»   » ಎಕ್ಸ್ ಕ್ಲೂಸಿವ್ ಸಂದರ್ಶನ: ಡಾ.ವಿಷ್ಣು ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಕಿರುತೆರೆ ನಟ

ಎಕ್ಸ್ ಕ್ಲೂಸಿವ್ ಸಂದರ್ಶನ: ಡಾ.ವಿಷ್ಣು ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಕಿರುತೆರೆ ನಟ

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada
ಡಾ ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಕೊಡಲು ಮುಂದಾದ ಈ ಕಿರುತೆರೆ ನಟ | FIlmibeat Kannada

ಮೈಸೂರು, ಡಿಸೆಂಬರ್ 28 : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 7 ವರುಷಗಳು ಉರುಳಿವೆ. ಇಷ್ಟು ವರ್ಷ ಆದರೂ, ಡಾ.ವಿಷ್ಣು ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ. ಸ್ಮಾರಕ ನಿರ್ಮಾಣಕ್ಕೆ ಎದುರಾಗಿರುವ ಕಂಟಕ ಇನ್ನೂ ನಿವಾರಣೆ ಆಗಿಲ್ಲ.

ಇದೇ ವಿಚಾರದ ಕುರಿತಾಗಿ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಕೂಡ ಸಿ.ಎಂ.ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿರುವ ಕಿರುತರೆ ಹಾಗೂ ಸ್ಯಾಂಡಲ್ ವುಡ್ ನಟ ಮಹೋನ್ನತ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ.

ಹೌದು, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ತಮ್ಮ ಚಾಮರಾಜನಗರ ಜಿಲ್ಲೆಯಲ್ಲಿ 1 ಎಕರೆ ಜಾಗ ಕೊಡಲು ನಟ ಆರ್ವ ನಿರ್ಧರಿಸಿದ್ದಾರೆ. ಈ ಬಗ್ಗೆ ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡ ನಡೆಸಿದ ಸಂದರ್ಶನದಲ್ಲಿ ಆರ್ವ ಅಲಿಯಾಸ್ ಬಸವಟ್ಟಿ ಲೋಕೇಶ್ ಮಾತನಾಡಿದ್ದು ಹೀಗೆ....

* ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ಮಾಡಿದ್ದು ಯಾಕೆ.?

- ನಾನು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದೇನೆ. ಅವರ ಸ್ಮಾರಕ ನಿರ್ಮಾಣವನ್ನು ಬೆಂಗಳೂರಿನಲ್ಲಿ ಮಾಡಬೇಕೆಂದು ಹಲವರು, ಮೈಸೂರಿನಲ್ಲಿ ಮಾಡಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳಾದರೂ ಸ್ಮಾರಕ ನಿರ್ಮಾಣವಾಗಿಲ್ಲ. ವಿಷ್ಣು ಅವರ ಪತ್ನಿ ಭಾರತಿ ಅವರು ಸ್ಮಾರಕ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ, ಜಾಗದ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಾನು ಸ್ಮಾರಕಕ್ಕೆ ಜಾಗ ಕೊಡಲು ಮುಂದಾಗಿದ್ದೇನೆ.

ಸ್ಮಾರಕ ನಿರ್ಮಾಣಕ್ಕೆ ನೀವೆಷ್ಟು ಜಾಗ ಕೊಡಲು ತಯಾರಿದ್ದೀರಾ.? ಪ್ರತಿಫಲಾಪೇಕ್ಷೆ ಏನು.?

- ನನಗೆ ಯಾವ ಪ್ರತಿಫಲಾಪೇಕ್ಷೆಯೂ ಬೇಕಿಲ್ಲ. ನಾನು ಚಾಮರಾಜನಗರ ಜಿಲ್ಲೆಯ ಬಸವಟ್ಟಿ ಗ್ರಾಮದವನಾಗಿದ್ದು, ಗ್ರಾಮದಲ್ಲಿರುವ ನನ್ನ ಜಮೀನಿನಲ್ಲಿ 1 ಎಕರೆ ಜಮೀನನ್ನು ವಿಷ್ಣು ಸ್ಮಾರಕಕ್ಕೆ ನೀಡಲು ಸಿದ್ಧ ಇದ್ದೇನೆ. ಇದಕ್ಕೆ ನನ್ನ ಪೋಷಕರೂ ಸಮ್ಮತಿ ನೀಡಿದ್ದಾರೆ. ಈ ಸಂಬಂಧ ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸುತ್ತೇನೆ.

ನಿಮ್ಮ ನಿರ್ಧಾರ ಪ್ರಚಾರಕ್ಕಾಗಿ ಎಂದೆನಿಸುತ್ತಿದೆಯಲ್ಲಾ.?

- ಖಂಡಿತ ಇಲ್ಲ. ನಾನು ಚಿತ್ರರಂಗಕ್ಕೆ ನನ್ನದೇ ಆದ ಕೊಡುಗೆ ನೀಡಬೇಕೆಂಬ ಹಂಬಲವುಳ್ಳವನು. ಈ ರೀತಿ ಕೀಳಮಟ್ಟದ ಪ್ರಚಾರವನ್ನು ದಂತಕಥೆಯ ನಾಯಕನ ವಿಚಾರದಲ್ಲಿ ಮಾಡಲು ಯೋಚನೆಯೂ ಕೂಡ ನನಗೆ ಬರುವುದಿಲ್ಲ. ನನ್ನದು ವೇಗದ ನಿರ್ಧಾರ. ಈ ಕುರಿತಾಗಿ ಯಾರೊಂದಿಗೂ ನಾನು ಚರ್ಚಿಸಿಯೂ ಇಲ್ಲ.

ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಭಾರತಿ ಅವರಿಗೆ ಸಂಪರ್ಕಿಸಿದ್ದೀರಾ ?

- ಇಲ್ಲ. ಈ ಬಗ್ಗೆ ಯೋಚಿಸುತ್ತಿದ್ದೇನೆ. ಮಾಧ್ಯಮಗಳಿಂದ ಅವರಿಗೆ ಈ ವಿಚಾರ ತಲುಪಿದೆ ಎಂದು ಅಂದುಕೊಂಡಿದ್ದೇನೆ. ಇಂತಹ ವಿಚಾರಗಳನ್ನು ಮಾಧ್ಯಮಗಳು ಇನ್ನಷ್ಟು ತೀವ್ರಗೊಳಿಸಿ ಅವರಿಗೆ ತಲುಪುವ ತನಕ ಪ್ರಯತ್ನಿಸಿ. ನನ್ನ ಅಳಿಲು ಸೇವೆಗೆ ಸಹಕರಿಸುವಂತೆ ಕೋರುತ್ತೇನೆ.

English summary
Small Screen Actor Basavatti Lokesh is ready to offer land in Chamarajnagar for Dr.Vishnuvardhan memorial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X