ದುರಂತ ಸಾವಿಗೀಡಾದ ಅದಿತ್ಯನಿಗೆ ಚರಮ ಗೀತೆ

ಪೋಷಕರು ಬುದ್ಧಿ ಮಾತು ಅರಗಿಸಿಕೊಳ್ಳಲಾಗದೆ ನೇಣಿಗೆ ಶರಣಾದ ಪ್ರತಿಭಾವಂತ ಗಾಯಕ ಆದಿತ್ಯ ನಾಡಿಗ್ ಸಾವಿಗೆ ಕನ್ನಡಿಯಂತಿದೆ ಈ ನಾಟಕದ ದೃಶ್ಯ. ಆದಿತ್ಯನ ಸಾವಿನಿಂದ ಮುಂದಿನ ಪೀಳಿಗೆ ಪಾಠ ಕಲಿಯಬೇಕಿದೆ. ಈ ನಾಟಕದಲ್ಲಿ ಆದಿತ್ಯನ ಎಪಿಎಸ್ ಕಾಲೇಜಿನವರೇ ಕೆಲವರು ನಟಿಸಿದ್ದರು ಎಂಬುದು ಕಾಕತಾಳೀಯ.
ಇಟ್ಟಮಡು ಸಮೀಪದ ಶ್ರೀರಾಮನಗರದಲ್ಲಿ ಶುಕ್ರವಾರ ರಾತ್ರಿ ನಡೆದ ದುರಂತ ಸಾವು ಮತ್ತೊಮ್ಮೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.
ರಾಮಸ್ವಾಮಿ ಮತ್ತು ಗಾಯತ್ರಿ ದಂಪತಿಯ ಮಗನಾದ ಆದಿತ್ಯ, ಬಸವನಗುಡಿಯ ಎಪಿಎಸ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ. ಓದಿಗಿಂತ ಹೆಚ್ಚಿಗೆ ಹಾಡುಗಾರಿಕೆಯಲ್ಲೇ ತಲ್ಲೀನನಾಗಿರುತ್ತಿದ್ದ.
ಸುವರ್ಣ, ಕಸ್ತೂರಿ, ಜೀ ಕನ್ನಡ ವಾಹಿನಿಗಳ ರಿಯಾಲಿಟಿ ಶೋ, ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಮಿಂಚಿದ್ದ. ರಾಜೇಶ್ ಕೃಷ್ಣನ್, ಎಸ್ ಜಾನಕಿರಂಥ ಹಿರಿಯ ಗಾಯಕ, ಗಾಯಕಿಯರಿಂದ ಹಿತನುಡಿಗಳನ್ನು ಕೇಳಿ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದ.
ಆಗ ಬಂತು ಮುಂಬೈ ಕಾಲ್ : ಹಿಂದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹಾಡಲು ಅವಕಾಶ ಬಂದಿತ್ತು. ಖ್ಯಾತ ಗಾಯಕ ಹರಿಹರನ್ ಅವರು ಆದಿತ್ಯನ ಜೋಶ್ ಕಂಡು ಹೊಗಳಿದ್ದು, ಆದಿತ್ಯನಿಗೆ ಸಾಥ್ ನೀಡಿತ್ತು.
ಆದರೆ, ಮುಂಬೈಗೆ ಹೋಗಲು ಪೋಷಕರು ಒಪ್ಪಲಿಲ್ಲ. ಈ ವಿಷಯವಾಗಿ ಪ್ರತಿ ದಿನ ಜಗಳವಾಡುತ್ತಿದ್ದ ಆದಿತ್ಯ ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿದ್ದು ದುರಂತ.
ಚೆನ್ನಮ್ಮನಕೆರೆ ಅಚ್ಚುಕಟ್ಟೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಜ ಕಾರಣ ಹುಡುಕುತ್ತಿದ್ದಾರೆ. ಆದಿತ್ಯನಿಗೆ ಅಭಿಮಾನಿ ಬಳಗ ಅಶ್ರುತುಂಬಿದ ಕಂಗಳಿಂದ ಚರಮಗೀತೆ ಸಲ್ಲಿಸುತ್ತಿದೆ.


Click it and Unblock the Notifications











