»   » ಪುನೀತ್ 'ರಾಮ್' ಚಿತ್ರದ ಧ್ವನಿಸುರುಳಿ ವಿಮರ್ಶೆ

ಪುನೀತ್ 'ರಾಮ್' ಚಿತ್ರದ ಧ್ವನಿಸುರುಳಿ ವಿಮರ್ಶೆ

Posted By: *ನಿಸ್ಮಿತಾ
Subscribe to Filmibeat Kannada

ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ ನಟನೆಯ 'ರಾಮ್' ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳು ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿರುವುದು ಗೊತ್ತೇ ಇದೆ. 'ರೆಡಿ ಫಾರ್ ಎನಿಥಿಂಗ್' ಎಂಬುದು ಚಿತ್ರದ ಅಡಿಬರಹ. ಚಿತ್ರದ ಹಾಡುಗಳು ಹೇಗಿವೆ ಎಂದು ಕೇಳುವವರಿಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ರಾಮ್' ಚಿತ್ರದ ಸಂಗೀತ ಮತ್ತು ಹಾಡುಗಳು ನಿರೀಕ್ಷಿತ ಮಟ್ಟದಲ್ಲಿಲ್ಲ.

ಗಜ, ಗಾಳಿಪಟ, ಪಯಣ, ಕೃಷ್ಣ ಮತ್ತು ಇತ್ತೀಚಿನ 'ರಾಜ್' ಚಿತ್ರಕ್ಕೆ ಸಂಗೀತ ನೀಡಿ ಯಶಸ್ವಿಯಾಗಿದ್ದ ಹರಿಕೃಷ್ಣ, ಈ ಚಿತ್ರದಲ್ಲೂ ಉತ್ತಮ ಸಂಗೀತ ನೀಡಿರಬಹುದು ಎಂಬ ಶ್ರೋತೃಗಳ ನಿರೀಕ್ಷೆ ಹುಸಿಯಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದು ಹಾಡನ್ನು ಪುನೀತ್ ಹಾಡಿರುವುದು ವಿಶೇಷ.ಚಿತ್ರದಲ್ಲಿನ ಎರಡು ಹಾಡುಗಳು ಕೇಳುವಂತಿದ್ದು ಉಳಿದ ನಾಲ್ಕು ಹಾಡುಗಳು ಉದ್ರೇಕಕಾರಿಯಾಗಿದೆ.

'ರಾಮ್' ಧ್ವನಿಸುರುಳಿ ಹೈಲೈಟ್ಸ್
* ಲೇ ಲೇ ಅಮ್ಮನ ಮಗಳೇ : ಟಿಪ್ಪು ಮತ್ತು ಮೇಘಾ ಹಾಡಿರುವ ಈ ಹಾಡಿಗೆ ಹರಿಕೃಷ್ಣ ಉತ್ತಮ ಟ್ಯೂನ್ ನೀಡಿದ್ದಾರೆನ್ನಬಹುದು.
* ನೀನಂದ್ರೆ ನನಗಿಷ್ಟ ಕಣೋ : ಸೋನು ನಿಗಮ್ ಮತ್ತು ನಂದಿತಾ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡು ಕೇಳುವವರಿಗೆ ಸ್ವಲ್ಪ ಕಸ್ಟವಾದರೂ ತೀರಾ ಕಳಪೆಯೆಂದೇನೂ ಇಲ್ಲ.
* ನನ್ನ ತುಟಿಯಲ್ಲಿ: ಉದಿತ್ ನಾರಾಯಣ್ ಮತ್ತು ಸೌಮ್ಯಾ ರಾವ್ ಹಾಡಿರುವ ಈ ಹಾಡು ಕೇಳುಗರ ತಾಳ್ಮೆ ಪರೀಕ್ಷಿಸುವಂತಿದೆ.
* ಹೊಸ ಗಾನ ಬಜಾನಾ: ಪುನೀತ್, ಸೂರಿ ಮತ್ತು ಸುರೇಶ್ ಹಾಡಿರುವ ಈ ಹಾಡು ಪಕ್ಕಾ ಪುನೀತ್ ಅಭಿಮಾನಿಗಳಿಗಾಗಿ.
* ಡಮ ಡೋಲು ಬಜಾರೆ: ಕಾರ್ತಿಕ್ ಮತ್ತು ನಂದಿತಾ ಹಾಡಿರುವ ಈ ಹಾಡು ಉತ್ತರ ಭಾರತ ಮತ್ತು ಕರ್ನಾಟಕ ಶೈಲಿಯಲ್ಲಿದೆ. ಹಾಡಿನ ಟ್ಯೂನ್ ಚೆನ್ನಾಗಿದೆ ಆದರೆ ಎಲ್ಲೋ ಈ ಮುಂಚೆ ಕೇಳಿದಂತಿದೆ.
* ರೆಡಿ ರೆಡಿ : ಚಿತ್ರದ ಟೈಟಲ್ ಹಾಡಾಗಿರುವ ಈ ಹಾಡನ್ನು ಕಾರ್ತಿಕೇಯನ್ ಹಾಡಿದ್ದಾರೆ. ಹಾಡಿನ ಟ್ಯೂನ್ ಚೆನ್ನಾಗಿಲ್ಲ ಅಂದರೆ ತಪ್ಪಾಗಲಾರದು
.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada