Just In
Don't Miss!
- News
ಮುಂದಿನ ಎರಡು ದಿನಗಳಲ್ಲಿ ಶಾಲಾ ಶುಲ್ಕ ನಿಗದಿ:ಸುರೇಶ್ ಕುಮಾರ್
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾನು ಕನ್ನಡದವಳೇ ರೀ ಎನ್ನುತ್ತಾರೆ ಸುಮಾ ಪೂಜಾರಿ
ಸುಮಾ ಪೂಜಾರಿ ಎನ್ನುವ ಹೆಸರೇ ಈಕೆಯನ್ನು ಕನ್ನಡ ಕರಾವಳಿಯವಳು ಎಂದು ಪತ್ತೆ ಮಾಡುತ್ತದೆ. ಅದೇನೋ ನಿಜವೇ. ಆದರೆ ಕಣ್ಣಲ್ಲೇ ಸೆಳೆವ ಈ ಕರುನಾಡ ಬೆಡಗಿಯ ಸಿನಿಮಾ ಬದುಕು ಶುರುವಾಗಿರುವುದು ಪಕ್ಕದ ಚೆನ್ನೈನಲ್ಲಿ.
ಮೂಲತಃ ಉಡುಪಿಯವರಾದ ಸುಮಾ ಪೂಜಾರಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಅಲ್ಲೇ. ಮಾಡೆಲಿಂಗ್ ಕಡೆ ಆಸಕ್ತಿ ಬೆಳೆಸಿಕೊಂಡ ಸುಮಾ ಮಾಡಲಿಂಗ್ ನಲ್ಲಿ ಸಕ್ರೀಯಾರಾಗಿದ್ದಾರೆ. ಮೊದಲು ವೀಕೆಂಡ್ಸ್ ನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಸುಮಾ ಈಗ ಸಿನಿಮಾ ಕೂಡ ಮಾಡುತ್ತಿದ್ದಾರೆ.
ಚೆನ್ನೈನಲ್ಲಿ ಇನ್ಫೋಸಿಸ್ ನಲ್ಲಿ ಕೆಲಸ ಸಿಕ್ಕ ಕಾರಣ ಚೆನ್ನೈಗೆ ಹೋದ ಸುಮಾ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ. ಕನ್ನಡಕ್ಕೆ ಬರುವುದು ಯಾವಾಗ ಎನ್ನುವುದರ ಬಗ್ಗೆ ಸ್ವತಃ ಸುಮಾ 'ಫಿಲ್ಮೀಬೀಟ್' ಜತೆಗೆ ಮಾತನಾಡಿದ್ದಾರೆ.

ತುಳು ಚಿತ್ರರಂಗಕ್ಕೆ ನೀವು ಪ್ರಯತ್ನಿಸಲಿಲ್ಲವೇ?
ನಾನು ನೇರವಾಗಿ ಯಾವುದೇ ಚಿತ್ರರಂಗವನ್ನು ಸಂಪರ್ಕ ಮಾಡಿಕೊಂಡು ಹೋಗಲಿಲ್ಲ. ಮಾಡೆಲಿಂಗ್ ಆಸಕ್ತಿ ಇತ್ತಲ್ಲ? ಚೆನ್ನೈನಲ್ಲಿ ಕೂಡ ಅದನ್ನೇ ಮುಂದುವರಿಸಿದೆ. ಮೊದಲು ಜಾಹೀರಾತಿನ ಅವಕಾಶಗಳು ದೊರೆತವು. ತಮಿಳು ಮಾತನಾಡಲು ಕಲಿತುಕೊಂಡ ಬಳಿಕ ಸಿನಿಮಾ ಅವಕಾಶಗಳು ದೊರಕತೊಡಗಿದವು.

ನಿಮಗೆ ಹೆಸರು ತಂದುಕೊಟ್ಟ ಜಾಹೀರಾತುಗಳು ಯಾವುವು?
ಅಭಿರಾಮಿ ರೈಸ್, ಶೋಭಾ ಟೆಕ್ಸ್ ಟೈಲ್ಸ್ ಸೇರಿದಂತೆ ಸಾಕಷ್ಟು ಟೆಕ್ಸ್ ಟೈಲ್ಸ್ ಗೆ ನಾನು ರೂಪದರ್ಶಿಯಾಗಿದ್ದೇನೆ. ಬಹುಶಃ ಅವುಗಳಿಂದಲೇ ನಾನು ಹೆಚ್ಚು ಹೆಚ್ಚು ಮನೆಗಳಲ್ಲಿ ಗುರುತಿಸಲ್ಪಟ್ಟೆ ಎನ್ನಬಹುದು.

ನಿಮಗೆ ಸಿಕ್ಕ ಮೊದಲ ಸಿನಿಮಾ ಅವಕಾಶ ಯಾವುದಾಗಿತ್ತು?
ನನಗೆ ಮೊದಲ ಅವಕಾಶ ಬಂದಿದ್ದು 'ನೀರ್ಮೊಳಿ' ಎನ್ನುವ ಚಿತ್ರಕ್ಕಾಗಿ, ಹೊಸಬರ ತಂಡದಿಂದ. ತಂಡ ಹೊಸಬರದ್ದಾದರೂ ಒಳ್ಳೆಯ ಅವಕಾಶ ಎನ್ನುವ ಕಾರಣಕ್ಕಾಗಿ ಒಪ್ಪಿಕೊಂಡೆ. ಆದರೆ ಚಿತ್ರೀಕರಣ ಪೂರ್ತಿಯಾಗುವ ಮುನ್ನವೇ 'ಎನೈ ಸುಡುಂ ಪನಿ' ಎನ್ನುವ ಮತ್ತೊಂದು ಚಿತ್ರದಲ್ಲಿ ಅವಕಾಶ ದೊರಕಿದ್ದು, ಅದರ ಚಿತ್ರೀಕರಣ ಪೂರ್ತಿಯಾಗಿದೆ.

ಹೊಸ ಚಿತ್ರಗಳ ಬಗ್ಗೆ ಹೇಳಿ?
ಎರಡನೇ ಚಿತ್ರ 'ಎನೈ ಸುಡುಂ ಪನಿ'ಯ ನಿರ್ದೇಶಕ ರಾಮ್ ಶಿವ ಅವರಿಗೆ ಇದು ನಾಲ್ಕನೇ ಚಿತ್ರ. ಚಿತ್ರದ ನಾಯಕ ವೆಟ್ರಿ. ಅದರಲ್ಲಿ ನನಗೆ ಪೊಲೀಸ್ ಅಧಿಕಾರಿಯ ಪಾತ್ರ. ಇದೀಗ ನನ್ನ ಮೂರನೇ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಅದರ ಹೆಸರು 'ಕಾದಲುಂ ಮೋದಲುಂ'. ಶೀರ್ಷಿಕೆಯೇ ಹೇಳುವಂತೆ ಅದೊಂದು ಪ್ರೇಮಿಗಳ ನಡುವಿನ ಕತೆ.

ಯಾವ ರೀತಿಯ ಪಾತ್ರಗಳು ಇಷ್ಟವಾಗುತ್ತವೆ?
ನಿಜ ಹೇಳಬೇಕೆಂದರೆ ಮಾಡೆಲಿಂಗ್ ಕ್ಷೇತ್ರದಿಂದ ಬಂದೆ ಎಂದಾಕ್ಷಣ ಗ್ಲಾಮರಸ್ ಪಾತ್ರಗಳಿಗೆ ಸಿದ್ಧವಾಗಿರುತ್ತೇನೆ ಎಂಬ ಕಲ್ಪನೆ ಎಲ್ಲರಲ್ಲೂ ಇರುತ್ತದೆ. ಆದರೆ ನಾನು ಮಾಡೆಲಿಂಗ್ ಮಾಡುವಾಗಲೂ ಟು ಪೀಸ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ತುಂಬ ಬೋಲ್ಡಾಗಿ ನಟಿಸುವುದರಲ್ಲಿ ಕೂಡ ನನಗೆ ಕಂಫರ್ಟೆಬಲ್ ಇಲ್ಲ. ಹಾಗಾಗಿ ಅಂಥ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಉಳಿದಂತೆ ಎಲ್ಲ ರೀತಿಯ ಪಾತ್ರಗಳು ಇಷ್ಟವೇ. ಮುಂದೆ ಕೂಡ ಪಾತ್ರಕ್ಕಾಗಿ ಗ್ಲಾಮರ್ ಅಗತ್ಯ ಎಂದಾದರೆ ಯೋಚಿಸಬಲ್ಲೆನಾದರೂ, ಗ್ಲಾಮರ್ ಗೆಂದೇ ತಯಾರಾದ ಪಾತ್ರವೊಂದನ್ನು ಆಯ್ಕೆ ಮಾಡಲಾರೆ.

ಕನ್ನಡಕ್ಕೆ ನಿಮ್ಮ ಪ್ರವೇಶ ಯಾವಾಗ?
ಕನ್ನಡದಲ್ಲಿ ನಟಿಸುವ ಆಸೆ ನನಗೂ ಇದೆ. ಯಾಕೆಂದರೆ ಈಗಾಗಲೇ ತೆಲುಗು ಭಾಷೆಯಲ್ಲಿ ಕೂಡ ನಟಿಸುತ್ತಿದ್ದೇನೆ. ಚಿತ್ರದ ಹೆಸರು 'ಮಿರರ್ ಆಫ್ ದಮಯಂತಿ'. ಪೂಜಾಗಾಂಧಿಯವರು ಅದರಲ್ಲಿ ಟೈಟಲ್ ರೋಲ್ ಮಾಡುತ್ತಿದ್ದಾರೆ. ನಾನು ಚಿತ್ರದಲ್ಲಿ ನಾಯಕನ ಜೋಡಿಯಾಗಿ ನಟಿಸುತ್ತಿದ್ದೇನೆ. ಜತೆಗೆ ಇನ್ನೊಂದು ತೆಲುಗು ಚಿತ್ರವೂ ಮಾತುಕತೆ ಹಂತದಲ್ಲಿದೆ. ಹಾಗಾಗಿ ಸದ್ಯಕ್ಕೆ ಒಂದು ಕನ್ನಡ ಚಿತ್ರದಲ್ಲಿ ನಟಿಸಲೇಬೇಕು ಅನಿಸಿದೆ.

ಕನ್ನಡ ಚಿತ್ರರಂಗದಿಂದ ಆಫರ್ ಗಳು ಬಂದಿವೆಯೇ?
ಹೌದು, ಒಂದೆರಡು ಚಿತ್ರಗಳ ಆಫರ್ ಬಂದಿವೆ. ಆದರೆ ನನಗೆ ಕನ್ನಡದಲ್ಲಿ ಒಳ್ಳೆಯದೊಂದು ತಂಡದ ಜತೆಯಲ್ಲೇ ಚಿತ್ರ ಆರಂಭಿಸುವ ಕನಸಿದೆ. ಶಿವಮೊಗ್ಗದಲ್ಲಿ ಪ್ರೌಢಶಾಲೆ ಕಲಿತು, ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮಾಡಿರುವ ಕಾರಣ, ನನಗೆ ತುಳು ಭಾಷೆ ಇಂದಿಗೂ ಸರಿಯಾಗಿ ಬರದು. ಆದರೆ ಅರ್ಥ ಮಾಡಿಕೊಳ್ಳಬಲ್ಲೆ. ಆದುದರಿಂದ ಮಾತೃಭಾಷೆ ಕನ್ನಡದಲ್ಲಿ ಒಂದೊಳ್ಳೆಯ ಚಿತ್ರ ಮಾಡುವ ಕನಸಿದೆ. ಹಾಗಂತ ತವರಿನ ಭಾಷೆಯ ಚಿತ್ರ ಇಷ್ಟವಿಲ್ಲ ಎಂದೇನೂ ಇಲ್ಲ. ತಮಿಳು ಕಲಿತ ನನಗೆ ತುಳು ಕಲಿತು ನಟಿಸಲು ಕೂಡ ಆಸಕ್ತಿ ಇದೆ.