»   » ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಜೈ ಹೊ!

ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಜೈ ಹೊ!

Posted By: * ಚಿತ್ರಜೀವಿ
Subscribe to Filmibeat Kannada
Vijay Prakash Jai Ho
ಎಲ್ಲೆಲ್ಲೂ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈ ಹೊ...ಹಾಡಿನದ್ದೇ ಅಬ್ಬರ. ಆಸ್ಕರ್ ಪ್ರಶಸ್ತಿಯ ಭರಾಟೆ,ರೆಹಮಾನ್ ಸಂಗೀತ ಸುಧೆಯಲ್ಲಿ ಜೈ ಹೊ...ಗಾಯಕರಲ್ಲಿ ಒಬ್ಬರಾದ ಅಪ್ಪಟ ಕನ್ನಡಿಗ ವಿಜಯ್ ಪ್ರಕಾಶ್ ರನ್ನು ಜನ ಮರೆತೇ ಬಿಟ್ಟರು.ಎಲೆ ಮರೆಯ ಕಾಯಿಯಂತೆ ಉಳಿದುಬಿಟ್ಟ ವಿಜಯ್ ಪ್ರಕಾಶ್.

ವಿಜಯ್ ಪ್ರಕಾಶ್ ಮೂಲತಃ ಮೈಸೂರಿನವ. ಹೆಚ್ಚಾಗಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರತಿಭಾವಂತ. ಮುಂಬೈನತ್ತ ಪಲಾಯನವಾದ ಪ್ರತಿಭೆ.ಯುವರಾಜ, ಕಾಲ್, ಸ್ವೇಡ್ಸ್, ಲಕ್ಷ್ಯ, ಮಾತೃಭೂಮಿ, ತೇರೆ ನಾಮ್...ಚಿತ್ರಗಳ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡವರು. ಅಪ್ಪಟ ಕನ್ನಡಿಗನಾದರೂ ಅನ್ಯ ಭಾಷೆಗಳಲ್ಲಿ ಗುರಿತಿಸಿಕೊಂಡಿದ್ದೇ ಹೆಚ್ಚು. ತಮಿಳು, ತೆಲುಗು ಸಿನಿಮಾಗಳಿಗೂ ವಿಜಯ್ ಗಾನಸುಧೆ ಹರಿದಿದೆ. ಯೋಗರಾಜ ಭಟ್ಟರ ಗಾಳಿಪಟ ಚಿತ್ರದ 'ಕವಿತೆ ನೀನೇಕೆ ಪದಗಳಲಿ ಅವಿತೆ .. ' ಎಂಬ ಹೃದಯಮಿಡಿಯುವ ಗೀತೆಗೆ ವಿಜಯ್ ಅವರದೇ ಕಂಠ. ಆದರೆ ಅದ್ಯಾಕೊ ಏನೋ ಕನ್ನಡ ಚಿತ್ರಗಳಲ್ಲಿ ವಿಜಯ್ ಗೆ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ.

'ಕಾಂಡೊಮ್ ಕಾಂಡೊಮ್ ಕಾಂಡೊಮ್...ಕಾಂ..ಡೋಂ...ಮ್ ಎಂದು ಕೊನೆಯಲ್ಲಿ ಅಬ್ಬರದ ಸಂಗೀತದೊಂದಿಗೆ ಕೊನೆಯಾಗುವ ಜಾಹೀರಾತನ್ನು ತಿಳಿಯದ ಶೂರನೇ ಇಲ್ಲ. ಏಡ್ಸ್ ಕುರಿತು ಜಾಗೃತಿ ಮೂಡಿಸುವ ಈ ಜಾಹೀರಾತಿನ ಗಾಯಕರಲ್ಲಿ ವಿಜಯ್ ಸಹ ಒಬ್ಬರು! ಚೀನಿ ಚಿತ್ರ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ. ಎಚ್ ಡಿಎಫ್ ಸಿ, ನಾರ್ ಸೂಪ್ಸ್ ಸೇರಿದಂತೆ ಹಲವಾರು ಜಾಹೀರಾತುಗಳ ಗಾಯಕ.

ಸೋನು ನಿಗಂ ಜೀ ವಾಹಿನಿಯಲ್ಲಿ ಪ್ರಸ್ತುತ ಪಡಿಸಿದ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಪ್ರಕಾಶ್ ನಂತರ1999ರಲ್ಲಿ ಮೆಗಾ ಫೈನಲ್ಸ್ ಗೆ ಪ್ರವೇಶಿಸಿ ಗೆದ್ದವರು. ಈ ಸ್ಪರ್ಧೆಯಲ್ಲಿ ಗಾಯಕಿ ಶ್ರೇಯಾಘೋಷಾಲ್, ಅರ್ಚನಾ ಉಡುಪ ಇದ್ದದ್ದೂ ವಿಶೇಷ. ಜೀ ಕನ್ನಡದ ಸರೆಗಮಪ ಎಂಬ ರಿಯಾಲಿಟಿ ಶೋ ಮೂಲಕ ಮನೆಮಾತಾದ ಗಾಯಕ. ನಂತರ ಅವಕಾಶಗಳು ಒಂದೊಂದಾಗಿ ಹುಡುಕಿಕೊಂಡು ಬರಲು ಪ್ರಾರಂಭಿಸಿದವು.

ವಿಜಯ್ ತಂದೆ ಎಲ್ ರಾಮಶೇಷ ಮತ್ತು ತಾಯಿ ಲೋಪ ಮುದ್ರಗಾಯಕರು. ಪತ್ನಿ ಮಹತಿ ಸಹ ಗಾಯಕಿ. ಇವರ ಸಹೋದರ ಫಣೀಂದರ್ ರಂಗ ಕಲಾವಿದ. ಸಂಗೀತ ಎಂಬುದು ರಕ್ತದೊಂದಿಗೇ ಬೆರೆತ ಕುಟುಂಬ. ಪ್ರಕಾಶ್ ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಬೇಕು ಎಂಬುದು ತಂದೆಯ ಇಚ್ಛೆಯಾಗಿತ್ತು. ಆದರೆ ಪ್ರಕಾಶ್ ಗೆ ಮಾತ್ರ ಹಿಂದೂಸ್ತಾನಿ ಗಾಯನದಲ್ಲಿ ಒಲವು. ಹಿಂದೂಸ್ತಾನಿ ಸಂಗೀತ ಮುಂಬೈನತ್ತ ಸೆಳೆದುಕೊಂಡು ಹೋಯಿತು. ಅಲ್ಲಿ ಸುರೇಶ್ ವಾಡ್ಕರ್ ಬಳಿ ಶಿಷ್ಯವೃತ್ತಿ ಆರಂಭ.

ಮೊದಲ ಬಾರಿ ರೆಹಮಾನ್ ಸಾಬ್ ಸ್ಲಂಡಾಗ್ ಚಿತ್ರದ 'ಜೈ ಹೊ...' ಹಾಡಲು ಕರೆದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಚಿತ್ರೋದ್ಯಮದಲ್ಲಿ ಅತಿರಥ ಮಹಾರಥ ಗಾಯಕರಿರಬೇಕಾದರೆ ನನ್ನನ್ನುಕರೆದದ್ದು ಅಚ್ಚರಿ ಮೂಡಿಸಿತ್ತು. ಆ ಹಾಡು ಆಸ್ಕರ್ ಪ್ರಶಸ್ತಿ ಗಳಿಸುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.ನನಗೆ ಅವಕಾಶ ಕೊಟ್ಟ ರೆಹಮಾನ್ ಗೆ ಚಿರಋಣಿ ಎನ್ನುವಮುಗ್ಧ.

ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ
ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada