For Quick Alerts
  ALLOW NOTIFICATIONS  
  For Daily Alerts

  ನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿ

  |

  ರಕ್ಷಿತ್ ಶೆಟ್ಟಿ ಅವರನ್ನು ಜಾಮೀನು ರಹಿತವಾಗಿ ಬಂಧಿಸುವಂತೆ ಪ್ರಕರಣ ದಾಖಲಾಗಿದೆ. ಹಾಗಾಗಿ ಅವರು ಹೆದರಿಕೊಂಡು ತಲೆ ಮರೆಸಿದ್ದಾರೆ ಎನ್ನುವಂಥ ಸುದ್ದಿ ಹರಿದಾಡಿತ್ತು. ಆದರೆ ತಾವು ಸದಾ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿರುವುದನ್ನು ನೆನಪಿಸಿರುವ ರಕ್ಷಿತ್ ಶೆಟ್ಟಿ ಪ್ರಸ್ತುತ ಪಂಜಾಬ್ ನಲ್ಲಿ ನಡೆಯುತ್ತಿರುವ ಚಾರ್ಲಿ 777' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

  ಫ್ಯಾನ್ಸ್ ಮಾತು ಕೇಳಿ ಬೆಚ್ಚಿಬಿದ್ದ ನವ ದಂಪತಿ | Niveditha | Chandan Shetty | Honeymoon

  ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡಿನ ಟ್ರ್ಯಾಕ್ ಬಳಸಲಾಗಿದೆ ಎನ್ನುವ ಕಾರಣ ನೀಡಿ ಲಹರಿ ಸಂಸ್ಥೆ ರಕ್ಷಿತ್ ಶೆಟ್ಟಿ, ಅವರ ಪರಮ್ವ ಸಂಸ್ಥೆ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಮೇಲೆ ಪ್ರಕರಣ ದಾಖಲಿಸಿತ್ತು. ಆದರೆ ಒಂದು ಬಾರಿ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದ ರಕ್ಷಿತ್ ಆ ಘಟನೆಯನ್ನು ಮರೆತಿರುವಾಗ, ಮತ್ತೊಂದು ಬಾರಿ ಅದೇ ವಿಚಾರದಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿರುವ ಸುದ್ದಿ ಬಂದಿದೆ! ಅದಕ್ಕೆ ರಕ್ಷಿತ್ ನೀಡಿದ ಪ್ರತಿಕ್ರಿಯೆ ಏನು? ಚಾರ್ಲಿ 777' ಸಿನಿಮಾ ಯಾವ ಹಂತದಲ್ಲಿದೆ? ಮೊದಲಾದ ಪ್ರಶ್ನೆಗಳಿಗೆ ಉತ್ತರವಾಗಿ ರಕ್ಷಿತ್ ಶೆಟ್ಟಿ ಜತೆ 'ಫಿಲ್ಮೀಬೀಟ್' ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.

  ಕಿರಿಕ್ ಪಾರ್ಟಿ ವಿವಾದ

  ಕಿರಿಕ್ ಪಾರ್ಟಿ ವಿವಾದ

  * ನಿಮ್ಮ ಮೇಲೆ ಬಂಧನದ ಆದೇಶ ಹೊರಟಿರುವ ಕಾರಣ ನೀವು ತಲೆಮರೆಸಿಕೊಂಡಿದ್ದೀರಂತೆ?

  ನನ್ನ ಮೇಲೆ ಬಂಧನದ ಆದೇಶ ಬಂದಿದೆ ಎಂದಾಗಲೇ ನಾನು ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದೇನೆ. ನಾನಿರುವ ಜಾಗವನ್ನು ಹೇಳುವ ಅಗತ್ಯ ಅಲ್ಲಿ ಸೃಷ್ಟಿಯಾಗಿರಲಿಲ್ಲ. ಹಾಗಾಗಿ ಹೇಳಿರಲಿಲ್ಲ. ಆದರೆ ನಮ್ಮ ಪೋಸ್ಟ್ ಗಳನ್ನು ಗಮನಿಸಿದರೆ ಎಲ್ಲಿದ್ದೇವೆ ಎಂದು ಪೊಲೀಸರೇ ಪತ್ತೆ ಮಾಡಬಲ್ಲರು ಎನ್ನುವ ಸತ್ಯ ನನಗೆ ಗೊತ್ತಿದೆ. ಸದ್ಯಕ್ಕೆ ನಾನು ಪಂಜಾಬ್ ನಲ್ಲಿ `ಚಾರ್ಲಿ 777' ಚಿತ್ರದ ಶೂಟಿಂಗ್‌ನಲ್ಲಿದ್ದೇನೆ.

  ಪ್ರಕರಣ ದಾಖಲಾಗಿದೆ ಎಂದು ತಲೆ ಮರೆಸಿಕೊಳ್ಳಲು ನಾನು ಕೊಲೆ ಮಾಡಿ ಬಂದಿಲ್ಲ! ಮಿಗಿಲಾಗಿ ಪ್ರಕರಣ ದಾಖಲಾಗಿರುವುದೇ ಗೊತ್ತಿರಲಿಲ್ಲ. ಮೊದಲ ಬಾರಿ ಪ್ರಕರಣ ದಾಖಲಾದಾಗ ನಾವು ಅವರ ವಿರುದ್ಧ ಗೆಲುವು ಕಂಡಿದ್ದೆವು. ಅದಕ್ಕಾಗಿ ಈ ಬಾರಿ ನನ್ನ ಮೂರು ವರ್ಷದ ಹಿಂದಿನ ಹಳೆಯ ವಿಳಾಸಕ್ಕೆ ನೋಟಿಸ್ ನೀಡಿ ನನಗೆ ವಿಚಾರವೇ ತಿಳಿಯದಂತೆ ಕುತಂತ್ರ ಮಾಡಿದ್ದಾರೆ. ಪ್ರಸ್ತುತ ನನ್ನ ಮೇಲೆ ಬಂಧನದ ಆದೇಶ ಇದ್ದರೂ, ಅದಕ್ಕೂ ಕಾಲಾವಧಿ ಇರುತ್ತದೆ. ಅದರೊಳಗೆ ನಾನು ವಕೀಲರ ಜತೆ ಹಾಜರಾಗಲಿದ್ದೇನೆ. ಕಾನೂನು ಪ್ರಕಾರ ಸರಿಯಾದ ಉತ್ತರ ನೀಡಲಿದ್ದೇನೆ.

  ಕಥೆ ಬೇರೆಯದೇ ಇದೆ

  ಕಥೆ ಬೇರೆಯದೇ ಇದೆ

  * ನಿಮ್ಮ 'ಚಾರ್ಲಿ 777' ಸಿನಿಮಾ ಇತ್ತೀಚೆಗೆ ಬರುತ್ತಿರುವ ನಾಯಿ ಜತೆಗಿನ ಇತರ ಸಿನಿಮಾಗಳಿಗಿಂತ ಹೇಗೆ ವಿಭಿನ್ನ?

  ನಾನು ನಾಯಿಯ ಕುರಿತಾದ ಎರಡು, ಮೂರು ವಿದೇಶೀ ಸಿನಿಮಾಗಳನ್ನು ನೋಡಿದ್ದೇನೆ. ಅವುಗಳನ್ನು ಹೋಲುವಂತೆ ಕನ್ನಡದಲ್ಲಿಯೂ ಇತ್ತೀಚೆಗೆ ಒಂದಷ್ಟು ಸಿನಿಮಾಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಕತೆಯ ವಿಚಾರಕ್ಕೆ ಬಂದರೆ ನಾನು ನೋಡಿದ ಮೂರು ಚಿತ್ರಗಳಿಗೂ ಇದಕ್ಕೂ ಸಂಬಂಧವೇ ಇಲ್ಲ. ಆದರೆ ಮನುಷ್ಯ ಮತ್ತು ನಾಯಿಯ ಬಾಂಧವ್ಯದ ವಿಚಾರಕ್ಕೆ ಬಂದಾಗ ಎಲ್ಲದರಲ್ಲಿಯೂ ಆ ಭಾವನೆಗಳು ಅನಿವಾರ್ಯ ಎನ್ನಬಹುದು. ಅದೇ ಕಾರಣಕ್ಕೆ ಚಿತ್ರವೇ ರಿಮೇಕ್ ಎಂದು ಹೇಳಲಾಗದು. ಉದಾಹರಣೆಗೆ ನಾಯಕನಿಗೆ ಕ್ಯಾನ್ಸರ್ ಇರುವಂಥ ಚಿತ್ರಗಳೆಲ್ಲ ಒಂದೇ ಸಿನಿಮಾದ ರಿಮೇಕ್ ಎಂದು ಹೇಳಲಾಗದು ಅಲ್ಲವೇ? ಕತೆ ಬೇರೆ ಬೇರೆ ಇರುತ್ತದೆ. ಈ ಚಿತ್ರಕ್ಕಾಗಿ ಯುವ ನಿರ್ದೇಶಕ ಕಿರಣ್ ರಾಜ್ ಮೂರು ವರ್ಷಗಳ ಕಾಲ ಸಮಯ ತೆಗೆದುಕೊಂಡು ಕಟ್ಟಿರುವ ಕತೆ ಇದು. ಹಾಗಾಗಿ ಕಥೆ ವಿಚಾರವಾಗಿ ಖಂಡಿತವಾಗಿ ವಿಭಿನ್ನವಾಗಿರುತ್ತದೆ ಎನ್ನುವ ಭರವಸೆ ನೀಡಬಲ್ಲೆ.

  ಬೇರೆ ಬೇರೆ ಕಡೆ ಚಿತ್ರೀಕರಣ

  ಬೇರೆ ಬೇರೆ ಕಡೆ ಚಿತ್ರೀಕರಣ

  * ಪಂಜಾಬ್ ನಲ್ಲಿನ ಚಿತ್ರೀಕರಣ ಯಾವಾಗ ಕೊನೆಯಾಗುತ್ತದೆ?

  ಸಿನಿಮಾ ಈಗಾಗಲೇ ಎಪ್ಪತ್ತರಷ್ಟು ಭಾಗ ಶೂಟಿಂಗ್ ಪೂರ್ತಿಯಾಗಿದೆ. ಪಂಜಾಬ್ ಶೆಡ್ಯೂಲ್ ಮಾರ್ಚ್ 14ರ ವರೆಗೆ ಇದೆ. ಇದು ಒಂದು ಜರ್ನಿಯೊಂದಿಗೆ ನಡೆಯುವ ಕತೆ. ಹಾಗಾಗಿ 20ನೇ ತಾರೀಕಿನ ಬಳಿಕ ದೇಶದ ವಿವಿಧೆಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಕೊಡೈಕನಾಲ್, ಮೈಸೂರು ಸೇರಿದಂತೆ ಏಪ್ರಿಲ್ ನಲ್ಲಿ ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿಯೂ ಚಿತ್ರೀಕರಣ ನಡೆಸುವ ಯೋಜನೆ ಹಾಕಲಾಗಿದೆ.

  ಹೊರಭಾಷಿಗರಿಗೆ ನಾನು ಹೊಸಬ

  ಹೊರಭಾಷಿಗರಿಗೆ ನಾನು ಹೊಸಬ

  * `ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ನಮ್ಮಲ್ಲಿ ಸಿಕ್ಕಂಥ ಗೆಲುವು ಹೊರಗಡೆ ಸಿಗಲಿಲ್ಲವೇಕೆ?


  ನಾನು ಮೊದಲಿನಿಂದಲೂ ಸೋಲು ಮತ್ತು ಗೆಲುವಿಗೆ ಕಾರಣ ಹುಡುಕಿ ಕುಳಿತವನಲ್ಲ. ಶ್ರದ್ಧೆಯಿಂದ ಸಿನಿಮಾ ಮಾಡಿ ಅದು ಗೆಲ್ಲಬೇಕು ಎಂದು ಕನಸು ಕಾಣುತ್ತೇನೆ. ಸಾಮಾನ್ಯವಾಗಿ ಹೊಸ ನಾಯಕನ ಚಿತ್ರಗಳು ಗೆಲ್ಲುವುದು ಕಷ್ಟವೇ. ಹೊರ ರಾಜ್ಯಗಳಿಗೆ ನಾನಿನ್ನೂ ಹೊಸಬ. ಚಿತ್ರದ ವಿಫಲತೆಗೆ ಅದು ಮುಖ್ಯ ಕಾರಣ ಇರಬಹುದು. ಅದೇ ವೇಳೆ ನನ್ನ ಚಿತ್ರದ ಬಗ್ಗೆ ಅರಿತಿರುವ ಕನ್ನಡದವರು ನೋಡಿ ಮೆಚ್ಚಿ ಗೆಲ್ಲಿಸಿದ್ದಾರೆ. ಆದರೆ ಪರಭಾಷೆಗಳಲ್ಲಿ ನಡೆಸಿರುವ ಪೂರ್ತಿ ಸೋತಿದ್ದೇವೆ ಎಂದು ಕೂಡ ಹೇಳಲಾಗದು. ತೆಲುಗುವಿನಲ್ಲಿ ನಾವು ಪ್ರಚಾರಕ್ಕೆ ಹಾಕಿದ ಮೊತ್ತ ವಾಪಸ್ ಬರುವಷ್ಟು ಕಲೆಕ್ಷನ್ ಆಗಿದೆ. ಆದರೆ ತಮಿಳು ಮತ್ತು ಮಲಯಾಳಂನಲ್ಲಿ ವರ್ಕೌಟ್ ಆಗಿಲ್ಲ ಎಂದೇ ಹೇಳಬಹುದು. ಈಗ ಅಮೆಜಾನ್ ನಲ್ಲಿ ಬಂದ ಮೇಲೆ ತಮಿಳು, ಮಲಯಾಳಂ ಪ್ರೇಕ್ಷಕರು ಕೂಡ ನನಗೆ ನಿತ್ಯವೂ ಪ್ರಶಂಸೆಯ ಟ್ವೀಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪರಭಾಷೆಯಲ್ಲಿ ನಡೆಸಿದ ಪ್ರಯತ್ನದಿಂದಾಗಿ ನನ್ನ ಮುಂದಿನ ಚಿತ್ರಗಳಿಗೆ ಒಂದು ಮಾರ್ಕೆಟ್ ನಿರ್ಮಿಸಿರುವುದನ್ನು ಒಪ್ಪಿಕೊಳ್ಳಲೇಬೇಕು.

  ಇನ್ನು ದೀರ್ಘಾವಧಿ ಸಿನಿಮಾ ಮಾಡೊಲ್ಲ

  ಇನ್ನು ದೀರ್ಘಾವಧಿ ಸಿನಿಮಾ ಮಾಡೊಲ್ಲ

  * ಅತಿಯಾದ ಕಾಲಾವಧಿ ನಿಮ್ಮ ಸಿನಿಮಾಗಳಿಗೆ ಮೈನಸ್ ಎಂದು ನಿಮಗೆ ಅನಿಸಿಲ್ಲವೇ?

  ಹೌದು, ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಹಾಗೆ ಅನಿಸುತ್ತದೆ. ಆದರೆ `ಉಳಿದವರು ಕಂಡಂತೆ' ದೊಡ್ಡ ಸಿನಿಮಾ. ಅಂದು ಜನ ಥಿಯೇಟರಲ್ಲಿ ಮೆಚ್ಚದಿದ್ದರೂ ಇಂದು ಪೂರ್ತಿಯಾಗಿ ನೋಡಿ ಎಂಜಾಯ್ ಮಾಡುತ್ತಾರೆ. `ಕಿರಿಕ್ ಪಾರ್ಟಿ' ಕೂಡ ಎರಡೂ ಮುಕ್ಕಾಲು ಗಂಟೆ ಕಾಲಾವಧಿ ಹೊಂದಿದ್ದರೂ ಜನ ಇಷ್ಟಪಟ್ಟಿದ್ದರು. ಇದೀಗ `ಅವನೇ ಶ್ರೀಮನ್ನಾರಾಯಣ' ಕನ್ನಡದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿರುವುದು ನಿಮಗೂ ಗೊತ್ತು. ಜನ ನನ್ನ ಚಿತ್ರಗಳ ಲೆಂತ್ ಬಗ್ಗೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಅದು ನೆಗೆಟಿವ್ ವಿಚಾರಗಳಿಗೂ ಕಾರಣವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಉದಾಹರಣೆಗೆ ದೊಡ್ಡ ಚಿತ್ರ ಎನ್ನುವ ಕಾರಣಕ್ಕೆ ಪ್ರತಿ ಶೋಗಳಿಂದ ನನಗೆ ಹೆಚ್ಚು ದುಡ್ಡೇನೂ ಬರುವುದಿಲ್ಲ. ಅದೇ ವೇಳೆ ಕಡಿಮೆ ನಾನು ಕಡಿಮೆ ಕಾಲಾವಧಿಯ ಚಿತ್ರ ಮಾಡಿದರೆ ಬಜೆಟ್ ಕೂಡ ಉಳಿಸಬಹುದು! ಹಾಗಾಗಿ ಇನ್ನು ಮುಂದೆ ಕತೆ ಮಾಡುವಾಗಲೇ ಒಟ್ಟು ಸಿನಿಮಾ ಲೆಂತ್ ಕಡಿಮೆಯಾಗಿರಬೇಕು, ಎರಡೂ ಕಾಲು ಅಥವಾ ಎರಡು ಗಂಟೆ 20 ನಿಮಿಷ ಮೀರಬಾರದು ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಗಮನದಲ್ಲಿರಿಸಿಕೊಂಡೇ ಮುಂದುವರಿಯುತ್ತೇನೆ.

  English summary
  Rakshith Shetty is an Actor And Director from Kannada Film Industry. His film Charlie 777 shoot is in progress. Here is his special interview with Filmibeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X