»   »  ಹದಿನೈದು ರೂಪಾಯಿಗೆ ಯಜ್ಞ ಧ್ವನಿಸುರುಳಿ!

ಹದಿನೈದು ರೂಪಾಯಿಗೆ ಯಜ್ಞ ಧ್ವನಿಸುರುಳಿ!

Posted By: *ಜಯಂತಿ
Subscribe to Filmibeat Kannada

ಹದಿನೈದು ರೂಪಾಯಿಗೆ ಏನು ಬರುತ್ತೆ? ಇಡ್ಲಿವಡೆ, ದೋಸೆ, ಕನ್ನಡದ ಒಂದು ನಿಯತಕಾಲಿಕೆ...ಈ ಸಾಲಿಗೆ ಧ್ವನಿಸುರುಳಿಯನ್ನೂ ಸೇರಿಸಬಹುದು. 'ಯಜ್ಞ' ಚಿತ್ರದ ಧ್ವನಿಸುರುಳಿಯನ್ನು ಹದಿನೈದು ರೂಪಾಯಿಗೆ ಮಾರಲು ನಿರ್ಮಾಪಕ ಆರ್.ಶಂಕರ್ ಮುಂದಾಗಿದ್ದಾರೆ.

ಸಿನಿಮಾ ಹಾಡುಗಳನ್ನು ರೂಪಿಸಿಕೊಂಡು ಧ್ವನಿಸುರುಳಿ ಕಂಪನಿಗಳನ್ನು ಎಡತಾಕಿದ ಶಂಕರ್ ಅವರಿಗೆ ಎದುರಾದದ್ದು ನಿರಾಸೆ. ಬೆನ್ನು ತಟ್ಟುವ ಹಿತಾನುಭವ ಎಲ್ಲಿಯೂ ಕಾಣಲಿಲ್ಲ. ಯಾರ ಕಾಲ ಕಟ್ಟುವುದೂ ಬೇಡ ಎಂದು ಶಂಕರ್ ಸ್ವತಃ ಕ್ಯಾಸೆಟ್ ಕಂಪನಿ ಹುಟ್ಟುಹಾಕಿದ್ದಾರೆ. ಆ ಸಂಗೀತಕುಂಡದಿಂದ ಯಜ್ಞ ಧ್ವನಿಸುರುಳಿ ಹೊರಬಂದಿದೆ. ಯಜ್ಞ ಚಿತ್ರದ ನಾಯಕ ಶ್ರೀಮುರಳಿ. ಶಿವಮಣಿ ಸೋಲು ಅವರನ್ನು ಕಂಗೆಡಿಸಿಲ್ಲ. ಯಜ್ಞ ಗೆಲುವಿನ ಹವಿಸ್ಸು ನೀಡುವ ನಿರೀಕ್ಷೆ ಅವರದ್ದು.

ಧ್ವನಿಸುರುಳಿ ಬಿಡುಗಡೆ ಮಾಡಿದ ನಟ ಸುದೀಪ್ ಚಿತ್ರತಂಡಕ್ಕೆ, ವಿಶೇಷವಾಗಿ ಶ್ರೀಮುರಳಿಗೆ ಶುಭಹಾರೈಸಿದರು. ಮುರಳಿ ಹಾಗೂ ಆತನ ಸೋದರ ವಿಜಯ್ ರಾಘವೇಂದ್ರ ಒಳ್ಳೆಯ ನಟರು. ಅದ್ಭುತ ನೃತ್ಯಗಾರರು. ಇಬ್ಬರಿಗೂ ಯಶಸ್ಸು ಸಿಗಲಿ ಎಂದು ಸುದೀಪ್ ಆಶಿಸಿದರು. ಸುದ್ದಿಗೋಷ್ಠಿ ನಂತರ ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆಗೆ ಸುದೀಪ್ ಸಿಗುತ್ತಾರೆ ಎನ್ನುವ ನಿರೀಕ್ಷೆ ಯಜ್ಞ ವೇದಿಕೆಯಲ್ಲೂ ಹುಸಿಯಾಯಿತು. ಒಂದಿಬ್ಬರು ಪತ್ರಕರ್ತರಿಗೆ ಹಾಯ್ ಹಾಯ್ ಎನ್ನುತ್ತ ಸುದೀಪ್ ಮರೆಯಾಗಿಯೇ ಬಿಟ್ಟರು. ವೀರ ಮದಕರಿ ಚಿತ್ರದಲ್ಲೂ ಅವರದ್ದು ಇದೇ ಕಣ್ಣಾಮುಚ್ಚಾಲೆ.

ಯಜ್ಞ ಸುದ್ದಿಗೋಷ್ಠಿ ಮತ್ತೊಂದು ತಮಾಷೆಗೂ ವೇದಿಕೆಯಾಯಿತು. ಕಾರ್ಯಕ್ರಮದ ನಿರೂಪಕರ ಹೊಗಳಿಕೆಯಿಂದ ಉತ್ತೇಜಿತರಾಗಿದ್ದ ನಿರ್ಮಾಪಕರು, ಶನಿವಾರ ಇಳಿಸಂಜೆ ಮತ್ತೊಂದು ಸುದ್ದಿಗೋಷ್ಠಿಯಿದೆ ಎಂದು ಪ್ರಕಟಿಸಿದರು. ಅದು ಪರ್ಸನಲ್ ಗೋಷ್ಠಿ ಅಂತೆ. ಒಂದು ಸುದ್ದಿಗೋಷ್ಠಿ ಮುಕ್ತಾಯದ ಕೊನೆಗೇ ಮತ್ತೊಂದರ ಪ್ರಕಟಣೆ ಅಪರೂಪವಲ್ಲವೇ? ಅಂತೂ ಸಂಜೆಗೋಷ್ಠಿಗಳು ಮತ್ತೆ ಆರಂಭವಾಗುತ್ತಿವೆ. ಗುಂಡುಪ್ರಿಯರ ಮುಖಗಳಲ್ಲಿ ಮಂದಹಾಸ!

ಪೂರಕ ಓದಿಗೆ
ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada