For Quick Alerts
  ALLOW NOTIFICATIONS  
  For Daily Alerts

  ವ್ಯಕ್ತಿ ಶಾಶ್ವತವಲ್ಲ, ಸಿನಿಮಾ ಶಾಶ್ವತ: ನಾಗತಿಹಳ್ಳಿ ಚಂದ್ರಶೇಖರ

  |

  ಸಿನಿಮಾರಂಗ 2021 ರ ಮೇಲೆ ಭರಪೂರ ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಹಲವು ತಿಂಗಳು ಸ್ತಬ್ಧವಾಗಿದ್ದ ಚಿತ್ರರಂಗಕ್ಕೆ ಇದೀಗ ಮತ್ತೆ ಚಲನಶೀಲತೆ ಪ್ರಾಪ್ತಿಯಾಗಿದೆ. ಕೊರೊನಾ ನಂತರದ ಕಾಲದಲ್ಲಿ ಚಿತ್ರರಂಗದಲ್ಲಿ ಆಗಬೇಕಾದ ಬದಲಾವಣೆಗಳೇನು? ಕೊರೊನಾ, ಚಿತ್ರರಂಗಕ್ಕೆ ಕಲಿಸಿದ ಪಾಠಗಳೇನು? ಎಂಬುದರ ಬಗ್ಗೆ ಹಿರಿಯ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರನ್ನು 'ಫಿಲ್ಮೀಬೀಟ್' ಮಾತನಾಡಿಸಿದೆ.

  1) 2020 ಸಿನಿಮಾರಂಗಕ್ಕೆ ಕಲಿಸಿರುವ ಪಾಠಗಳೇನು?

  -ಇದು ಆತ್ಮವಿಮರ್ಶೆಗೆ ನಿಸರ್ಗವೇ ಕಲ್ಪಿಸಿದ ಸದವಕಾಶ. ಇದು ಶಾಪವಲ್ಲ. ಚಿತ್ರರಂಗಕ್ಕೆ ದೊಡ್ಡ ಪೆಟ್ಟೊಂದನ್ನು ಕೊರೊನಾ ಕೊಟ್ಟಿದೆ. ಅಮಾಯಕ ಬಡ ಕಾರ್ಮಿಕನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತು ಕೊರೊನಾ. ಯಾವ ವಿಪ್ಲವ ಆದಾಗಲೂ ಮೊದಲ ಬಲಿಪಶುಗಳು ಬಡವರೇ ಎಂಬುದು ಸಂಕಟದ ವಿಷಯ. ನಾಳೆಗಿದು ಇತಿಹಾಸ. ಆದರೆ ಇತಿಹಾಸದಿಂದ ಯಾರೂ ಪಾಠ ಕಲಿಯುವುದಿಲ್ಲ ಅನ್ನುವುದೂ ಒಂದು ಇತಿಹಾಸ .ಆದ್ದರಿಂದ 2021ರಲ್ಲಿ ಮಹಾಕ್ರಾಂತಿಯಾಗುತ್ತದೆ ಎಂಬ ಭ್ರಮೆ ಬೇಡ.

  2) 2021 ರಲ್ಲಿ ಸಿನಿಮಾರಂಗದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು?

  2) 2021 ರಲ್ಲಿ ಸಿನಿಮಾರಂಗದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು?

  -ಉರುಳಿದ ವರ್ಷ, ಮುಂಬರುವ ವರ್ಷ- ಸರಪಳಿಯಂತೆ ಕನೆಕ್ಟ್ ಆಗಿರುತ್ತವೆ. 2020 ರ ಬಹುತೇಕ ಸಮಸ್ಯೆಗಳು 2021 ಕ್ಕೆ ವರ್ಗಾವಣೆ ಆಗಲಿವೆ. ಅದೇ ಜನ, ಅದೇ ಮನಸ್ಸುಗಳು. ಕ್ಯಾಲೆಂಡರ್ ಮಾತ್ರ ಬದಲಾಗಲಿದೆ ಅಷ್ಟೆ. 2021 ರಲ್ಲಿ ನಾವು ಹೇಗಿರಬೇಕು ಎಂಬುದನ್ನು 2020 ನಿರ್ದೇಶನ ಮಾಡಲಿದೆ. ಕಾಲವೇ ನಮ್ಮೆಲ್ಲರ ನಿರ್ದೇಶಕ. ಚಿತ್ರರಂಗವು ಮೊದಲಿಗೆ ಸುಳ್ಳುಗಳಿಂದ ಹೊರಬರಬೇಕಿದೆ. ಬಂಡವಾಳ, ಲಾಭ,ನಷ್ಟದ ಬಗ್ಗೆ ಸುಳ್ಳುಗಳೇ ವಿಜೃಂಭಿಸುತ್ತವೆ. ಒಣಪ್ರತಿಷ್ಠೆಯಿಂದ ಕೋಟಿಗಳು ಬಂದವೆಂದು ಸುಳ್ಳುಹೇಳುವ ಉತ್ಪೇಕ್ಷೆಯಿಂದ ಸಿನಿಮಾದವರ ಮಾತುಗಳನ್ನು ಜನ ನಂಬದ ಸ್ಥಿತಿಗೆ ಬಂದಿದ್ದಾರೆ. ಇದು ಆತ್ಮವಂಚನೆ. ಇತರೆ ಮಾರುಕಟ್ಟೆಗಳಂತೆ ಇದೂ ಪಾರದರ್ಶಕವಾಗಬೇಕಿದೆ.

  3)ನಿರ್ದೇಶಕರ ಕೈಲಿರಬೇಕಿದ್ದ ಸಿನಿಮಾ ನೊಗ ಸ್ಟಾರ್ ನಟರ ಕೈಸೇರಿದೆಯಲ್ಲ!

  3)ನಿರ್ದೇಶಕರ ಕೈಲಿರಬೇಕಿದ್ದ ಸಿನಿಮಾ ನೊಗ ಸ್ಟಾರ್ ನಟರ ಕೈಸೇರಿದೆಯಲ್ಲ!

  -ಹಾಗೇನೂ ಇಲ್ಲ. ನಿರ್ದೇಶಕರ ಸಿನಿಮಾ, ನಾಯಕರ ಸಿನಿಮಾ-ಎಂಬ ಅಲಿಖಿತ ವಿಭಾಗಗಳು ಮೊದಲಿನಿಂದಲೂ ಇವೆ. ಇರಬೇಕು ಕೂಡಾ. ತಾರಾ ಪದ್ಧತಿಯೂ ಬೇಕು. ಸಾಕಷ್ಟು ಒಳ್ಳೆಯ ಸ್ಟಾರ್‌ಗಳು ಇದ್ದಾರೆ;ಆಗಿಹೋಗಿದ್ದಾರೆ. ತಾರೆಗಳ ಸಿನಿಮಾಗಳಿಂದ ಚಿತ್ರಮಂದಿರಗಳು ತುಂಬಿವೆ. ಉದ್ಯಮವೂ ಬೆಳೆದಿದೆ. ಆದರೆ ಸ್ಟಾರ್ ಸಿನಿಮಾಗಳ ಜೊತೆ-ಜೊತೆಗೆ ಪರ್ಯಾಯ ಸಿನಿಮಾವನ್ನು ಉಳಿಸಿಕೊಂಡು ಹೋಗಬೇಕಿದೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಪ್ರೇಕ್ಷಕನ ನಿರೀಕ್ಷೆ ಇರುತ್ತದೆ;ನಿರ್ದೇಶಕನ ಸಿನಿಮಾಕ್ಕೂ ಒಂದು ಪ್ರೇಕ್ಷಕ ವರ್ಗವಿದೆ. ಎರಡೂ ವರ್ಗದ ಪ್ರೇಕ್ಷಕರ ನಿರೀಕ್ಷೆಯನ್ನು ನಾವು ಗೌರವಿಸಬೇಕು. ಸ್ಟಾರ್‌ಗಳನ್ನಿಟ್ಟುಕೊಂಡೂ ಸಹ 'ನಿರ್ದೇಶಕನ' ಸಿನಿಮಾ ಮಾಡುವುದು ಸಹ ಸಾಧ್ಯವಿದೆ. ನನ್ನದೇ ಸಿನಿಮಾ 'ಮಾತಾಡ್ ಮಾತಾಡು ಮಲ್ಲಿಗೆ'ಯನ್ನು ಉದಾಹರಿಸುವುದಾದರೆ ವಿಷ್ಣುವರ್ಧನ್, ಸುದೀಪ್ ಅವರನ್ನಿಟ್ಟುಕೊಂಡು ರೈತ ಚಳವಳಿಯ ಬಗ್ಗೆ ಸಿನಿಮಾ ಮಾಡಿದ್ದೇನೆ. ಆದರೆ ತಾರೆಗಳ ಸುತ್ತ ಸುಳಿದಾಡುವ ಕೆಲ ಈಗಿನ ನಿರ್ದೇಶಕರು ಬದುಕಿ ಉಳಿಯಲು ಭಟ್ಟಂಗಿಗಳಾಗಬಾರದು. ಪ್ರಯೋಗಶೀಲತೆ ಮರೆಯಬಾರದು. ನಿರ್ದೇಶಕ ನಟನ ಚಮಚೆ ಆಗಬಾರದು. ಗುರು ಮತ್ತು ಮಾರ್ಗದರ್ಶಿಯಾಗಿರಬೇಕು. ಭಟ್ಟಂಗಿಯಾದರೆ ಅದು ಲಾಂಗ್ ರನ್ ನಲ್ಲಿ ತಾರೆಗೂ, ಅಂಥ ನಿರ್ದೇಶಕನಿಗೂ ಮತ್ತು ಉದ್ಯಮಕ್ಕೂ ನಿಷ್ಪ್ರಯೋಜಕ.

  4) ಟೆಂಟ್ ಸಿನಿಮಾ ಶಾಲೆಯ ಕುರಿತು ಒಂದಿಷ್ಟು?

  4) ಟೆಂಟ್ ಸಿನಿಮಾ ಶಾಲೆಯ ಕುರಿತು ಒಂದಿಷ್ಟು?

  -‘ಟೆಂಟ್ ಸಿನಿಮಾ ಶಾಲೆ' ಪ್ರಾರಂಭಿಸಿ ಹತ್ತು ವರ್ಷವಾಯಿತು. ನನಗೆ ಸಾಕಷ್ಟು ಕೊಟ್ಟಿರುವ ಚಿತ್ರರಂಗಕ್ಕೆ ಮರಳಿ ಕೊಡುವ ಉದ್ದೇಶದ ಕೃತಜ್ಞತಾಭಾವವೇ ಟೆಂಟ್ ಸಿನಿಮಾ ಸ್ಥಾಪನೆಗೆ ಕಾರಣ. ನಮ್ಮದು ಪುಟ್ಟ, ಸ್ವಾವಲಂಬಿ ಆದರೆ ಸ್ಪಷ್ಟ ಗುರಿಯುಳ್ಳ, ಬದ್ದತೆಯುಳ್ಳ ಶಾಲೆ. ಬಂದವರನ್ನೆಲ್ಲ ನಾನು ಸೇರಿಸಿಕೊಳ್ಳುವುದಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನಾಳೆಗಳಲ್ಲಿ ಸಿನಿಮಾರಂಗದಲ್ಲಿ ಉನ್ನತವಾದುದನ್ನು ಸಾಧಿಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಕೆಲವು ಕಿರುಚಿತ್ರ ತಯಾರಿಸಿದ್ದಾರೆ. ಕೆಲವರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಟೆಂಟ್ ಸಿನಿಮಾ ಶಾಲೆಯಿಂದ ಕೆಲವು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಆಸ್ಟ್ರೇಲಿಯಾ, ದುಬೈ, ಇಂಗ್ಲೆಂಡ್, ಅಮೆರಿಕಾ, ದಕ್ಷಿಣ ಆಫ್ರಿಕಾಗಳಿಂದಲೂ ಆಸಕ್ತ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳೆಂದರೆ ನನಗೆ ಸಂತಸ ಮತ್ತು ಹೆಮ್ಮೆ.ಟೆಂಟ್ ಸಿನಿಮಾ ಶಾಲೆಯ ವಿದ್ಯಾರ್ಥಿಗಳು ನಾಳಿನ ನನ್ನ ಕನಸುಗಳು.

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada
  5) ಹಿರಿಯ ನಿರ್ದೇಶಕರು ಸಿನಿಮಾ ರಂಗದಿಂದ ದೂರ ಉಳಿಯುತ್ತಿದ್ದಾರಲ್ಲಾ?

  5) ಹಿರಿಯ ನಿರ್ದೇಶಕರು ಸಿನಿಮಾ ರಂಗದಿಂದ ದೂರ ಉಳಿಯುತ್ತಿದ್ದಾರಲ್ಲಾ?

  -ಸಿನಿಮಾ ಕಟ್ಟುವ, ಸಿನಿಮಾದ ಕತೆ ಹೇಳುವ ವಿಧಾನದಲ್ಲಿ ಬಹಳ ಬದಲಾವಣೆಗಳಾಗಿವೆ. ಹಿರಿಯ ನಿರ್ದೇಶಕರು ಈ ವೇಗಕ್ಕೆ ತಕ್ಕಂತೆ ತಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಇದು ಸಾಧ್ಯವಾಗದ ಹಿರಿಯ ನಿರ್ದೇಶಕರು ಅನಿವಾರ್ಯವಾಗಿ ಚಿತ್ರರಂಗದಿಂದ ದೂರ ಉಳಿದಿರಬಹುದು. ಸಿನಿಮಾರಂಗಕ್ಕೆ, ಸಿನಿಮಾಕ್ಕೆ ಅನಗತ್ಯ ವೇಗವೊಂದು ಪ್ರಾಪ್ತಿಯಾಗಿಬಿಟ್ಟಿದೆ, ಕತೆ ಹೇಳುವ ಕ್ರಮದಲ್ಲಿ ದೊಡ್ಡ ಬದಲಾವಣೆ ಆಗಿದೆ. ಕ್ಷಣ-ಕ್ಷಣಕ್ಕೂ ರೋಚಕತೆ ತುಂಬುವ ಪ್ರಯತ್ನ, ಕ್ರೌರ್ಯ-ಕಾಮ ತುರುಕಲಾಗುತ್ತಿದೆ. ಅತಿಯಾದ ನಾನ್ ಲೀನಿಯರ್ ವಿಧಾನ ಬಳಕೆಯಾಗುತ್ತಿದೆ. ಸಾವಧಾನದಿಂದ ಕತೆ ಹೇಳುವ ಶೈಲಿ, ಸಂಗೀತ, ಮೌನ, ಚಿಂತನೆಗಳಿಗೆ ಸಿನಿಮಾಗಳಲ್ಲಿ ಸ್ಥಳ ಮಾಡಿಕೊಡುತ್ತಿದ್ದ ಹಾಗೂ ತಮ್ಮದೇ ಆದ ಇಮೇಜ್‌ ಹೊಂದಿದ್ದ ಹಿರಿಯ ನಿರ್ದೇಶಕರಿಗೆ ಹೊಸ ಸಿನಿಮಾ ಪದ್ಧತಿಗೆ ಹೊಂದಿಕೊಳ್ಳುವುದು ಅಸಾಧ್ಯವೇ ಸರಿ. ವೈಯಕ್ತಿಕವಾಗಿ ನಾನಂತೂ ಸಾಹಿತ್ಯ ಮತ್ತು ಸಿನಿಮಾದ ಮೋಹದಿಂದ ಹೊರಗೆ ಬರಲಾರೆ. ನನ್ನ ಹಿಂದಿನ ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ಗೆದ್ದರೂ ಥಿಯೇಟರ್ ನಲ್ಲಿ ಸೋತಿದೆ. ಈಗ ಓದುತ್ತಾ ಬರೆಯುತ್ತಾ ಇದ್ದೇನೆ. ಸಾವಕಾಶ ಹೊಸ ಸಿನಿಮಾದ ನಿರ್ದೇಶನಕ್ಕೆ ಇಳಿಯಲಿದ್ದೇನೆ. ಇಲ್ಲಿ ವ್ಯಕ್ತಿಗಳು ಶಾಶ್ವತ ಅಲ್ಲ. ಸಿನಿಮಾ ಶಾಶ್ವತ. ಸಿನಿಮಾಕ್ಕೆ ಸಾವಿಲ್ಲ.

  English summary
  Senior Kannada movie director Nagathihalli Chandrashekhar interview. He talked about lessons to be learnt from 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion