For Quick Alerts
  ALLOW NOTIFICATIONS  
  For Daily Alerts

  ಕೇವಲ ನಲವತ್ತು ರು.ಗೆ ಹಾಸನಾಂಬ ಕ್ಷೇತ್ರ ದರ್ಶನ

  By Staff
  |
  ಪುಣ್ಯಸ್ಥಳಗಳ ತವರಾಗಿರುವ ಭಾರತದಲ್ಲಿ ಒಂದೊಂದು ಸ್ಥಳಗಳಿಗೆ ಅದರದೆ ಆದ ಹಿನ್ನಲೆ ಇದೆ. ಈ ಭರತ ಭೂಮಿಯಲ್ಲಿರುವ ಪ್ರಸಿದ್ದ ಸ್ಥಳಗಳನ್ನು ಹಾಗೂ ಅಲ್ಲಿ ಜರಗುವ ಉತ್ಸವಗಳನ್ನು ಕಣ್ಣಾರೆ ನೋಡುವ ಬಯಕೆ ಆಸ್ತಿಕನದು. ಕಾರ್ಯದೊತ್ತಡ, ಸಮಯಾಭಾವ ಸೇರಿದಂತೆ ಹಲವು ತೊಂದರೆಗಳು ಮನುಷ್ಯನ ಜೀವನದಲ್ಲಿ ಎದುರಾಗುವುದು ಸಹಜ. ಈಗ ನೀವು ನೋಡಬೇಕಿರುವ ಜಾಗ ಹಾಗೂ ಜಾತ್ರೆಯನ್ನು ಮನೆಯಲ್ಲೇ ಕುಳಿತು ನೋಡುವ ಸೌಭಾಗ್ಯವನ್ನು ಶೃತಿ ಟ್ರಾಕ್ಸ್ ಮ್ಯೂಸಿಕ್ ಎಂಡ್ ವೀಡಿಯೋ ಕಂಪನಿ ನೀಡಿದೆ. ಮೊದಲಿನಿಂದಲ್ಲೂ ಆಸ್ತಿಕರ ಆಸೆಗಳಿಗೆ ಆಸರೆಯಾಗಿರುವ ಈ ಸಂಸ್ಥೆ ಪ್ರಸ್ತುತ ಹಾಸನಾಂಬ ಕ್ಷೇತ್ರ ದರ್ಶನ ಎಂಬ ವಿ.ಸಿ.ಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

  ವಿಶ್ವವಿಖ್ಯಾತ ಬೇಲೂರು, ಹೆಳೇಬೀಡು, ಶ್ರವಣ ಬೆಳಗೊಳ ಮೊದಲಾದ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಕರ್ನಾಟಕದ ಶ್ರೀಮಂತ ಜಿಲ್ಲೆ ಹಾಸನ. ಪ್ರಾಚೀನದಲ್ಲಿ ಸಿಂಹಾಸನ ಪುರಿ ಎಂಬ ಹೆಸರಿನಿಂದ ವಿರಾಜಮಾನವಾಗಿದ್ದ ಈ ಊರಿಗೆ ಹಾಸನಾಂಬ ದೇವಿ ಬಂದು ನೆಲೆಯೂರಿದ ಮೇಲೆ 'ಹಾಸನ' ಎಂಬ ಹೆಸರು ಬಂತು.

  ಅರ್ಜುನನ ಮೊಮ್ಮಗ ಜನುಮೇಜಯರಾಯ ಆಳಿದ ಈ ಊರಿಗೆ ಸುಮಾರು ಹನ್ನೆರಡನೇ ಶತಮಾನದ ವೇಳೆಗೆ ಹಾಸನಾಂಬ ಬಂದು ನೆಲಸಿದ ಐತಿಹ್ಯವಿದೆ. ಸಪ್ತ ಮಾತೃಕೆಯರ ಸಮೇತಳಾಗಿ ಬಂದು ಹುತ್ತದಲ್ಲಿ ನೆಲೆಸಿರುವ ತಾಯಿ ಭಕ್ತರಿಗೆ ದರ್ಶನ ನೀಡುವುದು ವರ್ಷಕ್ಕೆ ಹದಿನೈದು ದಿನಗಳು ಮಾತ್ರ. ಆಶ್ವಿಜ ಮಾಸದ ಪೌರ್ಣಮಿಯ ಮುಂದೆ ಬರುವ ಗುರುವಾರ ತೆರೆದ ದೇಗುಲದ ಬಾಗಿಲು ಬಲಿಪಾಡ್ಯಮಿ ಮರುದಿನ ಮುಚ್ಚುತ್ತದೆ. ಈ ಸಮಯದಲ್ಲಿ ಹಾಸನ ಸಂಭ್ರಮದಲ್ಲಿ ಮುಳುಗಿ ಹೋಗಿರುತ್ತದೆ.

  ಹಾಸನಾಂಬ ಗುಡಿಯ ಪ್ರಾಂಗಣದಲ್ಲಿ ಆದಿಪೂಜಿತ ವಿನಾಯಕ, ಕಳ್ಳಪ್ಪನ ಗುಡಿ, ಅಶ್ವತ ವೃಕ್ಷ, ನಾಗರ ಕಲ್ಲು ಹಾಗೂ ಶ್ರೀಸಿದ್ದೇಶ್ವರ ಸ್ವಾಮಿಯ ದೇಗುಲಗಳಿವೆ. ಹಿಂದಿನಿಂದಲ್ಲೂ ಹಾಸನಾಂಬೆ ಭಕ್ತರಿಗೆ ಬೇಡಿದ್ದು ನೀಡುವ ಕಲ್ಪವೃಕ್ಷ. ಅರಸಿ ಬಂದವರನ್ನು ಹಾರೈಸುವ ಕಾಮಧೇನು. ಮಾತೆ ಹಾಗೂ ಭಕ್ತರ ಬಾಂಧವ್ಯಕ್ಕೆ ಗುಡಿಯೊಳಗಿನ 'ಸೊಸೆ ಕಲ್ಲು' ಸಾಕ್ಷಿ.

  ದೇವಿಯ ವರ್ಷಾವಧಿ ಜಾತ್ರೆ ನೋಡಲು ನಯನ ಮನೋಹರ. ಸಿದ್ದೇಶ್ವರನ ತೇರಂತೂ ಆಸ್ತಿಕರಿಗೆ ಸ್ವರ್ಗ. ಸಿದ್ದೇಶ್ವರ ಸ್ವಾಮಿ ರಥರೂಡನಾಗಿ ಆಗಮಿಸಿದರೆ ಹಾಸನಾಂಬೆ ಮುತ್ತಿನ ಪಲ್ಲಕ್ಕಿ ಏರಿ ಬರಿತ್ತಾಳೆ. ಈ ಸನ್ನಿವೇಶವನ್ನು ಕಾಣಲು ದೇವಸ್ಥಾನದ ಮುಂದೆ ಜನಗಳ ಜಾತ್ರೆ ನೆರೆದಿರುತ್ತದೆ. ಬಾಣ-ಬಿರುಸು, ನಂದಿ ಕೋಲು, ಮಂಗಳ ವಾದ್ಯ ಒಳಗೊಂಡಂತೆ ಅನೇಕ ಜಾನಪದ ಕಲಾ ತಂಡಗಳೊಂದಿಗೆ ಅಮ್ಮನ ದಿಬ್ಬಣ ಸಾಗಿ ಬರುತ್ತದೆ. ಇಡೀ ರಾತ್ರಿ ಹಾಸನದ ಜನತೆಗೆ 'ಶಿವರಾತ್ರಿ'ಯೇ ಸರಿ.

  ರಾತ್ರಿಯ ರಥ ದೇಗುಲಕ್ಕೆ ಆಗಮಿಸುವ ವೇಳೆಗೆ ಸೂರ್ಯ ತನ್ನ ಕಿರಣಗಳನ್ನು ಇಳೆಯ ಮೇಲೆ ಹಾಸಿರುತ್ತಾನೆ. ರಥ ಆಗಮಿಸಿದ ನಂತರ ನಡೆಯುವ ಕೊಂಡೋತ್ಸವ ನೋಡಲು ಎರಡು ಕಣ್ಣು ಸಾಲದು. ಹರಕೆ ಹೊತ್ತವರ ಕೆಂಡದ ನಡುಗೆ ಮೈ ಜುಂ ಅನಿಸುತ್ತದೆ. ಕೊನೆಯ ದಿನ ದೀವಟ್ಟಿಗೆ ಪ್ರಾರ್ಥನೆಯೊಂದಿಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಗೆ ದೀಪ ಹಚ್ಚಿ ಕುಸುಮಗಳಿಂದ ಆಲಂಕರಿಸಲಾಗಿರುತ್ತದೆ. ಒಂದು ವರ್ಷದ ನಂತರ ಗರ್ಭಗುಡಿಯ ಬಾಗಿಲು ತೆರೆದ್ದಾಗ ಹಚ್ಚಿದ ದೀಪ ಹಚ್ಚಿದಂತೆ, ಇಟ್ಟ ಹೂವು ಇಟ್ಟಂತೆ ಇರುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ.

  ದೇವಿಯ ಉತ್ಸವದೊಂದಿಗೆ ಹಾಸನದೊಳಗಿನ ಶ್ರೀ ವಿರೂಪಾಕ್ಷ, ನವಲಿಂಗ ದೇಗಲಗಳ ಮತ್ತು ಹೊಸಕೋಟೆಯಲ್ಲಿ ನೆಲೆಸಿರುವ ಕೆಂಚಾಂಬ ದೇವಿಯ ದೇವಸ್ಥಾನ ಹಾಗೂ ಉತ್ಸವಗಳ, ಕಡಲೆ ಬಂಟೇಶ್ವರ ಸನ್ನಿಧಿ, ಮೊಸಳೆಯ ಶ್ರೀಚೆಲುವರಾಯಸ್ವಾಮಿ ದೇಗುಲ ಹಾಗೂ ಇತರ ಪ್ರಾಚೀನ ದೇವಸ್ಥಾನಗಳ ಪರಿಚಯ ಈ ವಿ.ಸಿ.ಡಿಯಲ್ಲಿ ಲಭ್ಯ. ಚಂದ್ರು ಸಾಹಿತ್ಯ ನೀಡಿರುವ ಈ ವಿ.ಸಿ.ಡಿಗೆ ಸುಜಾತದತ್ ಮತ್ತು ಎಂ.ಎಸ್.ಮಾರುತಿ ಸಂಗೀತ ಸಂಯೊಜಿಸಿದ್ದಾರೆ. ಮಾರುತೇಶ್ ಅವರ ನಿರೂಪಣೆ ಸೊಗಸಾಗಿದ್ದು, ಬೆಂಗಳೂರು ಸಹೋದರಿಯರು, ಅನುರಾಧ ಭಟ್, ವಿಜಯ್ ಅರಸ್ ಹಾಗೂ ಪ್ರತಿಮಾ ಆತ್ರೇಯಾ ಅವರ ಕಂಠಸಿರಿ ಮಧುರವಾಗಿದೆ. ಹಾಸನಾಂಬೆಯ ಆಕರ್ಷಕ ಭಾವಚಿತ್ರವುಳ್ಳ ಈ ವಿ.ಸಿ.ಡಿಯ ಬೆಲೆ -40 ರು. ಮಾತ್ರ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಇದನ್ನೂ ಓದಿ
  ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಸಿನಿ ಸಮಯ!
  ಕನ್ನಡಕ್ಕೆ ಬಂದ ಹೊಸ ಕೋಗಿಲೆ ಶ್ರೇಯಾ
  ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಜೈ ಹೊ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X