»   » ಗಾನಕೋಗಿಲೆ ಜಾನಕಮ್ಮನಿಗೆ ಹುಟ್ಟುಹಬ್ಬ

ಗಾನಕೋಗಿಲೆ ಜಾನಕಮ್ಮನಿಗೆ ಹುಟ್ಟುಹಬ್ಬ

Posted By:
Subscribe to Filmibeat Kannada
S Janaki
ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಸಾಮ್ರಾಜ್ಞಿ ಎಸ್ ಜಾನಕಿ ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಈವರೆಗೆ ಚಿತ್ರಗೀತೆ, ಭಕ್ತಿಗೀತೆ ಸೇರಿ ಮೂವತ್ತು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ ಜಾನಕಿ, ಸಂಗೀತ ಕಲಿತವರಲ್ಲ ಎಂಬುದು ಅಚ್ಚರಿಯ ಸಂಗತಿ. ಪುಟ್ಟ ಮಗು, ಯುವತಿ, ವೃದ್ಧೆ ಹೀಗೆ ಎಲ್ಲ ವಯೋಮಾನಕ್ಕೆ ತಕ್ಕಂತೆ ತನ್ನ ಹಿನ್ನೆಲೆ ದನಿಯನ್ನು ಹೊಂದಿಸಬಲ್ಲ ವೈವಿಧ್ಯಮಯ ಗಾಯಕಿಯಾಗಿ ಜಾನಕಿ ಅವರು ಪ್ರಸಿದ್ಧರು. ಎಸ್ ಬಿ ಬಾಲಸುಬ್ರಮಣ್ಯಂ ಹಾಗೂ ಎಸ್ ಜಾನಕಿ ದನಿಯಲ್ಲಿ ಮೂಡಿ ಬಂದಿರುವ ಸಾವಿರಾರು ಜನಪ್ರಿಯ ಯುಗಳ ಗೀತೆಗಳು ಅಮರ ಗೀತೆಗಳಾಗಿವೆ.

ಖಾರದ ಮೆಣಸಿನಕಾಯಿಗೆ ಹೆಸರಾದ ಗುಂಟೂರಿನ ಈ ಅಮ್ಮಾಯಿ, ಮಾತು ಕೂಡ ಮಧುರ. ಕನ್ನಡ ಟಿವಿ ವಾಹಿನಿಗಳಲ್ಲಿ ನ ಮ್ಯೂಸಿಕಲ್ ರಿಯಾಲಿಟಿ ಷೋಗಳಲ್ಲಿ ಗೌರವಾನ್ವಿತ ಜಡ್ಜ್ ಆಗಿ ಭಾಗವಹಿಸಿ, ಯುವ ಪ್ರತಿಭಾವಂತ ಗಾಯಕರಿಗೆ ತಿಳಿ ಹೇಳುವ ರೀತಿ ಅನನ್ಯ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಅಲ್ಲದೆ, ಬೆಂಗಾಲಿ, ಒರಿಯಾ, ಇಂಗ್ಲೀಷ್, ಕೊಂಕಣಿ, ತುಳು, ಸೌರಾಷ್ಟ್ರ, ಜಪಾನೀಸ್ ಹಾಗೂ ಜರ್ಮನ್ ಭಾಷೆಯಲ್ಲೂ ಹಾಡಿದ ಸಾಧನೆ ಮಾಡಿದ್ದಾರೆ. ಎಸ್ ಪಿ ಬಾಲಸುಬ್ರಮಣ್ಯಂ ಅಲ್ಲದೆ ಘಂಟಸಾಲ, ಡಾ.ರಾಜ್ ಕುಮಾರ್, ಕೆ ಜೆ ಯೇಸುದಾಸ್, ಪಿಬಿ ಶ್ರೀನಿವಾಸ್ ಅವರ ಜೊತೆ ದನಿಗೂಡಿಸಿದ್ದಾರೆ. ಐವತ್ತು ಅಧಿಕ ವರ್ಷದ ಸಂಗೀತ ಜೀವನದಲ್ಲಿ 6 ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಜಾನಕಿಯವರಿಗೆ ಕೇರಳ ಸರ್ಕಾರ 14 ಬಾರಿ, ತಮಿಳ್ನಾಡು 7 ಬಾರಿ, ಆಂಧ್ರ ಪ್ರದೇಶ 10 ಬಾರಿ,ಒರಿಸ್ಸಾ ಒಂದು ಬಾರಿ ಅತ್ಯುತ್ತಮ ಗಾಯಕಿಯೆಂದು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕೊನೆಗೂ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ ಗಳಿಸಿದ ಜಾನಕಿ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಸುರ್ ಸಿಂಗಾರ್, ಆಲ್ ಇಂಡಿಯಾ ರೇಡಿಯಾ ಸ್ಪರ್ಧೆಯಲ್ಲಿ ಎರಡನೆ ಬಹುಮಾನ, ಕಲೈ ಮಾಮಣಿ ಈ ಗಾನ ಕೋಗಿಲೆ ಮುಕುಟದ ಗರಿಗಳಾಗಿವೆ.

ಚೆನ್ನೈನಲ್ಲಿ ನೆಲೆಸಿರುವ ಜಾನಕಿ. ಅವರ ಪತಿ ವಿ .ರಾಮ್ ಪ್ರಸಾದ್.ಮಗ ಮುರಳಿ ಕೃಷ್ಣ, ಸೊಸೆ ಉಮಾ. ಅಮೃತವರ್ಷಿಣಿ ಹಾಗೂ ಅಪ್ಸರಾ ಮೊಮ್ಮಕ್ಕಳು. ಭಗವಾನ್ ಶ್ರೀಕೃಷ್ಣ ಹಾಗೂ ಶಿರಡಿ ಸಾಯಿಬಾಬಾನ ಪರಮ ಭಕ್ತೆಯಾದ ಎಸ್ ಜಾನಕಿ, ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿ ಹೀಗೆ ಸದಾ ರಾರಾಜಿಸುತ್ತಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada