ಸ್ಟಾರ್ ನಟನ ಜೊತೆ ಮಲಯಾಳಂ ಇಂಡಸ್ಟ್ರಿ ಪ್ರವೇಶಿಸಿದ ಶಾನ್ವಿ ಶ್ರೀವಾಸ್ತವ್
ತೆಲುಗು, ಕನ್ನಡದಲ್ಲಿ ಯಶಸ್ವಿ ನಟಿ ಎನಿಸಿಕೊಂಡಿರುವ ಶಾನ್ವಿ ಶ್ರೀವಾಸ್ತವ್ ಈಗ ಮಲಯಾಳಂ ಇಂಡಸ್ಟ್ರಿ ಪ್ರವೇಶಿಸಿದ್ದಾರೆ. ಮಾಲಿವುಡ್ ಸ್ಟಾರ್ ನಟ ನಿವಿನ್ ಪೌಲಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಮೂಲಕ ಮಲಯಾಳಂ ಇಂಡಸ್ಟ್ರಿಯಲ್ಲಿ ಶಾನ್ವಿ ಚೊಚ್ಚಲ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರಕ್ಕೆ 'ಮಹಾವೀರ್ಯರ್' ಹೆಸರಿಡಲಾಗಿದ್ದು, ಜೈಪುರದಲ್ಲಿ ಇಂದು ಚಿತ್ರದ ಮುಹೂರ್ತ ನೆರವೇರಿದೆ.
ಅಬ್ರಿಡ್ ಶೈನ್ ಈ ಚಿತ್ರ ನಿರ್ದೇಶಿಸುತ್ತಿದ್ದು, ನಿವಿನ್ ಪೌಲಿ ಮತ್ತು ಆಸಿಫ್ ಅಲಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಇಬ್ಬರ ಜೊತೆ ಶಾನ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಮಹಾವೀರ್ಯರ್' ಚಿತ್ರದ ಮುಹೂರ್ತದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ''ಈ ವರ್ಷದ ಆರಂಭದಲ್ಲಿ ಒಂದೊಳ್ಳೆ ಹೆಜ್ಜೆ ಮೂಲಕ ಆರಂಭಿಸಿದ್ದೇನೆ. ಒಳ್ಳೆಯದಾಗಲಿ ಎಂದು ಎಲ್ಲರೂ ಹಾರೈಸಿ'' ಎಂದು ವಿನಂತಿಸಿದ್ದಾರೆ.
2012ರಲ್ಲಿ ತೆಲುಗಿನ 'ಲವ್ಲಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶಾನ್ವಿ ಅಡ್ಡ, ರೌಡಿ, ಪ್ಯಾರ್ ಮೈನೇ ಪಡಿಪೋಯಿನೆ ಎಂಬ ಸಿನಿಮಾಗಳಲ್ಲಿ ನಟಿಸಿದರು. ಬಳಿಕ 2014 ರಲ್ಲಿ ಚಂದ್ರಲೇಖ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು.
ಮಾಸ್ಟರ್ ಪೀಸ್ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡರು. ಇಲ್ಲಿಂದ ಶಾಶ್ವತವಾಗಿ ಸ್ಯಾಂಡಲ್‌ವುಡ್‌ನಲ್ಲೇ ಉಳಿದುಕೊಂಡ ಶಾನ್ವಿ ಈಗ ಮಲಯಾಳಂ ಕಡೆ ಹೆಜ್ಜೆಯಿಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಉಪೇಂದ್ರ-ರವಿಚಂದ್ರನ್ ಅಭಿನಯದ ತ್ರಿಶೂಲಂ, ಕಸ್ತೂರಿ ಮಹಲ್, ಬ್ಯಾಂಗ್ ಸಿನಿಮಾಗಳಲ್ಲಿ ಶಾನ್ವಿ ನಟಿಸುತ್ತಿದ್ದಾರೆ.


Click it and Unblock the Notifications











