಿಸ್ ಮಾಡಿಕೊಂಡಿರಿ?

  ಮೊದಲೆಲ್ಲ ಅವನ ಜತೆಗೆ ತುಂಬಾ ಡಿಪೆಂಡ್ ಆಗಿರ್ತಿದ್ದೆ. ಆದರೆ ಇಂಡಸ್ಟ್ರಿಗೆ ಬಂದ ಮೇಲೆ ಅವನಿಂದ ದೂರವಾಗಿರುವುದು ಅಭ್ಯಾಸ ಆಯಿತು. ಫೋನಲ್ಲಿ ಮಾತನಾಡುತ್ತಿದ್ದೆವು. ನನ್ನ ಮೇಲಿನ ಪ್ರೀತಿಯನ್ನೆಲ್ಲ ನನ್ನ ಮದುವೆಯನ್ನು ಚೆನ್ನಾಗಿ ಮಾಡಿರೋದರಲ್ಲಿಯೂ ವ್ಯಕ್ತವಾಗಿದೆ. ಈ ಮಾತು ಯಾಕೆ ಹೇಳುತ್ತಿದ್ದೇನೆ ಅಂದರೆ, ನನ್ನ ಮದುವೆ ಹೇಗಾಯ್ತು ಅಂತ ಇಡೀ ಕರ್ನಾಟಕಕ್ಕೆ ಗೊತ್ತಿರುವ ವಿಷಯ. ಯಾಕೆಂದರೆ, ಅದನ್ನು ಟಿ.ವಿಯಲ್ಲೆಲ್ಲ ತೋರಿಸಿದ್ದಾರೆ. ಆದರೆ ಸಹಜವಾಗಿ ಅಣ್ಣನ ಮದುವೆ ತರಹ ತೋರಿಸಿಲ್ಲ. ನಿಜ ಹೇಳಬೇಕೆಂದರೆ ಆತನ ಮದುವೆಗಿಂತ ಚೆನ್ನಾಗಿ ಆಗಿರೋದೇ ನನ್ನ ಮದುವೆ. ಅಂದರೆ ಅಣ್ಣನ ಮದುವೆಗೆ ಜನ ಜಾಸ್ತಿ ಇದ್ದರೇ ಹೊರತು, ಸಾಂಪ್ರದಾಯಿಕವಾಗಿದ್ದ ಆಚರಣೆಗಳು, ನಮಗಿದ್ದ ಖುಷಿ, ಖರ್ಚು ಎಲ್ಲದರಲ್ಲಿಯೂ ನನ್ನ ಮದುವೆಯೇ ಚೆನ್ನಾಗಾಗಿತ್ತು. ಅದಕ್ಕೆ ಕಾರಣ ಕೂಡ ಅಣ್ಣನೇ. ಆತ ಸ್ವತಃ ನಿಂತುಕೊಂಡು ನನ್ನ ಮದುವೆ ಚೆನ್ನಾಗಿರಬೇಕು ಎಂದು ಮಾಡಿದ ಮದುವೆ ಅದು. ಅವನಿಗೆ ಅಂತ ಮಾಡಿಕೊಂಡಾಗ ಅದು ನಾವು ಮಾಡಿದ್ದರಿಂದ ನಮಗದು ಕಡಿಮೆ ಅಂತ ಅನಿಸಿರಲಿಕ್ಕೂ ಸಾಕು! ಬಹುಶಃ ವಿಪರೀತವಾಗಿ ಯಾರನ್ನೂ ಕರೀದೇ ಇದ್ದಿದ್ದೂ ಕೂಡ ನನ್ನ ಮದುವೆ ಅಷ್ಟು ಅಚ್ಚುಕಟ್ಟಾಗಲು ಕಾರಣ ಇರಬಹುದು. ಆದರೆ ನನ್ನ ಪ್ರಕಾರ ಅಣ್ಣ ಮಾಡಿಸಿದ ನನ್ನ ಮದುವೆಯೇ ಚೆನ್ನಾಗಿತ್ತು. ಅದರ ಬಗ್ಗೆ ಇಂದಿಗೂ ಬಂದ ಗಣ್ಯರಿಂದ ಹಿಡಿದು, ನಮ್ಮ ಕೆಲಸದ ಹುಡುಗರ ತನಕ ಪ್ರತಿಯೊಬ್ಬರೂ ನನ್ನ ಮದುವೆಯ ವ್ಯವಸ್ಥೆಯ ಬಗ್ಗೆ ನೆನಪಿಸಿಕೊಂಡು ಮಾತನಾಡ್ತಾರೆ.

   ಈ ಬಾರಿಯ ರಕ್ಷಾ ಬಂಧನದ ವಿಶೇಷ ಏನು?

  ಈ ಬಾರಿಯ ರಕ್ಷಾ ಬಂಧನದ ವಿಶೇಷ ಏನು?

  ಈ ಸಲ ಎರಡೆರಡು ಕಾರಣಗಳಿಗಾಗಿ ವಿಶೇಷ. ಒಂದು ನಾನು ಎರಡನೇ ಮಗುವಿನ ತಾಯಿಯಾಗಿದ್ದೇನೆ. ಆಗ ಲಾಕ್ಡೌನ್ ಇದ್ದರೂ ಬೆಂಗಳೂರಿನಿಂದ ಹಾಸನದಲ್ಲಿರುವ ಮನೆ ತನಕ ಬಂದು ನೋಡ್ಕೊಂಡು ಹೋಗಿದ್ದ. ಇನ್ನು ಸಿನಿಮಾಗಾಗಿ ಈಗ ತಾನೇ ವರ್ಕೌಟು, ಜಿಮ್ ಎಲ್ಲ ಶುರು ಮಾಡಿದ್ದಾನೆ. ಅಷ್ಟು ಶಿಸ್ತಾಗಿ ಡಯೆಟ್ಟಲ್ಲಿ ಇರಬೇಕಾದರೆ ಹಂಗೆಲ್ಲ ಎಲ್ಲೂ ಹೋಗುವಂತೆ ಇಲ್ಲ. ಆದರೆ ಅದನ್ನೆಲ್ಲ ಬಿಟ್ಟು, ನನಗೋಸ್ಕರ ಅಂತಾನೇ ಬರ್ತಿದ್ದಾರೆ. ಇವತ್ತು ಬಂದು ಇವತ್ತು ಸಂಜೇನೇ ಹೊಡ್ತಾರಂತೆ. ಹಾಗಾಗಿ ನನಗೆ ಇವತ್ತು ಸ್ಪೆಷಲ್ ಡೇ. ಅಣ್ಣನ ಜತೆಗೆ ಅಣ್ಣನ ಒಂದಷ್ಟು ಸ್ನೇಹಿತರು ಕೂಡ ನನ್ನನ್ನು ಸ್ವಂತ ತಂಗಿಯಂತೆ ಇಷ್ಟಪಡ್ತಾರೆ. ಅವರಿಗೂ ನಾಡಿನ ಎಲ್ಲ ಸಹೋದರರಿಗೂ ನಿಮ್ಮ ಮೂಲಕ ರಕ್ಷಾ ಬಂಧನದ ಶುಭಾಶಯಗಳು.

  'ಅದು ನಮ್ಮ ಸಿನಿಮಾ ವೃತ್ತಿಯ ಆರಂಭವಷ್ಟೇ ಆಗಿರಲಿಲ್ಲ': ಮೊದಲ ಸಿನಿಮಾ ಸ್ಮರಿಸಿದ ಯಶ್

  English summary
  Rocking Star Yash’s Sister Nandini talks about her love and care on brother. Special interview on the occasion of Raksha Bandhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X