»   » ಕಿರುತೆರೆ ರಾಕಿಂಗ್ ಸ್ಟಾರ್ ಅಕುಲ್ ಬಾಲಾಜಿ ಸಂದರ್ಶನ

ಕಿರುತೆರೆ ರಾಕಿಂಗ್ ಸ್ಟಾರ್ ಅಕುಲ್ ಬಾಲಾಜಿ ಸಂದರ್ಶನ

By: ರಾಜೇಂದ್ರ ಚಿಂತಾಮಣಿ
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ರಾಕಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದ ಅಕುಲ್ ಬಾಲಾಜಿ ಈಗ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. 'ಗಗನಚುಕ್ಕಿ' ಹಾಗೂ 'ದೇವ್ರನ್ನೆ ಬುಡು ಗುರು', 'ಲವ್ ಆನ್ ಎನ್ ಎಚ್ 4' ಹಾಗೂ 'ದುಬಾರಿ' ಚಿತ್ರಗಳ ಮೂಲಕ ಅವರು ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ.

'ಬಿಗ್ ಬಾಸ್ 2' ಗೆಲ್ಲುವುದಕ್ಕೂ ಮುನ್ನ ಅವರಿಗೆ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಸಿಹಿ ಕಳುಹಿಸಿ ಶುಭಕೋರಿದ್ದರು. ಅವರು ಗೆದ್ದೇ ಗೆಲ್ತೀನಿ ಎಂದು ಈ ಶೋಗೆ ಹೋದವರಲ್ಲ. ಕೊನೆಯ ಕ್ಷಣದಲ್ಲಿ ಈ ಶೋಗೆ ಹೋಗುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ['ಬಿಗ್ ಬಾಸ್' ರನ್ನರ್ ಸೃಜನ್ ಲೋಕೇಶ್ ಸಂದರ್ಶನ]

ಈಗ ಬಿಗ್ ಬಾಸ್ ನಿಂದ ಅವರು ಬಂದು ಎರಡು ವಾರಗಳಾಗುತ್ತಿದೆ. ಅವರ ಮುಂದಿನ ಯೋಜನೆಗಳೇನು, ಬಿಗ್ ಬಾಸ್ ಹ್ಯಾಂಗೋವರ್ ನಿಂದ ಹೊರಬಂದಿದ್ದಾರಾ, ಮತ್ತೆ ರಿಯಾಲಿಟಿ ಶೋ ಮಾಡ್ತಾರಾ ಎಂಬ ಪ್ರಶ್ನೆಗಳಿಗೆ ಅಕುಲ್ ಜೊತೆಗಿನ ಪ್ರಶ್ನೋತ್ತರಗಳು ಇಲ್ಲಿದೆ ಓದಿ.

Akul Balaji interview3

*ಬಿಗ್ ಬಾಸ್ ಹ್ಯಾಂಗೋವರ್ ನಿಂದ ಹೊರಬಂದಿದ್ದೀರಾ?
ಈ ಹ್ಯಾಂಗೋವರ್ ನಿಂದ ಹೊರಬರಬೇಕಾದರೆ ಕನಿಷ್ಠ ಹತ್ತರಿಂದ ಹದಿನೈದು ದಿನ ಬೇಕಾಗುತ್ತದೆ ಎಂದು ಎಲ್ಲರೂ ಹೇಳಿದರು. ಶೇಕಡಾ ಎಪ್ಪತ್ತರಷ್ಟು ಆ ಹ್ಯಾಂಗೋವರ್ ನಿಂದ ಹೊರಬಂದಿದ್ದೇನೆ. ಇನ್ನೂ ಮೂವತ್ತರಷ್ಟು ಹಾಗೆಯೇ ಇದೆ. ನೂರು ದಿನಗಳ ಕಾಲ ಅಲ್ಲಿದ್ದಿದ್ದಕ್ಕೋ ಏನೋ ತುಂಬಾ ಸುಸ್ತಾಗಿದ್ದೇನೆ. ಅಲ್ಲಿಂದ ಬಂದ ಮೇಲೆ ನನ್ನ ಹೆಂಡತಿ ಮೊದಲೆರಡು ದಿನಗಳ ಕಾಲ ಬಿಗ್ ಬಾಸ್ ಹಾಡನ್ನು ಕೇಳಿಸುತ್ತಿದ್ದರು. ಯಾಕೆಂದರೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಕಾಗಿತ್ತು. ಇನ್ನು ಉಳಿದಿರುವ ಮೂವತ್ತರಷ್ಟು ಹ್ಯಾಂಗೋವರ್ ನಿಂದ ನಿಧಾನಕ್ಕೆ ಹೊರಬರುತ್ತಿದ್ದೇನೆ.

*ಬಿಗ್ ಬಾಸ್ ನಿಂದ ವಾಪಸ್ ಆದ ಮೇಲೆ ಹೇಗಿದೆ ಲೈಫು?
ಒಂದು ವಾರ ತುಂಬಾ ಹೆಕ್ಟಿಕ್ ಆಗಿತ್ತು. ಬಿಗ್ ಬಾಸ್ ಗೆದ್ದಿದ್ದೀನಿ ಎಂದು ನನಗೆ ರಿಯಲೈಸ್ ಆಗಿದ್ದೇ ಅಲ್ಲಿಂದ ವಾಪಸ್ ಬಂದ ಮೇಲೆ. ಅಲ್ಲಿಯವರೆಗೂ ಅದೊಂದು ಕನಸಿನ ತರಹ ಇತ್ತು. ಅಲ್ಲಿಂದ ಬಂದ ಮೇಲೆ ಜನರ ಪ್ರತಿಕ್ರಿಯೆ, ಅವರ ಅಭಿಮಾನ ನೋಡಿದ ಮೇಲೆಯೇ ಏನೋ ಸಾಧಿಸಿದ್ದೀವಿ ಎಂದು ತಲೆಗೆ ಬಂದದ್ದು. ಇದನ್ನು ಓವರ್ ನೈಟ್ ಸ್ಟಾರ್ ಎಂದು ಹೇಳಲಿಕ್ಕೆ ಆಗಲ್ಲ. ನೂರು ವರ್ಷಗಳ ಶ್ರಮ ಎಂದು ಹೇಳಬಯುತ್ತೇನೆ. ಹದಿಮೂರು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಏನಾದರೂ ಸಾಧಿಸಬೇಕು ಎಂಬ ಪ್ರಯತ್ನ ಮಾಡುತ್ತಿದೆ. ರಿಯಾಲಿಟಿ ಶೋಗಳ ಮೂಲಕ ಹತ್ತಿರಹೋಗುತ್ತಿದ್ದದ್ದು ಒಂದೆಡೆಯಾದರೆ ಬಿಗ್ ಬಾಸ್ ಇನ್ನಷ್ಟು ಸಹಕಾರ ನೀಡಿತು. ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದ ಖುಷಿ ನನಗಿದೆ. ಜೀವನವಂತೂ ಬಿಂದಾಸ್ ಆಗಿದೆ. ಜನಕ್ಕೆ ಇಷ್ಟವಾಗಿದ್ದೇನೆ ಎಂಬ ಸಂತೋಷ ಇದೆ. ಕಷ್ಟಪಟ್ಟಿದ್ದಕ್ಕೆ ಫಲ ಸಿಕ್ಕಿದೆ.

Akul Balaji interview2

* ನಿಮ್ಮ ಗೆಲುವಿಗೆ ಕಾರಣವಾದ ಅಂಶಗಳೇನು?
ನಾನು ನಾನಾಗಿದ್ದು ಮನರಂಜನೆ ನೀಡಿದ್ದೇ ನನ್ನ ಗೆಲುವಿಗೆ ಕಾರಣ. ಇದು ನಾನು ಹೇಳುತ್ತಿರುವ ಮಾತಲ್ಲ. ನನನ್ನ್ನು ನೋಡಿದ ಜನ ಹೇಳಿದ ಮಾತಿದು. ಆರಂಭದಲ್ಲಿ ಕಿತ್ತಾಡುತ್ತಿದ್ದದ್ದುನ್ನು ನೋಡಿದವರು ಅಕುಲ್ ಶಾರ್ಟ್ ಟೆಂಪರ್ಡ್ ಎಂದು ತಿಳಿದರು. ಬಳಿಕ ಎಲ್ಲರೊಂದಿಗೆ ಬೆರೆಯುತ್ತಿದ್ದನ್ನು ನೋಡಿದರು. ಆಗ ಅವರಿಗೆ ಅಕುಲ್ ರಿಯಾಲಿಟಿ ಶೋನಲ್ಲಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಇರೋದೆ ಹೀಗೆ ಎಂದು ಅರ್ಥವಾಯಿತು. ಅಕುಲ್ ಇರೋದೆ ಹೀಗೆ ಎಂದು ಅವರಿಗೆ ಗೊತ್ತಾಗಲು ಸ್ವಲ್ಪ ಸಮಯ ಬೇಕಾಯಿತಷ್ಟೆ. ಆಗ ಅವರು ನನ್ನನ್ನು ಸ್ವೀಕರಿಸಿದರು. ಇದೆಲ್ಲಾ ನನಗೆ ಗೊತ್ತಾಗಿದ್ದು ಅಲ್ಲಿಂದ ಬಂದ ಮೇಲೆಯೇ. ಅವರ ಸಂದೇಶಗಳು, ರಿಯಾಕ್ಷನ್ ನೋಡಿದ ಮೇಲೇನೇ. ಈ ರಿಯಾಲಿಟಿ ಶೋ ಗೆದ್ದೇ ಗೆಲ್ತೀನಿ ಎಂದು ನಾನು ಮೊದಲೇ ಪ್ಲಾನ್ ಮಾಡಿಕೊಂಡು ಹೋದವನಲ್ಲ. ಎಲ್ಲರೂ ಒಂದು ಅನುಭವ ಬರುತ್ತದೆ ಹೋಗು ಎನ್ನುತ್ತಿದ್ದರು. ಬೇಡ ಬೇಡ ಎನ್ನುತ್ತಿದ್ದವನು ಕೊನೆಯ ಕ್ಷಣದಲ್ಲಿ ಓಕೆ ಎಂದುಬಿಟ್ಟೆ. ಮನೆಯಲ್ಲಿ ನಾನು ನಾನಾಗಿದ್ದೆ, ಕಷ್ಟಪಟ್ಟೆ. ಮುಖವಾಡ ಹಾಕಿಕೊಂಡು ಅಷ್ಟು ದಿನ ಇರಲಿಕ್ಕೆ ಆಗಲ್ಲ. ಜೊತೆಗೆ ಮನರಂಜನೆ ಕೊಟ್ಟೆ. ಸುದೀಪ್ ಅವರ ಸಹಕಾರ, ಅವರು ಕೊಟ್ಟಂತ ಮಾಹಿತಿ ಇವೆಲ್ಲವೂ ನನ್ನ ಗೆಲುವಿಗೆ ಕಾರಣವಾದ ಅಂಶಗಳು ಎನ್ನಬಹುದು.

* ಬಿಗ್ ಬಾಸ್ ಶೋನಿಂದ ಏನಾದರೂ ಕಲಿದ್ದೀರಿ?
ಅಲ್ಲಿಗೆ ಹೋದ ಮೇಲೆ ನಾನು ಕಲಿತ ಮೊದಲ ಪಾಠ 'ತಾಳ್ಮೆ'. ನನ್ನ ಕೋಪವನ್ನು ನಾನು ಸಹಿಸಿಕೊಳ್ಳುವಷ್ಟು ಶಕ್ತಿ ಕೊಟ್ಟಿದ್ದು 'ಬಿಗ್ ಬಾಸ್'. ಬಿಗ್ ಬಾಸ್ ಎಂಬುದು ಒಂದು ವಿಶ್ವವಿದ್ಯಾಲಯ ಇದ್ದಂತೆ. ಅದೊಂದು ಆರ್ಟ್ ಆಫ್ ಲೈಫ್ ತರಹ. ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದನ್ನು ಅದ್ಭುತವಾಗಿ ಹೇಳಿಕೊಟ್ಟಂತಹ ಜಾಗ. ಜೀವನವನ್ನು ಪ್ರೀತಿಯ ದೃಷ್ಟಿಕೋನದಲ್ಲಿ ನೋಡುವಂತಹ ಒಂದು ಅಂಶವನ್ನು ಗಮನಿಸಿದೆ.

* ಅಕುಲ್ ಬಾಲಾಜಿ ಅವರಿಂದ ಮುಂದೆ ಏನೆಲ್ಲಾ ನಿರೀಕ್ಷಿಸಬಹುದು?
ಖಂಡಿತ ಮನರಂಜನೆ ಸಿಕ್ಕೇ ಸಿಗುತ್ತದೆ. ಸದ್ಯದಲ್ಲೇ ನನ್ನ ಮುಂದಿನ ಕಾರ್ಯಕ್ರಮ ಏನು ಎಂಬುದನ್ನು ತಿಳಿಸಲಿದ್ದೇನೆ. ಕಿರುತೆರೆಯನ್ನು ಬಿಟ್ಟುಕೊಡಕ್ಕೆ ಆಗಲ್ಲ. ಯಾಕೆಂದರೆ ನನ್ನನ್ನು ಜನರ ಹತ್ತಿರಕ್ಕೆ ಕೊಂಡೊಯ್ದ ವೇದಿಕೆ ಅದು. ನನ್ನಿಂದ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಅವರು ನಿರೀಕ್ಷಿಸಬಹುದು. ಇದರ ಜೊತೆಗೆ ಒಳ್ಳೊಳ್ಳೆ ಸಿನಿಮಾಗಳ ಮೂಲಕವೂ ನನ್ನ ಅಭಿಮಾನಿಗಳಿಗೆ ಇನ್ನಷ್ಟು ಮನರಂಜನೆ ನೀಡುತ್ತೇನೆ.

Akul Balaji interview

* ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೀರಾ, ಹೀರೋ ಆಗಿ ಗೆಲ್ತೀನಿ ಎಂಬ ವಿಶ್ವಾಸ ಇದೆಯಾ?
ನಾನು ಹೀರೋ ಆಗುತ್ತಿರುವುದು ಇದೇ ಮೊದಲಲ್ಲ. 2008, ಮೇ30ರಲ್ಲಿ 'ಆತ್ಮೀಯ' ಚಿತ್ರದ ಮೂಲಕ ನಾನು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯವಾಗಿದ್ದೇನೆ. ಅದಾದ ಬಳಿಕ 'ಬನ್ನಿ' ಚಿತ್ರದಲ್ಲಿ ಅಭಿನಯಿಸಿದ್ದೇನೆ. ರಿಯಾಲಿಟಿ ಶೋನಲ್ಲೂ ನಾನು ಕ್ಲಿಕ್ ಆಗ್ತೀನಿ ಎಂದುಕೊಂಡಿರಲಿಲ್ಲ. ನನ್ನ ಪ್ರಯತ್ನ ನಾನು ಮಾಡಿದೆ. ಬಳಿಕ ರಿಯಾಲಿಟಿ ಸ್ಟಾರ್ ಅನ್ನಿಸಿಕೊಂಡೆ. ಅದೇ ರೀತಿ ಸಿನಿಮಾಗಳಲ್ಲೂ ಪ್ರಯತ್ನಿಸುತ್ತಿದ್ದೇನೆ. ಕ್ಲಿಕ್ ಆಯಿತು ಎಂದರೆ ಸಂತೋಷ, ಇಲ್ಲಾ ಅಂದ್ರೆ ನನ್ನ ಪ್ರಯತ್ನ ಇದ್ದೇ ಇರುತ್ತದೆ. ಪ್ರಯತ್ನ ಇಲ್ಲದೆ ಪ್ರತಿಫಲ ಸಿಗಲ್ಲ ಅಲ್ಲವೇ?

