twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ 'ಜಾಕಿ' ಹಾಡುಗಳು ಒನ್ಸ್ ಮೋರ್ ಗುರು!

    By * ಉದಯರವಿ
    |

    ಪುನೀತ್ ಅಭಿನಯದ 'ಜಾಕಿ' ಚಿತ್ರಕ್ಕೆ ಉತ್ತಮ ಸಾಹಿತ್ಯ ನೀಡುವ ಮೂಲಕ ಯೋಗರಾಜ್ ಭಟ್ಟರು ತಮ್ಮ ಹಳೆಯ ಬಾಕಿಯನ್ನು ಚುಕ್ತಾ ಮಾಡಿದ್ದಾರೆ. ಬಹಳ ಸುದೀರ್ಘ ಸಮಯದಿಂದ ತಮ್ಮ ಎದೆಯಾಳದಲ್ಲಿ ಈ ಗೀತ ಸಾಹಿತ್ಯವನ್ನು ಭಟ್ಟರು ಬಚ್ಚಿಟ್ಟುಕೊಂಡಿದ್ದರು ಎಂದು ಕಾಣುತ್ತದೆ.ಅದು 'ಜಾಕಿ' ಚಿತ್ರದ ಮೂಲಕ ಅನಾವರಣಗೊಂಡಿದೆ.

    ಯೋಗರಾಜ್ ಭಟ್ಟರ ಸಾಹಿತ್ಯ ಬಿರುಸಿಗೆ ಹರಿಕೃಷ್ಣ ಚಿಂದಿ ಉಡಾಯಿಸಿದ್ದಾರೆ. ಕೇಳುಗರಿಗೆ 'ಜಾಕಿ' ರಸದೌತಣ.ಜಾಕಿ ಹಾಡುಗಳು ಆಡಿಯೋ ಮಾರುಕಟ್ಟೆಗೆ ಹೊಸ ಜೀವ ತುಂಬಿದ್ದು ಓಡುವ ಕುದುರೆಯಂತಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವೂ ಯೋಗರಾಜ್ ಭಟ್ಟರ ಲೇಖನಿಯಿಂದ ಸ್ಫುರಿಸಿರುವುದು ವಿಶೇಷ.

    ಶಿವ ಅಂತ ಹೋಗುತ್ತಿದೆ: ಈ ಹಾಡು ನಿರುತ್ಸಾಹಕ್ಕೆ ನೀರೆರಚಿ ಹೊಸ ಉತ್ಸಾಹದ ಬುಗ್ಗೆ ಮೂಡಿಸುವಂತಿದೆ. ಟಿಪ್ಪು ಹಾಡಿರುವ ಧಾಟಿ ಕಿವಿಗೆ ಇಂಪು ಮನಕೆ ತಂಪು. ಯೋಗರಾಜ್ ಭಟ್ಟರ ಸಾಹಿತ್ಯ ಇಲ್ಲಿ ಹೊಸ ತಿರುವು ಪಡೆದುಕೊಂಡಂತಿದೆ.ಹರಿಕೃಷ್ಣ ಸಂಗೀತ ಮುಸ್ಸಂಜೇಲಿ ತಂಗಾಳಿ ಬೀಸಿದಂತಿದೆ. ಪಡ್ಡೆಗಳಿಗೆ ನೀತಿ ಪಾಠದಂತಿದೆ.

    ಎರಡು ಜಡೆಯನ್ನು: ವಿರಹ ನೂರು ನೂರು ತರಹ...ಪ್ರೇಮಿಗಳ ಮನಸ್ಸಿನೊಳಗೆ ಬ್ಯಾಟರಿ ಬಿಟ್ಟು ತಡಕಾಡಿರುವ ಭಟ್ಟರು ವಿರಹಗೀತೆಯನ್ನು ತಮ್ಮ ಲೇಖನಿಯಿಂದ ಚಿಮ್ಮಿಸಿದ್ದಾರೆ. ಶ್ರೇಯಾ ಘೋಶಾಲ್ ಹಾಗೂ ಸೋನು ನಿಗಮ್ ಉಸಿರು ಹೊಸ ಧ್ವನಿಯಾಗಿ ಹೊರಹೊಮ್ಮಿದೆ. ಈ ಹಾಡಿನಲ್ಲೂ ಭಟ್ಟರ ಕರಾಮತ್ತು ಕಾಡುತ್ತದೆ. ಹರಿಕೃಷ್ಣ ಸಂಗೀತ ಒನ್ಸ್ ಮೋರ್ ಎನ್ನುವಂತಿದೆ.

    ಎಕ್ಕ ರಾಜ ರಾಣಿ: ಇಸ್ಪೀಟಿಗೆ ದಾಸರಾದವರ ಪಾಡು ಹೇಗಿರುತ್ತದೆ ಎಂಬುದನ್ನು ಭಟ್ಟರು ಈ ಹಾಡಿನ ಮೂಲಕ ಸೆರೆಹಿಡಿದಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ಹೊಸ ಕಂಪನಗಳನ್ನು ಸೃಷ್ಟಿಸಿದೆ. ಯುವ ಹೃದಯಗಳಿಗೆ ನೇರವಾಗಿ ಲಗ್ಗೆ ಹಿಡುವ ಹಾಡಿದು. ಹೊಸ ವರಸೆಯಲ್ಲಿ ಹೊಸ ಶೈಲಿಯಲ್ಲಿ ಕೈಲಾಶ್ ಖೇರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇದೇ ಹಾಡು ಯೂ ಟ್ಯೂಬ್ ನಲ್ಲಿ ಸೋರಿಕೆಯಾಗಿದ್ದದ್ದು.

    ಎಡವಟ್ಟಾಯ್ತು: ಸ್ವತಃ ಪುನೀತ್ ರಾಜ್ ಕುಮಾರ್ ಹಾಡಿರುವ ಈ ಹಾಡನ್ನು ಕೇಳುತ್ತಾ ಕೇಳುತ್ತಾ ಮೈಮರೆಯಬೇಕು. ಚಿತ್ರದಲ್ಲಿ ಈ ಹಾಡನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರಬೇಕು. ಈ ಯುಗಳ ಗೀತೆಗೆ ಪುನೀತ್ ಜತೆಗೆ ಪ್ರಿಯಾ ಹಿಮೇಶ್ ಧ್ವನಿಗೂಡಿಸಿದ್ದಾರೆ. ಇಲ್ಲೂ ಭಟ್ಟರ ಸಾಹಿತ್ಯವೇ ಹೈಲೈಟು.

    ಜಾಕಿ ಜಾಕಿ: ನಾಲ್ಕು ನಿಮಿಷಗಳ ಕಾಲಾವಧಿಯ ಈ ಹಾಡು ಕೇಳುತ್ತಿದ್ದರೆ ಅಪ್ಪು ಅಭಿಮಾನಿಗಳು ಪುನೀತರಾಗುತ್ತಾರೆ. ಕ್ಲಾಸ್ ಪ್ರೇಕ್ಷಕರಿಗಿಂತಲೂ ಮಾಸ್ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ರೂಪಿಸಿರುವ ಹಾಡಿದು. ಮೇಲ್ಮೋಟಕ್ಕೆ ಹಾಗೆನ್ನಿಸಿದರೂ ಹಾಡು ಹಿತವಾಗಿದೆ. ನವೀನ್ ಮಾಧವ್ ಹಾಡಿರುವ ಈ ಹಾಡಿನ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

    ಒಟ್ಟಾರೆಯಾಗಿ ಹೇಳಬೇಕೆಂದರೆ, ಜಾಕಿ ಹಾಡುಗಳು ವೈವಿಧ್ಯಭರಿತವಾಗಿವೆ. ಯೋಗರಾಜ್ ಭಟ್ಟರ ಸಾಹಿತ್ಯದಲ್ಲಿ ಕ್ಲಾಸ್ ಟಚ್ ಇದ್ದರೂ ಹರಿಕೃಷ್ಣ ಅವರ ಸಂಗೀತದಲ್ಲಿ ಮಾಸ್ ಸ್ಪರ್ಶವಿದೆ. ಕ್ಲಾಸ್ ಪ್ರೇಕ್ಷಕರಿಗಿಂತ ಮಾಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆಯೇ? ಎಂಬ ಅನುಮಾನ ಕಾಡುತ್ತದೆ. ಜಾಕಿ ಮೂಲಕ ಭಟ್ಟರು ಹೊಸ ಮಜಲನ್ನು ತಲುಪಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹರಿಕೃಷ್ಣ ಮತ್ತೊಮ್ಮೆ ತಾವೇ ಸಂಗೀತದ ಶರವೇಗದ ಸರದಾರಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ.

    ಇಲ್ಲಿದೆ ಓದಿ ಕಾಯ್ಕಿಣಿ ಬರೆದ ಪಂಚರಂಗಿ ಹಾಡು || ಪಂಚರಂಗಿ ಧ್ವನಿಸುರುಳಿ ವಿಮರ್ಶೆ

    Monday, August 23, 2010, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X