twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: ಕಣ್ಮನ ಸೆಳೆಯುವ ಹೆಣ್ದನಿ ಗಾಯಕ ಬಾಬಿ

    By ಶಶಿಕರ ಪಾತೂರು
    |

    ಯುವಕನೊಬ್ಬ ತಾನು ಎಸ್.ಜಾನಕಿಯಂತೆ ಹಾಡಬೇಕು ಎಂದುಕೊಂಡರೆ ಅದನ್ನು ವ್ಯರ್ಥಪ್ರಯತ್ನ ಎನ್ನಬಹುದು. ಆದರೆ ಎಸ್.ಜಾನಕಿ ಮಾತ್ರವಲ್ಲ, ಎಲ್.ಆರ್.ಈಶ್ವರಿ, ಪಿ.ಸುಶೀಲಾ, ಮಂಜುಳಾ ಗುರುರಾಜ್ ರಿಂದ ಶ್ರೇಯಾ ಘೋಷಾಲ್ ತನಕ ಸುಮಾರು ಏಳೆಂಟು ಗಾಯಕಿಯರ ಧ್ವನಿಯನ್ನು ಅನುಕರಿಸಿ ಆರ್ಕೆಸ್ಟ್ರಾದಲ್ಲಿ ಹಾಡಬಲ್ಲವರು ಬಾಬಿ.

    ಕಳೆದ ಎಂಟು ವರ್ಷಗಳಿಂದ ಮಂಗಳಾ ಮುರಳೀಧರ್ ಅವರ ನೇತೃತ್ವದಲ್ಲಿರುವ ಆರ್ಕೆಸ್ಟ್ರಾ ತಂಡದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರ ಪ್ರತಿಭೆಗೆ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ', 'ಕಮಲಾ ನೆಹರು ಚಟ್ಟೋಪಾಧ್ಯಾಯ ಪ್ರಶಸ್ತಿ', 'ಡಾ.ರಾಜ್ ಧ್ರುವತಾರೆ ಪ್ರಶಸ್ತಿ, 'ನಾಡಶಿಲ್ಪಿ ಕೆಂಪೇಗೌಡ ಪ್ರಶಸ್ತಿ', ಮತ್ತು ಬೆಂಗಳೂರು ಹೈಗ್ರೌಂಡ್ಸ್ ರೋಟರಿ ಕ್ಲಬ್ ನಿಂದ ಈ ವರ್ಷದ 'ವೊಕೇಶನಲ್ ಎಕ್ಸಲೆನ್ಸ್' ಪ್ರಶಸ್ತಿಗಳು ಲಭಿಸಿವೆ.

    ಚಿಂತನ ಪಲ್ಲಿ ಸುಬ್ಬುಗಂಗರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವ ಬಾಬಿ 23 ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಜೊತೆಗೆ ಫಿಲ್ಮಿಬೀಟ್ ನಡೆಸಿದ ಮಾತುಕತೆ ಇಲ್ಲಿದೆ. ಮುಂದೆ ಓದಿ....

    ಸಂದರ್ಶನ: ಶಶಿಕರ ಪಾತೂರು

    ನಿಮ್ಮ ನಿಜವಾದ ಹೆಸರೇ ಬಾಬಿ ಎಂದೇ?

    ನಿಮ್ಮ ನಿಜವಾದ ಹೆಸರೇ ಬಾಬಿ ಎಂದೇ?

    ನನ್ನ ಮೂಲ ಹೆಸರು ಅನಿಲ್ ಕುಮಾರ್ ಎಂದು. ಮನೆಯಲ್ಲಿ ಎಲ್ಲರೂ ಬಾಬಿ ಎಂದು ಕರೆಯುತ್ತಿದ್ದರು. ಆರ್ಕೆಸ್ಟ್ರಾದೊಳಗೂ ಅದೇ ಉಳಿಯಿತು. ನಾನು ಕೂಡ ಅದೇ ಹೆಸರನ್ನೇ ಬಳಸತೊಡಗಿದೆ.

    ನಿಮಗೆ ಹಾಡಿನ ಆಸಕ್ತಿ ಮೂಡಿದ್ದು ಹೇಗೆ?

    ನಿಮಗೆ ಹಾಡಿನ ಆಸಕ್ತಿ ಮೂಡಿದ್ದು ಹೇಗೆ?

    ನನ್ನ ಸಂಬಂಧಿಕರಿಗೆ ಆರ್ಕೆಸ್ಟ್ರಾ ಇತ್ತು. ಆದರೆ ನನ್ನ ಮನೆಯಲ್ಲಿ ತಂದೆ ತಾಯಿಗೆ ನಾನು ಗಾಯಕನಾಗುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಬಾಲ್ಯದಲ್ಲಿ ಪುನೀತ್ ರಾಜ್ ಕುಮಾರ್ ಅವರು ಹಾಡಿದಂಥ ‘ಕಾಣದಂತೆ ಮಾಯವಾದನೋ' ಮುಂತಾದ ಗೀತೆಗಳನ್ನು ಕದ್ದುಮುಚ್ಚಿ ಆರ್ಕೆಸ್ಟ್ರಾದಲ್ಲೇ ಹಾಡಿದ್ದೆ. ನನ್ನ ಶಾಲಾ ಕಾಲೇಜು ದಿನಗಳಲ್ಲಿ ಅನಿವಾರ್ಯವಾಗಿ ಸಂಗೀತದಿಂದ ದೂರವಾಗಿದ್ದೆ. ಆದರೆ ಕಾಲೇಜು ಮುಗಿದ ಬಳಿಕ ಮತ್ತೆ ನಾನು ಆರ್ಕೆಸ್ಟ್ರಾ ಕಡೆಗೆ ಮುಖ ಮಾಡಿದೆ.

    ಹೆಣ್ಣಿನ ಕಂಠದಲ್ಲಿ ಹಾಡಲು ಶುರು ಮಾಡಿದ್ದು ಯಾವಾಗ?

    ಹೆಣ್ಣಿನ ಕಂಠದಲ್ಲಿ ಹಾಡಲು ಶುರು ಮಾಡಿದ್ದು ಯಾವಾಗ?

    ನಿಜ ಹೇಳಬೇಕೆಂದರೆ ನನ್ನ ಕಂಠದಿಂದ ಗಂಡಿನ ದನಿ ಹೊಮ್ಮದೇ ಹೋದಾಗ ಹೆಣ್ಣಿನ ಧ್ವನಿ ತಾನಾಗಿಯೇ ಬಂತು! ನಿಮಗೆ ಆಶ್ಚರ್ಯ ಆಗಬಹುದು, ಈಗ ಗಂಡಿನ ಧ್ವನಿಯಲ್ಲೇ ಮಾತನಾಡುತ್ತಿದ್ದೇನಲ್ಲ ಎಂದು. ಆದರೆ ಮಾತಿಗೇನೂ ತೊಂದೆರಯಿಲ್ಲ, ಏರುಧ್ವನಿಯಲ್ಲಿ ಮಾತನಾಡುವುದು ಅಥವಾ ಹಾಡುವುದನ್ನು ಮಾಡುತ್ತಿದ್ದ ಹಾಗೆ ಕಂಠ ಹೆಣ್ಣಿನ ಹಾಗೆ ಆಗಿಬಿಡುತ್ತದೆ! ಆ ದಿನಗಳಲ್ಲೊಮ್ಮೆ ಗಂಟಲು ಕೈ ಕೊಟ್ಟು ಮಾತೇ ಹೊರಡದಂತಾಗಿತ್ತು. ಹಾಡಲು ಪ್ರಯತ್ನಿಸಿ ಏರು ದನಿಗೆ ಯತ್ನಿಸಿದರೆ ಕಂಠವೇ ಬದಲಾಗಿತ್ತು!

    ನನಗೆ ಸ್ವಭಾವಿಕವಾಗಿ ಬಂದಿದ್ದು ಈ ಹೆಣ್ಣು ದನಿ

    ನನಗೆ ಸ್ವಭಾವಿಕವಾಗಿ ಬಂದಿದ್ದು ಈ ಹೆಣ್ಣು ದನಿ

    ಹೈಪಿಚ್ನಲ್ಲಿ ಸ್ವಾಭಾವಿಕವಾಗಿ ಹಾಡಿದರೂ ಅದು ಹೆಣ್ಣಿನ ದನಿಯಾಗಿ ಹೊರ ಹೊಮ್ಮುತ್ತಿತ್ತು. ಲೋಪಿಚ್ನಲ್ಲಿ ಹಾಡಿದಾಗ ಮಾತ್ರ ಹುಡುಗರ ದನಿಯಂತಿತ್ತು. ಆ ಕ್ಷಣಕ್ಕೆ ಗೊಂದಲವಾಯಿತಾದರೂ, ಡಾಕ್ಟರ್ ‘‘ನಿಮ್ಮ ಕಂಠಕ್ಕೆ ಯಾವುದೇ ತೊಂದರೆಗಳಿಲ್ಲ. ಆದರೆ ಧ್ವನಿ ಎತ್ತರಿಸಿದಾಗ ಶಬ್ದ ಹೆಣ್ಣಿನ ಕಂಠದಂತೆಯೇ ಮುಂದುವರಿದೀತು'' ಎಂದಿದ್ದರು. ಆಕ್ಷಣಕ್ಕೆ ಭಯವಾಯಿತಾದರೂ , ಮುಂದೆ ಒಂದು ಉಪಾಯವೂ ಹೊಳೆಯಿತು. ಗಾಯಕಿಯರ ದನಿಯನ್ನೇ ಅನುಕರಿಸಿ ಹಾಡಿದರೆ ಅವಕಾಶಗಳು ಹೆಚ್ಚಬಹುದೆಂಬ ತೀರ್ಮಾನಕ್ಕೆ ಬಂದು ಹಾಡತೊಡಗಿದೆ.

    ಅವಕಾಶಗಳು ಹೆಚ್ಚಾದವೇ? ಜನ ಗುರುತಿಸಿದರೇ?

    ಅವಕಾಶಗಳು ಹೆಚ್ಚಾದವೇ? ಜನ ಗುರುತಿಸಿದರೇ?

    ಇದುವರೆಗೆ ಕರ್ನಾಟಕದಾದ್ಯಂತ ಸುಮಾರು 2000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಹಾಡಿದ್ದೇನೆ. ಈ ಎಲ್ಲ ಅವಕಾಶಗಳು ಕೂಡ ನನ್ನ ವಿಭಿನ್ನ ಕಂಠದಿಂದಾಗಿ ದೊರಕಿದಂಥವು. ದೆಹಲಿಯಲ್ಲಿಯೂ ಕಾರ್ಯಕ್ರಮ ಕೊಟ್ಟಿದ್ದೇನೆ. ಹೆಣ್ಣಿನ ಕಂಠದಲ್ಲಿ ತುಂಬ ಸರಿಯಾಗಿ ಹಾಡುತ್ತೇನೆ ಎನ್ನುವುದೇ ನನ್ನ ವಿಶೇಷತೆಯಾಗಿ ಗುರುತಿಸಿಕೊಂಡಿದೆ. ಇದೀಗ ನೀವು ಕೂಡ ಅಷ್ಟೇ, ಬೇರೆ ಗಾಯಕರನ್ನು ಬಿಟ್ಟು ನನ್ನದೊಂದು ವಿಶೇಷ ಸಂದರ್ಶನ ಮಾಡುತ್ತಿದ್ದೀರಿ ಎಂದರೆ ಅದು ನನ್ನಲ್ಲಿನ ಈ ವೈಶಿಷ್ಟ್ಯತೆಯನ್ನು ಗುರುತಿಸಿಯೇ ಮಾಡುತ್ತಿದ್ದೀರಿ ಎಂದು ತಿಳಿದಿದ್ದೇನೆ.

    ನಿಮ್ಮ ಕಂಠವನ್ನು ಕೇಳಿ ಮೂಲ ಗಾಯಕಿಯರು ಮೆಚ್ಚಿದ ಉದಾಹರಣೆಗಳಿವೆಯೇ?

    ನಿಮ್ಮ ಕಂಠವನ್ನು ಕೇಳಿ ಮೂಲ ಗಾಯಕಿಯರು ಮೆಚ್ಚಿದ ಉದಾಹರಣೆಗಳಿವೆಯೇ?

    ತುಂಬಾ ಇವೆ! ಅದರಲ್ಲಿ ಎಲ್ ಆರ್ ಈಶ್ವರಿಯವರು ಮೆಚ್ಚಿಕೊಂಡ ಒಂದು ಸಂದರ್ಭವನ್ನು ಹೇಳುತ್ತೇನೆ. ಈ ಘಟನೆ ನಡೆದಿದ್ದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ. ಸಭೆಯ ಮುಂಭಾಗದಲ್ಲಿ ಈಶ್ವರಿಯಮ್ಮ ಕುಳಿತಿದ್ದರು. ತಮ್ಮ ಹಾಡನ್ನು ಯುವಕನೊಬ್ಬ ಹಾಡುತ್ತಾನೆ ಎಂದಾಗ ಏನೋ ಹಾಡಿ ಹೋಗುತ್ತಾನೆ ಎಂದು ಅವರು ನಿರ್ಲಿಪ್ತವಾಗಿ ಕುಳಿತಿದ್ದರು. ಆದರೆ ಯಾವಾಗ ನಾನು ‘ಸುತ್ತಮುತ್ತಲು ಸಂಜೆಗತ್ತಲು..' ಎಂದು ಶುರು ಮಾಡಿದೆನೋ, ಈಶ್ವರಿಯವರ ಕಂಗಳಲ್ಲಿ ಅಚ್ಚರಿ ಮೂಡಿದ್ದನ್ನು ಕಂಡೆ. ಹಾಡು ಮುಗಿದ ತಕ್ಷಣವೇ ಅವರು ವೇದಿಕೆಗೆ ಧಾವಿಸಿ ಬಂದು ‘ಆಲ್ಮೋಸ್ಟ್ ಈ ಗೀತೆ ನಾನು ಹಾಡಿದಂತೆ ಇತ್ತು!' ಎಂದು ಖುಷಿ ವ್ಯಕ್ತಪಡಿಸಿದರು. ಅದು ಮರೆಯಲಾಗದ ಘಟನೆ. ಉಳಿದಂತೆ ಎಸ್ ಜಾನಕಿಯವರ ಮುಂದೆಯೂ ಅವರ ಗೀತೆಯನ್ನು ಹಾಡುವುದಾಗಿ ಹೇಳಿ ಪರಿಚಯಿಸಿಕೊಂಡಿದ್ದೇನೆ. ಅಣ್ಣಾವ್ರ ಜೊತೆಗೆ ಎಸ್ ಜಾನಕಿ ಕಂಠದಲ್ಲಿ ಹಾಡಿದ್ದು ಮತ್ತೊಂದು ಮರೆಯಲಾಗದ ಅನುಭವ.

    ಡಾ.ರಾಜ್ ಕುಮಾರ್ ಅವರೊಂದಿಗೆ ಹಾಡಿದಂಥ ಆ ಘಟನೆಯ ಬಗ್ಗೆ ಹೇಳಿ

    ಡಾ.ರಾಜ್ ಕುಮಾರ್ ಅವರೊಂದಿಗೆ ಹಾಡಿದಂಥ ಆ ಘಟನೆಯ ಬಗ್ಗೆ ಹೇಳಿ

    ಅದು ರಾಜ್ ಕುಮಾರ್ ಅವರು ವೀರಪ್ಪನ್ನಿಂದ ಬಿಡುಗಡೆಯಾಗಿ ಬಂದಿದ್ದ ಕಾಲ. ಅದೇ ಖುಷಿಗೆ ರಾಜ್ ಕುಮಾರ್ ಅವರೊಂದಿಗೆ ಕರ್ನಾಟಕದಾದ್ಯಂತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಅದೇ ರೀತಿ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಅವರ ಜೊತೆ ಗಿರಿಕನ್ಯೆ ಸಿನಿಮಾದ ‘ನಗುನಗುತಾ ನೀ ಬರುವೆ' ಹಾಡನ್ನು ಎಸ್. ಜಾನಕಿ ಶೈಲಿಯಲ್ಲಿ ನಾನು ಹಾಡಿದ್ದೆ. ಅಣ್ಣಾವ್ರು ಕೂಡ ನನ್ನ ಗಾಯನವನ್ನು ಮೆಚ್ಚಿ ಹರಸಿದ್ದರು. ಅದನ್ನು ಎಂದಿಗೂ ಮರೆಯಲಾರೆ. ಅದೇ ರೀತಿ ಶಿವರಾಜ್ ಕುಮಾರ್ ಸ್ಟೇಜ್ ಕಾರ್ಯಕ್ರಮಗಳಲ್ಲಿ ಹಾಡಿದಾಗ ಕೂಡ ಧ್ವನಿ ಸೇರಿಸಿದ ಹೆಮ್ಮೆ ನನಗಿದೆ.

    ಸಿನಿಮಾಗಳಲ್ಲಿ ಕೂಡ ಹಾಡಿದ್ದೀರಿ. ಅಲ್ಲಿನ ಗಾಯಕಿಯರಿಗೆ ಸ್ಪರ್ಧೆ ನೀಡುವ ಕನಸಿದೆಯೇ?

    ಸಿನಿಮಾಗಳಲ್ಲಿ ಕೂಡ ಹಾಡಿದ್ದೀರಿ. ಅಲ್ಲಿನ ಗಾಯಕಿಯರಿಗೆ ಸ್ಪರ್ಧೆ ನೀಡುವ ಕನಸಿದೆಯೇ?

    ಅಂಬಿ, ಖುಷಿ, ಶಿಷ್ಯ, ಗಂಗಾಕಾವೇರಿ ಸಿನಿಮಾಗಳ ರೀರೆಕಾರ್ಡಿಂಗ್ನಲ್ಲಿ ಹಾಡಿದ್ದೇನೆ. ಹುಡುಗ ಹುಡುಗಿ, ಮಾಗಡಿ ಸಿನಿಮಾಗಳಲ್ಲಿ ನಟಿಸಿದ್ದೇನೆ. ಕಿಡಿ, ಯುಗಪುರುಷ, ಸಿನಿಮಾಗಳಲ್ಲಿ ನಾನೇ ನಟಿಸಿ ಹಾಡಿದ್ದೇನೆ! ಹುಡುಗ ಹುಡುಗಿ, ಟೈಗರ್ ಚಿತ್ರಗಳಲ್ಲಿಯೂ ಹಾಡಿದ್ದು, ನನ್ನ ನಟನೆಯ ಚಿತ್ರಗಳಾದ ಕಮರೊಟ್ಟು ಚೆಕ್ ಪೋಸ್ಟ್, ರಾಜವೀರ, ಮದಕರಿ ಪುರ, ಮಾಯದಂಥ ಮಳೆ ಚಿತ್ರಗಳು ಬಿಡುಗಡೆ ಹಂತದಲ್ಲಿವೆ. ಆದರೆ ಹೆಚ್ಚಿನ ಸಂಗೀತ ನಿರ್ದೇಶಕರು ನನ್ನನ್ನು ಸೇರಿದಂತೆ ಬಹುತೇಕ ಕನ್ನಡದ ಗಾಯಕರನ್ನು ಟ್ರ್ಯಾಕ್ ಹಾಡೋದಿಕ್ಕೆ ಮಾತ್ರ ಬಳಸುತ್ತಾರೆ. ನಮ್ಮ ಹಾಡುಗಳೇ ಸಿನಿಮಾದಲ್ಲಿ ಕೂಡ ಬಳಕೆಯಾಗುವ ಅವಕಾಶ ಸಿಗುವಂತಾಗಲಿ ಎಂದು ಬಯಸುತ್ತೇನೆ.

    English summary
    Anil Kumar (Babi) is unique singer in the Kannada film industry. He can imitate female playback singers voice, including S Janaki, LR Eshwari, P Sushila, Manjula Gururaj etc. Babi sings in an orchestra run by Mangala Muralidhar. An exclusive interview of Anil Kumar for Filmibeat.
    Tuesday, February 26, 2019, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X