»   »  ದೇವರು ಕೊಟ್ಟ ತಂಗಿ ಧ್ವನಿಸುರುಳಿ ಮಾರುಕಟ್ಟೆಗೆ

ದೇವರು ಕೊಟ್ಟ ತಂಗಿ ಧ್ವನಿಸುರುಳಿ ಮಾರುಕಟ್ಟೆಗೆ

Posted By:
Subscribe to Filmibeat Kannada

'ದೇವರು ಕೊಟ್ಟ ತಂಗಿ' ಸಿಡಿ ಮತ್ತು ಧ್ವನಿಸುರುಳಿಗಳನ್ನು ಸಾಂಪ್ರಾದಾಯಿಕ ಶೈಲಿಯಲ್ಲಿ ಬಿಡುಗಡೆ ಮಾಡಲಾಯಿತು. ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಗೌರಿಶಂಕರ್ ಮಹಲ್ ನಲ್ಲಿ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಓಂ ಸಾಯಿ ಪ್ರಾಕಾಶ್ ಅದ್ದೂರಿಯಾಗಿ ಆಯೋಜಿಸಿದ್ದರು.

ಗೌರಿಶಂಕರ್ ಮಹಲ್ ಮದುವೆ ಸಮಾರಂಭದಂತೆ ಕಂಗೊಳಿಸುತ್ತಿತ್ತು. ದೇವರನಾಮ ಮತ್ತು ಮಂಗಳವಾದ್ಯಗಳೊಂದಿಗೆ ಸಾಯಿಪ್ರಕಾಶ್ ಚಿತ್ರಗಳ ಶೈಲಿಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಂಗಳವಾದ್ಯಗಳು ಮೊಳಗುತ್ತಿದ್ದಂತೆ ಪಲ್ಲಕ್ಕಿಯಲ್ಲಿ ಧ್ವನಿಸುರುಳಿಗಳನ್ನು ತರಲಾಯಿತು. ನಂತರ ಸಿಂಗಾರಗೊಂಡ ತೊಟ್ಟಿಲಿಗೆ ಹಾಕಿ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಿಡಿ ಮತ್ತು ಧ್ವನಿಸುರುಳಿ ಬಿಡುಗಡೆ ಮಾಡಿದರು.

ಕ್ಯಾಸೆಟ್ ಬಿಡುಗಡೆ ನಂತರ ಮಾತನಾಡಿದ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್, ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿನ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಮಾಜಿ ತಂಗಿ ರಾಧಿಕಾರನ್ನು ಶಿವಣ್ಣ ನೆನೆದರು. ಆದರೆ ಕಾರ್ಯಕ್ರಮದಲ್ಲಿ ಶಿವಣ್ಣನ ಹೊಸ ತಂಗಿ ಮೀರಾ ಜಾಸ್ಮಿನ್ ಕಾಣಲಿಲ್ಲ.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡುತ್ತಾ, ಸಾಯಿಪ್ರಕಾಶ್ ಉತ್ತಮ ಚಿತ್ರವೊಂದನ್ನು ಮಾಡಿ ಹೆಂಗೆಳೆಯರ ಮನಸ್ಸು ಗೆದ್ದಿದ್ದಾರೆ. ಶಿವರಾಜ್ ಕುಮಾರ್ ಸಹ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಹೊಗಳಿದರು. ಕಾರ್ಯಕ್ರಮದಲ್ಲಿ ಮೋನಿಕಾ, ಹೇಮಾ ಚೌದರಿ, ಸುಮಿತ್ರಾ, ರೇಖಾ, ಹೇಮಶ್ರೀ, ಸಂಗೀತಾ, ಅನಿತಾ ಗೌಡ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada