ಚಿತ್ರೀಕರಣ ವೇಳೆ ಕುಸಿದು ಬಿದ್ದು ಮಲಯಾಳಂ ನಟ ನಿಧನ
ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್ (44) ಚಿತ್ರೀಕರಣ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದ ಕೊಚ್ಚಿಯಲ್ಲಿ 'ಕೊಚಿನ್ ಕೊಲಾಜ್' ಚಿತ್ರದ ಚಿತ್ರೀಕರಣ ಮಾಡುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ಕೂಡಲೇ ಪ್ರಬೀಶ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮೊದಲೇ ನಟ ಪ್ರಬೀಶ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಚಿತ್ರತಂಡ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಟೆಲಿ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿತ್ತು. ಕೊಚ್ಚಿಯ ಕುಂದನ್ನೂರ್ ರಸ್ತೆಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕದಲ್ಲಿ ಚಿತ್ರೀಕರಣ ಮಾಡಿದೆ. ಚಿತ್ರದಲ್ಲಿ ಪ್ರಬೀಶ್ ವಿದೇಶಿಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದ ಪ್ರಬೀಶ್ ಸಹೋದ್ಯೋಗಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದಾರೆ. ಕುಡಿಯಲು ನೀರು, ಬೇಗ ನೀರು ಕೊಡಿ ಎಂದು ಕೇಳಿದ್ದಾರೆ. ನೀರು ಕುಡಿದ ಕೂಡಲೇ ಪ್ರಬೀಶ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಬೀಶ್ ಅನೇಕ ಟೆಲಿಫಿಲ್ಮ್ ಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಗುರುತಿಸಿಕೊಳ್ಳುವ ಜೊತೆಗೆ ಡಬ್ಬಿಂಗ್ ಕಲಾವಿದನಾಗಿ ಖ್ಯಾತಿಗಳಿಸಿದ್ದಾರೆ. ಪ್ರಬೀಶ್ ತಂದೆ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.


Click it and Unblock the Notifications











