»   »  ಕಾಡುಕುದುರೆ ಖ್ಯಾತಿಯ ಸುಬ್ಬಣ್ಣನಿಗೆ ಗೌರವ

ಕಾಡುಕುದುರೆ ಖ್ಯಾತಿಯ ಸುಬ್ಬಣ್ಣನಿಗೆ ಗೌರವ

Posted By:
Subscribe to Filmibeat Kannada
Shivmoga Subbanna
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 7ನೇ ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ರಾಷ್ಟ್ರ ಪ್ರಶಸ್ತಿ ಖ್ಯಾತಿಯ ಶಿವಮೊಗ್ಗ ಸುಬ್ಬಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಫೆಬ್ರವರಿ 14 ಮತ್ತು 15ರಂದು ಸಮ್ಮೇಳನ ನಡೆಯಲಿದೆ. ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ತಿಳಿಸಿದರು.

ಡಾ.ಚಂದ್ರಶೇಖರ ಕಂಬಾರರ ''ಕಾಡು ಕುದುರೆ ಓಡಿ ಬಂದಿತ್ತಾ....ಕಾಡಿನಿಂದ ಚೆಂಗನೆ ನೆಗೆದಿತ್ತಾ...'' ಹಾಡು ಇಂದಿಗೂ ಕನ್ನಡ ಚಿತ್ರಗೀತೆಗಳಲ್ಲಿ ಅವಿಸ್ಮರಣೀಯ ಗೀತೆ. ಈ ಹಾಡನ್ನು ಶಿವಮೊಗ್ಗ ಸುಬ್ಬಣ್ಣ ತಮ್ಮ ಕಂಚಿನ ಕಂಠದಿಂದ ಹಾಡಿ ಇಡೀ ಕನ್ನಡಿಗರ ಜನಮಾನಸವನ್ನು ಸೂರೆಗೊಂಡಿದ್ದ್ದರು. ಶಿಶುನಾಳ ಷರೀಫರ ಗೀತೆಗಳು, ಕುವೆಂಪು ಗೀತೆಗಳನ್ನು ಸುಬ್ಬಣ್ಣ ಮನದುಂಬಿ ಹಾಡಿ ಕೇಳುಗರ ಹೃದಯವನ್ನು ಕದ್ದವರು.

ಶಿವಮೊಗ್ಗ ಸುಬ್ಬಣ್ಣ ಅವರು 70ನೇ ವಸಂತಕ್ಕೆ ಅಡಿಯಿಟ್ಟ ಸಂದರ್ಭದ ಪ್ರಯುಕ್ತ ಜ.5ರಂದು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 'ಗೌರವಾನ್ವಿತ ಗಾಯಕ, ಡಾ.ಶಿವಮೊಗ್ಗ ಸುಬ್ಬಣ್ಣ' ಅಭಿನಂದನಾ ಗ್ರಂಥವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ಸುಂದರ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಗೌರಿ ಸುಂದರ್ ಸಂಪಾದಿಸಿದ್ದರು.

ತುಮಕೂರಿನಲ್ಲಿ ನಡೆಯುವ ಸಮ್ಮೆಳನದ ಪ್ರಯುಕ್ತ ಮಧುಗಿರಿ, ತಿಪಟೂರು ಮತ್ತು ತುಮಕೂರಿನ 300ಕ್ಕೂ ಹೆಚ್ಚು ಸುಗಮ ಸಂಗೀತ ಆಸಕ್ತರಿಗೆ ತರಬೇತಿ ನೀಡಿ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಬಿ.ಕೆ.ಸುಮುತ್ರ, ಇಂದು ವಿಶ್ವನಾಥ್, ವೃಂದಾ ಎಸ್.ರಾವ್, ಜಯಶ್ರೀ ಅರವಿಂದ್, ಬಿ.ವಿ.ಶ್ರೀನಿವಾಸ್ ಆಸಕ್ತರಿಗೆ ತರಬೇತಿ ನೀಡಲಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಪರಂಪರೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ವಿಶೇಷ ಕಾರ್ಯಕ್ರಮದಡಿ ಪಂಪ, ಜನ್ನ, ರನ್ನ, ಕುಮಾರವ್ಯಾಸ, ಬಸವಣ್ಣ ಮತ್ತಿತರರ ಕಾವ್ಯ ಪರಂಪರೆಯ ಗಾಯನ ವಾಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೈ.ಕೆ.ಮುದ್ದುಕೃಷ್ಣ ವಿವರ ನೀಡಿದ್ದಾರೆ.

ವೃತ್ತಿಯಿಂದ ಹೈಕೋರ್ಟ್ ವಕೀಲರಾದ ಸುಬ್ಬಣ್ಣ ಪ್ರವೃತ್ತಿಯಿಂದ ಗಾಯಕರು. ಸುಗಮ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕುವೆಂಪು ವಿವಿಯಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಆಕಾಶವಾಣಿ, ದೂರದರ್ಶನದಲ್ಲಿ ಸುಬ್ಬಣ್ಣ ಅವರ ಭಾವಗೀತೆಗಳ ಕಾರ್ಯಕ್ರಮ ಬಹಳಷ್ಟು ಜನಪ್ರಿಯ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಕರ್ನಾಟಕ ಸರ್ಕರದ ಸಂತ ಶಿಶುನಾಳ ಷರೀಫ ಪ್ರಶಸ್ತಿಗಳು ಸುಬ್ಬಣ್ಣ ಅವರನ್ನು ವರಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada