For Quick Alerts
ALLOW NOTIFICATIONS  
For Daily Alerts

ಸಂದರ್ಶನ: ಸಕಲಕಲಾ ಸಂಗೀತ ಪಾರಂಗತೆ ಶಶಿಕಲಾ

|

ಎಷ್ಟೇ ಪ್ರತಿಭಾವಂತ ಗಾಯಕ ಗಾಯಕಿಯರಿದ್ದರೂ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ನೀಡಿದರೆ ಮಾತ್ರವೇ ಗುರುತಿಸಿಕೊಳ್ಳುವಂಥ ಸಂದರ್ಭ ಇದು. ಅಂಥದರಲ್ಲಿ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಹಿಟ್ ನೀಡದೆಯೂ ಸಿನಿ ಸಂಗೀತ ಲೋಕದಲ್ಲಿ ಗುರುತಿಸಿಕೊಳ್ಳುತ್ತಿರುವಂಥ ಪ್ರತಿಭೆ ಶಶಿಕಲಾ ಸುನೀಲ್.

ರಾಜಧಾನಿಯ ಹುಡುಗಿ. ಶಾಸ್ತ್ರೀಯ ಸಂಗೀತ ಪಾರಂಗತೆ. ಎಸ್ಪಿಬಿ, ವಿಜಯ ಪ್ರಕಾಶ್ ಅವರೊಂದಿಗೆ ವೇದಿಕೆಯಲ್ಲಿ ಗಾಯಕಿಯಾಗಿದ್ದಾರೆ. ವಿವಾಹದ ಬಳಿಕ ಪತಿಯಿಂದಲೂ ಪ್ರೋತ್ಸಾಹ ದೊರಕಿದೆ. ಹಾಗಾಗಿಯೇ ಶಶಿಕಲಾ ಸಿಕ್ಕ ಅವಕಾಶದಲ್ಲಿ ಚೊಕ್ಕವಾಗಿಯೇ ಗಮನ ಸೆಳೆಯುತ್ತಾರೆ.

ಇತ್ತೀಚೆಗಷ್ಟೇ ವಿಜಯ್ ಪ್ರಕಾಶ್ ತಂಡದೊಂದಿಗೆ ಯುಎಸ್ ಎ ಮ್ಯೂಸಿಕಲ್ ಕನ್ಸರ್ಟ್ ಮುಗಿಸಿಕೊಂಡು ಬಂದಿರುವ ಶಶಿಕಲಾ ಅವರೊಂದಿಗಿನ ವಿಶೇಷ ಮಾತುಕತೆ ಇದು. ತಮ್ಮ ಸಂಗೀತ ಜರ್ನಿ, ಕನಸು, ಗುರಿಯ ಬಗ್ಗೆ ಫಿಲ್ಮಿಬೀಟ್ ನೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ....

ಯು ಎಸ್ ಎ ಮ್ಯೂಸಿಕಲ್ ಕನ್ಸರ್ಟ್ ಹೇಗಿತ್ತು?

ಯು ಎಸ್ ಎ ಮ್ಯೂಸಿಕಲ್ ಕನ್ಸರ್ಟ್ ಹೇಗಿತ್ತು?

ವಿಜಯ್ ಪ್ರಕಾಶ್ ಸರ್ ತಂಡದೊಂದಿಗೆ ನಾನು ಹಿಂದೆಯೂ ವಿದೇಶಗಳಲ್ಲಿ ಮ್ಯೂಸಿಕಲ್ ಕನ್ಸರ್ಟ್ ಭಾಗವಾಗಿದ್ದೇನೆ. ಪ್ರತಿ ಬಾರಿಯೂ ಅಲ್ಲಿ ದೊರಕುವ ಅಪಾರ ಅಭಿಮಾನಿಗಳು ನನ್ನನ್ನು ಅಚ್ಚರಿಗೊಳಿಸಿದ್ದಾರೆ. ಯು ಎಸ್ ನಲ್ಲಿ ಈ ಬಾರಿ ಡಲ್ಲಾಸ್ ನಿಂದ ಆರಂಭಿಸಿ ಹೂಸ್ಟನ್, ನ್ಯೂಜೆರ್ಸಿ ಹೀಗೆ ಹತ್ತಾರು ಕಡೆಗಳಲ್ಲಿ ಕಾರ್ಯಕ್ರಮ ನೀಡಿದೆವು. ಗಾಯಕಿ ಅನುರಾಧಾ ಭಟ್ ಕೂಡ ಜತೆಗಿದ್ದರು. ವಿದೇಶದಲ್ಲಿರುವ ನಮ್ಮ ಕನ್ನಡಿಗರು ಹಳೆಯ ಹಾಡುಗಳಲ್ಲಿನ ಪ್ರೀತಿ ಇರಿಸಿಕೊಂಡಿರುವ ಹಾಗೆ ಹೊಚ್ಚ ಹೊಸ ಗೀತೆಗಳ ಬಗ್ಗೆಯೂ ಚೆನ್ನಾಗಿ ಅಪ್ಡೇಟ್ ಆಗಿರುವುದನ್ನು ನೋಡುವಾಗ ನಮಗೆ ಅಭಿಮಾನ ಮೂಡುತ್ತದೆ.

ನಿಮ್ಮ ಹುಟ್ಟೂರು ಯಾವುದು?

ನಿಮ್ಮ ಹುಟ್ಟೂರು ಯಾವುದು?

ನಾನು ಹುಟ್ಟಿದ್ದು ಬೆಂಗಳೂರಾದರೂ ಬೆಳೆದಿದ್ದು ರಾಮನಗರದ ಚೆನ್ನಪಟ್ಟಣದಲ್ಲಿ. ಅಪ್ಪ ಜಯದೇವ್, ಜೀವ ವಿಮಾ ಪ್ರತಿನಿಧಿ. ಅಮ್ಮ ಉಮಾ ಜಯದೇವ್ ಗೃಹಿಣಿ. ನಮ್ಮದು ಮಧ್ಯಮ ವರ್ಗದ ಕುಟುಂಬ. ಓರ್ವ ಪುತ್ರ ಮತ್ತು ಇಬ್ಬರು ಹೆಣ್ಣು ಮಕ್ಕಳು. ನಾನೇ ಹಿರಿಯವಳು.

ನಿಮ್ಮ ಸಂಗೀತದ ಆಸಕ್ತಿಗೆ ಪ್ರೇರಣೆಯಾಗಿದ್ದು ಯಾರಿಂದ?

ನಿಮ್ಮ ಸಂಗೀತದ ಆಸಕ್ತಿಗೆ ಪ್ರೇರಣೆಯಾಗಿದ್ದು ಯಾರಿಂದ?

ನಿಜ ಹೇಳಬೇಕೆಂದರೆ ತಾಯಿಯೇ ಪ್ರೇರಣೆ. ಮಕ್ಕಳನ್ನು ಗಾಯಕಿಯರಾಗಿಸಬೇಕು ಎನ್ನುವುದು ಅವರ ಹಂಬಲ. ‘ಸಂಪಿಗೆ ಮರದ ಎಲೆಗಳ ನಡುವೆ ಕೋಗಿಲೆ ಹಾಡಿತ್ತು, ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೇ..' ಮುಂತಾದ ಹಾಡುಗಳನ್ನು ಮೂರನೇ ವರ್ಷಕ್ಕೇ ಕಲಿಸಿದಾಕೆ. ಮನೆ ಪಕ್ಕದ ಸಾಯಿ ಮಂದಿರದ ಭಜನೆಗಳಲ್ಲಿ ಸದಾ ಮಕ್ಕಳೊಂದಿಗೆ ಪಾಲ್ಗೊಳ್ಳುತ್ತಿದ್ದರು. ಸ್ಥಳೀಯ ಗಾಯಕಿ ಸುಧಾ ಅವರ ಬಳಿ ಸರಳವರಸೆ ಜಂಟಿ ವರಸೆಗಳನ್ನು ಕಲಿತೆ. ಬಳಿಕ ರಾಮನಗರದ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರಿಗೆ ನನ್ನನ್ನು ಶಿಷ್ಯೆಯಾಗಿಸಿದ ಕೀರ್ತಿಯೂ ತಾಯಿಗೆ ಸಲ್ಲುತ್ತದೆ.

ಅಮ್ಮನ ಪ್ರೋತ್ಸಾಹದಲ್ಲಿ ಗಾಯಕಿಯಾಗಿದ್ದು ನೀವು ಮಾತ್ರವೇ?

ಅಮ್ಮನ ಪ್ರೋತ್ಸಾಹದಲ್ಲಿ ಗಾಯಕಿಯಾಗಿದ್ದು ನೀವು ಮಾತ್ರವೇ?

ತಂಗಿಗೂ ಸಂಗೀತಾಭ್ಯಾಸ ಮಾಡಿಸಲಾಗಿತ್ತು. ನನಗೆ ಮೂರನೇ ತರಗತಿಂದ ಎಸ್ ಎಸ್ ಎಲ್ ಸಿ ಯ ವರೆಗೆ ಅಂದರೆ ಎಂಟು ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ. ಒಟ್ಟಿನಲ್ಲಿ ಹತ್ತನೆಯ ತರಗತಿಯ ವೇಳೆಗೆ ಸಂಗೀತದಲ್ಲಿ ಜೂನಿಯರ್ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ಇದರ ಜೊತೆಗೆ ತಂಗಿಯನ್ನು ನೃತ್ಯಗುರು ಸುನಂದಾದೇವಿಯವರ ಬಳಿ ತಂಜಾವೂರು ಶೈಲಿಯ ಭರತನಾಟ್ಯದ ತರಬೇತಿಗೆ ಕಳಿಸಿದರು. ಅದರಲ್ಲಿಯೂ ಜೂನಿಯರ್ ಸೀನಿಯರ್ ಮುಗಿಸಿದ ಕೀರ್ತಿ ಲಭಿಸಿತು. ಸಂಗೀತ ನೃತ್ಯದ ಜೊತೆ ಜೊತೆಯಲ್ಲಿ ಅಮ್ಮನಿಂದ ವಚನ, ದೇವರನಾಮ ಭಾವಗೀತೆಗಳನ್ನು ಹಾಡಿಸುವ ಕೆಲಸ ನಡೆದೇ ಇತ್ತು. ಚೆನ್ನಪಟ್ಟಣ ತಾಲೂಕಿನಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಸಂಗೀತ ನೃತ್ಯ ಪ್ರದರ್ಶನ. ತಂಗಿ ಜೊತೆಗೆ ಜಿಲ್ಲೆಯಾದ್ಯಂತ ಕಾರ್ಯಕ್ರಮ ನೀಡಿ ‘ಚೆನ್ನಪಟ್ಟಣದ ಸಿಸ್ಟರ್ಸ್' ಎಂದು ಹೆಸರು ಮಾಡಿದ್ದೆವು.

ನೀವೊಬ್ರು ಸಕಲಕಲಾ ಪಾರಂಗತೆ ಎನ್ನುವ ಬಗ್ಗೆ ಏನು ಹೇಳುತ್ತೀರಿ?

ನೀವೊಬ್ರು ಸಕಲಕಲಾ ಪಾರಂಗತೆ ಎನ್ನುವ ಬಗ್ಗೆ ಏನು ಹೇಳುತ್ತೀರಿ?

ಹಾಗೇನಿಲ್ಲ. ಸೈಂಟ್ ಆನ್ಸ್ ಪೌಢಶಾಲೆಯಲ್ಲಿ ಆಂಗ್ಲದಲ್ಲೇ ಎಸ್ಎಸ್ಎಲ್ಸಿ ಮಾಡಿದರೂ, ನನ್ನ ಮನದ ಗೀತೆಗಳೆಲ್ಲ ಕನ್ನಡವೇ. ಸರ್ಕಾರಿ ಪದವಿ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮಾಡಿದ್ದೇನೆ. ಹಾಗೆ ಕಾಲೇಜ್ ನಲ್ಲಿದ್ದಾಗ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟದಲ್ಲಿ ಆಡಿದ್ದೆ. ಎಲ್ಲಕ್ಕೂ ಅಂದು ಗಣಿತ ಮತ್ತು ಆಂಗ್ಲ ಭಾಷೆಯ ಶಿಕ್ಷಕರಾದ ಸದಾಶಿವ ಮತ್ತು ವಿಜಯನರಸಿಂಹ ಅವರು ತೋರಿದ ಪ್ರೋತ್ಸಾಹವೂ ಕಾರಣವಾಗಿತ್ತು.

ಇಂದು ಕೌಟುಂಬಿಕ ಪ್ರೋತ್ಸಾಹ ಹೇಗಿದೆ?

ಇಂದು ಕೌಟುಂಬಿಕ ಪ್ರೋತ್ಸಾಹ ಹೇಗಿದೆ?

ಆ ವಿಚಾರದಲ್ಲಿ ನಾನು ಖಂಡಿತವಾಗಿ ಅದೃಷ್ಟವಂತೆ. ಪದವಿಯ ದ್ವಿತೀಯ ವರ್ಷದಲ್ಲಿದ್ದಾಗಲೇ ವಿವಾಹವಾಗಿತ್ತು. ಆಮೇಲೆ ಪದವಿ ಪೂರ್ಣಗೊಳಿಸಿದೆ. ಗಂಡ ಸುನೀಲ್, ಟೊಯೋಟಾ ಸಂಸ್ಥೆಯಲ್ಲಿ ಮ್ಯಾನೇಜರ್. ಈಗ ನಮಗೆ ದರ್ಶೀಲ್ ಎಂಬ ಐದನೇ ತರಗತಿ ದಾಟಿರುವ ಪುತ್ರನಿದ್ದಾನೆ. ಇಬ್ಬರೂ ನನ್ನ ಗಾಯನದ ಬಗ್ಗೆ ಅಭಿಮಾನ, ಆಸಕ್ತಿ ತೋರಿಸುತ್ತಾರೆ.

ಸಿನಿಮಾ ಸಂಗೀತ ಲೋಕಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ?

ಸಿನಿಮಾ ಸಂಗೀತ ಲೋಕಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ?

ಇಂದಿನ ಬಹುತೇಕರ ಹಾಗೆ ನಾನು ಕೂಡ ಕಿರುತೆರೆ ರಿಯಾಲಿಟಿ ಶೋ ಒಂದರ ಮೂಲಕವೇ ಬೆಳಕು ಕಂಡೆ. ಅದನ್ನು ಕನ್ನಡದ ಪ್ರಥಮ ಮ್ಯೂಸಿಕಲ್ ರಿಯಾಲಿಟಿ ಶೋ ಎನ್ನಬಹುದು. ಪಿಯುಸಿಯಲ್ಲಿದ್ದಾಗ ದೂರದರ್ಶನದ ‘ನಾದಸುರಭಿ' ಮೂಲಕ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿದ್ದೆ. ಬಳಿಕ ಎಂಎಸ್ಐಎಲ್ ನಡೆಸಿದ ಸಂಗೀತ ರಿಯಾಲಿಟಿ ಶೋನಲ್ಲಿ ಮೂರನೇ ಸ್ಥಾನ ದೊರಕಿತ್ತು. `ಈ ಟಿವಿ' ವಾಹಿನಿಯ ‘ಎದೆತುಂಬಿ ಹಾಡುವೆನು' ‘ಅನ್ವೇಷಣೆ ಗಾಯಕಿಯರು' ಮಾಲಿಕೆಯಲ್ಲಿ ಆಯ್ಕೆಯಾಗಿ ಜನಪ್ರಿಯ ಗಾಯಕ ಡಾ.ಎಸ್ಪಿಬಿ ಸರ್ ಜೊತೆ ಹಾಡುವ ಅವಕಾಶ ದೊರಕಿತ್ತು. ಅವರ ಪ್ರಶಂಸೆಯೊಂದಿಗೆ ಈ ಟಿವಿ ಬಳಗದ ಗಾಯಕಿಯಾಗಿ ಗುರುತಿಸಿಕೊಂಡೆ.

ಸಂಗೀತ ಕಲೆ ಬೆಳೆದಿದ್ದು ಹೇಗೆ?

ಸಂಗೀತ ಕಲೆ ಬೆಳೆದಿದ್ದು ಹೇಗೆ?

'ವಾಟಿಕ ವರ್ಷದ ಕನ್ನಡಿಗ', 'ಪರಿಪೂರ್ಣ ಮಹಿಳೆ' ಮತ್ತಿತರ ಕಾರ್ಯಕ್ರಮಗಳಲ್ಲಿ ಹಾಡಿದೆ. ಸಿ.ಅಶ್ವತ್ಥ್ ಸಂಯೋಜನೆಯ 58 ವಚನಗಳ ಗಾನ ತಂಡದ ಸದಸ್ಯೆಯಾಗಿದ್ದೆ. ವಿದುಷಿ ಶ್ಯಾಮಲಾ ಜಿ ಭಾವೆ ಅವರ ಸಲಹೆಯ ಮೇರೆಗೆ ಪಂಡಿತ್ ಎಂ ವಿ ನಾಗರಾಜ್ ಅವರಿಂದ ಹಿಂದುಸ್ಥಾನಿ, ಬಿ.ಕೆ ಸುಮಿತ್ರಾರ ಮಾರ್ಗದರ್ಶನದಲ್ಲಿ ಲಘುಸಂಗೀತದ ಕಲಿತೆ. ಸಂಗೀತಗಾರ ರವಿ ಮೂರೂರರಿಂದ ಭಾವಗೀತೆಗಳ ಗಾಯನ ಕರಗತವಾಯಿತು. ಗಾಯಕಿ ಶಮಿತಾ ಮಲ್ನಾಡ್, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥನ್ರ ತಂಡದಲ್ಲಿ ಸತತ ಸಂಗೀತ ಕಾರ್ಯಕ್ರಮಗಳು ದೊರಕಿದವು. ಖ್ಯಾತ ಕೊಳಲು ವಾದಕ ಪ್ರವೀಣ್ ಡಿ ನಾಯಕ್ರ ನಾಯಕತ್ವದ ‘ಅಂತರ್ಧ್ವನಿ' ತಂಡದ ಸದಸ್ಯೆಯಾದೆ. ಹಾಗೆ ಈ ಎಲ್ಲ ಸಂಪರ್ಕಗಳು ನನ್ನನ್ನು ಸಿನಿಮಾ ಗಾಯಕಿಯಾಗಿ ಬದಲಾಯಿಸಿತು.

ಮೊದಲ ಅವಕಾಶ ದೊರಕಿದ ಸಂದರ್ಭ ಹೇಗಿತ್ತು?

ಮೊದಲ ಅವಕಾಶ ದೊರಕಿದ ಸಂದರ್ಭ ಹೇಗಿತ್ತು?

ನನಗೆ ಮೊದಲು ದೊರಕಿದ್ದು ಸ್ವರಸಂಯೋಜಕ ಮಾರುತಿ ಮೀರಜ್ಕರ್ರಿಂದ ಧ್ವನಿಸುರುಳಿಗಳಿಗೆ ಟ್ರ್ಯಾಕ್ ಹಾಡುವ ಅವಕಾಶ. ‘ಸಿದ್ಧಪ್ಪಾಜಿ ಮಹದೇವೇಶ್ವರ' ಭಕ್ತಿಗೀತೆ ಸಿಡಿಗಳಲ್ಲಿ ಹಾಡಿದೆ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥನ್ ರಿಂದ ‘ಪರೋಡಿ' ಚಿತ್ರದಲ್ಲಿ ಅವಕಾಶ ದೊರಕಿತು. ‘ಬಾರೇ ಬಾರೇ ಬಾರೇ ನೀನು ಯಾರೇ ಆಗಿರೇ' ಎನ್ನುವ ಹಾಡಿನ ಮೂಲಕ ಚಲನಚಿತ್ರ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪ್ರವೇಶ ಪಡೆದೆ. ಆದರೆ ಮುಂದೆ ಟ್ರ್ಯಾಕ್ ಸಿಂಗಿಂಗ್ ಮಾಡಿದ್ದೇ ಹೆಚ್ಚು. ಅಪರೂಪದಲ್ಲಿ ‘ಹುಂಜ', ‘ಸೀಯೂ', ‘ಪಾರಿಜಾತ' ಮುಂತಾದ ಚಿತ್ರಗಳಿಗೆ ಹಾಡುವ ಅವಕಾಶ ಪಡೆದುಕೊಂಡೆ. ಇದರ ನಡುವೆ ‘ಸೂರು' ಧಾರಾವಾಹಿ, ‘ಚಿಂಟೂ' ಕಾರ್ಟೂನ್ ಸರಣಿಗಳಿಗೆ ಧ್ವನಿ ನೀಡಿದ ಅನುಭವವೂ ಇದೆ!

ಅಂದಾಜು ಇದುವರೆಗೆ ನೀವು ಎಷ್ಟು ಗೀತೆಗಳಿಗೆ ಧ್ವನಿಯಾಗಿರಬಹುದು?

ಅಂದಾಜು ಇದುವರೆಗೆ ನೀವು ಎಷ್ಟು ಗೀತೆಗಳಿಗೆ ಧ್ವನಿಯಾಗಿರಬಹುದು?

ಗಾಯಕಿಯಾಗಿ ಹದಿನೈದು ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಇದುವರೆಗೆ ಸುಮಾರು 50 ಚಲನಚಿತ್ರಗೀತೆಗಳು,500ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಹಾಡಿದ್ದೇನೆ. ರಾಜ್ಯ ಹೊರದೇಶದಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಸಿನಿಮಾ ಸಂಗೀತದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳು ಇನ್ನೂ ಲಭಿಸಿಲ್ಲ. ಸದ್ಯಕ್ಕೆ ಮನೋ ಮೂರ್ತಿಯವರ ಸಂಗೀತದಲ್ಲಿ ಹಾಡಿದಂಥ ‘ಸವರ್ಣದೀರ್ಘ ಸಂಧಿ' ಮತ್ತು ‘ಜಸ್ಸಿಗಿಫ್ಟ್' ಅವರ ಸಂಗೀತದಲ್ಲಿ ಹಾಡಿರುವ ಚಿತ್ರಗಳು ತೆರೆಕಾಣುವ ಹಂತದಲ್ಲಿದೆ. ಆ ಬಳಿಕ ಇನ್ನಷ್ಟು ಅವಕಾಶಗಳು ಸಿಗಬಹುದೆಂಬ ನಿರೀಕ್ಷಿಸುತ್ತೇನೆ.

Read more about: interview ಸಂದರ್ಶನ
English summary
Famoue playback singer and stage singer Shashikala sunil interview with filmibeat kannada.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more