»   » ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ

ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ

Posted By:
Subscribe to Filmibeat Kannada

ರಾಜ್ ಕುಮಾರ್ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡಬೇಕು ಎಂಬುದು ಅದೆಷ್ಟೋ ನಿರ್ದೇಶಕರ ಕನಸು. ಆದರೆ ತನ್ನ ನಿರ್ದೇಶಕದ ಮೊದಲ ಸಿನಿಮಾವನ್ನು ರಾಜ್ ಕುಮಾರ್ ಬ್ಯಾನರ್ ನಲ್ಲಿ ಮಾಡುವುದು ಅಂದರೆ ಅದು ನಿಜಕ್ಕೂ ಹೆಮ್ಮೆಯ ವಿಷಯ. ಆ ರೀತಿ ರಾಜ್ ಕುಮಾರ್ ಬ್ಯಾನರ್ ಮೂಲಕ ಪರಿಚಯ ಆದ ನಿರ್ದೇಶಕ ಮಹೇಶ್ ಬಾಬು.

ಆದಾಗಲೇ ಪುನೀತ್ ರಾಜ್ ಕುಮಾರ್ ನಾಲ್ಕು ಸಿನಿಮಾ ಮಾಡಿದ್ದರು. 'ಅಪ್ಪು', ಅಭಿ, 'ವೀರ ಕನ್ನಡಿಗ', 'ಮೌರ್ಯ' ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಪುನೀತ್ ಸಿನಿಮಾ ಅಂದರೆ ನೂರು ದಿನ ಓಡುವುದು ಪಕ್ಕಾ ಎನ್ನುವ ಮಾತಿತ್ತು. ಆಗ ಬಂದ ಸಿನಿಮಾವೆ 'ಆಕಾಶ್'. 'ಆಕಾಶ್' ಮಹೇಶ್ ಬಾಬು ನಿರ್ದೇಶನ ಮಾಡಿದ ಮೊದಲ ಸಿನಿಮಾ. ಅಣ್ಣವ್ರು ಕುಟುಂಬ ನಂಬಿಕೆ ಇಟ್ಟು ಈ ಸಿನಿಮಾವನ್ನು ಅವರಿಗೆ ನೀಡಿತ್ತು. ಅದೇ ರೀತಿ ಕೆಲಸ ಮಾಡಿ ಮಹೇಶ್ ಬಾಬು ಮೊದಲ ಸಿನಿಮಾದಲ್ಲಿಯೇ ದೊಡ್ಡ ಸಕ್ಸಸ್ ಕಂಡರು. ಸಿನಿಮಾ 200 ಓಡಿತು. ರಾಜ್ ಕುಮಾರ್ ಸಿನಿಮಾ ನೋಡಿ ಎಂತಹ ಒಳ್ಳೆಯ ಸಿನಿಮಾ ಮಾಡಿದ್ದೀರ ಅಂತ ಮುತ್ತು ಕೊಟ್ಟರು.

ನನ್ನ ಮೊದಲ ಸಿನಿಮಾ : ಮೊದಲ ಶಾಟ್ ಡೈರೆಕ್ಟ್ ಮಾಡಿದ್ದ ಉತ್ಸಾಹಕ್ಕೆ ಪಿ.ಹೆಚ್.ವಿಶ್ವನಾಥ್ ಮೈ ಒದ್ದೆ ಆಗಿತ್ತು

ಅಂದಹಾಗೆ, 'ಆಕಾಶ್' ಸಿನಿಮಾ ಶುರು ಆದ ಹಿಂದೆ ಒಂದು ಕಥೆ ಇದೆ. ಅದನ್ನು ಮಹೇಶ್ ಬಾಬು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಪುನೀತ್ ನೀವೆ ಡೈರೆಕ್ಷನ್ ಮಾಡಿ ಎಂದರು

'ಆಕಾಶ್' ಸಿನಿಮಾ ಹುಟ್ಟೋಕ್ಕೆ ಕಾರಣ ಪುನೀತ್ ರಾಜ್ ಕುಮಾರ್ ಅವ್ರು. ನಾನು ಅವರ 'ಅಪ್ಪು' ಸಿನಿಮಾಗೆ ಕೆಲಸ ಮಾಡಿದ್ದೆ. ಆಗ ಅವ್ರು ನನ್ನ ಕೆಲಸ ನೋಡಿ ತುಂಬ ಇಷ್ಟ ಪಟ್ಟಿದ್ದರು. ಆದಾದ ಮೇಲೆ ಅವರ ಎಲ್ಲ ಸಿನಿಮಾಗೆ ಅಸೋಸಿಯೇಟ್ ಆಗಿ ನಾನೇ ಬೇಕು ಅಂತ ಕೇಳಿದ್ದರು. 'ಅಭಿ', 'ವೀರ ಕನ್ನಡಿಗ' ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಆಗ ಒಂದು ದಿನ ಪುನೀತ್ ಬಂದು ಜನಾರ್ಥನ್ ಮಹರ್ಶಿ ಅಂತ ಒಬ್ಬರು ಹೇಳಿದ್ದ ಒಂದು ಕಥೆಯ ಲೈನ್ ತುಂಬ ಚೆನ್ನಾಗಿತ್ತು. ಆದರೆ ಕಾರಣಾಂತರಗಳಿಂದ ಆಗ ಆ ಸಿನಿಮಾ ಆಗಲಿಲ್ಲ, ಈಗ ಅದನ್ನು ಕೇಳಿ ಸಾಧ್ಯ ಆದ್ರೆ ನೀವೆ ಡೈರೆಕ್ಷನ್ ಮಾಡಿ ಎಂದರು. ನನಗೆ ಡೈರೆಕ್ಷನ್ ಮಾಡುವ ಆಲೋಚನೆ ಆಗೇನು ಇರಲಿಲ್ಲ. ಸರಿ.. ಸರ್ ಅಂದೆ.

ರಾಜ್ ಕುಮಾರ್ ಸರ್ ಹಾಗೂ ವರದಣ್ಣ ಅವರಿಗೆ ಕಥೆ ಹೇಳಿದ್ದು

ಮೊದಲು ಆ ಕಥೆಯನ್ನು ನಾನು ಮತ್ತು ರಾಘಣ್ಣ ಕೇಳಿದ್ವಿ. ನಮಗೆ ಓಕೆ ಆಯ್ತು. ನಂತರ ಸೀದಾ ಹೋಗಿ ರಾಜ್ ಕುಮಾರ್ ಸರ್ ಹಾಗೂ ವರದಣ್ಣ ಅವರಿಗೆ ನರೇಟ್ ಮಾಡಿದ್ವಿ. ಅವರು ತುಂಬ ಇಷ್ಟ ಪಟ್ಟರು. ಡೈಲಾಗ್ ಬರೆಸಿ ಒಳ್ಳೆಯ ಸಿನಿಮಾ ಆಗುತ್ತೆ ಅಂತ ವರದಣ್ಣ ಹೇಳಿದರು. ಆದರೆ ನಾನೇ ಡೈರೆಕ್ಟರ್ ಅಂತ ಫಿಕ್ಸ್ ಆಗಿರಲಿಲ್ಲ. ಆಮೇಲೆ ಅಮ್ಮ (ಪಾರ್ವತಮ್ಮ ರಾಜ್ ಕುಮಾರ್ ) ಅವರಿಗೆ ಹೇಳಿದ ಮೇಲೆ ಅವರು ಖುಷಿಯಿಂದ ಇವನು ನಮ್ಮ ಯಜಮಾನ್ರ ಉರಿನವನು, ತುಂಬ ಚೆನ್ನಾಗಿ ಕೆಲಸ ಮಾಡುತ್ತಾನೆ ಎಂದು ಒಪ್ಪಿದರು. ಡೈರೆಕ್ಷರ್ ಬಗ್ಗೆ ಇನ್ನೂ ವರದಣ್ಣ ಅವರಿಗೆ ಹೇಳಿರಲಿಲ್ಲ. ರಾಘಣ್ಣ, ವರದಣ್ಣ ಬಳಿ ಹೋಗಿ ಈ ಸಿನಿಮಾವನ್ನು ಒಬ್ಬ ಹೊಸ ಡೈರೆಕ್ಟರ್ ಬಳಿ ಮಾಡಿಸೊಣ ಅಂತ ಇದ್ದೇವೆ ಅಂದಾಗ ಅವರು ಟಕ್ ಅಂತ ಮಹೇಶ ಕೈನಲ್ಲಿನಾ ಅಂತ ಕೇಳಿ ಒಪ್ಪಿದರು. ಒಳ್ಳೆಯದಾಗಲಿ ಒಬ್ಬ ಡೈರೆಕ್ಟರ್ ಇಂಡಸ್ಟಿಗೆ ಬರುತ್ತಾನೆ ಅಂತ ಹೇಳಿದರು. ಒಂದೇ ತಿಂಗಳಲ್ಲಿ ನಾನು ಡೈರೆಕ್ಟರ್ ಆದೆ.

'ಆಕಾಶ್' ಅಂತ ಸಿನಿಮಾಗೆ ಹೆಸರಿಟ್ಟಿದ್ದು ಶಿವಣ್ಣ

'ಆಕಾಶ್' ಅಂತ ಸಿನಿಮಾಗೆ ಹೆಸರಿಟ್ಟಿದ್ದು ಶಿವಣ್ಣ. ಸಿನಿಮಾದ ನಾಯಕನ ಪಾತ್ರ ಆಕಾಶದ ಎತ್ತರದವನು. ಅದಕ್ಕೆ ಆ ಟೈಟಲ್ ಇಟ್ಟಿದ್ದು, ಆದರೆ 'ಆಕಾಶ್' ಎಂದ ತಕ್ಷಣ ಇದು ಕಾಮಿಡಿ ಪಿಚ್ಚರ್ ಅಂತ ಕೆಲವರು ಏನೇನೋ ಹೇಳುತ್ತಿದ್ರು. ಕಥೆ ಓಕೆ ಆದ ಮೇಲೆ ಶಿವಣ್ಣನಿಗೆ ಹೇಳಿದೆ. ಅವರು 'ಆಕಾಶ್' ಅಂತ ಹೆಸರಿಡು ಮಹೇಶ ತುಂಬ ಚೆನ್ನಾಗಿ ಇರುತ್ತದೆ ಎಂದರು. ಆಕಾಶ ಅಂದರೆ ಎತ್ತರ, ಸಿನಿಮಾದಲ್ಲಿ ಆ ಹುಡುಗನದ್ದು ಕಲ್ಮಶ ಇಲ್ಲದ ಎತ್ತರದ ಮನಸ್ಸು. ಅದಕ್ಕೆ ಈ ಟೈಟಲ್ ಸೂಟ್ ಆಗುತ್ತದೆ ಅಂತ ಫಿಕ್ಸ್ ಮಾಡಿದ್ವಿ. ಸಬ್ ಟೈಟಲ್ unreachable ಅಂತ ಮೊದಲು ಇತ್ತು. ಬಳಿಕ ಅದು ನೆಗೆಟಿವ್ ತರ ಇದೆ ಅಂತ sky is the limit ಎಂದು ಓಕೆ ಮಾಡಿದ್ವಿ. ನಮ್ಮ 'ಆಕಾಶ್,' 'ಅರಸು' ಎರಡು ಸಿನಿಮಾಗೆ ಶಿವಣ್ಣ ಅವರೇ ಟೈಟಲ್ ಕೊಟ್ಟಿದ್ದು.

ಎಂತಹ ಒಳ್ಳೆಯ ಸಿನಿಮಾ ಮಾಡಿದ್ದೀರ ಅಂತ ಅಣ್ಣವ್ರು ಮುತ್ತು ಕೊಟ್ಟರು

ನನಗೆ ಖುಷಿಗಿಂತ ಹೆಚ್ಚು ಭಯ ಇತ್ತು. ಆದಾಗಲೇ ಪುನೀತ್ ಸ್ಟಾರ್ ಆಗಿದ್ದರು. ಅವರ ನಾಲ್ಕು ಸಿನಿಮಾಗಳು ನೂರು ದಿನ ಓಡಿತ್ತು. ನನ್ನ ಮೇಲೆ ಜವಾಬ್ದಾರಿ ಜಾಸ್ತಿ ಇತ್ತು. ಏನಾದರೂ ಹೆಚ್ಚು ಕಡಿಮೆ ಆಗಿ ಸಿನಿಮಾ ಓಡದಿದ್ದರೇ ಏನು ಮಾಡುವುದು ಎಂಬ ಸಣ್ಣ ಭಯ ಇತ್ತು. ದೇವರ ಮೇಲೆ ಬಾರ ಹಾಕಿ, ನಾನು ಏನು ಕಲಿತ್ತಿದ್ದೆ ಆ ಕೆಲಸ ಮಾಡಿದೆ. ಪ್ರತಿ ದಿನ ಏನು ಶಾಟ್ ತೆಗೆಯುವುದು ಅಂತಾನೇ ಯೋಚಿಸುತ್ತಿದ್ದೆ. ಸಿನಿಮಾ ಮುಗಿದ ಮೇಲೆ ರಾಜ್ ಕುಮಾರ್ ಅವರು ತುಂಬ ಇಷ್ಟ ಪಟ್ಟು ನೀವು ನಮ್ಮ ಊರಿನವರು... ನಮ್ಮ ಕಾಡಿನವರು ಎಂತಹ ಒಳ್ಳೆಯ ಸಿನಿಮಾ ಮಾಡಿದ್ದೀರ ಅಂತ ಒಂದು ಮುತ್ತು ಕೊಟ್ಟರು. ಅದು ಆಸ್ಕರ್ ಗಿಂತ ದೊಡ್ಡ ಪ್ರಶಸ್ತಿ ನನಗೆ.

ರಕ್ಷಿತಾ ಅವರನ್ನು ಹಾಕಿಕೊಳ್ಳೋಣ ಎನ್ನುವ ಮಾತು ಇತ್ತು

ನನಗೆ ರಮ್ಯಾ 'ಅಭಿ' ಸಿನಿಮಾದಿಂದ ಗೊತ್ತಿದ್ದರು. ನೀವು ನಿರ್ದೇಶನ ಮಾಡಿದರೆ ನಾನೇ ಹೀರೋಯಿನ್ ಅಂತ ಹೇಳುತ್ತಿದ್ದರು. ಆದರೆ ಸಿನಿಮಾ ಮುಹೂರ್ತ ಆದಾಗಲೂ ಹೀರೋಯಿನ್ ಫೈನಲ್ ಆಗಿರಲಿಲ್ಲ. ಆಮೇಲೆ ಹೀರೋಯಿನ್ ಯಾರನ್ನು ಆಯ್ಕೆ ಮಾಡುವುದು ಎಂದಾಗ ರಾಜ್ ಕುಮಾರ್ ಮತ್ತು ವರದಣ್ಣ ಕನ್ನಡ ನಟಿಯರನ್ನೇ ಹಾಕುತ್ತಿದ್ದರು. 'ಅಭಿ' ಸಿನಿಮಾದಲ್ಲಿ ಪುನೀತ್ ಮತ್ತು ರಮ್ಯಾ ಕಾಂಬಿನೇಶನ್ ಚೆನ್ನಾಗಿ ಇತ್ತು. ಆದರೆ ಮೊದಲು ರಕ್ಷಿತಾ ಅವರನ್ನು ಹಾಕಿಕೊಳ್ಳೋಣ ಎನ್ನುವ ಮಾತು ಇತ್ತು. ಆದರೆ ಇದು ಗ್ಲಾಮರ್ ಪಾತ್ರ ಆಗಿರಲಿಲ್ಲ. ಲಾಸ್ಟ್ ನಲ್ಲಿ ರಮ್ಯಾ ಈ ಪಾತ್ರಕ್ಕೆ ಇದ್ದರೆ ಚೆನ್ನಾಗಿರುತ್ತದೆ ಅಂತ ಸೆಲೆಕ್ಟ್ ಮಾಡಿದ್ವಿ.

ಸಿನಿಮಾ ಲಾಂಚ್ ಆದ ದಿನ ಹಬ್ಬದ ರೀತಿ ಇತ್ತು

ಸಿನಿಮಾ ಲಾಂಚ್ ಆದ ದಿನ ಹಬ್ಬದ ರೀತಿ ಇತ್ತು. ರಾಜ್ ಕುಮಾರ್ ಸರ್ ಅವರ ಹಳೆಯ ಮನೆಯಲ್ಲಿ ಪೂಜೆ ಮಾಡಿದ್ವಿ. ತುಂಬ ಜನರು, ಸ್ನೇಹಿತರು ಬಂದಿದ್ದರು. ನಂತರ ಸಿನಿಮಾದ ವೇಳೆ ರಾಜ್ ಕುಮಾರ್ ಸರ್ ಮತ್ತು ವರದಣ್ಣ ತುಂಬ ಸ್ವಾತಂತ್ಯ ನೀಡುತ್ತಿದ್ದರು. ತುಂಬಿದ ಕೊಡ ತುಳುಕುವುದಿಲ್ಲ. ದೊಡ್ಡ ಜನರು ಹೇಗಿರಬೇಕು ಎನ್ನುವುದನ್ನು ಅವರ ಮನೆಯಲ್ಲಿ ನೋಡಿ ಕಲಿಯಬೇಕು. ನಾನು ಒಬ್ಬ ಚಿಕ್ಕ ಹುಡುಗ, ಅವರ ಕಾಲು ಧೂಳಿಗೂ ನಾನು ಸಮ ಇಲ್ಲ. ಆದರೆ ಒಬ್ಬ ನಿರ್ದೇಶಕನಿಗೆ ಬೇಕಾದ ಗೌರವ ಅವರು ನೀಡುತ್ತಿದ್ದರು.

ನಾಲ್ಕು ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಿದೆ

ಮೊದಲ ದಿನ ಮದುವೆ ಮನೆಯ ಸೀನ್ ಇತ್ತು. ಇನ್ನೂ ಕಲಾವಿದರು ಬಂದಿರಲಿಲ್ಲ. ಚಿಕ್ಕ ಟ್ರಾಲಿ ಹಾಕಿ ಮದುವೆಯಲ್ಲಿ ಬಾರಿಸುತ್ತಿದ್ದ ಮಂಗಳ ವಾದ್ಯಗಳ ಶಾಟ್ ತೆಗೆದೆ ಅದೇ ನನ್ನ ಮೊದಲ ನಿರ್ದೇಶನದ ಶಾಟ್. ಅದರ ನಂತರ ಒಂದು ಹೂ ಶಾಟ್ ತೆಗೆದೆ. ಬಳಿಕ ರಮ್ಯಾ ಇಂಟ್ರಡಕ್ಷನ್ ಸೀನ್ ಶೂಟ್ ಮಾಡಿದೆ. ಅಪ್ಪು ಸರ್ ಫ್ರೆಂಡ್ ತರ ಇದ್ದರು. ರಮ್ಯಾ ಪರಿಚಯ ಇದ್ದರು. ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರೂ ಗೊತ್ತಿದ್ದರು. ಹಾಗಾಗಿ ಶೂಟಿಂಗ್ ಯೂನಿಟ್ ನಲ್ಲಿ ಹೊಸತು ಅನಿಸಲಿಲ್ಲ. ನವೆಂಬರ್ ನಲ್ಲಿ ಸಿನಿಮಾದ ಪೂಜೆ ಮಾಡಿದೆ. ಡಿಸೆಂಬರ್ 6ಕ್ಕೆ ಶೂಟಿಂಗ್ ಶುರು ಮಾಡಿ ಎಪ್ರಿಲ್ 28 ಸಿನಿಮಾ ರಿಲೀಸ್ ಮಾಡಿದೆ. ನಾಲ್ಕು ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಿದೆ. ರಾಜ್ ಕುಮಾರ್ ಬ್ಯಾನರ್ ಸ್ಪೀಡ್ ಗೆ ತಕ್ಕಂತೆ ಕೆಲಸ ಮಾಡಿದೆ. 52 ದಿನದಲ್ಲಿ ಫಾರಿನ್ ಹಾಡು ಸೇರಿದಂತೆ ಶೂಟಿಂಗ್ ಮುಗಿಸಿದ್ದೆ.

ಸಿನಿಮಾ ನೋಡಿ ಸಿಲ್ವರ್ ಜೂಬ್ಲಿ ಓಡುತ್ತೇ ಎಂದರು ವರದಣ್ಣ

ಸಿನಿಮಾ ರಿಲೀಸ್ ಗೆ ನಾಲ್ಕು ದಿನ ಮುಂಚೆ ರಾಜ್ ಕುಮಾರ್ ಸರ್ ಹುಟ್ಟುಹಬ್ಬಕ್ಕೆ ಚಿತ್ರದ ಫೈನಲ್ ಕಾಫಿ ತಂದೆ. ಅಂದು ರಾತ್ರಿ ಸಿನಿಮಾ ನೋಡಬೇಕು ಅಂತ ಫಿಕ್ಸ್ ಆಯ್ತು. ನಾನು, ರಾಘಣ್ಣ, ರಾಜ್ ಕುಮಾರ್ ಸರ್, ವರದಣ್ಣ, ವಿನಯ್, ಗುರು, ಧೀರನ್ ರಾಮ್ ಕುಮಾರ್ ಹಾಗೂ ಸತೀಶ್ ಅಂತ ಅವರ ಸಂಬಂಧಿ ಇಷ್ಟು ಜನರು ಸಿನಿಮಾ ನೋಡಿದ್ವಿ. ಸಿನಿಮಾ ನೋಡಿ ಯಾರು ಮಾತನಾಡಲಿಲ್ಲ. ವರದಣ್ಣ 'ಸತೀಶ್ ಹೇಗಿದೆ ಸಿನಿಮಾ?' ಅಂತ ಕೇಳಿದರು. ಅವನು ಈ ಸಿನಿಮಾ ಸಿಲ್ವರ್ ಜೂಬ್ಲಿ ಓಡುತ್ತೇ ಅಂದ. ವರದಣ್ಣ ಕೂಡ ಅದೇ ಹೇಳಿದರು. ಅವರ ಜಡ್ಜ್ ವೆಂಟ್ ಪಕ್ಕ ಇತ್ತು.

ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಯ್ತು

ಮೇನಕಾ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಎಲ್ಲರಿಗೂ ಒಂದು ಕುತೂಹಲ ಇತ್ತು. ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಯ್ತು. ಮದ್ಯಾಹ್ನದ ಹೊತ್ತಿಗೆ ಎಲ್ಲ ಕಡೆಯಿಂದ ಫೋನ್ ಬರುವುದಕ್ಕೆ ಶುರು ಆಯ್ತು. ಎಲ್ಲರೂ ಸಿನಿಮಾ ತುಂಬ ಚೆನ್ನಾಗಿದೆ ಅಂದರು. ಎಂತಹ ಒಳ್ಳೆಯ ಸಿನಿಮಾ ತುಂಬ ಫೀಲ್ ಇದೆ ಸಿನಿಮಾದಲ್ಲಿ ಎಂದೆಲ್ಲ ಹೇಳಿದರು. ನನಗೆ ನಂಬುವುದಕ್ಕೆ ಆಗಲಿಲ್ಲ. ಜನರ ಜೊತೆಗೆ ಸಿನಿಮಾ ನೋಡಿದೆ. ಜನ ಎಂಜಾಯ್ ಮಾಡುವಾಗ ನಮಗೆ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಅಪ್ಪು ಸರ್ ಗೆ ಫ್ಯಾಮಿಲಿ ಆಡಿಯನ್ಸ್ ಶುರು ಆಗಿದ್ದು ಇದೇ ಸಿನಿಮಾದಿಂದಲೇ. ಮಿಡಲ್ ಕ್ಲಾಸ್ ಜನರಿಗೆ ಸಿನಿಮಾ ಬಹಳ ಹತ್ತಿರ ಆಯ್ತು.

ಆ ಚಿತ್ರದಿಂದಲೇ ಇಂದಿಗೂ ನಾನು ಸಿನಿಮಾ ಮಾಡಿಕೊಂಡು ಹೋಗುತ್ತಿದ್ದೇನೆ

50 ಡೇಸ್ ಓಡುವಾಗಲೇ ಈ ಸಿನಿಮಾ 100 ಡೇಸ್ ಆಗುತ್ತೆ ಎನ್ನುವ ನಂಬಿಕೆ ಇತ್ತು. ಆದರೆ ಸಿನಿಮಾ 200 ಡೇಸ್ ಓಡಿತು. ಫಸ್ಟ್ ಇಸ್ ಬೆಸ್ಟ್. ಇವತ್ತು ಕೂಡ 'ಆಕಾಶ್', 'ಅರಸು' ಸಿನಿಮಾದ ಡೈರೆಕ್ಟರ್ ಮಹೇಶ್ ಬಾಬು ಅಂತ ಹೇಳುತ್ತಿದ್ದ ಹಾಗೆ ಒಳ್ಳೆಯ ಡೈರೆಕ್ಟರ್ ಅಂತ್ತಾರೆ. ಆ ಸಿನಿಮಾ ನನ್ನ ಕ್ಯಾರೆಕ್ಟರ್ ಹೇಳುತ್ತದೆ. ಆ ಸಿನಿಮಾದಿಂದಲೇ ಇಂದಿಗೂ ನಾನು ಸಿನಿಮಾ ಮಾಡಿಕೊಂಡು ಹೋಗುತ್ತಿದ್ದೇನೆ. ಈಗಲೂ ಟಿವಿಯಲ್ಲಿ ಸಿನಿಮಾ ನೋಡಿ ತುಂಬ ಜನ ಫೋನ್ ಮಾಡ್ತಾರೆ.

ಮೊದಲ ಸಿನಿಮಾ ನೀರು ಹಾಕಿ ಬೀಜ ಬಿತ್ತಿದ್ದಂತೆ

ಒಬ್ಬ ನಿರ್ದೇಶಕನಿಗೆ ಮೊದಲ ಸಿನಿಮಾ ಗೆಲ್ಲಬೇಕು. ಮೊದಲ ಸಿನಿಮಾ ನೀರು ಹಾಕಿ ಬೀಜ ಬಿತ್ತಿದ್ದಂತೆ. ಅದು ಮೊಳಕೆ ಒಡೆದು, ಗಿಡ ಆಗಿ ಮರ ಆದಾಗ ಎಷ್ಟು ಖುಷಿ ಆಗುತ್ತದೆಯೋ ಹಾಗೆ ಮೊದಲ ಸಿನಿಮಾದ ಗೆಲುವಿನ ಖುಷಿ ಇರುತ್ತದೆ. ಮೊದಲ ಸಿನಿಮಾ ಗೆಲ್ಲದಿದ್ದರೆ ಯಾರು ಸಿನಿಮಾ ಕೊಡುವುದಿಲ್ಲ. ಸಿನಿಮಾಗಾಗಿ ಲೈಫ್ ತ್ಯಾಗ ಮಾಡಬೇಕು. ಮೊದಲ ಸಿನಿಮಾದಲ್ಲಿ ಅಂತು ಎಲ್ಲವನ್ನು ಬಿಟ್ಟಿರಬೇಕು.

English summary
Nanna Modala Cinema Series: Kannada director Mahesh Babu spoke about his first movie 'Akash' in an exclusive interview with FilmiBeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X