»   » ಅಣ್ಣಾವ್ರ ಹುಟ್ಟುಹಬ್ಬಕ್ಕೆ ಜೋಗಯ್ಯ ಝೇಂಕಾರ

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಜೋಗಯ್ಯ ಝೇಂಕಾರ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 100ನೇ ಚಿತ್ರ 'ಜೋಗಯ್ಯ' ಚಿತ್ರೀಕರಣ ಅಂತ್ಯಗೊಂಡಿದೆ. ಮುತ್ತತ್ತಿಯಲ್ಲಿ ಕೊನೆಯ ಸನ್ನಿವೇಶವನ್ನು ಸೆರೆಹಿಡಿಯುವ ಮೂಲಕ ಜೋಗಯ್ಯ ಚಿತ್ರೀಕರಣಕ್ಕೆ ಅಂತ್ಯ ಹಾಡಲಾಯಿತು ಎಂದು ಚಿತ್ರದ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ತಂತ್ರಜ್ಞರು ಹಾಗೂ ಕಲಾವಿದರಿಗೆ ಭೂರಿ ಭೋಜನ ವ್ಯವಸ್ಥೆಯನ್ನು ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕಲ್ಪಿಸಿದ್ದದ್ದು ವಿಶೇಷ.

ಇದಕ್ಕೂ ಮುನ್ನ ಮೈಸೂರಿನಲ್ಲಿ ಹಾಡೊಂದನ್ನು ಚಿತ್ರೀಕರಿಸಲಾಗಿತ್ತು. ಮೈಸೂರು ಜಿಲ್ಲಾ ಪಂಚಾಯತ್ ಹಾಗೂ ಸಂದೇಶ್ ಹೋಟೆಲ್‌ನಲ್ಲಿ ಬಾಕಿ ಸನ್ನಿವೇಶಗಳ ಚಿತ್ರೀಕರಣವನ್ನೂ ಮಾಡಲಾಗಿತ್ತು. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳ ಬಗ್ಗೆ ತೀವ್ರ ಕುತೂಹಲ ಮನೆಮಾಡಿದ್ದು, ಎಲ್ಲರ ನಿರೀಕ್ಷೆಯಂತೆ ಹಾಡುಗಳು ಮೂಡಿಬಂದಿವೆ ಎಂಬ ಮಾತುಗಳು ಕೇಳಿಬಂದಿವೆ.

ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ ಏ.24ರಂದು ಚಿತ್ರದ ಧ್ವನಿಸುರುಳಿ ಹಾಗೂ ಧ್ವನಿಮುದ್ರಿಕೆಗಳು ಮಾರುಕಟ್ಟೆಗೆ ಅಪ್ಪಳಿಸಲಿವೆ. ಚಿತ್ರ ನಿರ್ಮಾಣೇತರ ಕೆಲಸಗಳು ಮೇ ಮೊದಲ ವಾರದಿಂದ ಆರಂಭವಾಗಲಿದ್ದು ಮೂರು ತಿಂಗಳಲ್ಲಿ ಮುಗಿಸಲು ಸಿದ್ಧತೆಗಳು ನಡೆಯುತ್ತಿವೆ. ಚಿತ್ರದಲ್ಲಿ ಗ್ರಾಫಿಕ್ಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ.

'ಜೋಗಿ' ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾಗಿತ್ತು. 'ಜೋಗಯ್ಯ' ಚಿತ್ರವನ್ನೂ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ತರಬೇಕು ಎಂದು ಪ್ರೇಮ್ ನಿರ್ಧರಿಸಿರುವುದಾಗಿ ಮೂಲಗಳು ಹೇಳುತ್ತಿವೆ. ಜೋಗಯ್ಯ ಹಾಡುಗಳು ಹೇಗಿರುತ್ತವೋ ಏನೋ ಎಂಬ ನಿರೀಕ್ಷೆಯಲ್ಲಿ ಶಿವಣ್ಣನ ಅಭಿಮಾನಿಗಳು ಕಾಯುತ್ತಿದ್ದಾರೆ.

English summary
Hat Trick Hero Shivarajkumar lead film Jogayya audio will be released on April 24, the birthday of Dr. Rajkumar. Already huge expectations are built over the audio of the film for which V Harikrishna has composed music. Meanwhile the shooting of the film has been concluded at Muththeththi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada