For Quick Alerts
  ALLOW NOTIFICATIONS  
  For Daily Alerts

  ಗಾಯಕರ ನಾಯಕ ರಫಿ ಪುಣ್ಯತಿಥಿ ನೆನಪುಗಳು

  By Staff
  |
  ಈ ಜುಲೈ 31ಕ್ಕೆ ಹಿನ್ನೆಲೆ ಗಾಯಕರ ನಾಯಕ ಮಹಮ್ಮದ್ ರಫಿ ನಿಧನರಾಗಿ 29 ವರ್ಷ ಭರ್ತಿಯಾಗುತ್ತವೆ. ವರ್ಷಗಳು ಎಷ್ಟೋ ಉರುಳಲಿ, ಇಂದಿಗೂ ರೇಡಿಯೊದಲ್ಲೋ, ಟಿ.ವಿ.ಯಲ್ಲೋ ಅಥವಾ ಇನ್ನಾವುದೋ ಕೆಸೆಟ್ಟಿನಲ್ಲೋ ಕೆಲವು ಹಾಡುಗಳನ್ನಾದರೂ ಆಲಿಸದೆ ಯಾವುದೇ ಚಿತ್ರಸಂಗೀತ ಪ್ರೇಮಿಯ ಒಂದು ದಿನವೂ ಕಳೆಯಲಾರದು. ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ ವಿಭಿನ್ನ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿದ ಒಂದಷ್ಟು ಹಾಡುಗಳನ್ನು ಸ್ಮರಿಸಿಕೊಳ್ಳುವ ಸಂತೋಷ ಈ ಬರಹದ್ದು.

  * ಚಿದಂಬರ ಕಾಕತ್ಕರ್, ಮಂಗಳೂರು

  ನೌಷಾದ್ :- ಅದೃಷ್ಟ ಪರೀಕ್ಷಿಸಲು ಮುಂಬಯಿಗೆ ಬಂದ ರಫಿ ಮೊದಲಿಗೆ ಭೇಟಿಯಾದದ್ದು ನೌಷಾದ್ ಅವರನ್ನೇ. ಶಾಮಸುಂದರ್, ಹುಸ್ನ್‌ಲಾಲ್ ಭಗತ್‌ರಾಮ್, ಗುಲಾಮ್ ಹೈದರ್ ಮುಂತಾದವರು ಆರಂಭದಲ್ಲಿ ಇವರಿಗೆ ಪ್ರೋತ್ಸಾಹ ನೀಡಿದರೂ ತಲತ್ ಮಹಮೂದ್ ಜತೆ ತೀವ್ರ ಸ್ಪರ್ಧೆ ಇದ್ದ ಕಾಲದಲ್ಲಿ 'ಬೈಜೂ ಬಾವರಾ" ಚಿತ್ರದಲ್ಲಿ ರಫಿ ವಿಶಿಷ್ಟ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಮುಂಚೂಣಿಗೆ ಬರುವಂತೆ ಮಾಡಿದವರು ನೌಷಾದ್. ಈ ಮೊದಲೇ 'ಅಂದಾಜ್", 'ಉಡನ್ ಖಟೋಲಾ", 'ದೀದಾರ್" ಮುಂತಾದ ಚಿತ್ರಗಳಲ್ಲಿ ನೌಷಾದ್‌ಗಾಗಿ ರಫಿ ಹಾಡಿದ್ದರೂ ಈ ಚಿತ್ರದ ಎಲ್ಲ ಹಾಡುಗಳು ಸುಪರ್ ಹಿಟ್ ಆಗಿ ರಫಿಯ ಪಾರಮ್ಯವನ್ನು ಜಗತ್ತಿಗೆ ಸಾರಿದವು. 'ಓ ದುನಿಯಾ ಕೆ ರಖ್‌ವಾಲೆ' ಯಲ್ಲಿ ಅವರ ಧ್ವನಿಯ ರೇಂಜ್ ಎಲ್ಲರನ್ನೂ ದಂಗುಬಡಿಸಿತು. ಈ ಗೀತೆ ಇಂದಿಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಅಚ್ಚುಮೆಚ್ಚಿನದು. ಇದೇ ಚಿತ್ರದ 'ಮನ್ ತಡಪತ್ ಹರಿ ದರುಶನ್ ಕೊ ಆಜ್" ಹಾಡು ಶಕೀಲ್ ಬದಾಯೂನಿ, ನೌಷಾದ್ ಹಾಗೂ ರಫಿ ಎಂಬ ಮೂವರು ಮುಸ್ಲಿಂ ಬಂಧುಗಳು ಸೇರಿ ಸೃಷ್ಟಿಸಿದ ಭಜನ್ ಎಂದೇ ಪ್ರಖ್ಯಾತ. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತುಕೊಡುತ್ತಿದ್ದ ನೌಷಾದ್ ಸಾರಥ್ಯದಲ್ಲಿ 'ದುಲಾರಿ",'ಕೊಹಿನೂರ್", 'ಲೀಡರ್", 'ಮೇರೆ ಮೆಹಬೂಬ್", 'ಗಂಗಾ ಜಮುನಾ", 'ದಿಲ್ ದಿಯಾ ದರ್ದ್ ಲಿಯಾ", 'ಸಾಜ್ ಔರ್ ಆವಾಜ್", 'ರಾಮ್ ಔರ್ ಶಾಮ್", 'ಆದ್ಮೀ" ಮುಂತಾದ ಚಿತ್ರಗಳು ಎಂದಿಗೂ ಮರೆಯದ ರಫಿ ಹಾಡುಗಳನ್ನು ನಮಗೆ ನೀಡಿದವು. 'ಸಾಥಿ" ಯಂತಹ ಕೆಲವು ಚಿತ್ರಗಳಲ್ಲಿ ಮುಖೇಶ್ ಅವರನ್ನು ಬಳಸಿಕೊಂಡದ್ದನ್ನು ಹೊರತುಪಡಿಸಿದರೆ ಸದಾ ಇವರ ಮುಖ್ಯ ಗಾಯಕ ರಫಿಯೇ ಆಗಿದ್ದರು.

  ಒಪಿ ನಯ್ಯರ್ :- ಇವರು ರಫಿಗೆ ಒಂದು ಸ್ಟೈಲ್ ಕೊಟ್ಟವರು. ಅಲ್ಲಿವರೆಗೆ ಭಕ್ತಿ ಗೀತೆ, ವಿರಹ ಗೀತೆ, ಹಾಸ್ಯ ಗೀತೆ, ಪ್ರೇಮ ಗೀತೆ ಎಲ್ಲವನ್ನೂ ವಿಷಾದದ ಛಾಯೆಯೊಡನೆ ಒಂದೇ ರೀತಿ ಹಾಡುತ್ತಿದ್ದ ರಫಿ ಅವರನ್ನು ಗುರುದತ್ ಅವರ 'ಆರ್ ಪಾರ್" ಹಾಗೂ ಶಮ್ಮಿ ಕಪೂರ್ ಅವರ 'ತುಮ್ ಸಾ ನಹೀಂ ದೇಖಾ" ದಲ್ಲಿ ನಯ್ಯರ್ ಅವರು ಬೇರೆ ರೀತಿ ದುಡಿಸಿಕೊಂಡರು. ಧ್ವನಿಯ ಏರಿಳಿತ, ಥ್ರೋ ಗಳನ್ನು ತಿದ್ದಿ ತೀಡಿದರು. ತುಂಟತನವನ್ನು ತುಂಬಿಸಿದರು. ಫಾಲ್ಸ್ ವಾಯ್ಸನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ರೀತಿಯನ್ನು ತೋರಿಸಿಕೊಟ್ಟರು. ಈ ರೀತಿ ಕಾಯಕಲ್ಪಕ್ಕೊಳಗಾದ ರಫಿಯ ಧ್ವನಿ ಮುಂದೆ ದಶಕಗಳ ಕಾಲ ಸಂಗೀತ ಕ್ಷೇತ್ರವನ್ನು ಆಳುವಂತೆ ಮಾಡಿದರು. ತಮ್ಮ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಯಾವುದೋ ವಿರಸದಿಂದಾಗಿ ಕೆಲವು ಹಾಡುಗಳಿಗೆ ಮಹೇಂದ್ರ ಕಪೂರ್, ಮುಖೇಶ್ ಅವರನ್ನು ಬಳಸಿಕೊಂಡರೂ ಇವರ ಮೆಚ್ಚಿನ ಗಾಯಕ ಎಂದಿಗೂ ರಫಿಯೇ ಆಗಿದ್ದರು. 'ರಾಗಿನಿ" ಚಿತ್ರದ 'ಮನ್ ಮೊರಾ ಬಾಂವರಾ" ಹಾಡಿಗೆ ತೆರೆಯ ಮೇಲಿನ ಕಿಶೋರ್ ಕುಮಾರ್‌ಗೆ ರಫಿ ಧ್ವನಿಯನ್ನು ಬಳಸಿದವರು ಇವರು. 'ನಯಾ ದೌರ್", 'ಸಿ ಐ ಡಿ", 'ಮೇರೆ ಸನಮ್", 'ಫಿರ್ ವಹೀ ದಿಲ್ ಲಾಯಾ ಹೂಂ", 'ಕಶ್ಮೀರ್ ಕೀ ಕಲಿ", 'ಫಾಗುನ್", 'ಏಕ್ ಮುಸಾಫಿರ್ ಏಕ್ ಹಸೀನಾ", 'ಬಹಾರೇಂ ಫಿರ್ ಭೀ ಆಯೇಂಗಿ", 'ಹಮ್ ಸಾಯಾ" ಮುಂತಾದ ಚಿತ್ರಗಳಲ್ಲಿ ಮರೆಯಲಾರದ ರಫಿ ಹಾಡುಗಳು ಇವರ ನಿರ್ದೇಶನದಲ್ಲಿ ಮೂಡಿಬಂದವು.

  ಶಂಕರ್ ಜೈಕಿಶನ್ :- ಇವರ ವೃತ್ತಿ ಜೀವನದಲ್ಲಿ ಮೊಟ್ಟಮೊದಲು ಧ್ವನಿಮುದ್ರಣಗೊಂಡದ್ದು 'ಬರ್ಸಾತ್" ಚಿತ್ರಕ್ಕಾಗಿ ರಫಿ ಹಾಡಿದ 'ಮೈ ಜಿಂದಗಿಮೆ ಹರ್ ದಮ್ ರೋತಾ ಹಿ ರಹಾ ಹೂಂ" ಹಾಡು. ಆದರೆ ಮುಂದೆ ಬಹಳಷ್ಟು ವರ್ಷ ರಫಿ ಇವರ ಮೊದಲ ಆಯ್ಕೆ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ರಫಿಯನ್ನು ಬಳಸಿ ಉತ್ತಮ ಹಾಡುಗಳನ್ನು ನೀಡಿದರೂ ಉಳಿದಂತೆ ಮುಖೇಶ್, ತಲತ್ ಮಹಮೂದ್, ಹೇಮಂತ್ ಕುಮಾರ್ ಹಾಗೂ ಇವರ ಧ್ವನಿಯನ್ನೇ ಹೋಲುವ ಸುಬೀರ್ ಸೇನ್ ಅವರನ್ನು ಹೆಚ್ಚು ಬಳಸುತ್ತಿದ್ದರು. ಶಮ್ಮಿಕಪೂರ್‌ನ 'ಉಜಾಲಾ"ದಲ್ಲೂ ಅವರ ಆಯ್ಕೆ ಮನ್ನಾಡೆ ಆಗಿದ್ದರು. ಆದರೆ 'ಸಸುರಾಲ್" ನ 'ತೆರಿ ಪ್ಯಾರಿ ಪ್ಯಾರಿ ಸೂರತ್ ಕೊ" ಸುಪರ್ ಹಿಟ್ ಆದಮೇಲೆ 60ರ ದಶಕದ ಕೊನೆವರೆಗೂ ಇವರು ಸಂಪೂರ್ಣ ರಫಿ ನಿಷ್ಠರಾಗಿ ಉಳಿದರು. ರಫಿಯ ಸೊಲೋ ಹಾಡುಗಳನ್ನು ಲತಾ ಧ್ವನಿಯಲ್ಲೂ ಹಾಡಿಸುವ ಪರಂಪರೆಯನ್ನು 'ಜಂಗ್ಲಿ" ಚಿತ್ರದ 'ಎಹೆಸಾನ್ ತೆರಾ ಹೋಗಾ ಮುಝ್ ಪರ್" ಮೂಲಕ ಇವರು ಆರಂಭಿಸಿದರು.

  ಮುಂದೆ ಇದೇ ಜಾಡಿನಲ್ಲಿ 'ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ" ಯಲ್ಲಿ 'ಜಿಯಾ ಓ ಜಿಯಾ ಓ ಕುಛ್ ಬೋಲ್‌ದೋ", 'ಲವ್ ಇನ್ ಟೋಕಿಯೊ" ದ 'ಓ ಮೆರೇ ಶಾಹೆಖುಬಾ", 'ಪಗಲಾ ಕಹೀಂ ಕಾ" ದ 'ತುಮ್ ಮುಝೆ ಯೂಂ" ಇತ್ಯಾದಿ ಬಂದವು. ಆದರೆ ರಫಿ ಆವೃತ್ತಿಯ ಮಾದಕತೆ ಈ ಹಾಡುಗಳ ಲತಾ ಆವೃತ್ತಿಯಲ್ಲಿ ಕಾಣಿಸಲಿಲ್ಲ. ಮುಖೇಶ್, ಮನ್ನಾಡೆ ಹೊರತು ಇತರರನ್ನು ಬಳಸದ ರಾಜ್ ಕಪೂರ್‌ಗಾಗಿ 'ಏಕ್ ದಿಲ್ ಸೌ ಅಫ್ಸಾನೆ" ಚಿತ್ರದಲ್ಲಿ 'ತುಮ್ ಹಿ ತುಮ್ ಹೊ ಮೆರೆ ಜೀವನ್ ಮೆ" ಹಾಗೂ 'ಮೇರಾ ನಾಮ್ ಜೋಕರ್" ನಲ್ಲಿ 'ಸದ್ ಕೆ ಹೀರ್ ತುಝ್ ಪೆ" ಹಾಡುಗಳಿಗಾಗಿ ರಫಿ ಧ್ವನಿಯನ್ನು ಬಳಸಿದರು. (ರಫಿ ಹಾಡು ಥಿಯೇಟರ್ ಗಳಲ್ಲಿ ಪ್ರದರ್ಶಿತವಾದ 'ಜೋಕರ್" ನಲ್ಲಿ ಕಾರಣಾಂತರಗಳಿಂದ ಇರಲಿಲ್ಲ. ಆದರೆ ಕೆಲವು ವಿಸಿಡಿ ಆವೃತ್ತಿಗಳಲ್ಲಿ ಇದೆ. ಯೂ ಟ್ಯೂಬ್‌ನಲ್ಲೂ ಲಭ್ಯವಿದೆ). ಈ ಮಧ್ಯೆ ಕೆಲವು ಸಮಯ ಲತಾ-ರಫಿ ಜೊತೆಗೆ ಹಾಡುತ್ತಿರಲಿಲ್ಲ. ಆಗಲೂ ಡ್ಯುಯೆಟ್‌ಗಳು ಬೇಕಿದ್ದಾಗ ಲತಾ ಬದಲಿಗೆ ಸುಮನ್ ಕಲ್ಯಾಣ್ ಪುರ್ ಮೊದಲಾದವರು ಬರುತ್ತಿದ್ದರೇ ಹೊರತು ರಫಿಗೆ ಪರ್ಯಾಯವನ್ನು ಯಾರೂ ಹುಡುಕುತ್ತಿರಲಿಲ್ಲ. ಕೊನೆಗೆ ಶಂಕರ್ ಜೈಕಿಶನ್ ಮಧ್ಯಸ್ತಿಕೆಯಲ್ಲಿ ಅವರೀರ್ವರಿಗೆ ರಾಜಿಯಾಗಿ 'ಗಬನ್" ಚಿತ್ರಕ್ಕಾಗಿ 'ತುಮ್ ಬಿನ್ ಸಜನ್" ಗೀತೆಯನ್ನು ಜತೆಯಾಗಿ ಹಾಡಿದರು. (ವಿರಸಕ್ಕೆ ಮುನ್ನ ಲತಾ-ರಫಿ ಜತೆಯಾಗಿ ಹಾಡಿದ್ದ ಕೊನೆ ಹಾಡು ಉಷಾ ಖನ್ನಾ ಸಂಗೀತದಲ್ಲಿ 'ಆವೊ ಪ್ಯಾರ್ ಕರೇಂ" ಚಿತ್ರದ 'ತುಮ್ ಅಕೆಲೆ ತೊ ಕಭೀ ಬಾಗ್ ಮೆ ಜಾಯಾ ನ ಕರೊ"). ಇವರು ನೀಡಿದ ರಫಿ ಹಿಟ್ ಹಾಡುಗಳನ್ನು ಪಟ್ಟಿ ಮಾಡುವುದು ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ಆದರೆ ಗಾಳಿ ಬಂದಂತೆ ತೂರಿಕೊಳ್ಳುವ ಸ್ವಭಾವದವರಾದ ಶಂಕರ್ ಜೈಕಿಶನ್ 'ಆರಾಧನಾ" ಸ್ಥಿತ್ಯಂತರದ ನಂತರ ತಕ್ಷಣ ಕಿಶೋರ್ ಕಡೆ ವಾಲಿದ್ದೂ ನಿಜ.

  ರೋಶನ್ :- ಆಲಿಸಿದೊಡನೆ ತಮ್ಮೆಡೆಗೆ ಸೆಳೆಯಬಲ್ಲ 'ತಾಜ್ ಮಹಲ್" ನ 'ಜೊ ವಾದಾ ಕಿಯಾ", ಆರತಿ" ಯ ಬಾರ್ ಬಾರ್ ತೊಹೆ ಕ್ಯಾ ಸಮಝಾವೂಂ" ದಂತಹ ಅನೇಕ ಅತಿಮಧುರ ಗೀತೆಗಳನ್ನು ರಫಿ ಧ್ವನಿಯಲ್ಲಿ ನೀಡಿದವರು ಇವರು. 'ರಸಾತ್ ಕಿ ರಾತ್" ನ 'ಜಿದಗೀ ಭರ್ ನಹೀಂ ಭೂಲೆಗಿ" ಲತಾ ಆವೃತ್ತಿಯ ಎರಡನೆ ಚರಣದಲ್ಲಿ ರಫಿ ಪ್ರವೇಶ ಬೀರಿದ ಪರಿಣಾಮ ಅದ್ಭುತ. ಕವ್ವಾಲಿಗಳ ರಾಣಿಯೆಂದೇ ಖ್ಯಾತಿಯುಳ್ಳ ಇದೇ ಚಿತ್ರದ 'ನ ತೊ ಕಾರವಾಂಕಿ ತಲಾಶ್ ಹೈ" ಯ ಕೊನೆ ಭಾಗದಲ್ಲಿ ನಿರ್ವಹಣೆಯನ್ನು ಆನಂದಿಸದವರು ಯಾರಿದ್ದಾರೆ. 'ಚಿತ್ರಲೇಖಾ", 'ಬಹು ಬೇಗಂ", 'ಭೀಗೀ ರಾತ್", 'ನಯೀ ಉಮರ್ ಕೀ ನಯೀ ಫಸಲ್" ,'ಬೆದಾಗ್" ಮುಂತಾದ ಚಿತ್ರಗಳಲ್ಲೂ ಸುಶ್ರಾವ್ಯ ರಫಿ ಗೀತೆಗಳಿದ್ದವು. ಚಿಕ್ಕ ಪ್ರಾಯದಲ್ಲೇ ಇವರು ನಮ್ಮನ್ನಗಲದೆ ಇರುತ್ತಿದ್ದರೆ ಇನ್ನಷ್ಟು ಮಧುರ ರಫಿ ಗೀತೆಗಳು ನಮಗೆ ದೊರೆಯುತ್ತಿದ್ದವು.

  ಚಿತ್ರಗುಪ್ತ :- ಕಿರು ಬಜೆಟ್ ಚಿತ್ರಗಳನ್ನು ನಿರ್ಮಿಸುವವರ ಅದರಲ್ಲೂ ದಕ್ಷಿಣ ಭಾರತದ ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಿವರು. ಆರಂಭದಿಂದಲೆ ಇವರ ಮುಖ್ಯ ಗಾಯಕ ರಫಿ. 'ಭಾಭೀ" ಚಿತ್ರದ 'ಚಲ್ ಉಡ್ ಜಾ ರೇ ಪಂಛೀ", 'ಮೈ ಚುಪ್ ರಹೂಂಗೀ" ಯ 'ಚಾಂದ್ ಜಾನೆ ಕಹಾಂ ಖೋ ಗಯಾ", 'ಬಡಾ ಆದ್ಮೀ" ಯ 'ಅಖಿಯನ್ ಸಂಗ್ ಅಖಿಯಾಂ", 'ವಾಸನಾ" ಚಿತ್ರದ 'ಯೆ ಪರ್‌ಬತೋಂಕೆ ದಾಯರೆ", 'ಪತಂಗ್" ಚಿತ್ರದ 'ಯೆ ದುನಿಯಾ ಪತಂಗ್ ನಿತ್ ಬದಲೆ ಯೆ ರಂಗ್",'ಊಂಚೆ ಲೋಗ್" ಚಿತ್ರದ 'ಜಾಗ್ ದಿಲೆ ದೀವಾನಾ" ಮುಂತಾದ ಹಾಡುಗಳನ್ನು ಯಾರು ತಾನೆ ಕೇಳಿಲ್ಲ.

  ರವಿ :- ಬಿ. ಆರ್. ಚೋಪ್ರಾ ಚಿತ್ರಗಳನ್ನು ಹೊರತುಪಡಿಸಿದರೆ ಇವರೂ ಸದಾ ರಫಿ ಮಾಧುರ್ಯವನ್ನು ಉಣಬಡಿಸಿದವರೇ. 'ಚೌದವೀಂ ಕಾ ಚಾಂದ್", 'ಭರೋಸಾ", 'ಯೆ ರಾಸ್ತೆ ಹೈಂ ಪ್ಯಾರ್ ಕೆ", 'ಶಹನಾಯಿ", 'ಖಾನ್ ದಾನ್", 'ದೊ ಬದನ್", 'ದೂರ್ ಕೀ ಆವಾಜ್", 'ದಸ್ ಲಾಖ್", 'ಏಕ್ ಫೂಲ್ ದೊ ಮಾಲೀ" ಮುಂತಾಗಿ ಇವರ ಎಲ್ಲ ಚಿತ್ರಗಳೂ ರಫಿಯ ಗಾನಸುಧೆ ಹರಿಸಿದವುಗಳೇ. 'ನೀಲ್ ಕಮಲ್" ಚಿತ್ರದ 'ಬಾಬುಲ್ ಕೀ ದುವಾಯೆ ಲೇತೀ ಜಾ" ಹಾಡಿನ ರೆಕಾರ್ಡಿಂಗ್ ಮಾಡುವಾಗ ರಫಿ ಅವರು ಧಾರಾಕಾರವಾಗಿ ಕಣ್ಣೀರು ಸುರಿಸಿದ್ದರಂತೆ. ಈ ಹಾಡು ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದು ಕೊಟ್ಟಿತು.

  ಎಸ್.ಡಿ ಬರ್ಮನ್ :- ಇವರ ಆದ್ಯತೆ ಕಿಶೋರ್‌ಕುಮಾರ್ ಗಾದರೂ ಬಹಳಷ್ಟು ರಫಿಯ ಅಮರ ಹಾಡುಗಳನ್ನು ಇವರೂ ಸೃಷ್ಟಿಸಿದ್ದಾರೆ. 'ಕಾಲಾ ಬಜಾರ್" , 'ತೆರೆ ಘರ್ ಕೆ ಸಾಮನೆ", 'ಜಿದ್ದಿ", 'ಗೈಡ್", 'ತಲಾಷ್", 'ಇಶ್ಕ್ ಪರ್ ಜೋರ್ ನಹೀಂ" ಮುಂತಾದ ಚಿತ್ರಗಳಲ್ಲಿ ರಫಿಯೇ ಇವರ ಗಾಯಕ. 'ಮೆರೀ ಸೂರತ್ ತೆರಿ ಆಂಖೆ" ಯಲ್ಲಿ ಮನ್ನಾಡೆ ಅವರ 'ಪೂಛೊ ನ ಕೈಸೆ ಮೈನೆ ರೈನ್ ಬಿತಾಯೀ" ಗೆ ಸರಿಸಾಟಿಯಾಗುವಂತೆ ರಫಿ ಹಾಡಿದ 'ನಾಚೆ ಮನ್ ಮೊರಾ" ಹಾಗೂ 'ತೆರೆ ಬಿನ್ ಸೂನೆ ನೈನ್ ಹಮಾರೆ" ಹಾಡುಗಳನ್ನು ಮರೆಯಲುಂಟೆ. 'ತೀನ್ ದೇವಿಯಾಂ", 'ಜುವೆಲ್ ತೀಫ್" ನಂತಹ ಚಿತ್ರಗಳಲ್ಲಿ ಇವರು ಕಿಶೋರ್, ರಫಿ ಇಬ್ಬರನ್ನೂ ಬಳಸುತ್ತಿದ್ದರು. ಕಿಶೋರ್ ಯುಗದ ಆರಂಭಕ್ಕೆ ಕಾರಣವಾದ 'ಆರಾಧನಾ"ದಲ್ಲೂ ಇವರಿಬ್ಬರೂ ಇದ್ದರಲ್ಲವೆ? ಮುಂದೆಯೂ 'ಅಭಿಮಾನ್", 'ಅನುರಾಗ್" ಮುಂತಾದ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು. ಕಿಶೋರ್ ಪ್ರಿಯರಾದ ಇವರ ಸುಪುತ್ರ ಪಂಚಮ್ ಸಹ 'ತೀಸ್ರೀ ಮಂಜಿಲ್", 'ರಾತೊಂಕಾ ರಾಜಾ", 'ಪ್ಯಾರ್ ಕಾ ಮೌಸಮ್", 'ಕಾರವಾಂ" ಮುಂತಾದ ಚಿತ್ರಗಳಲ್ಲಿ ಅದ್ಭುತ ರಫಿ ಗೀತೆಗಳನ್ನು ನೀಡಿದ್ದಾರೆ. 'ಹಮ್ ಕಿಸೀ ಸೆ ಕಮ್ ನಹಿಂ" ಯ 'ಕ್ಯಾ ಹುವಾ ತೆರಾ ವಾದಾ" ರಫಿಗೆ 6ನೆ ಫಿಲಂಫೇರ್ ಅವಾರ್ಡ್ ತಂದುಕೊಟ್ಟುದನ್ನೂ ಮರೆಯಲಾಗದು.

  ಲಕ್ಷ್ಮೀಕಾಂತ್ ಪ್ಯಾರೆಲಾಲ್ :- ಇವರು ಹಾಡುಗಳನ್ನು ರಚಿಸುತ್ತಿದ್ದುದೇ ರಫಿ ಅವರನ್ನು ಮನಸ್ಸಲ್ಲಿ ಇಟ್ಟುಕೊಂಡು. ತಮ್ಮ ಮೊದಲ ಚಿತ್ರ 'ಪಾರಸ್ ಮಣಿ" ಯಿಂದ ಆರಂಭಿಸಿ ರಫಿ ಅವರ ಕೊನೆಯ ಚಿತ್ರ 'ಆಸ್ ಪಾಸ್"ವರೆಗೆ ಇವರದ್ದು ಅವಿನಾಭಾವ ನಂಟು. 'ದೋಸ್ತೀ", 'ಫರ್ಜ್", 'ಜೀನೆ ಕೀ ರಾಹ್", 'ಆಯಾ ಸಾವನ್ ಝೂಮ್ ಕೆ", 'ಜಿಗ್ರೀ ದೋಸ್ತ್", 'ಹಮ್ ಜೋಲೀ",'ದೋ ರಾಸ್ತೇ" .. ಎಂತೆಂತಹ ಚಿತ್ರಗಳು, ಎಂತೆಂತಹ ಹಾಡುಗಳು. 'ಆರಾಧನಾ"ದ ನಂತರ ಕೆಲವು ಸಮಯ ರಫಿ ಅವರು ಹಿನ್ನೆಡೆ ಅನುಭವಿಸುವಂತಾದಾಗಲೂ ತಮ್ಮ ಬಹುತೇಕ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡು ಇರುವಂತೆ ನೋಡಿಕೊಂಡವರು ಲಕ್ಷ್ಮಿಪ್ಯಾರೆ ಮಾತ್ರ. 'ಮಿಲನ್", 'ಮಂಚಲೀ" ಯಂತಹ ಒಂದೆರಡು ಉದಾಹರಣೆಗಳನ್ನು ಹೊರತುಪಡಿಸಿದರೆ ಇವರ ರಫಿ ರಹಿತ ಚಿತ್ರಗಳೇ ಇಲ್ಲವೆನ್ನಬಹುದು. ಹಿನ್ನಡೆಯನ್ನು ಮೆಟ್ಟಿ ಮುನ್ನಡೆಯನ್ನು ಸಾಧಿಸಲು ರಫಿಗೆ ಅನುವು ಮಾಡಿ ಕೊಟ್ಟದ್ದು ಇವರ 'ಸರ್‌ಗಮ್", 'ಅಮರ್ ಅಕ್ಬರ್ ಅಂತೊಣಿ" ಮುಂತಾದ ಚಿತ್ರಗಳೇ.

  ಇತರ ಸಂಗೀತ ನಿರ್ದೇಶಕರು :- ಒಂದೊಂದು ಪ್ರಾತಿನಿಧಿಕ ಉದಾಹರಣೆಯೊಂದಿಗೆ ನೆನಸಿಕೊಳ್ಳುವುದಾದರೆ ಎನ್ ದತ್ತಾ (ಗ್ಯಾರಹ ಹಜಾರ್ ಲಡ್ಕಿಯಾಂ- ದಿಲ್ ಕೀ ತಮನ್ನಾ ಥೀ ಮಸ್ತಿ ಮೆ), ಮದನ್ ಮೋಹನ್ (ರೇಲ್ವೆ ಪ್ಲಾಟ್ ಫಾರಂ - ಬಸ್ತಿ ಬಸ್ತಿ ಪರ್ಬತ್ ಪರ್ಬತ್), ಎಸ್.ಎನ್.ತ್ರಿಪಾಠಿ (ಜನಮ್ ಜನಮ್ ಕೆ ಫೇರೆ - ಜರಾ ಸಾಮನೆ ತೊ ಆವೊ ಛಲಿಯೆ), ಕಲ್ಯಾಣ್‌ಜೀ ಆನಂದ್‌ಜೀ (ಜಬ್ ಜಬ್ ಫೂಲ್ ಖಿಲೆ - ಪರ್‌ದೇಸಿಯೋಂಸೆ ನ ಅಖಿಯಾಂ ಮಿಲಾನಾ), ಸಲಿಲ್ ಚೌಧರಿ (ಮಧುಮತಿ - ಟೂಟೆ ಹುವೆ ಖ್ವಾಬೋಂ ಮೆ), ಖಯ್ಯಾಮ್ (ಮುಹಬ್ಬತ್ ಇಸ್ಕೊ ಕಹತೆ ಹೈಂ - ಆಪಕೊ ದಿಲ್ ಮೆ ಬಿಠಾಲೂಂ), ಇಕ್‌ಬಾಲ್ ಕುರೇಶಿ (ಚಾ ಚಾ ಚಾ - ಸುಬಹ ನ ಆಯೀ ಶಾಮ್ ನ ಆಯೀ), ಸರ್ದಾರ್ ಮಲ್ಲಿಕ್ (ಬಚ್‌ಪನ್ - ಮುಝೆ ತುಮ್ ಸೆ ಮುಹಬ್ಬತ್ ಹೈ), ಉಷಾ ಖನ್ನಾ ( ಆವೊ ಪ್ಯಾರ್ ಕರೇಂ - ಯೆ ಝುಕೀ ಝುಕೀ ಝುಕೀ ನಿಗಾಹೆ ತೇರಿ), ಸ್ವತಃ ಗಾಯಕರಾದ ಹೇಮಂತ್ ಕುಮಾರ್ (ಜಾಗೃತಿ - ಹಮ್ ಲಾಯೆ ಹೈಂ ತೂಫಾ ಸೆ ಕಿಶ್ತೀ ನಿಕಾಲ್ ಕೆ), ರಾಮ್ ಲಾಲ್ (ಸೆಹ್ರಾ - ತಕದೀರ್ ಕಾ ಫಸಾನಾ), ಸೋನಿಕ್ ಓಮಿ (ದಿಲ್ ನೆ ಫಿರ್ ಯಾದ್ ಕಿಯಾ - ಕಲಿಯೋನೆ ಘೂಂಘಟ್ ಖೋಲೆ), ಜಯದೇವ್ (ಹಮ್ ದೋನೋ - ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ)ಮುಂತಾದವರು ರಫಿ ಕಂಠದಲ್ಲಿ ನಮಗೆ ನೀಡಿದ ಮಾಧುರ್ಯವನ್ನೂ ಮರೆಯುವಂತಿಲ್ಲ.

  ಕನ್ನಡ ಹಾಡು :- ಸತ್ಯಂ ಸಂಗೀತ ನಿರ್ದೇಶನದಲ್ಲಿ 'ಒಂದೇ ಬಳ್ಳಿಯ ಹೂಗಳು" ಚಿತ್ರಕ್ಕಾಗಿ ಹಾಡಿದ 'ನೀನೆಲ್ಲಿ ನಡೆವೆ ದೂರ" ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೆ. ಈ ಚಿತ್ರ 'ಛೋಟಿ ಬಹನ್"ನ ಕನ್ನಡ ಅವತರಣಿಕೆ. ಅಲ್ಲಿ ಈ ಸಂದರ್ಭಕ್ಕೆ ಮುಖೇಶ್ ಅವರ 'ಜಾವು ಕಹಾಂ ಬತಾ ಎ ದಿಲ್" ಹಾಡು ಇತ್ತು. 50ರ ದಶಕದಲ್ಲಿ ಅಮೀರ್ ಬಾಯಿ ಕರ್ನಾಟಕಿ ಅವರೊಡನೆ ಒಂದು ಕನ್ನಡ ಚಿತ್ರಕ್ಕಾಗಿ ರಫಿ ಹಾಡಿದ್ದರು ಎಂದು ಎಲ್ಲೋ ಓದಿದ ನೆನಪಿದೆ. ಆದರೆ ಈ ಬಗ್ಗೆ ಸೂಕ್ತ ಮಾಹಿತಿ ಲಭ್ಯವಿಲ್ಲ. ಬರೆಯುತ್ತಾ ಹೋದರೆ ಪಟ್ಟಿ ಮುಗಿಯಲಾರದು. ಕಡಲ ನೀರನ್ನು ಬೊಗಸೆಯಲ್ಲಿ ಮೊಗೆಯಲು ಹೊರಟಂತಾದೀತು. ಅಂತೂ ಇಂತಹ ಹಾಡುಗಳು ಮುಂಬರುವ ಶತಶತಮಾನಗಳ ಕಾಲ ಮಹಮ್ಮದ್ ರಫಿ ಅವರ ಅಭಿಮಾನಿಗಳನ್ನು ಕುಣಿಸಿ, ತಣಿಸಿ ಮಣಿಸುವುದಂತೂ ನಿಜ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X