»   »  ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ

ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ

Subscribe to Filmibeat Kannada
ಪ್ರೇಮಿಗಳು ಹಾಗೂ ಭಗ್ನ ಪ್ರೇಮಿಗಳಿಗೆ ಏಕಕಾಲಕ್ಕೆ ಇಷ್ಟವಾಗುತ್ತದೆ 'ನಾನಿರುವುದೆ ನಿನಗಾಗಿ' (1979) ಚಿತ್ರದ ಒಲವಿನ ಗೆಳೆಯನೆ ನಿನಗೆ ಹಾಡು. ಅಂದಿನ ಸಾಹಿತ್ಯದಲ್ಲೇ ಸಂಗೀತ ಇತ್ತು ಎಂಬುದಕ್ಕೆ ಈ ಹಾಡು ಉದಾಹರಣೆ. ಪ್ರೇಮ ಪತ್ರ ಬರೆಯಲು ತಿಣುಕಾಡುವ ಇಂದಿನ ಪ್ರೇಮಿಗಳು ಚಿ.ಉದಯಶಂಕರ್ ಅವರ ಈ ಸಾಹಿತ್ಯವನ್ನು ಜತೆಗಿಟ್ಟುಕೊಂಡರೆ ಸಾಕು. ಅಚ್ಚಗನ್ನಡದಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳಲು ನೂರೆಂಟು ಸಾಲುಗಳು ದೊರೆಯುತ್ತವೆ. ರಾಜನ್ ನಾಗೇಂದ್ರ ಸಂಗೀತ ಎಸ್.ಜಾನಕಿ ಕಂಠ ಮಾಧುರ್ಯಕ್ಕೆ ಮಾರುಹೋಗದವರುಂಟೆ?

ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ
ನನ್ನೆದೆಯಾಳದಲಿ ನೆಲೆಸಿರುವ ದೇವನೆ ನಿನ್ನ
ಏನೆಂದು ಕರೆಯಲಿ ಏನೆಂದು ಬರೆಯಲಿ
ಗೆಳೆಯ ಪ್ರಿಯ ಗೆಳೆಯ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ

ನಿನ್ನ ಮನಸು ಬಲ್ಲೆನು ನಾನು
ನಿನ್ನಾಸೆ ಬಲ್ಲೆನು ನಾನು
ಹೂವಂತ ಹೃದಯವು ನಿನ್ನದು
ಜೇನಂತ ನುಡಿಗಳು ನಿನ್ನದು

ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು
ಕೊನೆಗೇನು ಕಾಣೆನು

ನೀ ನಡೆವ ಹಾದಿಯೆ ಬೇರೆ
ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು
ಗತಿಒಂದೆ ಸಂಕಟ ನೋವು

ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರು
ಒಲವಿನ ಗೆಳೆಯನು ನೀನೆ ನನ್ನ ಜೀವ ನನ್ನ ದೈವ
ನಿನ್ನ ಸುಖವೆ ನನ್ನ ಸುಖವು ನಿನಗೆಂದು ಶುಭ ಕೋರುವೆ
ಒಲವಿನ ಗೆಳೆಯನೆ ನೀನೆ ನನ್ನ ಜೀವ ನನ್ನ ದೈವ
ನನ್ನ ಜೀವ ನನ್ನ ದೈವ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada