»   » ಸ್ವರ ಮಾಂತ್ರಿಕ, ಗಾಯಕ ಸಿ. ಅಶ್ವತ್ಥ್ ಇನ್ನಿಲ್ಲ

ಸ್ವರ ಮಾಂತ್ರಿಕ, ಗಾಯಕ ಸಿ. ಅಶ್ವತ್ಥ್ ಇನ್ನಿಲ್ಲ

Subscribe to Filmibeat Kannada
Singer C. Aswath passes away
ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾರುಡಿಗ, ಸ್ವರ ಮಾಂತ್ರಿಕ ಸಿ. ಅಶ್ವತ್ಥ್ ಇನ್ನಿಲ್ಲ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಿ. ಅಶ್ವತ್ಥ್ ಅವರು ಹುಟ್ಟುಹಬ್ಬದ (ಡಿ.29) ದಿನದಂದೇ ವಿಧಿವಶರಾಗಿ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರಕ್ಕೆ ದೂಡಿದ್ದಾರೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ 1939 ಡಿಸೆಂಬರ್ 29ರಂದು ಜನಿಸಿದ್ದರು. 75ಕ್ಕೂ ಹೆಚ್ಚು ಆಲ್ಪಂ ಗೀತೆಗಳನ್ನು ಸಿ ಅಶ್ವಥ್ ಅವರು ಹೊರತಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವೀಧರರಾದ ಅವರು ಐಟಿಐನಲ್ಲಿ 27 ವರ್ಷಗಳ ಕಾಲ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.

'ಕಾಕನ ಕೋಟೆ' ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಿದ್ದ ಅಶ್ವಥ್ ಅವರು ಮೈಸೂರು ಮಲ್ಲಿಗೆ, ಶ್ರಾವಣ, ದೀಪಿಕಾ, ಶಿಶುನಾಶ ಷರೀಪ್ ಸಾಹೇಬರ ಗೀತೆಗಳಿಗೆ ಜೀವತುಂಬಿದ್ದರು. ಕನ್ನಡವೇ ಸತ್ಯ, ಸುಬ್ಬಾಭಟ್ಟರ ಮಗಳೆ,ಕೈಲಾಸಂ ಗೀತೆಗಳು,ನಾಗಮಂಡಲ, ಭಾವ ಬಿಂದು,ಕೂಡಲ ಸಂಗಮ ಮುಂತಾದ ಜನಪ್ರಿಯ ಧ್ವನಿಸುರುಳಿಗಳನ್ನು ಸಿ. ಅಶ್ವತ್ಥ್ ಹೊರತಂದಿದ್ದರು.

ಅಮೃತಧಾರೆ, ಹಠವಾದಿ,ಶಿಷ್ಯ,ತಿಮ್ಮ, ವೀರ, ಮಠ ಮುಂತಾದ ಚಲನಚಿತ್ರಗಳಲ್ಲೂ ಅಶ್ವಥ್ ಗಾನಸುಧೆ ಹರಿಸಿದ್ದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅಶ್ವಥ್ ಅವರ ನಿಧನಕ್ಕೆ ಕನ್ನಡ ಚಲನಚಿತ್ರ ಹಾಗೂ ಸಾಹಿತ್ಯ ಕ್ಷೇತ್ರದಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆ ಕಲ್ಯಾಣ, ರಾಜೇಶ್ ಕೃಷ್ಣನ್, ಎಚ್ ಎಸ್ ವೆಂಕಟೇಶಮೂರ್ತಿ, ಟಿ ಎನ್ ಸೀತಾರಾಂ, ಬಿ ಆರ್ ಲಕ್ಷ್ಮಣರಾವ್ ಸೇರಿದಂತೆ ಹಲವಾರು ಗಣ್ಯರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada