»   »  ಜಗ್ಗೇಶ್ ಚಂಕಾಯ್ಸಿ ಕೋಮಲ್ ಚಿಂದಿ ಉಡಾಯ್ಸಿ

ಜಗ್ಗೇಶ್ ಚಂಕಾಯ್ಸಿ ಕೋಮಲ್ ಚಿಂದಿ ಉಡಾಯ್ಸಿ

Subscribe to Filmibeat Kannada
Jaggesh
ನವರಸ ನಾಯಕ ಜಗ್ಗೇಶ್ ಭಾವುಕರಾಗಿ ಗಳಗಳನೆ ಕಣ್ಣೀರಿಟ್ಟ ಪ್ರಸಂಗ 'ಚಂಕಾಯ್ಸಿ ಚಿಂದಿ ಉಡಾಯ್ಸಿ' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆಯಿತು. ಜಗ್ಗೂ ನಿನ್ನ ತಮ್ಮನನ್ನು ಬೆನ್ನಿಗೆ ಹಾಕಿಕೊಳ್ಳೋ...ಎಂದು ತಮ್ಮನ ಬಗ್ಗೆ ತಾಯಿ ಹೇಳಿದ ಮಾತುಗಳು ನೆನಪಾಗಿ ಜಗ್ಗೇಶ್ ಕಣ್ಣಾಲಿಗಳು ತುಂಬಿಬಂದಿದ್ದವು. ಅವರ ಕಣ್ಣೀರ ಕೋಡಿ ಇಡೀ ಸಭೆಯಲ್ಲಿ ಮೌನ ಕವಿಯುವಂತೆ ಮಾಡಿತು.

ಕೋಮಲ್ ಕುಮಾರ್ ನನ್ನ ತಮ್ಮ ಅಲ್ಲ ಅವನು ನನ್ನ ಮಗ. ನಮ್ಮ ಕುಟುಂಬದ ಏಕೈಕ ಬುದ್ಧಿವಂತ. ವಿಭಿನ್ನವಾಗಿ ಆಲೋಚಿಸುವ ಅವನು ಆಲೋಚನೆಯಲ್ಲಿ ವಿ ರವಿಚಂದ್ರನ್ ರ ಸೋದರಸಂಬಂಧಿ ಇದ್ದಂತೆ ಎಂದು ಜಗ್ಗೇಶ್ ತಮ್ಮನ ಸಾಮರ್ಥ್ಯವನ್ನು ಮೆಚ್ಚಿದರು. ನಮಗಂತೂ ತಲೆಗೆ ವಿದ್ಯೆ ಹತ್ತಲಿಲ್ಲ. ಅವನು ಎಲ್ ಎಲ್ ಬಿಯನ್ನು ಡಿಸ್ಟಿಂಗ್ಷನ್ ನಲ್ಲಿ ಪಾಸು ಮಾಡಿದ್ದ ಎಂದರು.

ಸಿನಿಮಾ ಸಹವಾಸ ಬೇಡ ಎಂದು ಕೋಮಲ್ ಗೆ ಬುದ್ಧಿ ಹೇಳಿದ್ದೆ. ಆದರೆ ಅವನು ಕೇಳಬೇಕಲ್ಲ. 'ಬಂಡ ನನ್ನ ಗಂಡ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ.ಅವನು ಈ ಹಂತಕ್ಕೆ ತಲುಪುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಸ್ವಾರ್ಥಿ, ಆದರೆ ಕೋಮಲ್ ಹಾಗಲ್ಲ ಎಂದು ಜಗ್ಗೇಶ್ ತಮ್ಮನ ಬೆನ್ನುತಟ್ಟಿದರು.

ಜಗ್ಗೇಶ್ ಅಂದಿನ ದಿನಗಳನ್ನುನೆನಸಿಕೊಳ್ಳುತ್ತಾ, ಚಿತ್ರ ಬಿಡುಗಡೆಯಾದ ಒಂದು ವಾರದಲ್ಲೇ ಅರ್ಧ ಬಂಡವಾಳ ಬರುತ್ತಿತ್ತು. ಆದರೆ ಪ್ರೇಕ್ಷಕ ಇಂದು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಚಿತ್ರದ ಹಾಡುಗಳು ಚಂಕಾಯ್ಸಿ ಚಿಂಡಿ ಉಡಾಯಿಸುವ ರೀತಿಯಲ್ಲಿ ಇವೆ ಎಂಬುದು ನಿರ್ಮಾಪಕರ ಅಭಿಪ್ರಾಯ. ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಾಲಾಜಿ ಸಂಗೀತ ಸಂಯೋಜಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada