»   »  ಬಿಎಸ್ ವೈ ಸನ್ಮಾನಕ್ಕೆ ವೈಎಸ್ ವಿ ದತ್ತ ಖಂಡನೆ

ಬಿಎಸ್ ವೈ ಸನ್ಮಾನಕ್ಕೆ ವೈಎಸ್ ವಿ ದತ್ತ ಖಂಡನೆ

Subscribe to Filmibeat Kannada

''ನಿರುದ್ಯೋಗ ಸಮಸ್ಯೆ ಎಲ್ಲಿಲ್ಲ ಹೇಳಿ. ಅದೊಂದು ಜಾಗತಿಕ ಸಮಸ್ಯೆ. ಸಮಾಜದಲ್ಲಿ ನಿರುದ್ಯೋಗಿಗಳ ಸಂಖ್ಯೆ ಸಹ ಅಧಿಕವಾಗಿದೆ. ನಿರುದ್ಯೋಗಿಗಳ ಸಮುದಾಯ ದೊಡ್ಡದು. ಹಾಗಾಗಿ ಪ್ರೇಕ್ಷಕರು ಚಿತ್ರ ನೋಡಲು ಅಡ್ಡಿಯಿಲ್ಲ'' ಎಂದು 'ನಿರುದ್ಯೋಗಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ ನಂತರ ಜೆಡಿಎಸ್ ನ ವಕ್ತಾರ ವೈಎಸ್ ವಿ ದತ್ತ ಹೇಳಿದರು.

ಸಾಮಾಜಿಕ ಸಮಸ್ಯೆಯನ್ನು ಮನ ಮಿಡಿಯುವಂತೆ ನಿರುದ್ಯೋಗಿ' ಚಿತ್ರದಲ್ಲಿ ತೋರಿಸಲಾಗಿದೆ ಎಂದು ವೈಎಸ್ ವಿ ದತ್ತ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಾಲ್ಕು ಮಂದಿ ಸಚಿವರನ್ನು ಸನ್ಮಾನಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯನ್ನು ದತ್ತ ಖಂಡಿಸಿದರು.

ನಿರುದ್ಯೋಗಿ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಿರ್ಮಾಪಕ ಮತ್ತು ರಾಜಕಾರಣಿ ಈ ಕೃಷ್ಣಪ್ಪ ಸಹ ಆಗಮಿಸಿದ್ದರು. ಅವರು ಮಾತನಾಡುತ್ತಾ, ಪೈರಸಿ ವಿರೋಧಿ ಕಾಯಿದೆಯನ್ನು ಜಾರಿಗೆ ತಂದ ಸರಕಾರವನ್ನು ಸನ್ಮಾನಿಸಿದ್ದು ಎಷ್ಟು ಸಮಂಜಸ ಎಂದು ಕಿಡಿಕಾರಿದರು. ತಾವು ಚಿತ್ರ ನಿರ್ಮಾಪಕರಾಗಿದ್ದರೂ ಸನ್ಮಾನ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಿರುದ್ಯೋಗಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಿರುದ್ಯೋಗಿ ಚಿತ್ರವನ್ನು ಚಿಕ್ಕಗುಟ್ಟಯ್ಯ ಸರಿಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಅವರ ಸಹೋದರ ಚಂದ್ರಕಾಂತ್ ಚಿತ್ರದ ನಾಯಕ ನಟ. ಪುಷ್ಪಲತಾ ಚಿತ್ರದ ನಾಯಕಿ.ಉದಿತ್ ನಾರಾಯಣ್ ಅವರನ್ನು ಹೊರತುಪಡಿಸಿದರೆ ಚಿತ್ರದಲ್ಲಿನ ಗಾಯಕರೆಲ್ಲಾ ಕರ್ನಾಟಕದವರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ ಎಂದು ಸಂಗೀತ ನಿರ್ದೇಶಕ ಎಟಿ ರವೀಶ್ ತಿಳಿಸಿದರು.

ನಿರುದ್ಯೋಗಿ ಧ್ವನಿಸುರುಳಿಯನ್ನು ಲಹರಿ ಆಡಿಯೋ ಕಂಪನಿ ಮಾರುಕಟ್ಟೆಗೆ ತಂದಿದೆ. ಎಟಿ ರವೀಶ್ ಅವರ ಸಂಗೀತದ ಮಟ್ಟುಗಳು ಮನತಟ್ಟುವಂತಿದೆ ಎಂದು ಲಹರಿ ವೇಲು ತಿಳಿಸಿದರು. ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ನಿರುದ್ಯೋಗಿ ಚಿತ್ರತಂಡದ ಬಹುತೇಕರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada