For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಕನಸನ್ನು 'ಚೇಸ್' ಮಾಡಿ ತವರಿಗೆ ಬಂದ ಸುಶಾಂತ್ ಪೂಜಾರಿ

  |

  ಚೇಸ್' ಎನ್ನುವುದು ಕನ್ನಡದಲ್ಲಿ ತೆರೆಕಾಣಲು ಸಿದ್ಧವಾಗುತ್ತಿರುವ ಹೊಸ ಚಿತ್ರ. ಚಿತ್ರದಲ್ಲಿ ಒಂದು ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಸುಶಾಂತ್ ಪೂಜಾರಿ ಮುಂಬೈನಿಂದ ಬಂದವರು. ಆದರೆ ಮೂಲತಃ ಉಡುಪಿಯ ಕಿನ್ನಿಮುಲ್ಕಿಯವರಾದ ಸುಶಾಂತ್ ಈಗಾಗಲೇ ನಾಲ್ಕೈದು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜ ಅವರ ಸಹಾಯಕ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವ ಸುಶಾಂತ್ ಕನ್ನಡದಲ್ಲಿ ಚೇಸ್ ಚಿತ್ರದ ಮೂಲಕ ಪ್ರಥಮ ಹೆಜ್ಜೆ ಇರಿಸಿದ್ದಾರೆ.

  ಇಷ್ಟು ವರ್ಷಗಳ ಬಳಿಕ ಮೊದಲ ಬಾರಿಗೆ ತಾಯ್ನಾಡಿನಲ್ಲಿ ಸಿನಿಮಾ ಮಾಡುವ ಅವಕಾಶ ದೊರೆತ ಖುಷಿ ಸುಶಾಂತ್ ಮತ್ತು ಅವರ ಕುಟುಂಬಕ್ಕಿದೆ. ಕನ್ನಡದಲ್ಲಿ ಒಂದು ಒಳ್ಳೆಯ ಪ್ರಾಜೆಕ್ಟ್ ದೊರಕಿರುವ ಸಂತಸ ಸುಶಾಂತ್ ಅವರಲ್ಲಿಯೂ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಫಿಲ್ಮೀಬೀಟ್ ಜತೆಗೆ ಇಲ್ಲಿ ಮಾತನಾಡಿದ್ದಾರೆ.

   ಚೇಸ್ ಚಿತ್ರಕ್ಕೆ ನಿಮ್ಮ ಪ್ರವೇಶ ಹೇಗಾಯಿತು?

  ಚೇಸ್ ಚಿತ್ರಕ್ಕೆ ನಿಮ್ಮ ಪ್ರವೇಶ ಹೇಗಾಯಿತು?

  ಮೊದಲು ಚೇಸ್ ಚಿತ್ರಕ್ಕೆ ನೃತ್ಯ ನಿರ್ದೇಶನಕ್ಕಾಗಿ ಕರೆದಿದ್ದರು. ಅದರ ಬಳಿಕ ನಿರ್ದೇಶಕ ವಿಲೋಕ್ ಶೆಟ್ಟಿಯವರು ನೀನು ಇದರಲ್ಲಿ ಪಾತ್ರ ಮಾಡುತ್ತೀಯ ಎಂದು ಪ್ರಶ್ನಿಸಿದರು. ಯಾಕೆ ಮಾಡಬಾರದು ಎಂದು ನನಗೂ ಅನಿಸಿತು. ಯಾಕೆಂದರೆ ಈ ಚಿತ್ರದಲ್ಲಿ ಅವಿನಾಶ್ ನರಸಿಂಹ ಮೂರ್ತಿ, ಅರವಿಂದ್ ರಾವ್, ನಟರಂಗ ರಾಜೇಶ್, ಪ್ರಮೋದ್ ಶೆಟ್ಟಿ, ಶೀತಲ್ ಶೆಟ್ಟಿ, ರಾಧಿಕಾ ನಾರಾಯಣ್, ಸುಧಾ ಬೆಳವಾಡಿ, ಉಷಾ ಭಂಡಾರಿ.. ಹೀಗೆ ಕನ್ನಡದ ಜನಪ್ರಿಯ ಕಲಾವಿದರೆಲ್ಲ ಇದ್ದಾರೆ. ಇದೇ ಒಳ್ಳೆಯ ಎಂಟ್ರಿ ಎಂದು ತಕ್ಷಣವೇ ಒಪ್ಪಿಕೊಂಡೆ. ಇದೀಗ ಚಿತ್ರ ತಯಾರಾಗಿದೆ.

   ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ

  ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ

  ಚೇಸ್ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಇದೆ. ಪಾತ್ರದ ಹೆಸರು ಸಿದ್ದಾರ್ಥ ಎಂದು. ನನಗೆ ಜೋಡಿಯಾಗಿ ರಾಧಿಕಾ ನಾರಾಯಣ್ ನಟಿಸಿದ್ದಾರೆ. ಸಸ್ಪೆನ್ಸ್ ಚಿತ್ರವಾದ ಕಾರಣ ಹೆಚ್ಚು ಹೇಳುವಂತಿಲ್ಲ. ಮುಖ್ಯವಾಗಿ ತವರೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇ ಅವಿಸ್ಮರಣೀಯ ಅನುಭವ. ಉಡುಪಿ ಲೈಟ್ ಹೌಸ್, ಬೀಚ್ ಮೊದಲಾದೆಡೆಗಳಲ್ಲೇ ಚಿತ್ರೀಕರಣ ಇತ್ತು. ಹಾಡಿನಲ್ಲಿ ಕರಾವಳಿಯ ಸೊಬಗಿನ ಜತೆಗೆ ಬಾಲಿವುಡ್ ಶೈಲಿಯ ನೃತ್ಯವನ್ನು ನೀವು ಕಾಣಬಹುದಾಗಿದೆ.

   ಬಾಲಿವುಡ್ ನಲ್ಲಿ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಹೇಗೆ?

  ಬಾಲಿವುಡ್ ನಲ್ಲಿ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಹೇಗೆ?

  ನಾನು ಮೊದಲು ಬ್ಯಾಕ್ ಗ್ರೌಂಡ್ ಡ್ಯಾನ್ಸರಾಗಿ ಚಿತ್ರರಂಗ ಪ್ರವೇಶಿಸಿದೆ. ಕೊರಿಯೋಗ್ರಾಫರ್ ರೆಮೋ ಅವರು ನನ್ನನ್ನು ತಮ್ಮ ಗ್ರೂಪ್ ಗೆ ಸೇರಿಸಿಕೊಂಡರು. ಅವರ ತಂಡದಲ್ಲಿ ಐದಾರು ವರ್ಷಗಳ ಕಾಲ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ಅವರ ಅಸಿಸ್ಟೆಂಟ್ ಆಗುವ ಅವಕಾಶ ದೊರಕಿತು. ಬಳಿಕ ಅವರ ಚೊಚ್ಚಲ ನಿರ್ದೇಶನದ ಚಿತ್ರವಾದ ಎಬಿಸಿಡಿ (ಎನಿಬಡಿಕ್ಯಾನ್ ಡಾನ್ಸ್) ಮೂಲಕ ಕಲಾವಿದನಾಗಿ ಕೂಡ ಪರಿಚಯಿಸಿದರು. ನನಗೆ ಹಿಂಜರಿಕೆ ಇತ್ತು. ಆದರೆ ಅವರೇ ಧೈರ್ಯ ತುಂಬಿದರು. ಎಬಿಸಿಡಿ ಚಿತ್ರದ ಎರಡನೇ ಭಾಗದಲ್ಲಿ ಸೆಕೆಂಡ್ ಲೀಡ್ ಆಗುವ ಅವಕಾಶವನ್ನು ಕೂಡ ಅವರೇ ನೀಡಿದರು. ರೆಮೋ ಅವರ ಎಷ್ಟು ಚಿತ್ರಗಳಾಗಿದೆಯೋ ಅವುಗಳಲ್ಲೆಲ್ಲ ನಾನು ಇದ್ದೇ ಇರುವೆ. ಇದರ ನಡುವೆ ಮತ್ತೋರ್ವ ಖ್ಯಾತ ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್ ಅವರ ನೇತೃತ್ವದಲ್ಲಿ `ಮರ್ಚೆಂಟ್ಸ್ ಆಫ್ ಬಾಲಿವುಡ್' ಶೋನಲ್ಲಿಯೂ ಪಾಲ್ಗೊಳ್ಳುವ ಅವಕಾಶ ದೊರಕಿತು.

   ರೆಮೋ ಮತ್ತು ನಿಮ್ಮ ಬಾಂಧವ್ಯದ ಬಗ್ಗೆ ಏನು ಹೇಳುತ್ತೀರಿ?

  ರೆಮೋ ಮತ್ತು ನಿಮ್ಮ ಬಾಂಧವ್ಯದ ಬಗ್ಗೆ ಏನು ಹೇಳುತ್ತೀರಿ?

  ರೆಮೊ ಅವರು ನನಗೆ ಗಾಡ್ ಫಾದರ್ ಮಾತ್ರವಲ್ಲ, ಗಾಡ್ ಎಂದೇ ಹೇಳಬಹುದು. ಡಾನ್ಸ್ ಅಥವಾ ನಟನೆಯಲ್ಲಿ ಮೊದಲ ಬ್ರೇಕ್ ನೀಡಿದ್ದೇ ಅವರು. ಅವರ ಮೂಲಕವೇ ನನ್ನ ಬಗ್ಗೆ ಹೊರಜಗತ್ತಿಗೆ ತಿಳಿಯುವಂತಾಯಿತು. ಅವರು ತುಂಬ ಡೌನ್ ಟು ಅರ್ತ್. ಮಾತ್ರವಲ್ಲ ಸದಾ ಸಹಾಯಕ್ಕೆ ಮುಂದಾಗುವ ವ್ಯಕ್ತಿತ್ವ ಅವರದು. ತಾನೊಬ್ಬ ನೃತ್ಯ ನಿರ್ದೇಶಕ ಎಂದು ಚೌಕಟ್ಟು ಹಾಕಿಕೊಂಡವರಲ್ಲ. ನನಗೆ ಅಣ್ಣನಂತೆ ಇರುವವರು. ನನಗೆ ಕಷ್ಟ ಬಂದಾಗ ಹೇಳಿಕೊಳ್ಳಲು ಇರುವಂಥ ವ್ಯಕ್ತಿಯಂತೆ ಕಂಡಿದ್ದಾರೆ. ಅವರ ಪತ್ನಿ ಕೂಡ ತುಂಬ ಆತ್ಮೀಯವಾಗಿ ಗೈಡೆನ್ಸ್ ನೀಡುತ್ತಾರೆ.

   ಮನೆಯಲ್ಲಿ ನಿಮಗೆ ಸಿಕ್ಕ ಪ್ರೋತ್ಸಾಹ ಹೇಗಿತ್ತು?

  ಮನೆಯಲ್ಲಿ ನಿಮಗೆ ಸಿಕ್ಕ ಪ್ರೋತ್ಸಾಹ ಹೇಗಿತ್ತು?

  ಸಂಜೀವ ಬಾಬು ಪೂಜಾರಿ ಮತ್ತು ಸುನೀತಾ ದಂಪತಿಯ ಪುತ್ರ ನಾನು. ನನ್ನ ಏಕಮಾತ್ರ ಸಹೋದರಿ ಸುಪ್ರೀತಾ ಪೂಜಾರಿ. ನನ್ನ ಪತ್ನಿ ಪ್ರಣೀತಾ ಪೂಜಾರಿ ನನ್ನ ನೃತ್ಯಕ್ಕೆ ಅಭಿಮಾನಿಯಾಗಿದ್ದು ಈಗಲೂ ಪ್ರೋತ್ಸಾಹ ನೀಡುತ್ತಾಳೆ. ಆದರೆ ಆರಂಭದಲ್ಲಿ ನನ್ನ ಡ್ಯಾನ್ಸ್ ಆಸಕ್ತಿಗೆ ಮನೆಯಲ್ಲಿ ಪೋತ್ಸಾಹ ಸಿಕ್ಕಿರಲಿಲ್ಲ. ನಾನು ಕೂಡ ಅಷ್ಟೇ, ಕಾಲೇಜ್ ದಿನಗಳಲ್ಲೇ ಕಲಿಕೆಗಿಂತ ಹೆಚ್ಚು ನೃತ್ಯಾಭ್ಯಾಸದತ್ತಲೇ ಗಮನ ಕೊಡುತ್ತಿದ್ದೆ. ಆದರೆ ಬೇಸಿಕ್ ವಿದ್ಯಾಭ್ಯಾಸವನ್ನು ಕೂಡ ಪೂರ್ತಿ ಮಾಡದೇ ಡ್ಯಾನ್ಸ್ ಗೀಳು ಹತ್ತಿಸಿಕೊಂಡರೆ ಮುಂದೆ ಭವಿಷ್ಯವೇ ಇಲ್ಲದಂತಾಗಬಹುದು ಎಂದು ಅವರ ಆತಂಕವಾಗಿತ್ತು. ಹಾಗಾಗಿ ತಂದೆಯವರು ತಮ್ಮಅಂಗಡಿಯಲ್ಲಾದರೂ ನನ್ನನ್ನು ಕೆಲಸಕ್ಕೆ ಹಚ್ಚಬೇಕೆಂದುಕೊಂಡಿದ್ದರು. ಹಾಗೆ ಅರ್ಧದಿನ ಅಂಗಡಿಯಲ್ಲಿ ಕೆಲಸ ಮಾಡಿ ಬಳಿಕ ನೃತ್ಯಾಭ್ಯಾಸಕ್ಕೆ ಹೋಗುತ್ತಿದ್ದೆ. ಆದರೆ ಡ್ಯಾನ್ಸರ್ ಅಸೋಸಿಯೇಶನ್ ಗೆ ಸೇರಿಕೊಳ್ಳಲು ಕಾರ್ಡ್ ಪಡೆಯಬೇಕು, ಅದಕ್ಕೆ ದುಡ್ಡುಬೇಕು ಎಂದಾಗ ಮಾತ್ರ ಅವರು ಬೆಂಬಲ ನೀಡಿದರು. ಅದನ್ನು ಮರೆಯುವಂತಿಲ್ಲ.

   ಬಾಲಿವುಡ್ ಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ನಿಮಗೆ ಕಾಣಿಸಿದ ವ್ಯತ್ಯಾಸವೇನು?

  ಬಾಲಿವುಡ್ ಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ನಿಮಗೆ ಕಾಣಿಸಿದ ವ್ಯತ್ಯಾಸವೇನು?

  ನಟನೆಯ ವಿಚಾರದಲ್ಲಿ ನನಗೆ ಅಂಥ ವ್ಯತ್ಯಾಸ ಏನೂ ಕಾಣಿಸಿಲ್ಲ. ಆದರೆ ನನ್ನ ತಾಯಿಗೆ ಮಾತ್ರ ತುಂಬ ವ್ಯತ್ಯಾಸವಾಗಿ ಕಂಡಿದೆ. ಯಾಕೆಂದರೆ ಅವರು ಮತ್ತು ನನ್ನ ತಂದೆ ಮೂಲತಃ ಉಡುಪಿಯವರು. ಹಾಗಾಗಿ ಅವರಿಗೆ ಈ ಹಿಂದಿನ ಹಿಂದಿ ಸಿನಿಮಾಗಳಿಗಿಂತ ಕನ್ನಡದಲ್ಲಿ ನಟಿಸಿರುವುದೇ ದೊಡ್ಡ ವಿಚಾರವಾಗಿದೆ! ಬಹುಶಃ ತವರಿನ ಮೇಲೆ ಇರುವ ಪ್ರೀತಿ ಎಂದರೆ ಇದೇ ಇರಬಹುದು. ಊರಿನ ಬಿಲ್ಲವ ಸಂಘಟನೆಗಳು ಕೂಡ ಕರೆದು ಸನ್ಮಾನಿಸಿವೆ. ಹಾಗಾಗಿ ನನಗೆ ಕನ್ನಡ ಚಿತ್ರೋದ್ಯಮದಿಂದಾಗಿ ಗೌರವಾದಾರಗಳು ಲಭಿಸಿವೆ. ಅದೇ ರೀತಿ ಮುಂದೆ ತುಳು ಸಿನಿಮಾಗಳಲ್ಲಿ ಕೂಡ ನಟಿಸಬೇಕೆನ್ನುವ ಆಕಾಂಕ್ಷೆ ಇದೆ. ಬಾಲಿವುಡ್ ನಲ್ಲಿ ಶಾರುಖ್ ಖಾನ್, ಹೃತಿಕ್ ರೋಶನ್ ಮತ್ತು ಕನ್ನಡದಲ್ಲಿ ಯಶ್ ಅವರಿಗೆ ಫ್ಯಾನ್ ನಾನು.

  English summary
  Sushanth Pujari is Actor and Choreographer of Bollywood. He worked as assistant for famous Choreographer Remo D’souza And Acted some Bollywood films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X