Akul Balaji interview4

* ಅಕುಲ್ ಅವರಿಂದ ಇನ್ನೊಂದು ರಿಯಾಲಿಟಿ ಶೋ ನಿರೀಕ್ಷಿಸಬಹುದಾ?
ಖಂಡಿತ ನಿರೀಕ್ಷಿಸಬಹುದು. ತುಂಬಾ ಸಮಯ ತೆಗೆದುಕೊಳ್ಳದೆ ಇನ್ನೊಂದು ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಒಂದು ಕಡೆ ಸಂಸಾರ, ಇನ್ನೊಂದು ಕಡೆ ರಿಯಾಲಿಟಿ ಶೋಗಳ ನಡುವೆ ನಾನು ಸಿಕ್ಕಿಹಾಕಿಕೊಂಡಿದ್ದೆ. ಇನ್ನು ಮುಂದೆಯೂ ಒಳ್ಳೆಯ ಗಂಡನಾಗಿ, ಉತ್ತಮ ತಂದೆಯಾಗಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತಾ ಜನರಿಗೆ ಉತ್ತಮ ಮನರಂಜನೆ ನೀಡಲು ಇನ್ನೊಂದು ರಿಯಾಲಿಟಿ ಶೋ ಮೂಲಕ ಬರುತ್ತಿದ್ದೇನೆ. ಅದು ಯಾವ ಕಾರ್ಯಕ್ರಮ ಎಂಬುದು ಸದ್ಯದಲ್ಲೇ ಗೊತ್ತಾಲಿದೆ.


* 'ಬಿಗ್ ಬಾಸ್ ಸೀಸನ್ 2' ಜನರ ಮನಸ್ಸನ್ನು ಗೆಲ್ಲಲಿಲ್ಲ ಎಂಬ ಮಾತಿಗೆ ನಿಮ್ಮ ಉತ್ತರ?

ಜನರ ಮನಸ್ಸನ್ನು ಗೆಲ್ಲಲಿಲ್ಲ ಎಂದಿದ್ದರೆ ಬಹುಶಃ ನನಗೆ ಇಷ್ಟೆಲ್ಲಾ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ಜನರಿಂದ ಬರುತ್ತಿರುವ ಕರೆಗಳಿರಬಹುದು, ಸಂದೇಶಗಳಿರಬಹುದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದುಬರುತ್ತಿರುವ ಪ್ರತಿಕ್ರಿಯೆಗಳಿರಬಹುದು...ಇವೆಲ್ಲವನ್ನೂ ನೋಡುತ್ತಿದ್ದರೆ ಇದರರ್ಥ ಬಿಗ್ ಬಾಸ್ ಸೀಸನ್ 2 ಗೆದ್ದಿದೆ ಎಂದೇ ಅರ್ಥ. ನನ್ನ ಪ್ರಕಾರ ಮೊದಲ ಸೀಸನ್ ಗಿಂತಲೂ ಎರಡನೇ ಸೀಸನ್ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Akul Balaji interview5

* ಒಂದು ಕೋಟಿ ರುಪಾಯಿ ಗೆದ್ದು ಬಂದ ಮೇಲೆ ಅಕುಲ್ ಬದಲಾಗಿದ್ದಾರಾ?
ಬಿಗ್ ಬಾಸ್ ಗೆದ್ದಿದ್ದಾನೆ, ಮುಂದೆ ಅಕುಲ್ ಹೇಗಿರ್ತಾನೋ ಏನೋ ಎಂದು ಎಲ್ಲರೂ ಅಂದುಕೊಂಡ್ರು. ಏನೇ ಗೆದ್ದರೂ ಅಕುಲ್ ಇರೋದು ಅಕುಲ್ ತರಹಾನೇ. ಅದರಲ್ಲಿ ಯಾವ ಬದಲಾವಣೆಯೂ ಇರಲ್ಲ. ಈಗ ನಾನು ಮತ್ತೆ ನಿರೂಪಕನಾಗಿ ಬಂದರೆ ಸ್ಪರ್ಧಿಗಳ ಮನಸ್ಸನ್ನು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನಷ್ಟು ಉತ್ತಮ ನಿರೂಪಕನಾಗಿ ಬೆಳೆಯಲು ನನಗೆ ಸಹಕಾರಿಯಾಗುತ್ತದೆ. ಅದು ಬಿಟ್ರೆ ನನ್ನಲ್ಲಿ ಇನ್ನೇನು ಬದಲಾವಣೆಗಳೂ ಆಗಿಲ್ಲ.

English summary
The second season of game show Bigg Boss Kannada winner, Kannada small screen Reality Star Akul Balaji interview. Now Akul busy in two Kannada movies and shortly he will annouce one more reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada